ಹಾವೇರಿ: ಇಲಿ ಜ್ವರಕ್ಕೆ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ಉಮೇಶ್(72) ಎಂಬ ವೃದ್ಧ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಉಮೇಶ್ ಅವರು ಮಂಗಳೂರು ಸೇರಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ ನಡೆಸಿದಾಗ ಇಲಿ ಜ್ವರ ಇರುವುದು ದೃಢಪಟ್ಟಿತ್ತು.
ಇಲಿ ಜ್ವರದ ಜೊತೆ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ವೃದ್ಧ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇಲಿ ಜ್ವರದಿಂದ ವೃದ್ಧ ಸಾವು ಹಿನ್ನೆಲೆ ಹಾವೇರಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಹಾವೇರಿ ಜಿಲ್ಲಾಸ್ಪತ್ರೆಯ ವಾರ್ಡ್ ಸಂಪೂರ್ಣ ತುಂಬಿ ಹೋಗಿದ್ದು, ಕೊಠಡಿಯ ಹೊರಗೆ ಬೆಡ್ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗ ಡೆಂಘಿ ಜೊತೆಗೆ ಇಲಿ ಜ್ವರ ಕಾಣಿಸಿಕೊಂಡಿದ್ದು, ಜನರ ಆತಂಕವನ್ನು ಹೆಚ್ಚು ಮಾಡಿದೆ.

