ಹಾಸನ: ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ದರ್ಶನೋತ್ಸವ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಬುಧವಾರ ಸಂಪನ್ನಗೊಂಡಿತು. ಅಕ್ಟೋಬರ್ 29ರಂದು ಶಾಸ್ತ್ರೋಕ್ತವಾಗಿ ತೆರೆಯಲಾಗಿದ್ದ ದೇವಾಲಯದ ಗರ್ಭಗುಡಿಯ ಬಾಗಿಲನ್ನು ನವೆಂಬರ್ 11ರಂದು ಮಧ್ಯಾಹ್ನ 1.37ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮುಚ್ಚಲಾಯಿತು.
ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ನಡೆದ ಧಾರ್ಮಿಕ ಕೈಂಕರ್ಯಗಳ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ,ಶಾಸಕ ಸ್ವರೂಪ್ , ಸಂಸದ ಶ್ರೇಯಸ್ ಪಟೇಲ್ ದೇವಸ್ಥಾನದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬುಧವಾರ ಬೆಳಿಗ್ಗೆ 6 ಗಂಟೆಯವರೆಗೂ ಭಕ್ತರಿಗೆ ನಿರಂತರವಾಗಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಸಂಪ್ರದಾಯದಂತೆ ಅಂತಿಮ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು. ಇದೇ ಸಂದರ್ಭದಲ್ಲಿ ಸಿದ್ದೇಶ್ವರ ಸ್ವಾಮಿಯ ಕೆಂಡೋತ್ಸವವೂ ನಡೆಯಿತು. ಗರ್ಭಗುಡಿ ಬಾಗಿಲು ಮುಚ್ಚುವ ಕೊನೆಯ ಕ್ಷಣದಲ್ಲಿಯೂ ಸ್ಥಳೀಯರು ಹಾಗೂ ದೂರದ ಊರುಗಳಿಂದ ಆಗಮಿಸಿದ್ದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈ ಬಾರಿ ಅಕ್ಟೋಬರ್ 30ರಿಂದ ನವೆಂಬರ್ 11ರ ಬೆಳಗಿನವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಹೊರರಾಜ್ಯ ಹಾಗೂ ವಿದೇಶಗಳಿಂದಲೂ ಭಕ್ತರು ಆಗಮಿಸಿದ್ದರು. ಪ್ರತಿದಿನ ಸರಾಸರಿ 2ರಿಂದ 3 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದು, ಒಟ್ಟಾರೆ 30 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿರುವುದು ವಿಶೇಷ.
₹300 ಮತ್ತು ₹1,000 ವಿಶೇಷ ದರ್ಶನ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ಒಟ್ಟು ₹25.36 ಕೋಟಿ ಆದಾಯ ಸಂಗ್ರಹವಾಗಿದೆ. ಈ ಮೂಲಕ ಹಾಸನಾಂಬೆ ಜಾತ್ರಾ ಮಹೋತ್ಸವದ ಆದಾಯದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.

