ನವದೆಹಲಿ: ಹಬ್ಬದ ಮರುದಿನ ದೆಹಲಿಯ ವಾಯುಮಾಲಿನ್ಯಕ್ಕೆ ಶೇ.80ಕ್ಕಿಂತ ಹೆಚ್ಚು ಕೊಡುಗೆ ಪಟಾಕಿ ಹೊಗೆಗಳಿಂದ ಬಂದಿದೆ ಎಂದು ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ ತಿಳಿಸಿದೆ.

ವಾಹನಗಳ ಹೊಗೆ, ಕಟ್ಟಡ ಕಾಮಗಾರಿ ಮತ್ತು ಇತರ ಮೂಲಗಳಿಂದ ನಗರದಲ್ಲಿ ಈಗಾಗಲೇ ಮಾಲಿನ್ಯ ಹೆಚ್ಚಾಗಿತ್ತು. ಆದರೆ ದೀಪಾವಳಿ ಬಳಿಕ ಪಟಾಕಿಗಳ ಹೊಗೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

ನವೆಂಬರ್ 8ರಂದು ದೀಪಾವಳಿ ದಿನ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 376ಕ್ಕೆ ತಲುಪಿತ್ತು. ಕಳೆದ ಐದು ವರ್ಷಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ದಾಖಲಾಗಿದ್ದ ಅತ್ಯಂತ ಕೆಟ್ಟ ಮಟ್ಟ ಇದಾಗಿದೆ ಎಂದು ವರದಿಯಾಗಿದೆ. ಮರುದಿನವೂ ಗಾಳಿಯ ಗುಣಮಟ್ಟ ‘ತುಂಬಾ ಕಳಪೆ’ ವಿಭಾಗದಲ್ಲೇ ಮುಂದುವರಿದಿತ್ತು. ನಗರದ ಹಲವು ಭಾಗಗಳಲ್ಲಿ ದಟ್ಟ ಹೊಗೆ ಆವರಿಸಿತ್ತು.

ಮಂಗಳವಾರ ಬೆಳಗ್ಗೆ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತ್ತು. ಸಂಜೆ 4 ಗಂಟೆಗೆ ಎಕ್ಯೂಐ 299ಕ್ಕೆ ಇಳಿದು ‘ಕಳಪೆ’ ವಿಭಾಗಕ್ಕೆ ಬಂದಿತ್ತು. ಆದರೆ ಸಂಜೆ 6 ಗಂಟೆಗೆ ಮತ್ತೆ 302ಕ್ಕೆ ಏರಿಕೆಯಾಗಿ ‘ತುಂಬಾ ಕಳಪೆ’ ವಿಭಾಗಕ್ಕೆ ಮರಳಿತು.

ಪಟಾಕಿಗಳೇ ಪ್ರಮುಖ ಕಾರಣ ಐಐಟಿಎಂ ಮಾದರಿಗಳ ಪ್ರಕಾರ, ದೀಪಾವಳಿಯ ಮರುದಿನ ದೆಹಲಿಯ ಮಾಲಿನ್ಯದಲ್ಲಿ ಪಟಾಕಿಗಳ ಪಾಲು ಶೇಕಡಾ 80ಕ್ಕಿಂತ ಹೆಚ್ಚಿತ್ತು. ಮಂಗಳವಾರ ಬೆಳಗಿನ ಜಾವ 1ರಿಂದ ಬೆಳಗ್ಗೆ 9ರವರೆಗಿನ ಅಂದಾಜಿನಲ್ಲಿ ಪಟಾಕಿಗಳ ಹೊಗೆ ಶೇಕಡಾ 29.9ರಷ್ಟು ಕೊಡುಗೆ ನೀಡಿತ್ತು. ಗಾಳಿಯಲ್ಲಿನ ರಾಸಾಯನಿಕ ಕ್ರಿಯೆಗಳಿಂದ ರೂಪುಗೊಳ್ಳುವ ದ್ವಿತೀಯ ಸಾವಯವ ಸಂಯುಕ್ತಗಳು ಶೇಕಡಾ 17.5ರಷ್ಟು ಪಾಲು ಹೊಂದಿದ್ದವು. ವಾಹನಗಳಿಂದ ಹೊರಬರುವ ಹೊಗೆ ಕೂಡ ಮಾಲಿನ್ಯದ ಪ್ರಮುಖ ಮೂಲಗಲಲ್ಲಿ ಒಂದು ಎಂದು ಹೇಳಲಾಗಿದೆ.