News Karnataka Kannada
Tuesday, April 30 2024
ಸಾಂಡಲ್ ವುಡ್

ʼಗಂದಧಗುಡಿʼ ಯಿಂದ ಕಣ್ಮರೆಯಾದ ʼಪ್ರಚಂಡ ಕುಳ್ಳʼ; ಆಪ್ತಮಿತ್ರನ ಕೆಲವು ತಿಳಿಯಲೇಬೇಕಾದ ಸಂಗತಿಗಳಿವು

Actor
Photo Credit : NewsKarnataka

ಬೆಂಗಳೂರು:  ಹೌದು. . . ಇಂದು ಗಂದಧಗುಡಿಯ ಮತ್ತೊಂದು ಕೊಂಡಿ ಕಳಚಿದೆ. ಕರುನಾಡ ಪ್ರಚಂಡ ಕುಳ್ಳ ಎಂದೇ ಖ್ಯಾತರಾಗಿದ್ದ ಹಿರಿಯ ನಟ ದ್ವಾರಕೀಶ್‌ ಅವರು ಇಂದು (ಏಪ್ರಿಲ್ 16) ಹೃದಯಘಾತದಿಂದ ವಿಧಿವಶರಾಗಿದ್ದಾರೆ.

ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಇನ್ನಿಲ್ಲ ಎಂಬ ಸುದ್ದಿ ಸಾಕಷ್ಟು ನೋವುಂಟು ಮಾಡಿದೆ. ಅವರು ಮೃತಪಟ್ಟ ಬಗ್ಗೆ ಈ ಮೊದಲು ಹಲವು ಬಾರಿ ವದಂತಿ ಹಬ್ಬಿತ್ತು. ಈ ಬಾರಿಯೂ ಸಾವಿನ ಸುದ್ದಿ ಫೇಕ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಈಗ ಅವರ ಕುಟುಂಬದ ಕಡೆಯಿಂದಲೇ ಇದಕ್ಕೆ ಸ್ಪಷ್ಟನೆ ನೀಡಲಾಗಿದೆ.

‘ರಾತ್ರಿ ಲೂಸ್ ಮೋಷನ್ ಆಯ್ತು. ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ’ ಎಂದು ದ್ವಾರಕೀಶ್ ಪುತ್ರ ಯೋಗಿ ಅವರು ಮಾಹಿತಿ ನೀಡಿದ್ದಾರೆ.

1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ ದ್ವಾರಕೀಶ್‌ ಅವರು, ಶಾರದ ವಿಲಾಸ್ ಮತ್ತು ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಿಕ್ಷಣ ಮುಗಿಸಿದ ಬಳಿಕ ದ್ವಾರಕೀಶ್‌ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ದರು.

ಆದರೆ ನಟನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ದ್ವಾರಕೀಶ್‌ 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡುತ್ತಾರೆ. 1964ರಲ್ಲಿ “ವೀರ ಸಂಕಲ್ಪ” ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ದ್ವಾರಕೀಶ್ ಅವರು, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು.

‘ವೀರ ಸಂಕಲ್ಪ’, ‘ಪರೋಪಕಾರಿ’,’ಸತ್ಯ ಹರಿಶ್ಚಂದ್ರ’, ‘ಕ್ರಾಂತಿ ವೀರ’, ‘ಮೇಯರ್ ಮುತ್ತಣ್ಣ’, ‘ದೂರದ ಬೆಟ್ಟ’, ‘ಗಾಂಧೀನಗರ’, ‘ಬಾಳು ಬೆಳಗಿತು’, ‘ಬಂಗಾರದ ಮನುಷ್ಯ’, ‘ಬಹದ್ದೂರ್ ಗಂಡು’ ಹೀಗೆ ಹಲವು ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ಜೊತೆ ದ್ವಾರಕೀಶ್ ನಟಿಸಿದ್ದರು.

ಇನ್ನು ‘ಮೇಯರ್ ಮುತ್ತಣ್ಣ’ ಚಿತ್ರವನ್ನು ನಿರ್ಮಾಣ ಮಾಡಿ ಗೆದ್ದಿದ್ದರು. ದ್ವಾರಕೀಶ್ ‘ಕುಳ್ಳ ಏಜೆಂಟ್ 000’ ಚಿತ್ರ ನಿರ್ಮಿಸಿ ತಾವೇ ಹೀರೋ ಆದರು. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ವಿಷ್ಣುವರ್ಧನ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ್ದು ಗೊತ್ತೇಯಿದೆ. ನಿಜ ಜೀವನದಲ್ಲಿ ಕೂಡ ಇಬ್ಬರೂ ಬಹಳ ಆಪ್ತ ಸ್ನೇಹಿತರಾಗಿದ್ದರು. ಸಾಕಷ್ಟು ಬಾರಿ ಮುನಿಸು, ಜಗಳ ಕೂಡ ನಡೆದಿತ್ತು. ಬಹಳ ವರ್ಷಗಳ ಬಳಿಕ ‘ಆಪ್ತ ಮಿತ್ರ’ ಚಿತ್ರದ ಮೂಲಕ ಇಬ್ಬರೂ ಗೆದ್ದರು. ಈ ಸಿನಿಮಾದಿಂದ ದ್ವಾರಕೀಶ್ ತಾವು ಕಳೆದುಕೊಂಡಿದ್ದ ಜೀವನವನ್ನು ಮತ್ತೆ ಪಡೆದರು.

ಇವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ನೀಡಿದ್ದ ಕೊಡುಗೆ ಮಾತ್ರ ಅಪಾರವಾಗಿದೆ. ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ದ್ವಾರಕೀಶ್ ವಿಷ್ಣು ಅಭಿನಯದ ಬಹುತೇಕ ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದರು.

ದ್ವಾರಕೀಶ್ ವಿದೇಶಗಳಲ್ಲಿ ಕನ್ನಡ ಸಿನಿಮಾಗಳನ್ನು ನಿರ್ಮಿಸುವ ಕನಸು ಕಂಡರು. ‘ಸಿಂಗಾಪುರದಲ್ಲಿ ರಾಜಾಕುಳ್ಳ’ ಹಾಗೂ ‘ಆಫ್ರಿಕಾದಲ್ಲಿ ಶೀಲ’ ಈ ದಿಶೆಯಲ್ಲಿ ಅದ್ಭುತ ಪ್ರಯತ್ನವಾಗಿತ್ತು. ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ದ್ವಾರಕೀಶ್ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಕಿಶೋರ್ ಕುಮಾರ್ ಅಂತಹ ಗಾಯಕನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ದ್ವಾರಕೀಶ್. ಇತ್ತೀಚಿ ವರ್ಷಗಳಲ್ಲಿ ‘ಆಟಗಾರ’, ‘ಚೌಕ’, ‘ಅಮ್ಮ ಐ ಲವ್ ಯು’ ಚಿತ್ರಗಳನ್ನು ನಿರ್ಮಿಸಿದ್ದರು. ಡಾ ರಾಜ್‌ಕುಮಾರ್‌, ಅಂಬರೀಶ್‌, ವಿಷ್ಣುವರ್ಧನ್‌ ರಂತಹ ಮೇರು ನಟರ ಜೊತೆ ದ್ವಾರಕೀಶ್‌ ನಟಿಸಿ ಫೇಮಸ್ ಆಗಿದ್ದರು.

50ಕ್ಕೂ ಅಧಿಕ ಸಿನಿಮಾಗಳನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. 17ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು ಪ್ರಚಂದ ಕುಳ್ಳ. ಇವರು ಕನ್ನಡ ಮಾತ್ರವಲ್ಲದೇ, ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ನಿರ್ಮಿಸಿದ್ದಾರೆ. ದ್ವಾರಕೀಶ್‌ ಅವರ ಪತ್ನಿ ಅಂಬುಜಾ ಅವರು ಕೂಡ ಕಳೆದು ಮೂರು ವರ್ಷಗಳ ಹಿಂದೆ ನಿಧನರಾದರು.

ಹಿರಿಯ ನಟರಾದ ದ್ವಾರಕೀಶ್​ ಎರಡು ವಿವಾಹವಾಗಿದ್ದಾರೆ. ಅದರಲ್ಲಿ ಅಂಬುಜಾ ಅವರು ಮೊದಲಿನವರಾಗಿದ್ದು, ಪ್ರೀತಿಸಿ ಮದುವೆಯಾದರು. ಆ ಬಳಿಕ ಶೈಲಜಾ ಅವರನ್ನು ಕೂಡ ದ್ವಾರಕೀಶ್​ ಇಷ್ಟ ಪಟ್ಟು ವಿವಾಹವಾದರು. ದ್ವಾರಕೀಶ್​ ಅವರ ಎರಡನೇ ವಿವಾಹಕ್ಕೆ ಅಂಬುಜಾ ಅವರ ಒಪ್ಪಿಗೆ ಇತ್ತು ಎಂದು ಈ ವಿಚಾರವನ್ನು ಕಾರ್ಯಕ್ರಮವೊಂದರಲ್ಲಿ ದ್ವಾರಕೀಶ್​ ಹೇಳಿಕೊಂಡಿದ್ದರು.

ಇಂದು ದ್ವಾರಕೀಶ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.  ಎಲೆಕ್ಟ್ರಾನಿಕ್‌ ಸಿಟಿಯ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು