ಕನ್ನಡದಲ್ಲಿ ಬಹುತೇಕ ಎಲ್ಲ ಜಾನರ್ನ ಸಿನಿಮಾಗಳನ್ನೂ ನೋಡಿದ್ದೇವೆ. ಆದರೆ, ಸೂಪರ್ ಹೀರೋ ಸಿನಿಮಾಗಳು ಕಡಿಮೆಯೇ. ಈಗ ಆ ಬಗೆಯ ಚಿತ್ರವೂ ಪ್ರಾರಂಭವಾಗಿದೆ. ಹೆಸರು ‘ಅಶ್ವತ್ಥಾಮ’. ಈ ಚಿತ್ರದಲ್ಲಿ ಶಿವರಾಜಕುಮಾರ್, ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ಸಚಿನ್ ರವಿ, ಆಕ್ಷನ್-ಕಟ್ ಹೇಳುವುದರ ಜೊತೆಗೆ ಈ ಚಿತ್ರದ ನಿರ್ಮಾಣವನ್ನೂ ಮಾಡುತ್ತಿದ್ದಾರೆ.
‘ಅಶ್ವತ್ಥಾಮ’ ಸ್ಪೈ ಥ್ರಿಲ್ಲರ್ ಚಿತ್ರವಾಗಿದ್ದು, ಇಡೀ ಕಥೆಯಲ್ಲಿ ಶಿವರಾಜಕುಮಾರ್ ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಅವರು ಈ ಚಿತ್ರದಲ್ಲಿ ಮಿಂಚಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸೂಪರ್ ಹೀರೋ ಸಿನಿಮಾ ಅಂದರೆ ಅಲ್ಲಿ ವಿಎಎಕ್ಸ್ಗೆ ಹೆಚ್ಚು ಪ್ರಾಮುಖ್ಯತೆ ನೀಡಲೇಬೇಕು. ಆ ನಿಟ್ಟಿನಲ್ಲಿ ನಿರ್ದೇಶಕ ಸಚಿನ್ ರವಿ ಕೂಡ ಹೆಚ್ಚು ಗಮನ ಹರಿಸಿದ್ದಾರೆ. ಇದೇ ಸೆಪ್ಟೆಂಬರ್ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ನಾಯಕಿ, ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.