News Karnataka Kannada
Saturday, April 27 2024
ಸಂಪಾದಕೀಯ

ದೇಶದ ಬೆನ್ನೆಲುಬಿಗೆ ಯಾಕಿಷ್ಟು ಸಂಕಷ್ಟ: ಇವರ ಚಳವಳಿ ಯಾವಾಗ ಸುಖಾಂತ್ಯ ?

Delh
Photo Credit : News Kannada

ದೇಶದೆಲ್ಲೆಡೆಯ ರೈತರು ರಾಷ್ಟ್ರ ರಾಜಧಾನಿ ದಿಲ್ಲಿಗೆ ದಾಂಗುಡಿ ಇಟ್ಟಿದ್ಧಾರೆ. ಅದರಲ್ಲೂ ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶ ರಾಜ್ಯಗಳ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಳೆದ ಬಾರಿಯ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮೊದಲು ರೈತರ ಬೃಹತ್‌ ಪ್ರತಿಭಟನೆ ನಡೆದಿತ್ತು. ಈ ಬಾರಿ ಲೋಕಸಭೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮತ್ತೊಂದು ಬೃಹತ್‌ ರೈತ ಚಳವಳಿ ರೂಪುಗೊಂಡಿದೆ. ಚುನಾವಣೆಗೆ ಮೊದಲು ಈ ರೀತಿ ರೈತ ಪ್ರತಿಭಟನೆ ನಡೆಯುವುದು ರಾಜಕೀಯ ಪ್ರೇರಿತ ಎಂದು ಬಿಜೆಪಿ ಆಪಾದಿಸುತ್ತಿದೆ. ಆದರೆ, ಆಳುವ ಸರಕಾರಗಳು ಬೇಡಿಕೆಗೆ ಬೇಗ ಸ್ಪಂದಿಸುವುದೇ ಚುನಾವಣೆ ಹತ್ತಿರವಾದಾಗ;  ರೈತರು ಚುನಾವಣೆಗೆ ಮೊದಲು ಪ್ರತಿಭಟನೆಗೆ ಇಳಿಯುವುದು ಸಹಜ ಎಂದು ಕಾಂಗ್ರೆಸ್‌ ಮತ್ತಿತರರ ಪ್ರತಿಪಕ್ಷಗಳ ಅಭಿಮತವಾಗಿದೆ.

ರಾಜಕೀಯೇತರ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಛಾ ಹಾಗೂ ಕಿಸಾನ್ ಮಜ್ದೂರ್ ಮೋರ್ಛಾ ಸಂಘಟನೆಗಳು ದಿಲ್ಲಿ ಚಲೋ ಹೋರಾಟಕ್ಕೆ ಕರೆ ನೀಡಿವೆ. ಫೆಬ್ರವರಿ 13 ಮಂಗಳವಾರ ಕೃಷಿಕರು ದಿಲ್ಲಿ ಗಡಿ ತಲುಪಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವಣ ಮಾತುಕತೆ ತಾರ್ಕಿಕ ಅಂತ್ಯ ಕಾಣದ ಹಿನ್ನೆಲೆಯಲ್ಲಿ ಕೃಷಿಕರು ಪ್ರತಿಭಟನೆಗೆ ಮುಂದಾಗಿದ್ಧಾರೆ.

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಗಳು “ದೆಹಲಿ ಚಲೋʼಗೆ ಕರೆ ನೀಡಿವೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ರೈತ ಪ್ರತಿಭಟನೆಯಿಂದಾಗಿ ಉತ್ತರ ಪ್ರದೇಶ, ಪಂಜಾಬ್‌ ಮತ್ತು ಹರಿಯಾಣದ ಗಡಿಗಳಲ್ಲಿನ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ವಾಹನ, ಜನ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಳೆದ ಬಾರಿಯ ರೈತ ಪ್ರತಿಭಟನೆ ವೇಳೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಹಾಗಾಗಿ ಈ ಬಾರಿ ರೈತರು ದಿಲ್ಲಿ ಪ್ರವೇಶಿಸದಂತೆ ಪೊಲೀಸರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ದಿಲ್ಲಿಯ ಗಡಿಗಳಲ್ಲಿ ಅಭೂತಪೂರ್ವ ಬಂದೋಬಸ್ತ್‌ ಮಾಡಲಾಗಿದೆ. ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖನೌರಿ ಗಡಿಗಳಲ್ಲಿ ಭದ್ರತಾ ಸಿಬ್ಬಂದಿ ರೈತರನ್ನು ತಡೆದು ನಿಲ್ಲಿಸಿದ್ದಾರೆ. ಆದರೆ ರೈತರು ವಾಪಸ್‌ ಹೋಗದೆ ಗಡಿ ಪ್ರದೇಶಗಳಲ್ಲಿ ಠಿಕಾಣಿ ಹೂಡಿದ್ದಾರೆ.

ಈ ನಡುವೆ ರೈತರ ಪ್ರತಿಭಟನೆಯಿಂದಾಗಿ ಆಹಾರ ಸಾಮಗ್ರಿ ಪೂರೈಕೆ ಸರಪಳಿಯ ಮೇಲೆ ಅಡ್ಡ ಪರಿಣಾಮ ಬೀರಲಾರಂಭಿಸಿದೆ. ತರಕಾರಿ, ದವಸ ಧಾನ್ಯಗಳ ದರ ಗಗನಕ್ಕೇರುತ್ತಿದೆ. ಪಂಜಾಬ್‌ನಿಂದ ಸಮರ್ಪಕ ಪೂರೈಕೆಯಾಗದ ಕಾರಣ 15 ದಿನಗಳಲ್ಲಿ ಕ್ಯಾರೆಟ್ ಬೆಲೆಯಲ್ಲಿ 5 ರೂ. ಹೆಚ್ಚಳವಾಗಿದೆ. ಪ್ರತಿಭಟನೆ ಹೀಗೆಯೇ ಮುಂದುವರಿದರೆ, ಆಹಾರ ಧಾನ್ಯಗಳ ದರ ಮತ್ತಷ್ಟು ಏರುವ ಸಾಧ್ಯತೆ ಇದೆ.

ಈ ಮಧ್ಯೆ ಕೇಂದ್ರ ಸರ್ಕಾರ ರೈತ ಮುಖಂಡರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದೆ. ಬೇಡಿಕೆ ಈಡೇರದ ಹೊರತು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರೈತ ಮಖಂಡರು ಈಗಾಗಲೇ ಘೋಷಿಸಿದ್ದಾರೆ.

ಇದು ಇಷ್ಟಕ್ಕೆ ನಿಲ್ಲಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನಿನ ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ರೈತನ ಸಾವಿಗೆ ನ್ಯಾಯ ಕೋರಿ ರೈತ ಸಂಘಟನೆಗಳು ಫೆಬ್ರವರಿ 26ರಂದು ಪಂಜಾಬ್‌, ಹರಿಯಾಣ, ದಿಲ್ಲಿಗಡಿಯ ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್‌ ರಾಲಿ ನಡೆಸಲಿವೆ. ಅಲ್ಲದೇ ಮಾರ್ಚ್ 14ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ರಾಲಿ ನಡೆಸಲಿವೆ. ಇದಕ್ಕಾಗಿ ಸಿದ್ದತೆಗಳು ನಡೆಯುತ್ತಿವೆ.   ಆದರೆ “ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ಹಿಂಸಾಚಾರದ ಮಾರ್ಗ ತುಳಿಯಬಾರದು. ಅವರ ಬೇಡಿಕೆಗಳ ಈಡೇರಿಕೆಗೆ ಸರಕಾರ ಮಾತುಕತೆ ಮುಂದುವರಿಸಲಿದೆ” ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮನವಿ ಮಾಡಿದ್ದಾರೆ.

ಇತ್ತ ಅಂಬಾಲಾದಲ್ಲಿ ರೈತರ ಪ್ರತಿಭಟನೆಯಲ್ಲಿ ಈವರೆಗೂ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಹರ್ಯಾಣ ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ), 1980ರ ಅಡಿ ರೈತ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಉಂಟಾಗಿರುವ ಹಾನಿಯ ವೆಚ್ಚವನ್ನು ರೈತ ಮುಖಂಡರಿಂದಲೇ ವಸೂಲಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಇದು ಯಾವ ಸ್ವರೂಪ ಪಡೆದುಕೊಳ್ಳುತ್ತೊ ಕಾದು ನೋಡಬೇಕಿದೆ.

ಇನ್ನು ಪಂಜಾಬ್‌ ಹರಿಯಾಣದ ಗಡಿ ಭಾಗದಿಂದ ದೆಹಲಿ ಒಳಗೆ ನುಗ್ಗಲು ಪ್ರಯತ್ನಿಸಿದವರ ಮೇಲೆ ಪೊಲೀಸ್‌ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ತಡೆದರು. ದೆಹಲಿ ಪ್ರವೇಶಿಸುವ ಟಿಕ್ರಿ ಮತ್ತು ಸಿಂಘು ಗಡಿಗಳನ್ನು ಬಂದ್‌ ಮಾಡಲಾಗಿದ್ದು, ಪೊಲೀಸರು ಮತ್ತು ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಜತೆಗೆ ಕಾಂಕ್ರೀಟ್‌ ಮತ್ತು ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭಾರೀ ಭದ್ರತೆ ಒದಗಿಸಿದೆ. ಆದರೆ ಇದನ್ನು ರೈತರು ಲೆಕ್ಕಕ್ಕೆ ತೆಗೆಯುತ್ತಿಲ್ಲ. ಈ ಹೋರಾಟ ಬೆಂಕಿಗೆ ತುಪ್ಪ ಸುರಿದ್ದಾಂತಾಗಿದೆ.

ದೆಹಲಿ ಒಳ ಪ್ರವೇಶಿಸುವ ಹಲವು ಭಾಗಗಳಲ್ಲಿ ಕಾಂಕ್ರಿಟ್‌ ರಸ್ತೆ ವಿಭಜಕಗಳನ್ನು ಅಳವಡಿಸಿ ಒಳ ಬಾರದಂತೆ ಪೊಲೀಸರು ಹಲವಾರು ಸಂಚಾರ ಕ್ರಮಗಳನ್ನು ಕೈಗೊಳ್ಳುತ್ತಾಲೆಯಿದ್ದಾರೆ.

ಈ ಎಲ್ಲದರ ನಡುವೆ ಗೃಹ ಸಚಿವಾಲಯದ ಕೋರಿಕೆಯ ಮೇರೆಗೆ ರೈತರ ಪ್ರತಿಭಟನೆಗೆ ಸಂಬಂಧಿಸಿದ 177 ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ  ಭಾರತ ಸರ್ಕಾರದ ಆದೇಶಕ್ಕೆ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಅಸಮ್ಮತಿ ವ್ಯಕ್ತಪಡಿಸಿದೆ.

ರೈತರ ಪ್ರಮುಖ ಬೇಡಿಕೆಗಳೇನು?

1. MSP ಮೇಲೆ ಕಾನೂನು ಗ್ಯಾರಂಟಿ ಅಂದರೆ ಬೆಳೆಗಳ ಕನಿಷ್ಠ ಬೆಂಬಲ ಬೆಲೆ.
2. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು.
3. ರೈತರ ಸಾಲ ಮನ್ನಾ ಮಾಡಬೇಕು.
4. ಭೂಸ್ವಾಧೀನ 2023 ಅನ್ನು ಮತ್ತೊಮ್ಮೆ ಜಾರಿಗೊಳಿಸಬೇಕು.
5. ಲಖೀಂಪುರ ಖೇರಿ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
6. ಮುಕ್ತ ವ್ಯಾಪಾರ ಒಪ್ಪಂದಗಳ ಮೇಲೆ ನಿಷೇಧ ಹೇರಬೇಕು.
7. ಸಂವಿಧಾನದ ಶೆಡ್ಯೂಲ್ 5ನ್ನು ಜಾರಿಗೆ ತರುವ ಮೂಲಕ ಆದಿವಾಸಿಗಳ ಭೂಮಿಯನ್ನು ಲೂಟಿ ಮಾಡುವುದನ್ನು ನಿಲ್ಲಿಸಬೇಕು.
8. ಮೆಣಸಿನಕಾಯಿ, ಅರಿಶಿನ ಸೇರಿದಂತೆ ಮಸಾಲೆ ಪದಾರ್ಥಗಳಿಗಾಗಿ ರಾಷ್ಟ್ರೀಯ ಆಯೋಗ ರಚಿಸಬೇಕು.
9. ನಕಲಿ ಬೀಜಗಳು ಮತ್ತು ಕೀಟನಾಶಕಗಳನ್ನು ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕ್ರಮಕ್ಕಾಗಿ ಮಾಡಿದ ಕಾನೂನುಗಳು.
10. MNREGA ಅಡಿಯಲ್ಲಿ, ಪ್ರತಿ ವರ್ಷ 200 ದಿನಗಳ ಕೆಲಸ ನೀಡಬೇಕು ಮತ್ತು ರೂ 700 ಕೂಲಿ ನೀಡಬೇಕು.
11. ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ರದ್ದುಗೊಳಿಸಬೇಕು.
12. ರೈತ ಚಳವಳಿ ಸಂದರ್ಭದಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು

ಇನ್ನು ಸದ್ಯಕ್ಕೆ ಪರಿಹಾರ ಸಿಕ್ಕಿರುವ  ಸಮಸ್ಯೆಗಳನ್ನ ನೋಡುವುದಾದರೇ. . .

-ಕಳೆದ 2020-21ರ ರೈತ ಚಳವಳಿಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ.
-2020-21ರ ಆಂದೋಲನದ ವೇಳೆ ರೈತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು (MSP) ಜಾರಿಗೆ ತರಬೇಕು ಎನ್ನುವುದು ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆ ಬಹು ಕಾಲದಿಂದಲೂ ಇದೆ. ಕೇಂದ್ರ ಸರ್ಕಾರ ಹಲವು ಬೆಳೆಗಳಿಗೆ ಕಾಲಕಾಲಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ. ಆದರೆ ವಾಸ್ತವಿಕವಾಗಿ ಇದರ ಪ್ರಯೋಜನ ರೈತರಿಗೆ ಸಿಗುತ್ತಿಲ್ಲ, ಸಕಾಲದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದಿಲ್ಲ ಎಂಬ ದೂರು ಕೇಳಿ ಬರುತ್ತಲೇ ಇರತ್ತದೆ. ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಪ್ರತಿನಿಧಿಗಳು ತ್ವರಿತವಾಗಿ ಆಲಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು. ಹಾಗೆಯೇ ಈ ಚಳವಳಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಅಸ್ತ್ರವಾಗಿ ಮಾರ್ಪಡದಂತೆ ರೈತ ಸಂಘಟನೆಗಳು ಎಚ್ಚರ ವಹಿಸಬೇಕು.

ಇಷ್ಟೇ ಅಲ್ದೆ 2020 ರಿಂದ 2021ರವರೆಗೆ 13 ತಿಂಗಳ ಕಾಲ ಪ್ರತಿಭಟನೆ ನಡೆಸಿದ ರೈತರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಕೃಷಿಕರು ಆಗ್ರಹಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗಾಗಿ ಭೂ ಸ್ವಾಧೀನ ಮಾಡಿಕೊಂಡಿರುವ ವಿವಿಧ ಪ್ರಾಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ. ಅಭಿವೃದ್ಧಿ ಮಾಡಲಾದ ಸೈಟ್‌ಗಳಲ್ಲಿ ಶೇ. 10ರಷ್ಟು ಸೈಟ್‌ಗಳನ್ನು ಭೂಮಿ ಕಳೆದುಕೊಂಡವರ ಕುಟುಂಬಕ್ಕೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ. ಭೂ ಸ್ವಾಧೀನದ ವೇಳೆ ಈಗ ನೀಡಲಾಗುತ್ತಿರುವ ಪರಿಹಾರ ಅತ್ಯಲ್ಪ ಅನ್ನೋದು ರೈತರ ವಾದ. ಕಡಿಮೆ ಬೆಲೆಗೆ ಭೂಮಿ ಸ್ವಾಧೀನ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕೃಷಿಕರು ಆರ್ಥಿಕ ನಷ್ಟ ಅನುಭವಿಸಿದ್ದು, ಈ ನಷ್ಟ ಭರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ಧಾರೆ. ಭಾರತ ದೇಶವು ವಿಶ್ವ ವ್ಯಾಪಾರ ಸಂಸ್ಥೆಯಿಂದ ಹೊರಗೆ ಬರಬೇಕು ಅನ್ನೋದು ರೈತರ ಆಗ್ರಹ. ಅಷ್ಟೇ ಅಲ್ಲ, ಈವರೆಗೆ ವಿಶ್ವ ವ್ಯಾಪಾರ ಸಂಸ್ಥೆ ಜೊತೆ ಮಾಡಿಕೊಂಡಿರುವ ಎಲ್ಲ ಒಪ್ಪಂದಗಳನ್ನೂ ರದ್ದುಪಡಿಸಿ ಎಂದು ಕೃಷಿಕರು ಆಗ್ರಹಿಸಿದ್ದಾರೆ. 2020-21ರ ನಡುವೆ ಕೃಷಿಕರು ನಡೆಸಿದ ಹೋರಾಟದ ವೇಳೆ ಜೀವ ಕಳೆದುಕೊಂಡ ರೈತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದೂ ರೈತರು ಆಗ್ರಹಿಸಿದ್ದಾರೆ. ಜೊತೆಗೆ ಮೃತ ರೈತರ ಕುಟುಂಬಸ್ಥರಿಗೆ ಸರ್ಕಾರ ಉದ್ಯೋಗ ನೀಡಬೇಕು ಅನ್ನೋ ಆಗ್ರಹವೂ ಇದೆ.

ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಸರ್ಕಾರದ ಸಂಸ್ಥೆಗಳ ಮೂಲಕ ಖರೀದಿಸುವ ಕೇಂದ್ರದ ಪ್ರಸ್ತಾವನೆಯನ್ನು ಪ್ರತಿಭಟನಾನಿರತ ರೈತರು ತಿರಸ್ಕರಿಸಿದ್ದಾರೆ. ಕೇಂದ್ರ ಮತ್ತು ‘ದೆಹಲಿ ಚಲೋ’ ರೈತರ ನಡುವೆ ಈವರೆಗೆ 4 ಸುತ್ತಿನ ಮಾತುಕತೆಯಾಗಿದ್ದು, ಪ್ರಯೋಜನವಾಗಿಲ್ಲ.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರತಿಭಟನೆಯಲ್ಲಿ ಸುಮಾರು 702 ರೈತರು ಸಾವಿಗೀಡಾಗಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿತ್ತು. ಈಗ ನಡೆಯುತ್ತಿರುವ ಪ್ರತಿಭಟನೆಯಲ್ಲೂ ಮೂವರು ರೈತರು ದುರ್ಮರಣಕ್ಕೀಡಾಗಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಇಬ್ಬರು ಹೃದಯ ಸ್ತಂಭನ ಹಾಗೂ ಒಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಕೇಂದ್ರ ರೂಪಿಸಿದ್ದ 3 ಕೃಷಿ ಕಾನೂನುಗಳ ವಿರುದ್ಧ 2021 ರ ಅಕ್ಟೋಬರ್‌ನಲ್ಲಿ ರೈತರು ಲಖಿಂಪುರ-ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ವೇಗವಾಗಿ ವಾಹನ ಹರಿಸಿದ ಪರಿಣಾಮ ನಾಲ್ವರು ರೈತರು ಸೇರಿ 8 ಮಂದಿ ಸಾವನ್ನಪ್ಪಿದ್ದರು. ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರೇ ಈ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿತ್ತು.

ಬೇಡಿಕೆ ಈಡೇರಿಸಲು ಏಕೆ ಸಾಧ್ಯವಾಗಿಲ್ಲ?
ರೈತರ ಪ್ರಮುಖ ಬೇಡಿಕೆಯೂ ಪಿಂಚಣಿಗೆ ಸಂಬಂಧಿಸಿದ್ದು, 60 ವರ್ಷ ಮೇಲ್ಪಟ್ಟ ರೈತರು ಮತ್ತು ಕೃಷಿ ಕಾರ್ಮಿಕರಿಗೆ ತಿಂಗಳಿಗೆ 10,000 ರೂ.ಗಳ ಪಿಂಚಣಿ ನೀಡಬೇಕು. ಇದರ ಪರಿಣಾಮ ನೋಡಿದರೆ 10 ಕೋಟಿ 38 ಲಕ್ಷ ರೈತರಿಗೆ ಪಿಂಚಣಿ ನೀಡಲು ಸರಕಾರಕ್ಕೆ 8ರಿಂದ 9 ಸಾವಿರ ಕೋಟಿ ರೂ. ಬೇಕಾಗುತ್ತದೆ. ಅಂದರೆ ಈ 2 ಬೇಡಿಕೆಗಳನ್ನಷ್ಟೇ ಈಡೇರಿಸಲು ಒಟ್ಟು 15 ರಿಂದ 20 ಸಾವಿರ ಕೋಟಿ ರೂ. ಬೇಕಾಗುತ್ತದೆ. ಆದರೆ 2023-24ರಲ್ಲಿ ಸರ್ಕಾರದ ಒಟ್ಟು ವೆಚ್ಚ 48 ಲಕ್ಷ ಕೋಟಿ ರೂ. ಆಗಿದೆ. MSP ಗ್ಯಾರಂಟಿ ಮತ್ತು ಸಂಪೂರ್ಣ ಸಾಲ ಮನ್ನಾ ಹೊರೆಯು ಸರ್ಕಾರದ ಮೇಲೆ ಹೆಚ್ಚಾಗುತ್ತದೆ.

ಇನ್ನು ನೋಡುವುದಾದರೇ, ರೈತರ ಆಂದೋಲನ ಸುದೀರ್ಘವಾಗಿ ಮುಂದುವರಿದರೆ ನಿತ್ಯ 500 ಕೋಟಿ ರೂ.ನಷ್ಟ ಉಂಟಾಗಲಿದೆ ಎಂದು ಪಿಎಚ್‌ಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮುಖ್ಯಸ್ಥ ಸಂಜೀವ್ ಅಗರ್‌ವಾಲ್ ಹೇಳಿದ್ದಾರೆ. ಇದು ಉತ್ತರ ಭಾರತದ ರಾಜ್ಯಗಳ, ವಿಶೇಷವಾಗಿ ಹರಿಯಾಣ, ಪಂಜಾಬ್ ಮತ್ತು ದೆಹಲಿಯ ನಾಲ್ಕನೇ ತ್ರೈಮಾಸಿಕ GSDPಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಈ ಹಿಂದೆ ನಡೆದ ರೈತ ಚಳವಳಿಯಲ್ಲಿ ದೇಶ ವಿರೋಧಿ ಶಕ್ತಿಗಳು ಸೇರಿಕೊಂಡು ಅಶಾಂತಿ ಸೃಷ್ಟಿಸಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಬಾರಿಯ ರೈತ ಹೋರಾಟ ಶಾಂತಿಯುತವಾಗಿ ತಾರ್ಕಿಕ ಅಂತ್ಯ ಕಾಣಲಿ. ರೈತ ಮುಖಂಡರು ಮತ್ತು ಸರ್ಕಾರದ ಪ್ರತಿನಿಧಿಗಳು ಪ್ರತಿಷ್ಠೆಯನ್ನು ಬದಿಗಿಟ್ಟು ಸಂಧಾನ ಮಾತುಕತೆ ನಡೆಸುವ ಮೂಲಕ ನೈಜ ರೈತರ ಬೇಡಿಕೆಗಳು ಸೌಹಾರ್ದಯುತವಾಗಿ ಆದಷ್ಟು ಬೇಗ ಈಡೇರುವಂತಾಗಲಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು