News Karnataka Kannada
Sunday, May 12 2024
ಪರಿಸರ

ಬೆಳ್ತಂಗಡಿ: ನಿವೃತ್ತ ಖಜಾನೆ ಅಧಿಕಾರಿಯ ದೇಸಿ ಗೋಸೇವೆಗೆ ಜಗಮನ್ನಣೆ

Preparation of berani with gomaya
Photo Credit : News Kannada

ಬೆಳ್ತಂಗಡಿ: ಆರು ದಶಕಗಳ ಹಿಂದಿನ ಮಾತು. ಅವರಿನ್ನೂ ಎಂಟತ್ತು ವರುಷದ ತರುಣನಾಗಿದ್ದ ವಯಸ್ಸು . ಆಗ ಹುಟ್ಟಿ ಬೆಳೆದ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದ ಉಂಡೆಮನೆ ಮನೆಯಲ್ಲಿ ಹಟ್ಟಿ ತುಂಬಾ ದೇಸೀಯ ಅರ್ಥಾತ್ ತುಳುವಿನ ಆಡುಭಾಷೆಯಲ್ಲಿ ಕಾಟುಪೆತ್ತ ವೆಂಬ ಗೋಸಂಪತ್ತು ಅವರ ಬಾಳಿನ, ಹೃದಯ ಸೆಳೆದ ಸಾಕುಪ್ರಾಣಿಯಾಗಿತ್ತು. ಕಾಲಾಂತರದಲ್ಲಿ ಅನಿವಾರ್ಯವಾಗಿ ಕೇರಳದ ಹುಟ್ಟಿದ ಊರನ್ನೇ ಬಿಟ್ಟು, ಕರ್ನಾಟಕದ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಪ್ಪಟ್ಟಿ ಬಳಿಯ ಕುಕ್ಕಜೆಗೆ ಹೆಚ್ಚಿನ ಕೃಷಿಗಾಗಿ, ಹಿರಿಯರೊಂದಿಗೆ ವಲಸೆ ಬಂದು ನೆಲೆಸಿದರು.

ಹುಟ್ಟಿದ ಊರು ನೀರ್ಚಾಲಿನ ಮಹಾಜನ ಸಂಸ್ಕೃತ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣಕ್ಕೆ ಸೇರಿ , ಕಲಿಕೆಯಲ್ಲಿ ಸ್ವಲ್ಪ ದಡ್ಡನಾಗಿದ್ದ ಕಾರಣ ಅಂದಿನ ಶಿಕ್ಷಣ ವ್ಯವಸ್ಥೆಯಲ್ಲಿ “ದಡ್ಡನಾದ ನನ್ನಂತವರಿಗೆ ಪರೀಕ್ಷೆಗಳು ಕಳೆದು ಉತ್ತರಪತ್ರಿಕೆ ನೀಡುವಾಗ ಯಾಕಾಗಿ ಶಾಲೆಗೆ ಬರುತ್ತೀರಾ.ಗುಡ್ಡೆಗೆ (ಗೋಚರಾವಿಗೆ) ಹೋಗಿ ಸೆಗಣಿಯ ಬೆರಣಿ ಹೆಕ್ಕಿ” ಎಂಬ ತಾತ್ಸಾರದ ನುಡಿ ಕೇಳಿ , ಆ ನುಡಿಯೇ ಅವರ ವಿದ್ಯಾರ್ಥಿ ಜೀವನಕ್ಕೆ ಅಡ್ಡಿಯಾಗಿ ಅಧೈರ್ಯದಿಂದ ಹುಟ್ಟಿದ ಊರನ್ನೇ ಬಿಟ್ಟು ಕರ್ನಾಟಕದ ಹೊಸ ಊರಿಗೆ , ಭತ್ತದ ಕೃಷಿ ಆಧಾರಿತ ಪ್ರದೇಶಕ್ಕೆ 1964 ರಲ್ಲಿ ಬಂದು ಹೊಸ ಬದುಕಿಗೆ ನಾಂದಿ ಹಾಡಿದರು.

ಇದು ಉಂಡೆಮನೆ ಶಂಭು ಶರ್ಮ ಅವರ ಬದುಕು ಬದಲಿಸಿದ ಬಾಳಿನ ತಿರುವಿನ ಕತೆ ಹೊಸ ಬದುಕಿಗೆ ನಾಂದಿ ಐದಾರು ವರ್ಷಗಳ ಕಾಲ ಪೂರ್ಣವಾಗಿ ಶಾಲೆ ಬಿಟ್ಟು ಗೋಪಾಲಕನಾಗಿ ಕೃಷಿ ಭೂಮಿಯಲ್ಲಿ ಬದುಕು ಸವೆಸಿ ಬಡತನದಲ್ಲಿ ಬಳಲಿ ಕಷ್ಟದ ಬದುಕಿನ ಬುತ್ತಿ ಕಟ್ಟುವಂತೆ ಆಯಿತು. ಅಷ್ಟರಲ್ಲಿ ಅವರ ಓರಗೆಯವರೆಲ್ಲಾ ಶಾಲೆಗೆ ಹೋಗಿ ಕಲಿಯುವುದನ್ನು ನೋಡಿ ಅವರ ಮನಸ್ಸಿನಲ್ಲೂ ಇತರರಂತೆ ತಾನೂ ಮತ್ತೆ ಕಲಿತು ವಿದ್ಯಾವಂತನಾಗಬೇಕೆಂಬ ಹಂಬಲ ಮನದಲ್ಲಿ ಉದಿಸಿತು. ಕಲಿಕೆಯ ಅಸೆ ಚಿಗುರೊಡೆದರೂ ಇಂದಿನಷ್ಟು ಶಾಲೆಗೆ ಹೋಗಿ ಕಲಿಯಲು ಅನುಕೂಲವಿಲ್ಲದ ಆ ಕಾಲಘಟ್ಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಉಡುಪಿ ಯಂತಹ ಧಾರ್ಮಿಕ ಕೇಂದ್ರಗಳ ಆಶ್ರಯದಲ್ಲಿ ಮುಂದಿನ ಶೈಕ್ಷಣಿಕ ಬದುಕಿನ ಅಧ್ಯಾಯ ಪ್ರಾರಂಭಿಸುವ ದೃಢ ನಿರ್ಧಾರಕೈಗೊಂಡರು. ಶ್ರೀಗುರುಹಿರಿಯರ, ಭಗವಂತನ ಕೃಪೆ ,ಆಶೀರ್ವಾದದಿಂದ ಮತ್ತೆ ಹಿಂ ತಿರುಗಿ ನೋಡದೇ ಬಿ. ಎ ಬಿ.ಎಡ್ , ರಾಷ್ಟ್ರಭಾಷಾ ವಿಶಾರದ, ಕನ್ನಡದಲ್ಲಿ ಡಿಪ್ಲೋಮ ಪದವೀಧರನಾಗಿ ಈಗಿನ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡಂದಲೆ ಹಾಗೂ ಪುತ್ತೂರಿನ ಖಾಸಗಿ ಪ್ರೌಢಶಾಲೆಯಲ್ಲಿ 1980 ರಿಂದ ಒಂದೂವರೆ ವರುಷ ಪ್ರೌಢಶಾಲಾ ಶಿಕ್ಷಕನಾಗಿರುವಾಗಲೇ , 1979 ರಲ್ಲಿ ಕೆ.ಪಿ. ಎಸ್ ಸಿ. ಪರೀಕ್ಷೆ ಬರೆದು ಅದರ ಫಲಿತಾಂಶದಂತೆ ಆಯ್ಕೆಯಾಗಿ ಸರ್ಕಾರದ ಖಜಾನೆ ಇಲಾಖೆಯಲ್ಲಿ ನಾಗರಿಕ ಸೇವೆಗೆ ಪಾದಾರ್ಪಣೆ ಮಾಡಿದರು.

ಪ್ರಾರಂಭದಲ್ಲಿ ಮಂಗಳೂರು ಜಿಲ್ಲಾ ಖಜಾನೆ (1981 ರಿಂದ 1990)9 ವರ್ಷ,1990-1992 ,2ವರ್ಷಗಳ ಕಾಲ ಮಂಡ್ಯ ಜಿಲ್ಲಾ ಖಜಾನೆ, 1992-2005 ಬೆಂಗಳೂರಿನ ರಾಜ್ಯ ಖಜಾನೆ ನಿರ್ದೇಶನಾಲಯ (ಟ್ರೆಜರಿ ಡೈರೆಕ್ಟೊರೇಟ್ )13ವರ್ಷಗಳ ಕಾಲ, 2005-2006 ಬಡ್ತಿ ಹೊಂದಿ ಪತ್ರಾಂಕಿತ ಖಜಾನೆ ಅಧಿಕಾರಿಯಾಗಿ ಉಡುಪಿ ಜಿಲ್ಲಾ ಖಜಾನೆ,2006 ರಿಂದ 2010 ಜುಲೈ 31 ರ ತನಕ ಶಿವರಾಮ ಕಾರಂತರ ಮರಳಿ ಮಣ್ಣಿಗೆ ಎಂಬಂತೆ ಯಾವ ತಾಲೂಕಿನಲ್ಲಿ ಗೋಪಾಲಕ,ಕೃಷಿಕನಾಗಿ ಜೀವನ ಸವೆಸಿದ್ದರೋ ಅದೇ ಬೆಳ್ತಂಗಡಿ ತಾಲೂಕಿನ ಪತ್ರಾಂಕಿತ ಉಪಖಜಾನಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು .

ಮರಳಿ ಗೋಸೇವೆಯಲ್ಲಿ ಕೊರೋನಾದ ಮಹಾಮಾರಿಯಿಂದ ಪಾರಾಗಲು “ಗವಾ ಮಧ್ಯೇ ವಸಾಮ್ಯಹಂ” ಎಂಬಂತೆ ಪರಮ ಪೂಜ್ಯ ಶಂಕರಾಚಾರ್ಯ ಪರಂಪರೆಯ ಯತಿ ಶ್ರೇಷ್ಟ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ಪ್ರೇರಣೆಯಂತೆ , ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತ ಪರಿಕಲ್ಪನೆಯಂತೆ ತನ್ನಲ್ಲಿ ಸುಪ್ತವಾಗಿ ಅಡಗಿರುವ ಆಸಕ್ತಿಯನ್ನು ಶಕ್ತಿಯಾಗಿ ಪರಿವರ್ತಿಸಿ ಒಂದು ಶುದ್ಧ ದೇಸೀಯ ಮಲೆನಾಡು ಗಿಡ್ಡ ತಳಿಯ ಒಂದು ಜತೆ ಹಸು ಕರುವನ್ನು ಸಾಕಿ ಅದರ ಪಾಲನೆ,ಪೋಷಣೆಯಿಂದ ಸಂತೃಪ್ತ ಜೀವನ ನಡೆಸುತ್ತಿರುವುದಾಗಿ ಹೆಮ್ಮೆ ಪಡುತ್ತಾರೆ.

ಪೂಜ್ಯ ಗುರುಗಳು ಹೇಳಿದಂತೆ ಅವುಗಳು ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಸಲಹಿ ನಿವೃತ್ತಿಯ ಬದುಕಿನಲ್ಲಿ ನೆಮ್ಮದಿಯ ಆಸರೆಯಾಗುತ್ತಿವೆ ಎಂಬುದು ಅವರ ಇಂದಿನ ಸಂತೃಪ್ತ ನೆಮ್ಮದಿಯ ಜೀವನದ ಉಸಿರಾಗಿದೆ ಎಂದು ಹೆಮ್ಮೆ ಪಡುತ್ತಾರೆ.

ಗೋಮಯದಿಂದ ಬೆರಣಿ ತಯಾರಿ:- ಅವರು ಸಾಕಿದ ಶುದ್ಧ ದೇಸೀಯ ತಳಿಯ ಹಸುವಿನ ಗೋಮಯವನ್ನು ದಿನಾ ಬೆಳಿಗ್ಗೆ ಶಿಲಾಹಾಸಿನ ಹಟ್ಟಿಯಿಂದ ಯಾವುದೇ ಕಲ/ಕಲ್ಲುಬೆರಕೆ (ಭತ್ತದ ಹೊಟ್ಟು ಯಾ ಮರದ ಹುಡಿಯನ್ನು ಬೆರಕೆ ಮಾಡದೇ)ಯಿಲ್ಲದೇ ಸಂಗ್ರಹಿಸಿ ಕೃಷಿಕರ ಬಳಕೆಯ   ಶೀಟ್ ನ ಮೇಲೆ ದಿನವೊಂದರ ಸರಾಸರಿ 25 ರಂತೆ ಕಳೆದ ಎರಡೂವರೆ ತಿಂಗಳಿನಿಂದ ಆದಷ್ಟೂ ಪರಿಶುದ್ಧವಾಗಿ ಬೆರಣಿಯನ್ನು ತಯಾರಿಸಿ ದಾಸ್ತಾನು ಇರಿಸಿದ್ದಾರೆ.

ಈಗಾಗಲೇ 1500 ಕ್ಕೂ ಮಿಕ್ಕಿ ಬೆರಣಿ ದಾಸ್ತಾನು ಇದೆ. ಗೋಮಯದ ಬೆರಣಿಯನ್ನು ಹೋಮ, ಹವನಗಳಲ್ಲಿ ಹಲಸಿನ ಕಟ್ಟಿಗೆಯ ಬದಲಾಗಿ ಪ್ರಧಾನ ಇಂಧನವಾಗಿ ಬಳಸಬಹುದು. ಪುರೋಹಿತರು,ಅರ್ಚಕರು ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಹೋಮ, ಹವನಗಳಲ್ಲಿ ಗೋಮಯದ ಬೆರಣಿಯನ್ನು ಬಳಸುವುದನ್ನು ರೂಢಿಗೆ ತರಬೇಕಾಗಿದೆ. ಇದರಿಂದ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗಿ ವಾತಾವರಣ ಪರಿಶುದ್ಧವಾಗುವುದೆಂಬ ಅಭಿಪ್ರಾಯವಿದೆ.

ಅವರ ದುಡಿಮೆಯ ಪ್ರಾಮಾಣಿಕ ಪ್ರಯತ್ನಕ್ಕೆ ಶಹಬಾಸ್ ಎನ್ನಬೇಕು. ಸ್ವಉದ್ಯೋಗದಲ್ಲಿ ತೊಡಗಿಕೊಂಡು ಸ್ವಾವಲಂಬಿಯಾಗಿ ತನ್ನ ಬದುಕನ್ನು ಅರ್ಥಪೂರ್ಣವಾಗಿ ನಡೆಸಿ ಇತರ ರಿಗೆ ಆದರ್ಶ ಮಾದರಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು