News Karnataka Kannada
Monday, April 29 2024
ನುಡಿಚಿತ್ರ

ಕೊಡಗಿನಲ್ಲಿ ಆಚರಿಸಲ್ಪಡುವ ಹುತ್ತರಿ ಹಬ್ಬದ ಮೆಲುಕು!

Huttari
Photo Credit : By Author

ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾದ ಹುತ್ತರಿ ಹಬ್ಬ ಸಂತಸ ಸಡಗರದ ಹಬ್ಬವಾಗಿದೆ. ಗದ್ದೆಯಿಂದ ಧಾಣ್ಯಲಕ್ಷ್ಮಿಯಾದ ಭತ್ತವನ್ನು ತಂದು ಮನೆ ತುಂಬಿಸಿಕೊಳ್ಳುವ ಹಬ್ಬವಾಗಿದೆ. ಕೊಡಗಿನವರ ಪಾಲಿಗೆ ಇದೊಂದು ಸುಗ್ಗಿ ಹಬ್ಬವಾಗಿದೆ.

ಹಿಂದಿನ ಕಾಲದಲ್ಲಿ ಹಬ್ಬದ ಸಡಗರ ಸಂಭ್ರಮ ಉತ್ತುಂಗದಲ್ಲಿರುತ್ತಿತ್ತು. ಹಬ್ಬಕ್ಕಾಗಿ ಮಾಡಿಕೊಳ್ಳುತ್ತಿದ್ದ ತಯಾರಿಗಳು ನಿಜಕ್ಕೂ ವರ್ಣಿಸಲು ಅಸಾಧ್ಯವಾಗಿರುತ್ತಿತ್ತು. ಆಗ ಈಗಿನಂತೆ ಮನೆಗಳಿರಲಿಲ್ಲ. ಹೀಗಾಗಿ ಪ್ರತಿ ವರ್ಷವೂ ಹುತ್ತರಿ ಹಬ್ಬಕ್ಕೆ ತಿಂಗಳು ಇರುವಾಗಲೇ ಮನೆಯನ್ನು ಗುಡಿಸಿ ಸಾರಿಸುವುದು, ಸುಣ್ಣಬಣ್ಣ ಬಳಿಯುವುದು ಹೀಗೆ ನಡೆಯುತ್ತಿತ್ತು. ಎಲ್ಲವನ್ನು ಸಿದ್ಧ ಮಾಡಿಟ್ಟುಕೊಂದು ಹಬ್ಬಕ್ಕಾಗಿ ಕಾಯುತ್ತಿದ್ದ ಮಜಾವೇ ಮಜಾ..

ದೂರದಲ್ಲಿದ್ದವರು ಅನುಕೂಲ ಮಾಡಿಕೊಂಡು ಊರಿಗೆ ತೆರಳಿ ತಮ್ಮ ಕುಟುಂಬದೊಂದಿಗೆ ಬೆರೆತು ಖುಷಿಯಾಗಿ ಹಬ್ಬ ಆಚರಿಸುತ್ತಿದ್ದರು. ಕೊಡಗಿನವರ ಪಾಲಿಗೆ ಭತ್ತವೇ ಸರ್ವಸ್ವವಾಗಿದ್ದ ಕಾಲದಲ್ಲಿ ಅದರ ಸುತ್ತಲೇ ಹಬ್ಬ, ಆಚರಣೆಗಳು ಬಂದವು. ಎಲ್ಲಿ ನೀರಿಗೆ ವ್ಯವಸ್ಥೆಯಿದೆಯೋ ಅಲ್ಲೆಲ್ಲ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಗದ್ದೆಗಳನ್ನು ನಿರ್ಮಿಸಿ ಉಳುಮೆ ಮಾಡಿ ಭತ್ತ ಬೆಳೆಯುತ್ತಿದ್ದ ರೈತರು ಭತ್ತ ಮನೆಯ ಕಣಜವನ್ನು ಸದಾ ತುಂಬಿರಬೇಕೆಂದು ಆಶಿಸುತ್ತಿದ್ದರು.

ಅವತ್ತು ಹುತ್ತರಿ ಹಬ್ಬವೆಂದರೆ ಅದೇನೋ ಸಡಗರ, ಸಂಭ್ರಮ ಮನೆಮಾಡುತ್ತಿತ್ತು. ಕಾಲಕಾಲಕ್ಕೆ ತಕ್ಕಂತೆ ಮಳೆ, ಬಿಸಿಲು, ಚಳಿ ಎಲ್ಲವೂ ಇದ್ದುದರಿಂದ ಹುತ್ತರಿ ಬರುತ್ತಿದ್ದಂತೆಯೇ ನಡುಕ ಹುಟ್ಟಿಸುವ ಚಳಿ, ಮೈತೋಯ್ದು ಹೋಯಿತೇನೋ ಎಂಬಂತೆ ಸುರಿಯುತ್ತಿದ್ದ ಇಬ್ಬನಿ, ಹಸಿರಾಗಿದ್ದ ಭತ್ತದ ಬೆಳೆ ಹೊಬ್ಬಣ್ಣಕ್ಕೆ ತಿರುಗಿ ತೆನೆ ಬಾಗಿ ಹುತ್ತರಿ ಹಬ್ಬವನ್ನು ಸ್ವಾಗತಿಸಲು ನಿಂತಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು.

ಆಧುನಿಕ ಭರಾಟೆ ಹಬ್ಬವನ್ನು ಅದ್ಧೂರಿತನಕ್ಕೆ ಒಳಪಡಿಸಿದೆಯಾದರೂ ನೈಜ ಸಂತೋಷ ಮರೆಯಾಗಿದೆ. ಹಬ್ಬದ ಸಂಪ್ರದಾಯಗಳು ಬದಲಾಗಿ ಒಂದಷ್ಟು ಉಳಿದುಕೊಂಡಿದೆ ಎನ್ನುವುದನ್ನು ಬಿಟ್ಟರೆ ಅದನ್ನು ಮನಸ್ಸುಪೂರ್ತಿ ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲವಾಗಿದೆ.

ಕುಟುಂಬಗಳು ಹಂಚಿಹೋಗಿವೆ. ಹಣದ ಹಿಂದೆ ಬಿದ್ದಿರುವ ವ್ಯಕ್ತಿಗಳು ತಮ್ಮ ಕುಟುಂಬದೊಂದಿಗೆ ಸಮಯವನ್ನು ಹಂಚಿಕೊಳ್ಳಲು ತಯಾರಿಲ್ಲ. ಭತ್ತ ಬೆಳೆದು ಅದರಿಂದ ಲಾಭ ಪಡೆಯುವುದು ಸಾಧ್ಯವಿಲ್ಲ ಎಂಬ ಲೆಕ್ಕಚಾರದಿಂದಾಗಿ ನಷ್ಟ ಮಾಡಿಕೊಳ್ಳಲು ತಯಾರಿಲ್ಲದ ಬೆಳೆಗಾರರು ಅದನ್ನು ತೋಟವಾಗಿ ಮಾರ್ಪಡಿಸಿದ್ದಾರೆ. ಜತೆಗೆ ಭತ್ತದ ಬೆಳೆಯತ್ತ ಆಸಕ್ತಿಯೂ ಕಡಿಮೆಯಾಗಿದೆ. ಮಳೆ ಬಾರದೆ ನೀರಿಲ್ಲದೆ ಭತ್ತದ ಕೃಷಿ ಮಾಡಲಾಗದೆ ಪಾಳು ಬಿದ್ದ, ಶುಂಠಿ ಕೃಷಿಗೆ ಬಲಿಯಾಗಿ ಬರಡಾದ, ಕೇರಳದವರ ಗುತ್ತಿಗೆಗೆ ಬಾಳೆತೋಟವಾಗಿ ಮಾರ್ಪಾಡಾದ ಗದ್ದೆಗಳು ಹುತ್ತರಿ ಹಬ್ಬವನ್ನು ಅಣಕಿಸುತ್ತಿವೆ.

ಅದು ಏನೇ ಇರಲಿ ಒಂದಷ್ಟು ಬದಲಾವಣೆಗಳ ನಡುವೆಯೂ ಕೊಡಗಿನಲ್ಲಿ ಹುತ್ತರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಡಿಸೆಂಬರ್ 7ರಂದು ಹುತ್ತರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಅಂದು ನಿಗದಿತ ಮುಹೂರ್ತದಲ್ಲಿ ಗದ್ದೆಗೆ ತೆರಳಿ ಸಂಪ್ರದಾಯ ಬದ್ಧವಾಗಿ ಕದಿರನ್ನು ಕತ್ತರಿಸಿ ತಂದು ಮನೆ ತುಂಬಿಸಿಕೊಳ್ಳಲಾಗುತ್ತದೆ. ಬಳಿಕ ವಾಹನ ಸೇರಿದಂತೆ ವಿವಿಧ ವಸ್ತುಗಳಿಗೆ ಕದಿರನ್ನು ಕಟ್ಟಲಾಗುತ್ತದೆ.

ಹುತ್ತರಿ ಹಬ್ಬದ ಮಾರನೆಯ ದಿನ ಹುತ್ತರಿ ಹಾಡನ್ನು ಮನೆಮನೆಗಳಲ್ಲಿ ಹಾಡುವ ಪದ್ಧತಿಯೂ ಇದೆ. ಅಲ್ಲದೆ, ನಾಡ್‌ ಮಂದ್‌ನಲ್ಲಿ  (ಊರಿನ ದೊಡ್ಡ ಮೈದಾನದಲ್ಲಿ) ಊರಿನವರೆಲ್ಲಾ ಸೇರಿ  ಹುತ್ತರಿ ಕೋಲಾಟ ನಡೆಸುತ್ತಾರೆ. ಆ ನಂತರ ಹಬ್ಬದ ಕಡೆಯ ದಿನವಾಗಿ “ಊರೋರ್ಮೆ” ನಡೆಯುತ್ತದೆ. ಊರವರೆಲ್ಲಾ ಗ್ರಾಮದ ಅಂಬಲ(ಮೈದಾನ)ದಲ್ಲಿ ನೆರೆಯುತ್ತಾರೆ. ವಿವಿಧ ತಿಂಡಿ ತಿನಿಸು, ಅನ್ನ, ರೊಟ್ಟಿ ಹೀಗೆ ವಿವಿಧ ಪದಾರ್ಥಗಳನ್ನು ಮನೆಯಿಂದ ತಂದು ಅಲ್ಲಿ ಸೇವಿಸುತ್ತಾರೆ. ಅಲ್ಲಿಗೆ  ಹುತ್ತರಿ ಹಬ್ಬದ ಸಂಭ್ರಮ ಮುಗಿಯುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು