News Karnataka Kannada
Saturday, May 18 2024
ನುಡಿಚಿತ್ರ

ಒಂದು ಹಕ್ಕಿಯ ಅಪೂರ್ವ ಕಥೆ

Photo Credit :

ಒಂದು ಹಕ್ಕಿಯ ಅಪೂರ್ವ ಕಥೆ

ಉಜಿರೆ: ಅದು ರಕ್ತಸಿಕ್ತ ಪಾರಿವಾಳ. ಕುತ್ತಿಗೆಗೆ ಆದ ಗಾಯದಿಂದಾಗಿ ಅದು ಒಳಗೊಳಗೆ ರೋದಿಸುತ್ತಿರುತ್ತದೆ. ಕ್ಷಣಕ್ಷಣದ ನೋವಿನ ಕಿರಿಕಿರಿ ಅನುಭವಿಸುತ್ತಿರುತ್ತದೆ. ಆ ಕ್ಷಣಕ್ಕೆ ಅದು ನಿರಾಳವಾಗಲು ಅನಿರೀಕ್ಷಿತವಾಗಿ ನೆರವಿನ ಹಸ್ತ ಲಭ್ಯವಾಗುತ್ತದೆ. ಅಷ್ಟೇ ಅಲ್ಲ, ಮನುಷ್ಯರಿರುವ ಮನೆಯನ್ನು ಪ್ರವೇಶಿಸಿ ಆಶ್ರಯ ಪಡೆಯುವ ಮಹತ್ವದ ಅವಕಾಶವೂ ಪ್ರಾಪ್ತವಾಗುತ್ತದೆ.

ಇದು ಅನಿಮೇಷನ್ ನ ಸ್ಪರ್ಶ ಪಡೆದು ಪ್ರದರ್ಶಿತವಾದ ಟಿವಿ ವಾಹಿನಿಯಲ್ಲಿ ಪ್ರದರ್ಶನಗೊಂಡ ಸಿನಿಮೀಯ ಘಟನಾವಳಿಯಲ್ಲ. ಪುರಾಣದ ಯಾವುದೋ ಪುಟದಲ್ಲಿ ಉಲ್ಲೇಖವಾದ ಕಥೆಯಲ್ಲ. ಯಾರದೋ ಕಲ್ಪನೆಯಲ್ಲಿ ಅರಳಿದ ಕಥನಪ್ರಸಂಗವಲ್ಲ. ಎಸ್ಡಿಎಂ ಪದವಿ ಕಾಲೇಜಿನ ಅಂಗಳದಲ್ಲಿ ನಡೆದ ಸತ್ಯಘಟನೆ. ಪಾರಿವಾಳವೊಂದು ಗಾಯಗೊಂಡು ಬಳಲಿ ನಲುಗುತ್ತಿರುವಾಗ ವಿದ್ಯಾರ್ಥಿಗಳ ನೆರವಿನೊಂದಿಗೆ ಚೇತರಿಸಿಕೊಂಡ ಸತ್ಯಕಥೆ.

ಬುಧವಾರದಂದು ಪದವಿ ಕಾಲೇಜು ಆವರಣದಲ್ಲಿ ಪಾರಿವಾಳವೊಂದು ನೋವಿನಿಂದ ನರಳುತ್ತಿದ್ದುದನ್ನು ಗಮನಿಸಿದ ವಿದ್ಯಾರ್ಥಿಗಳಾದ ಭವ್ಯ, ಗಾನ, ಲಾವಣ್ಯ, ಮತ್ತು ಸೌಜನ್ಯ ಅದಕ್ಕೆ ಪ್ರಥಮ ಚಿಕಿತ್ಸೆ ನೀಡಿದರು. ಅದು ಸ್ವಲ್ಪ ಚೇತರಿಸಿಕೊಂಡ ನಂತರ ಪೆಟ್ಟಿಗೆಯೊಂದರಲ್ಲಿ ರಕ್ಷಿಸಿಟ್ಟರು. ಉಷ್ಣಾಂಶದ ಪ್ರಮಾಣ ಹೆಚ್ಚಾಗಿರುವ ಕಾರಣ ಬಯೋಟೆಕ್ ವಿಭಾಗದ ಹವಾನಿಯಂತ್ರಿತ ಕೊಠಡಿಯಲ್ಲಿ ಇರಿಸಿ, ಔಷಧೋಪಚಾರ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿ ಅಪೂರ್ವ ಪಾರಿವಾಳ ಗುಣಮುಖಗೊಂಡ ನಂತರ ಮನೆಗೆ ಕರೆದೊಯ್ದು ಆಶ್ರಯ ನೀಡುವ ಅಪೇಕ್ಷೆ ಮುಂದಿಟ್ಟರು. ಹಕ್ಕಿಗಳ ಕುರಿತ ಕಾಳಜಿಯ ಪ್ರಜ್ಞೆ ಮೆರೆದರು.

ರಸ್ತೆ ಅಪಘಾತಗಳಾದಾಗ ಸಹಾಯ ಹಸ್ತ ಚಾಚುವ ಬದಲು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚರಪಡಿಸುವ ಗೀಳು ಹೆಚ್ಚಾಗಿರುವ ಸಂದರ್ಭದಲ್ಲಿ ಪಾರಿವಾಳ ರಕ್ಷಿಸಿದ ವಿದ್ಯಾರ್ಥಿಗಳ ನಡೆ ಮಾದರಿಯೆಂದೆನ್ನಿಸಿಕೊಂಡಿತು. ಅಧ್ಯಯನ ನಿರತರಾಗಿದ್ದಾಗಲೇ ಜೀವಪರ ಮೌಲ್ಯಾದರ್ಶ ಅಳವಡಿಸಿಕೊಳ್ಳಲು ಉಳಿದವರಿಗೆ ಪ್ರೇರಣೆಯಾಯಿತು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕೇವಲ ವಿದ್ಯೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಷ್ಟೇ ಅಲ್ಲದೇ ಜೀವಪರ ಕಾಳಜಿ ತೋರ್ಪಡಿಸುವುದರಲ್ಲಿಯೂ ಮುಂಚೂಣಿ ಎಂಬುದನ್ನು ನಿರೂಪಿಸಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು