News Karnataka Kannada
Monday, May 06 2024
ನುಡಿಚಿತ್ರ

ಎಲ್ಲೆಡೆ ಕಳೆ ಕಟ್ಟಲಿದೆ ನವರಾತ್ರಿ ಸಂಭ್ರಮ

Photo Credit :

ಎಲ್ಲೆಡೆ ಕಳೆ ಕಟ್ಟಲಿದೆ ನವರಾತ್ರಿ ಸಂಭ್ರಮ

ದಸರಾ ಮತ್ತೆ ಬಂದಿದೆ. ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮ ಒಂದೆಡೆಯಾದರೆ, ನಾಡಿನ ಪ್ರತಿಮನೆಯಲ್ಲೂ ಒಂಭತ್ತು ದಿನಗಳ ಕಾಲ ದೇವಿಯರ ಆರಾಧನೆ, ಪೂಜೆ, ಗೊಂಬೆ ಕೂರಿಸಿ ಪೂಜಿಸುವ ಸಡಗರ. ಪ್ರತಿದಿನವೂ ದೇವಿಗೆ ವಿವಿಧ ಅಲಂಕಾರ ಮಾಡಿ, ಆರಾಧಿಸುವ, ಪ್ರಾರ್ಥಿಸುವ ನವರಾತ್ರಿ ಉತ್ಸವ ಇಡೀ ನಗರ ಎಲ್ಲ ರೀತಿಯಲ್ಲಿಯೂ ಸಜ್ಜಾಗುತ್ತಿದೆ.

ದೇವಿ ಆರಾಧನೆಯ ಒಂಬತ್ತು ರಾತ್ರಿಗಳು-ದಶಮಿಯಂದು ವಿಜಯದುಂಧುಬಿ ಮೊಳಗಿಸುವ ಸಂಕೇತವಾಗಿ ಮಾರ್ಪಾಡಾಗಿ ದಸರಾ ಹಿಂದೂ ಹಬ್ಬಗಳ ಪರಂಪರೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ದಸರೆಯ ಒಂಬತ್ತು ದಿನ ನವದುರ್ಗೆಯರ ಸ್ಮರಣೆ ನಡೆಯುತ್ತದೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಮೊದಲ್ಗೊಂಡು, ಅಂದರೆ ಮಹಾಲಯ ಅಮಾವಾಸ್ಯೆ ಕಳೆದ ನಂತರ ಆರಂಭವಾಗಿ ಹತ್ತು ದಿನಗಳ ಕಾಲ ನಡೆಯುವ ದಸರಾ ಅಥವಾ ನವರಾತ್ರಿ ಹಬ್ಬ ಭಾರತೀಯರ ಜನ ಮಾನಸದಲ್ಲಿ ಹಾಸು ಹೊಕ್ಕಾಗಿದೆ. ಮೊದಲ ದಿನ ಕಳಸ ಪೂಜೆಯಿಂದ ಆರಂಭವಾಗುವ ನವರಾತ್ರಿ ಉತ್ಸವ, ದೇವಿಯ ವಿವಿಧ ಅವತಾರಗಳನ್ನು ಪ್ರತಿದಿನ ಪೂಜೆ ಮಾಡುವ ಮೂಲಕ ದುರ್ಗಾಷ್ಟಮಿಯಂದು ಸಂಪನ್ನಗೊಂಡು ದಶಮಿಯಂದು ಅಸುರೀ ಶಕ್ತಿಗಳ ವಿರುದ್ಧ ವಿಜಯವನ್ನು ಸಾಧಿಸುವ ಕುರುಹಾಗಿ ವಿಜಯದಶಮಿ ಆಚರಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.

ಎರಡನೇ ದಿನ ದುರ್ಗಿ ಅಥವಾ ಲಕ್ಷ್ಮಿಯನ್ನು, ಮೂರನೇ ದಿನ ಮಯೂರಿ ಯನ್ನು, ನಾಲ್ಕನೇ ದಿನ ಸಿಂಹವಾಹಿನಿ ದೇವಿಯಾದ ಚಾಮುಂಡಿಯನ್ನು ಹಾಗೂ ಏಳು, ಏಳನೇ ದಿನ ಸಪ್ತಮಿ ಮೂಲಾ ನಕ್ಷತ್ರದಂದು ವಿದ್ಯಾಧಿದೇವತೆಯಾದ ಸರಸ್ವತಿಯನ್ನು, ಎಂಟನೇ ದಿನ ದುರ್ಗಾಷ್ಟಮಿ, ಧನಲಕ್ಷ್ಮಿ ಪೂಜೆಯನ್ನು, ಒಂಬತ್ತನೇ ದಿನ ಆಯುಧ ಪೂಜೆಯನ್ನು ಆಚರಿಸುವುದು ಪದ್ಧತಿ. ಹೀಗೆ ಭಾರತೀಯರ ನರ ನಾಡಿಗಳಲ್ಲಿ ಮಿಳಿತವಾಗಿ ಭಕ್ತಿ, ಆರಾಧನೆಗಳು ವಿಜೃಂಭಿಸುವುದು ಆಯುಧಗಳ ಪೂಜೆಯಂದು! ಆಯುಧ ಪೂಜೆ ಭಾರತೀಯ ಸಂಸ್ಕೃತಿಯ ವಿಶಿಷ್ಠ ಪರಂಪರೆಯಾಗಿದ್ದು, ವರ್ಷಪೂರ್ತಿ ನಮ್ಮ ಬದುಕಿಗೆ ನೆರವಾಗುವ ವಿವಿಧ ರೀತಿಯ ಆಯುಧಗಳು, ಸಾಧನಗಳು, ಸಲಕರಣೆಗಳು, ಯಂತ್ರಗಳು, ವಾಹನಗಳು ಇತ್ಯಾದಿ ದಿನನಿತ್ಯದ ಬಳಕೆಯ ವಸ್ತುಗಳಿಗೆ ಅಂದು ರಜೆ ನೀಡಿ ಪೂಜಿಸಿ ವಂದಿಸುವ ಕ್ರಮವಾಗಿದೆ. ಆಯುಧ ಪೂಜೆ – ಪೂಜನೀಯ ಸ್ಥಾನವನ್ನು ಬಹು ಹಿಂದಿನಿಂದಲೂ ಪಡೆದುಕೊಂಡು ಬಂದಿದೆ. ರಾಜ-ಮಹಾರಾಜರುಗಳು ಶತ್ರು ರಾಜರುಗಳ ಮೇಲೆ ಯುದ್ಧವನ್ನು ಆರಂಭಿಸಲು, ಸೀಮೋಲ್ಲಂಘನೆ ಮಾಡಲು ವಿಜಯದಶಮಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಅದಕ್ಕೂ ಮುನ್ನ ಶಸ್ತ್ರಾಗಾರದಲ್ಲಿ ಶಸ್ತ್ರಾಸ್ತ್ರಗಳನ್ನು ಪೂಜಿಸುವ ಪರಿಪಾಠವಿತ್ತು. ವಿವಿಧ ಬಗೆಯ ಶಸ್ತ್ರಾಸ್ತ್ರಗಳನ್ನು ಪೂಜೆ ಮಾಡಲಾಗುತ್ತಿತ್ತು. ಶತ್ರುರಾಜರುಗಳಲ್ಲಿ ಭಯವನ್ನುಂಟು ಮಾಡಲು ಈ ಶಸ್ತ್ರಾಸ್ತ್ರಗಳನ್ನು ಅಂದು ಪ್ರದರ್ಶಿಸುವ, ನಂತರ ವಿಜಯದಶಮಿಯಂದು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಲು ಆಯುಧ ಪೂಜೆಯನ್ನು ಮಾಡಲಾಗುತ್ತಿತ್ತು. ಮಹಾಭಾರತದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಹೊರತೆಗೆದು ಪೂಜಿಸಿದ್ದರ ನೆನಪಿಗಾಗಿ, ಅಜ್ಞಾತವಾಸದಿಂದ ಹೊರ ಬಂದು ಕೌರವರ ಮೇಲೆ ಯುದ್ಧ ಹೂಡಲು ತಯಾರಿ ನಡೆಸಿದ್ದೂ ಕೂಡ ಆಯುಧ ಪೂಜೆಯಂದೇ!

ಅಲ್ಲದೆ ಜೈನಕಾವ್ಯಗಳು ಹೇಳುವಂತೆ ಭರತ ಚಕ್ರವರ್ತಿಯ ಶಸ್ತ್ರಾಗಾರದಲ್ಲಿ ನೂತನ ಶಸ್ತ್ರ ಚಕ್ರ ಕಾಣಿಸಿಕೊಂಡಿದ್ದು ಆಯುಧ ಪೂಜೆಯಂದೇ. ಈ ಚಕ್ರ ಕಾಣಿಸಿಕೊಂಡಿದ್ದರಿಂದಲೇ ಭರತ ಚಕ್ರವರ್ತಿ ಯುದ್ಧವನ್ನು ಆರಂಭಿಸಬೇಕಾಯಿತು. ಹಾಗೆಯೇ ಭಾರತೀಯ ರಾಜ-ಮಹಾರಾಜರುಗಳು ಕೂಡ ಆಯುಧ ಪೂಜೆಯನ್ನು ಶಸ್ತ್ರಾಸ್ತ್ರಗಳ ಪೂಜೆಯ ಜೊತೆಜೊತೆಯಲ್ಲಿ ರಾಜ್ಯದ ಉನ್ನತಿಗೆ, ಸಿರಿವಂತಿಕೆಗೆ ಕಾರಣವಾದ ಉತ್ಪಾದನಾ ಸಾಮಗ್ರಿಗಳನ್ನು ಪೂಜಿಸಲು ಆರಂಭವಾಯಿತು. ಹೀಗಾಗಿ ಇಂದು ದಸರೆಯ ಆಯುಧ ಪೂಜೆ ಶಸ್ತ್ರಾಗಾರದಿಂದ ಹೊರ ಬಂದು ಜನಸಾಮಾನ್ಯರ ಹಬ್ಬವಾಗಿ ಪರಿವರ್ತನೆಯಾಗಿರುವುದನ್ನು ನೋಡಬಹುದು. ವಿಜಯದಶಮಿಯಂದು ಕಾಣದ ಸಂಭ್ರಮ, ಸಡಗರವನ್ನು ಕಾಣುವುದೇ ಆಯುಧ ಪೂಜೆಯಂದು! ರಾಜ ಮಹಾರಾಜರ ಹಬ್ಬವಾಗಿದ್ದ ದಸರೆ ಅಂದು ಜನಸಾಮಾನ್ಯರ ಹಬ್ಬವಾಗಿ ರೂಪ ತಾಳುತ್ತದೆ. ಎಲ್ಲೇ ನೋಡಿದರೂ ಸಂಭ್ರಮವನ್ನು ಕಾಣಬಹುದು. ಜಾತಿ-ಮತ ಧರ್ಮಗಳ ಎಲ್ಲೆಯನ್ನು ಮೀರಿ ಜಾತ್ಯತೀತತೆಯನ್ನು ಮೂಲಮಂತ್ರವಾಗಿಸಿಕೊಂಡು ಆಚರಿಸಲ್ಪಡುವ ಹಬ್ಬವೊಂದೇ ಎಂದರೆ ಅದು ಆಯುಧ ಪೂಜೆ ಎನ್ನಬಹುದು.

ಗ್ರಾಮಾಂತರ ಪ್ರದೇಶಗಳಲ್ಲಂತೂ ಆಯುಧ ಪೂಜೆಯ ವಿಧವೇ ವಿಭಿನ್ನ ರೂಪದ್ದು! ನಗರ ಪ್ರದೇಶದಲ್ಲಿ ಆಯುಧಗಳ ಪೂಜೆ, ಅಂಗಡಿ ಮುಂಗಟ್ಟುಗಳ ಪೂಜೆ, ಕಾರ್ಖಾನೆಯ ಯಂತ್ರೋಪಕರಣಗಳ, ಬಸ್, ಲಾರಿ, ಕಾರು, ಸ್ಕೂಟರ್ ಹೀಗೆ…ವಿವಿಧ ವಾಹನಗಳ ಪೂಜೆಯ ನಂತರ ಬೂದುಗುಂಬಳಕಾಯಿ ಒಡೆದು ನಿಂಬೆಹಣ್ಣು ಇಟ್ಟು ಪೂಜೆಯನ್ನು ಸಮಾಪನೆಗೊಳಿಸಿದರೆ, ಗ್ರಾಮಾಂತರದ ಪೂಜೆಯೇ ಬೇರೆ ರೀತಿಯದ್ದು! ಅಲ್ಲಿ ಪ್ರಾಣಿಗಳ ಬಲಿಯೇ ಮುಖ್ಯವಾಗಿರುತ್ತದೆ. ಕೋಳಿಯಿಂದ ಆರಂಭಿಸಿ ಕುರಿ, ಮೇಕೆಗಳನ್ನು ಆಯುಧಗಳ ಮುಂದೆ ಕಡಿದು, ಅದರ ರಕ್ತತರ್ಪಣ ನೀಡಿ ಆಶೀರ್ವಾದ ಬೇಡುವುದು ಬೆಳೆದು ಬಂದಿರುವ ಪರಿಪಾಠವಾಗಿದೆ. ಆಯುಧಗಳ ಪೂಜೆಯ ನೆಪದಲ್ಲಿ ಮನೆಯಲ್ಲಿ ಮಾಂಸ ಭೋಜನ ತಯಾರಿಸಿ ಸಂಭ್ರಮಪಡುತ್ತಾರೆ. ಪ್ರತಿಯೊಂದು ಮನೆ ಮನೆಯಲ್ಲೂ ಆಯುಧಗಳ ಪೂಜೆ. ಮಠಗಳಲ್ಲಿ, ದೇವಸ್ಥಾನಗಳಲ್ಲಿ, ಕಾರ್ಖಾನೆಗಳಲ್ಲಿ, ಕಛೇರಿಗಳಲ್ಲಿ, ಸಂಪರ್ಕ ಸಾಧನಗಳಾದ ಬಸ್, ರೈಲು, ವಿಮಾನ ಮತ್ತಿತರ ವಾಹನಗಳ ಮೇಲೆಲ್ಲಾ ಅಂದು ಅರಿದ್ರಾಕುಂಕುಮ ಹಾಕಲಾಗುತ್ತದೆ. ವಿಜಯದಶಮಿಯ ದಿನ ಬನ್ನಿಪೂಜೆಯೊಂದಿಗೆ ಸಂಭ್ರಮ ಕೊನೆಗೊಳ್ಳುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು