News Karnataka Kannada
Friday, May 03 2024
ವಿಶೇಷ

ಮತದಾನ ಜಾಗೃತಿಗೆ ಪುಟ್ಟ ಪೋರಿಯ ಮಾದರಿ ಕಾರ್ಯ

Little Pori's model work for voter awareness
Photo Credit : News Kannada

ಬಂಟ್ವಾಳ : 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸ್ವೀಪ್ ಸಮಿತಿಯ ಮುಖೇನ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಢಾನಗೊಳಿಸುತ್ತಿದ್ದರೆ, ಇಲ್ಲೊಬ್ಬಳು ಪುಟ್ಟ ಬಾಲಕಿ, ತನ್ನ ಸಹಪಾಠಿಗಳ ಜೊತೆಗೂಡಿ ಮತದಾನ ಜಾಗೃತಿಗೆ ಮನೆಮನೆ ಅಭಿಯಾನ‌ ನಡೆಸುತ್ತಿದ್ದಾಳೆ.

ಅಂದ ಹಾಗೆ ಇವಳ ಹೆಸರು ಸನ್ನಿಧಿ ಕಶೆಕೋಡಿ. ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದವಳು. ತನ್ನದೇ ವಯಸ್ಸಿನ ನಾಲ್ಕೈದು ಪುಟ್ಟ ಮಕ್ಕಳನ್ನು ಸೇರಿಸಿಕೊಂಡು ಮನೆ, ಅಂಗಡಿ, ಹೊಟೇಲುಗಳು, ರಿಕ್ಷಾ ನಿಲ್ದಾಾಣಗಳೆನ್ನದೆ ಮತದಾನ ಜಾಗೃತಿ ನಡೆಸುತ್ತಿದ್ದಾಳೆ. ಎಲ್ಲ ಮಕ್ಕಳು ಬೇಸಗೆ ರಜೆಯ ಮಜಾ ಅನುಭವಿಸುತ್ತಿದ್ದರೆ ಈ ಬಾಲೆ ಆಟದೊಂದಿಗೆ ಸಮಾಜಮುಖಿ ಕಾರ್ಯಕ್ಕೂ ಮುಂದಾಗಿರುವುದು ವಿಶೇಷ.

೧೨೦ ಕಡೆ ಜಾಗೃತಿ:
ಸನ್ನಿಧಿ ನೇತೃತ್ವದ ತಂಡ ಕಳೆದೊಂದು ವಾರದಿಂದ ಮತದಾನ ಜಾಗೃತಿ ಆರಂಭಿಸಿದೆ. ಪ್ರತಿದಿನ ೧೫-೨೦ ಮನೆ, ಅಂಗಡಿಗಳಿಗೆ ಭೇಟಿ ನೀಡುತ್ತಾಾರೆ. ಇದುವರೆಗೆ ಸುಮಾರು ೧೨೦ಕ್ಕೂ ಅಧಿಕ ಕಡೆಗಳಲ್ಲಿ ಮತದಾನಕ್ಕೆ ಪ್ರೇರಣೆ ನೀಡಿದ್ದಾರೆ. ಹತ್ತಿರದ ಮನೆಗಳಾದರೆ ಈ ಮಕ್ಕಳು ತಾವಾಗಿಯೇ ಹೋಗಿ ಜಾಗೃತಿ ಮೂಡಿಸುತ್ತಾಾರೆ. ದೂರ ಹೋಗಬೇಕಾದರೆ ಸನ್ನಿಧಿ ತಂದೆ ಲೋಕೇಶ್ ಕಶೆಕೋಡಿ ಜತೆಯಾಗುತ್ತಾರೆ.

ಉತ್ತಮ ಅಭ್ಯರ್ಥಿ ಆರಿಸಿ: ಉತ್ತಮ ಆಡಳಿತಕ್ಕಾಗಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎನ್ನುವುದು ಇವರ ಸ್ಲೋಗನ್. ಜನರು ಹೆಚ್ಚಿರುವ ಪ್ರದೇಶಗಳಾದ ರಿಕ್ಷಾ ನಿಲ್ದಾಣ, ಮದುವೆ ಇತ್ಯಾದಿ ಶುಭ ಸಮಾರಂಭಗಳಲ್ಲೂ ಮತದಾನ ಜಾಗೃತಿ ಮಾಡುತ್ತಾಾರೆ. ಸಮಾರಂಭಗಳಲ್ಲಿ ಮಾತುಕತೆಯೆಲ್ಲ ಮುಗಿದ ಬಳಿಕ ಕಡ್ಡಾಯವಾಗಿ ಈ ಬಾರಿ ಮತದಾನ ಮಾಡಿ ಎಂದು ಮನವಿ ಮಾಡುತ್ತಾರೆ. ಸಣ್ಣ ಮಕ್ಕಳು ಮತದಾನ ಮಾಡಿ ಎನ್ನುವಾಗ ದೊಡ್ಡವರಿಗೂ ಪುಳಕ. ಮಕ್ಕಳ ಆಶಯಕ್ಕೆ ಪೂರಕವಾಗಿ ಭರವಸೆ ನೀಡುತ್ತಾರೆ. ಖುಷಿಯಿಂದ ಮಕ್ಕಳಿಗೆ ಚಾಕಲೇಟ್, ಸಿಹಿ ತಿಂಡಿಗಳನ್ನು ನೀಡುತ್ತಾರೆ.

ಅನೇಕ ಕಡೆ ಮತದಾನ ಜಾಗೃತಿಗೆ ಹೋಗುವಾಗ ತಾವು ಆ ಪಕ್ಷಕ್ಕೆ, ಈ ಪಕ್ಷಕ್ಕೆ ಮತ ಹಾಕುವುದು ಎನ್ನುತ್ತಾರೆ. ಅಂತಹ ಸಂದರ್ಭದಲ್ಲಿ ಪಕ್ಷ ಯಾವುದೇ ಇರಲಿ, ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಎಲ್ಲಕ್ಕಿಂತ ಮುಖ್ಯವಾಗಿ ಮತಗಟ್ಟೆಗೆ ಹೋಗಿ ಮತದಾನ ಮಾಡಿ ಎನ್ನುತ್ತೇವೆ. ಯಾವುದೇ ಪಕ್ಷದ ಪರವಾಗಿ ನಾವು ಓಟು ಹಾಕಿ ಎನ್ನುವುದಿಲ್ಲ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎನ್ನುವುದನ್ನು ಅವರಿಗೆ ತಿಳಿಸುತ್ತೇವೆ ಎನ್ನುತ್ತಾಳೆ ಸನ್ನಿಧಿ ಕಶೆಕೋಡಿ.

ಸನ್ನಿಧಿಯ ಈ ಕಾರ್ಯಕ್ಕೆ ಅವರ ಹೆತ್ತವರು, ಶಾಲಾ ಶಿಕ್ಷಕರ ಪ್ರೋತ್ಸಾಹವೂ ಇದೆ. ಪ್ರಸ್ತುತ ಮಾಣಿಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ೩ನೇ ತರಗತಿ ಮುಗಿಸಿ ನಾಲ್ಕನೇ ತರಗತಿಗೆ ಪಾದಾರ್ಪಣೆ ಮಾಡುತ್ತಿರುವ ಈಕೆ ಭರತನಾಟ್ಯ, ಯೋಗ, ಭಾಷಣ ಸ್ಪರ್ಧೆಯಲ್ಲೂ ಮುಂದು.

ಬೆಳಗ್ಗೆ, ಸಂಜೆ ಜಾಗೃತಿ                                                                                                                                                                    ಪ್ರಸ್ತುತ ಕರಾವಳಿಯಲ್ಲಿ ಸುಡು ಬಿಸಿಲು. ಹಾಗಾಗಿ ಈ ಮಕ್ಕಳು ಬೆಳಗ್ಗೆ ಅಥವಾ ಸಂಜೆಯ ಸಮಯವನ್ನೇ ಆಯ್ಕೆ ಮಾಡಿ ಮನೆ ಮನೆಗೆ ಭೇಟಿ ನೀಡುತ್ತಾರೆ. ಉಳಿದ ಸಮಯದಲ್ಲಿ ಆಟ ಇತ್ಯಾದಿ ಇತರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಈ ಬಾರಿ ಮೊದಲ ಬಾರಿಗೆ ಮತದಾನ ಜಾಗೃತಿ ಮಾಡುತ್ತಿರುವುದರಿಂದ ಕರಪತ್ರ ಮಾಡಿಲ್ಲ. ಮುಂದಿನ ಮತದಾನದ ವೇಳೆಗೆ ಈ ಎಲ್ಲ ಪೂರ್ವತಯಾರಿ ನಡೆಸುವ ಉದ್ದೇಶವಿದೆ ಎನ್ನುತ್ತಾಳೆ ಸನ್ನಿಧಿ. ಒಟ್ಟಿನಲ್ಲಿ ಒಳ್ಳೆಯ ಆಡಳಿತ ಬರಲು ಎಲ್ಲರೂ ಒಳ್ಳೆಯ ಮನಸ್ಸಿನಿಂದ ಮತದಾನ ಮಾಡಿ ಎನ್ನುವ ಸನ್ನಿಧಿ ಬಳಗಕ್ಕೆ, ಇದಕ್ಕೆ ಪ್ರೋತ್ಸಾಹ ನೀಡುತ್ತಿರುವ ಹೆತ್ತವರಿಗೂ ಅಭಿನಂದನೆ ಹೇಳಲೇಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು