News Karnataka Kannada
Sunday, April 28 2024
ಲೇಖನ

ಹೊಸ ನಿರೀಕ್ಷೆಯಲ್ಲಿ ಹೊಸವರ್ಷವನ್ನು ಸ್ವಾಗತಿಸೋಣ…

New Year Celebration
Photo Credit :

ಪ್ರತಿವರ್ಷವೂ ನಾವು ಹೊಸವರ್ಷವನ್ನು ಹಲವು ನಿರೀಕ್ಷೆಗಳೊಂದಿಗೆ ಬರಮಾಡಿಕೊಳ್ಳುತ್ತೇವೆ. ನೋವುಗಳನ್ನು ಮರೆತು ಖುಷಿ ಖುಷಿಯಾಗಿ ಹೊಸವರ್ಷಕ್ಕೆ ಕಾಲಿಡುತ್ತೇವೆ. ಈ ಬಾರಿಯೂ ಅದನ್ನೇ ಮಾಡುವುದು ಅನಿವಾರ್ಯವಾಗಿದೆ. ನಾವು ಸಂಕಷ್ಟದಲ್ಲಿದ್ದೇವೆ. ನಮ್ಮೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಆರೋಗ್ಯವನ್ನು ಬೇಡುವಂತಾಗಿದೆ.

ಇಲ್ಲಿ ನಾವು ಮಾತ್ರವಲ್ಲ ನಮ್ಮ ಸುತ್ತಮುತ್ತಲ ಜಗತ್ತು ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯ ಎನ್ನುವುದನ್ನು ಕೊರೊನಾದಂತಹ ಕಾಯಿಲೆ ತೋರಿಸಿಕೊಟ್ಟಿದೆ. ಇದೇ ಕೊರೊನಾ ಹಲವು ಮನೆಗಳ ದೀಪ ಆರಿಸಿದೆ. ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದೆ.

ಇದು ಎರಡನೇ ಬಾರಿಗೆ ನಾವು ಆತಂಕದಲ್ಲಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಿದ್ದೇವೆ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಾಗೆ ಸುಮ್ಮನೆ ತಿರುಗಿ ನೋಡಿದರೆ 2021 ನಮ್ಮ ಪಾಲಿಗೆ ಖುಷಿಯನ್ನು ಬಿಟ್ಟು ಹೋಗಲಿಲ್ಲ ವರ್ಷದುದ್ದಕ್ಕೂ ನೋವು ನಿರಾಸೆ, ಕಷ್ಟ ನಷ್ಟಗಳ ಸರಮಾಲೆಯನ್ನೇ ನಮಗೆ ಮಾತ್ರವಲ್ಲ ಜಗತ್ತಿಗೆ ನೀಡಿದೆ. ನಮ್ಮಿಂದ ನಮ್ಮ ಕುಟುಂಬದವರು, ಸಂಬಂಧಿಕರು, ನಾಯಕರು, ನಟರು, ಕಲಾವಿದರು ಹೀಗೆ ಒಂದಷ್ಟು ಮಂದಿಯನ್ನು ದೂರ ಮಾಡಿದೆ.

ಮಳೆ, ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳ ಮೂಲಕ ಕೊಡಲಿ ಏಟು ನೀಡಿದೆ. ನಾವು ಖುಷಿಯಾಗಿದ್ದೆವು ಎನ್ನುವುದು ಮಾನವ ಕುಲಕ್ಕೆ ಮರೀಚಿಕೆ ಯಾಗಿದೆ. ಬಹುಶಃ ನಾವೆಲ್ಲರೂ ಸುಖವಾಗಿದ್ದೇವೆ ಎಂದು ಹೇಳ ಬೇಕಾದರೆ ಕೊರೊನಾ ನಮ್ಮನ್ನು ಬಿಟ್ಟು ಹೋಗಬೇಕು. ಮತ್ತು ಅದು ಆದಷ್ಟು ಬೇಗ ತೊಲಗಲಿ ಎಂದು ಪ್ರಾರ್ಥನೆ ಮಾಡಬೇಕಾಗಿದೆ.

ನಮ್ಮೆಲ್ಲ ಸಂಕಟ.. ಸಾವು, ನೋವು, ದುಃಖ ದುಮ್ಮಾನ, ಈಡೇರದೆ ಉಳಿದು ಹೋದ ಬಯಕೆಗಳು ಹೀಗೆ ಎಲ್ಲ ನೋವು, ನಿರಾಸೆಗಳ ನಡುವೆಯೂ ಹೊಸವರ್ಷದ ಹೊಸ ನಿರೀಕ್ಷೆಯೊಂದು ಆಸೆಯ ಕಂಗಳಿಂದ ಅತ್ತ ನೋಡುವಂತೆ ಮಾಡಿದೆ. ಇದೆಲ್ಲದರ ನಡುವೆ ನಾವು ಕಳೆದು ಹೋದ ವರ್ಷದಲ್ಲಿ ಮಾಡಿದ್ದೇನೂ ಇಲ್ಲ ಮುಂದಿನ ವರ್ಷವಾದರೂ ಏನಾದರೊಂದು ಮಾಡಬೇಕು ಎಂಬ ಶಪಥ ಮಾಡೋಣ ಆ ಮೂಲಕ ಜಡ್ಡು ಹಿಡಿದ ಬದುಕಿಗೊಂದು ಹೊಸತನದ ಸಾಣೆ ಕೊಡೋಣ.

ಹಾಗೆನೋಡಿದರೆ ನಾವು ಸವೆಸಿ ಬಂದ ಅಷ್ಟು ವರ್ಷಗಳು ಅಮೂಲ್ಯವೇ.. ಪ್ರತಿವರ್ಷದ ಆರಂಭದ ಶಪಥ ಕ್ರಮೇಣ ಮಾಸಿಹೋಗುತ್ತದೆ. ಅದರಾಚೆಗೆ ವರ್ಷದ ಆರಂಭದ ಆತ್ಮವಿಶ್ವಾಸಕ್ಕೆ ತುಕ್ಕು ಹಿಡಿಯುತ್ತದೆ. ಮತ್ತೆ ಅದೇ ಬದುಕು ಮುನ್ನಡೆಯುತ್ತದೆ. ಸಾಧನೆ ಹಾದಿಗಾಗಿ ನಾವೇ ಹಾಕಿಟ್ಟ ಮಾಪನವೂ ಮಸುಕಾಗಿ ಬಿಡುತ್ತದೆ.

ಇಷ್ಟಕ್ಕೂ ಎಲ್ಲ ವರ್ಷಗಳಲ್ಲಿಯೂ ಒಂದಲ್ಲ ಒಂದು ರೀತಿಯ ಘಟನಾವಳಿಗಳು ನಡೆದೇ ನಡೆದಿರುತ್ತವೆ. ಅವುಗಳಲ್ಲಿ ಕೆಲವು ಖುಷಿ ಕೊಟ್ಟಿದ್ದರೆ ಮತ್ತೆ ಕೆಲವು ದುಃಖವನ್ನು ತಂದಿರುತ್ತವೆ. ಕೆಲವು ಮನೆಗಳಲ್ಲಿ ಶುಭ ಕಾರ್ಯಕ್ರಮಗಳು ನಡೆದಿದ್ದರೆ ಮತ್ತೆ ಕೆಲವರ ಮನೆಗಳಲ್ಲಿ ಸಾವು-ನೋವು ಘಟಿಸಿರಬಹುದು. ಆದರೆ ಕಾಲವೇ ಹಾಗೆ ಅದಕ್ಕೆ ಎಲ್ಲವನ್ನು ಮರೆಸುತ್ತಾ ಮುನ್ನಡೆಸುವ ಶಕ್ತಿಯಿದೆ. ವ್ಯಕ್ತಿಗತವಾಗಿ ನಾವೆಲ್ಲರೂ ಸಾಕಷ್ಟು ಏರುಪೇರುಗಳನ್ನು ಅನುಭವಿಸಿರಬಹುದು ಆದರೆ ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಿರೀಕ್ಷೆಯಲ್ಲಿ ದುಃಖದ ಕ್ಷಣಗಳನ್ನು ಮರೆಯುತ್ತಾ ಹೊಸ ವರ್ಷದತ್ತ ಹೊಸದಿಕ್ಕಿನತ್ತ ಹೆಜ್ಜೆಯಿಡೋಣ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು