News Karnataka Kannada
Tuesday, April 30 2024
ವಿಶೇಷ

ಇಂದು ಕ್ರಾಂತಿಕಾರಿ ಜ್ಯೋತಿರಾವ್ ಫುಲೆ ಜನ್ಮದಿನ

Jyotirao Phule
Photo Credit :

ಇಂದು ಮಹಾತ್ಮ ಜ್ಯೋತಿರಾವ್ ಫುಲೆ ಜನ್ಮದಿನ. ಜ್ಯೋತಿಬಾ ಫುಲೆ ಅವರು ಆಧುನಿಕ ಮಹಾರಾಷ್ಟ್ರದ ಸಾಮಾಜಿಕ ಕ್ರಾಂತಿಕಾರಿ ಹೊರಾಟಗಾರರಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರು. ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ, ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದವರು.

ಸಾಮಾಜಿಕ ಸುಧಾರಣೆ ಮತ್ತು ಸಾಮಾಜಿಕ ಅಸಮಾನತೆಗಳ ನಿವಾರಣೆಯ ಕ್ಷೇತ್ರದಲ್ಲಿ ದುಡಿದ ಬ್ರಹ್ಮಸಮಾಜ, ಆರ್ಯಸಮಾಜ, ಥಿಯೋಸಾಫಿಕಲ್ ಸೊಸೈಟಿ ಮುಂತಾದ ಸಂಸ್ಥೆಗಳಂತೆ ಬೆಳಗಾವಿ ಪರಿಸರದಲ್ಲಿ ಮಹಾತ್ಮಾ ಜ್ಯೋತಿರಾವ್ ಫುಲೆ ಅವರ ಸತ್ಯಶೋಧಕ ಸಮಾಜ ಕೂಡ ಗಣ್ಯ ಕೆಲಸ ಮಾಡಿತು.

ಜ್ಯೋತಿರಾವ್ ಫುಲೆ ಏಪ್ರಿಲ್ 11, 1827ರಲ್ಲಿ ಮಹಾರಾಷ್ಟ್ರದ ಕಟಗುಣ ಎಂಬ ಹಳ್ಳಿಯಲ್ಲಿ ಜನಿಸಿದರು. 1847ರಲ್ಲಿ ಸ್ಕಾಟಿನ್ ಮಿಶನ್ ಸ್ಕೂಲ್‌ಗೆ ಸೇರಿದರು. ಮುಂದೆ ಅಲ್ಲಿ ಅಧ್ಯಾಪಕರಾದರು. ಸತತ ಓದುವ ಹವ್ಯಾಸ ಉಳ್ಳ ಅವರು ಶಿವಾಜಿ ಮತ್ತು ಜಾರ್ಜ್ ವಾಶಿಂಗ್‌ಟನ್ ಜೀವನ ಚರಿತ್ರೆ ಓದಿ ಪ್ರಭಾವಿತರಾದರು. ಶಿವಾಜಿ ಬಗ್ಗೆ ಪುಸ್ತಕ ಬರೆದರು.

ಜ್ಯೋತಿಬಾಗೆ 13ನೇ ವಯಸ್ಸಿನಲ್ಲಿದ್ದಾಗ ಇವರಿಗೆ ಬಾಲ್ಯವಿವಾಹ ಮಾಡಲಾಯಿತು. ಸತಾರಾ ಜಿಲ್ಲೆ ನಾಯಗಾಂವ್ ನಿವಾಸಿ ಶ್ರೀ ನೇವಸೆ ಪಾಟೀಲರ ಮಗಳು ಸಾವಿತ್ರಿಬಾಯಿಯೊಂದಿಗೆ ಜ್ಯೋತಿಬಾ ಅವರ ವಿವಾಹವಾದರು. ಇಂಗ್ಲೀಷ್ ಶಿಕ್ಷಣದ ವಿದ್ಯಾಭ್ಯಾಸ ಅವರ ಜೀವನದ ಮಹತ್ವಪೂರ್ಣ ಘಟ್ಟ. ಜ್ಯೋತಿಬಾ ತಮ್ಮ ಪತ್ನಿ ಸಾವಿತ್ರಿಬಾಯಿ ಅವರಿಗೆ ತಾವೇ ಶಿಕ್ಷಣ ಕೊಟ್ಟು ವಿದ್ಯಾವಂತರಾಗಿ ಮಾಡುತ್ತಾರೆ.

ಬ್ರಾಹ್ಮಣ ಮಿತ್ರರ ಒಂದು ಮದುವೆಯ ಮೆರವಣಿಗೆಯಲ್ಲಿ ಪಾಲುಗೊಂಡು ಬಗ್ಗೆ ಕೆಲವು ಬ್ರಾಹ್ಮಣರು ಅವರನ್ನು ಬೈದು ಅವಮಾನಗೊಳಿಸಲು ಜ್ಯೋತಿಬಾ ಸಹಜವಾಗಿ ಬ್ರಾಹ್ಮಣರ ವಿರೋಧಿಯಾದರು. ಸಮಾಜದಲ್ಲಿನ ದೋಷಗಳಿಗೆಲ್ಲ ಬ್ರಾಹ್ಮಣರ ಅಟ್ಟಹಾಸವೇ ಕಾರಣವೆಂದು ಅವರು ನಂಬಿದರು.

ಜ್ಯೋತಿಬಾ ಫುಲೆ ಅವರು ಆಗಸ್ಟ್ 1848 ರಲ್ಲಿ, ಭಾರತದಲ್ಲಿ ಬಾಲಕಿಯರಿಗಾಗಿ ಶಾಲೆಯನ್ನು ಆರಂಭಿಸಿದರು. ಇದು ಬಾಲಕಿಯರ ಪ್ರಪ್ರಥಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರ ಮಹಾರ್ ಮತ್ತು ಮಾಂಗ್ ದಲಿತ ವರ್ಗದ ಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸಿದರು. 1873 ರಲ್ಲಿ, ಫುಲೆ ಮತ್ತು ಅವರ ಅನುಯಾಯಿಗಳು ಸತ್ಯಶೋಧಕ್ ಸಮಾಜವನ್ನು ಸ್ಥಾಪಿಸಿದರು. ಈ ಸಮಾಜದ ಸಿದ್ದಾಂತಗಳೆಂದರೆ, ಸತ್ಯವನ್ನು ಹುಡುಕುವುದು, ಬಡವರು ಮತ್ತು ಕೆಳ ಜಾತಿಗಳ ಜನರಿಗೆ ಸಮಾನ ಹಕ್ಕುಗಳನ್ನು ನೀಡುವುದು ಆಗಿತ್ತು.

ಕೆಳಜಾತಿಯ ಮಹಿಳೆಯರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಬುಧವಾರ ಪೇಟೆಯಲ್ಲಿ 1851 ಮಹಿಳೆಯರಿಗೆ ಒಂದು ಶಾಲೆ ಆರಂಭಿಸಿದರು. ಆ ಶಾಲೆಗೆ ತಮ್ಮ ಪತ್ನಿ ಸಾವಿತ್ರಿ ಬಾಯಿ ಅಧ್ಯಾಪಕಿಯಾಗಿ ಮಾಡಿದರು. ಈ ಮೂಲಕ ಸಾವಿತ್ರಿ ಬಾಯಿ ದೇಶದ ಮೊದಲ ಮಹಿಳಾ ಶಿಕ್ಷಕಿ ಆದರು.

ರೈತರಿಗೂ ಮಹಿಳೆಯರಿಗೂ ತಮ್ಮ ಮನೆಯಲ್ಲೇ ರಾತ್ರಿ ಶಾಲೆ ತೆರೆದರು. ಇಂಗ್ಲಿಷ್ ಶಿಕ್ಷಣ, ತಾಂತ್ರಿಕ ಶಿಕ್ಷಣ ವಿಸ್ತರಣೆ ಆಗಬೇಕೆಂದು ಬಲವಾಗಿ ಪ್ರತಿಪಾದಿಸಿದರು.

ಇನ್ನು ಜ್ಯೋತಿಬಾ ಫುಲೆ ವಿಧವೆಯರ ಮರುವಿವಾಹವನ್ನು ಪ್ರತಿಪಾದಿಸಿದರು ಮತ್ತು 1854 ರಲ್ಲಿ ಕೆಳ ಮತ್ತು ಮೇಲ್ಜಾತಿಯ ವಿಧವೆಯರಿಗಾಗಿ ಒಂದು ಮನೆಯನ್ನು ಸ್ಥಾಪಿಸಿದರು. ಅವರು ಹೆಣ್ಣು ಶಿಶುಹತ್ಯೆಯನ್ನು ಎದುರಿಸಲು ನವಜಾತ ಶಿಶುಗಳಿಗೆ ಆಶ್ರಯ ತಾಣಗಳನ್ನು ಆರಂಭಿಸಿದರು. ಕೆಳ ಜಾತಿಯ ಜನರಿಗೆ ತಮ್ಮ ಮನೆಯ ನೀರನ್ನು ಬಳಸಲು ಅವಕಾಶ ನೀಡುವ ಮೂಲಕ, ಜ್ಯೋತಿಬಾ ಫುಲೆ ಕೆಳ ಜಾತಿಗಳನ್ನು ಸುತ್ತುವರೆದಿರುವ ಸಾಮಾಜಿಕ ಅಸ್ಪೃಶ್ಯತೆಯ ಕಳಂಕವನ್ನು ತೆಗೆದುಹಾಕಲು ಪ್ರಯತ್ನಿಸಿದರು.

ಜ್ಯೋತಿಬಾ ಫುಲೆ ಅವರು 1890 ರಲ್ಲಿ ನಿಧನ ಹೊಂದಿದರು. ವಿವಿಧ ಕ್ಷೇತ್ರಗಳಲ್ಲಿ ಜ್ಯೋತಿ ಬಾ ಮಾಡಿದ ಅಪಾರ ಸೇವೆಗೆ ಅವರಿಗೆ ಮುಂಬಿಯಿ ಸರಕಾರವೇ ‘ಮಹಾತ್ಮಾ’ ಎಂಬ ಬಿರಿದನ್ನು 1880 ರಲ್ಲಿ ನೀಡಿತು. ಇವರು ಮಹಿಳಾ ಶಿಕ್ಷಣಕ್ಕೆ ನೀಡಿದ ಅಪಾರವಾದ ಕೊಡುಗೆಯಿಂದ ಇವರನ್ನು ಭಾರತವು ಸದಾ ಸ್ಮರಿಸುತ್ತಲೇ ಇರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು