News Karnataka Kannada
Thursday, May 02 2024
ವಿಶೇಷ

ಮಿಶ್ರಬೆಳೆಯಾಗಿ ಅನಾನಸ್ ಬೆಳೆಯುವುದು ಲಾಭ!

Growing pineapple as a mixed crop is profitable!
Photo Credit : By Author

ಹಲವು ಕಾರಣಗಳಿಂದಾಗಿ ಒಂದೇ ರೀತಿಯ ಬೆಳೆಯನ್ನು ಬೆಳೆದು ಅದರಿಂದ ಜೀವನ ಸಾಗಿಸುವುದು ಇತ್ತೀಚಿನ ದಿನಗಳಲ್ಲಿ ಕೃಷಿಕನಿಗೆ ಸಾಧ್ಯವಾಗದ ಮಾತಾಗಿದೆ. ಹಾಗಾಗಿ ಕೃಷಿಕರು ಮಿಶ್ರ ಬೆಳೆ ಬೆಳೆಯುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಯಾವುದಾದರೊಂದು ಬೆಳೆಯಿಂದಾದರು ಒಂದಷ್ಟು ಆದಾಯವನ್ನು ನಿರೀಕ್ಷಿಸಬಹುದು ಎಂಬ ಅಲೋಚನೆ ಕೃಷಿಕರದ್ದಾಗಿದೆ.

ಅನಾನಸ್ ಪಾನೀಯ, ವಿವಿಧ ತಿನಿಸುಗಳಲ್ಲಿ ಉಪಯೋಗವಾಗುವುದರಿಂದ ಇದಕ್ಕೆ ಬೇಡಿಕೆ ಇದ್ದೇ ಇದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ನಿರ್ದಿಷ್ಟವಾಗಿಲ್ಲವಾದರೂ, ಬೆಳೆಗಾರರಿಗೆ ತೊಂದರೆಯಾಗದು ಎಂಬುವುದು ಇದನ್ನು ಬೆಳೆದವರ ಅಭಿಪ್ರಾಯವಾಗಿದೆ. ಅನಾನಸ್ ಹಣ್ಣಿನಲ್ಲಿ ದೇಹಕ್ಕೆ ಬೇಕಾದ ಎಲ್ಲ ಎ, ಬಿ, ಮತ್ತು ಸಿ ಅನ್ನಾಂಗಗಳು, ಲವಣಗಳಿದ್ದು, ಕೆಲವು ರೋಗ ನಿರೋಧಕ ಶಕ್ತಿಗಳು ಸಹ ಇದರಲ್ಲಿದೆ. ಇದು ಉಷ್ಣವಲಯದ ಹಣ್ಣಾಗಿದ್ದು, ಜೇಡಿ ಮಣ್ಣು ಹಾಗೂ ಜೌಗು ಮಣ್ಣನ್ನು ಹೊರತುಪಡಿಸಿದರೆ, ಇತರೆ ಎಲ್ಲ ಮಣ್ಣಿನಲ್ಲಿಯೂ ಇದು ಚೆನ್ನಾಗಿ ಬೆಳೆಯುತ್ತದೆ. ಸಮಶೀತೋಷ್ಣ ವಾತಾವರಣ ಅಥವಾ ಸಾಮಾನ್ಯವಾಗಿ 40 ರಿಂದ 60 ಸೆಂ. ಮೀ ಮಳೆ ಬೀಳುವ ಪ್ರದೇಶಗಳಲ್ಲಿ ಇದನ್ನು ಬೆಳೆಯಬಹುದಾಗಿದೆ.

ಅನಾನಸ್‌ನಲ್ಲಿ ಮುಖ್ಯವಾಗಿ ಎರಡು ತಳಿಗಳಿದ್ದು, ಅವುಗಳೆಂದರೆ ಕ್ಯೂ ಮತ್ತು ‘ಕ್ವೀನ್’ ಕ್ಯೂ ಜಾತಿಗೆ ಸೇರಿದ ಗಿಡಗಳಲ್ಲಿ ಮುಳ್ಳುಗಳಿರುವುದಿಲ್ಲ ಅಲ್ಲದೆ ಹಣ್ಣುಗಳ ಗಾತ್ರ ಹಿರಿದಾಗಿರುತ್ತದೆ. ಸಾಮಾನ್ಯವಾಗಿ ಒಂದೂವರೆ ಕಿ.ಗ್ರಾಂ. ನಿಂದ ಮೂರು ಕಿ.ಗ್ರಾಂ ತನಕವೂ ತೂಗುತ್ತವೆ. ಕ್ವೀನ್ಸ್ ತಳಿಗಳು ರುಚಿಯಾಗಿದ್ದು ಹಣ್ಣುಗಳ ಗಾತ್ರ ಚಿಕ್ಕದಾಗಿರುತ್ತವೆ. ಇದು ಅರ್ಧ ಕಿ.ಗ್ರಾಂ ನಿಂದ ಒಂದೂವರೆ ಕಿ.ಗ್ರಾಂ. ತನಕ ತೂಗುತ್ತದೆ.

ಅನಾನಸ್ ಸಸ್ಯಾಭಿವೃದ್ಧಿಯನ್ನು ಅನಾನಸ್ ಗಿಡದಲ್ಲಿ ಹುಟ್ಟುವ ಕಂದುಗಳಿಂದ, ಹಣ್ಣಿನ ಕೆಳಭಾಗದಲ್ಲಿರುವ ಚಿಗುರು (ಸ್ಲಿಪ್ಸ್) ಹಣ್ಣಿನ ಮೇಲ್ಭಾಗದಲ್ಲಿರುವ ಚಿಗುರು (ಕ್ರೌನ್ಸ್)ಗಳಿಂದ ಮಾಡಬಹುದಾಗಿದೆ. ಕಂದುಗಳು ಮತ್ತು ಸ್ಲಿಪ್ಸ್ ಗಳನ್ನು ನಾಟಿಗೆ ಉಪಯೋಗಿಸುವುದರಿಂದ ಗಿಡಗಳು ಹುಲುಸಾಗಿ ಬೆಳೆಯುವುದಲ್ಲದೆ ಬಹುಬೇಗ ಫಸಲನ್ನು ಸಹ ನೀಡುತ್ತವೆ.

ತೋಟಗಾರಿಕಾ ಇಲಾಖೆಯ ಪ್ರಕಾರ ಅನಾನಸ್ ಕೃಷಿ ಮಾಡುವುದಾದರೆ ಕೃಷಿ ಮಾಡಲು ಉದ್ದೇಶಿಸಿದ ಸ್ಥಳವನ್ನು ಚೆನ್ನಾಗಿ ಉಳುಮೆ ಮಾಡಿ ಇಲ್ಲಿರುವ ಕಳೆ, ಕಸ, ಮುಂತಾದವುಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಆನಂತರ ಸುಮಾರು ಎರಡು ಅಡಿ ಅಂತರದಲ್ಲಿ ಮುಕ್ಕಾಲು ಅಡಿ ಆಳ, ಎರಡು ಅಡಿ ಅಗಲದ ಚರಂಡಿ ತೆಗೆದು ಅದನ್ನು ಕೊಟ್ಟಿಗೆ ಗೊಬ್ಬರ ಹಾಗೂ ರಂಜಕ ಯುಕ್ತ ಗೊಬ್ಬರವನ್ನು ಬೆರೆಸಿ ಮುಚ್ಚಿ ನಂತರ ಚರಂಡಿಯಲ್ಲಿ ಒಂದು ಅಡಿ ಅಂತರದಲ್ಲಿ ಎರಡು ಸಸಿಗಳನ್ನು ನೆಡಬೇಕಾಗುತ್ತದೆ. ಹೀಗೆ ನೆಡುವಾಗ ಸಸಿಯ ಸುಳಿಗೆ ಮಣ್ಣು ಬೀಳದಂತೆ ಎಚ್ಚರ ವಹಿಸುವುದು ಒಳ್ಳೆಯದು.

ಸಸಿಯನ್ನು ನೆಟ್ಟ ನಂತರ ಮಳೆ ಬೀಳುತ್ತಿದ್ದರೆ ನೀರು ಹಾಯಿಸುವ ಅಗತ್ಯವಿರುವುದಿಲ್ಲವಾದರೂ ಮಳೆಯಿರದಿದ್ದ ಸಂದರ್ಭವಾದರೆ ನೀರು ಹಾಯಿಸುವುದು ಅತ್ಯಗತ್ಯ. ಒಂದು ಎಕರೆ ಪ್ರದೇಶಕ್ಕೆ ಸುಮಾರು ಹನ್ನೆರಡು ಟನ್ ಕೊಟ್ಟಿಗೆ ಗೊಬ್ಬರ ನೂರ ನಲವತ್ತು ಕಿ.ಗ್ರಾಂ. ಸಾರಜನಕ, ಏಳು ನೂರು ಕಿ.ಗ್ರಾಂ. ಅಮೋನಿಯಂ ಸಲ್ಫೇಟ್, ಐವತ್ತೆರಡು ಕಿ.ಗ್ರಾಂ ರಂಜಕ ಅಥವಾ ಮುನ್ನೂರು ಇಪ್ಪತ್ತೆöÊದು ಕಿ.ಗ್ರಾಂ. ಫಾಸ್ಪೇಟ್, ನೂರ ಎಪ್ಪತ್ತೈದು ಕಿ.ಗ್ರಾಂ ಪೋಟ್ಯಾಷ್ ಬೇಕಾಗುತ್ತದೆ.

ಅನಾನಸ್ ಸಸಿಯನ್ನು ನೆಟ್ಟ ನಂತರ ಕಾಲಕ್ಕೆ ಸರಿಯಾಗಿ ಗೊಬ್ಬರ ಹಾಕುವುದು, ಕಳೆ ತೆಗೆಯುವುದು, ಮಣ್ಣು ಸೇರಿಸುವುದು ಮುಂತಾದವುಗಳನ್ನು ತಪ್ಪದೆ ಮಾಡಬೇಕು. ಸಸಿ ನೆಟ್ಟ ಮೂರು ತಿಂಗಳ ನಂತರ ಮೂರು ತಿಂಗಳ ಅಂತರದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಸಾರಜನಕ ಮತ್ತು ಪೋಟ್ಯಾಷ್ ಗೊಬ್ಬರವನ್ನು ಹಾಕಬೇಕು. ಬೇಸಿಗೆಯಲ್ಲಿ ಮಣ್ಣಿನ ತೇವ ನೋಡಿಕೊಂಡು ನೀರು ಹಾಯಿಸಬೇಕಾಗುತ್ತದೆ.

ಅನಾನಸ್ ಗಿಡವು ಹದಿಮೂರರಿಂದ ಹದಿನಾಲ್ಕು ತಿಂಗಳ ಬೆಳವಣಿಗೆಯಲ್ಲಿದ್ದಾಗ ನ್ಯಾಪ್ತಲಿನ್ ಅಸಿಟಿಕ್ ಆಮ್ಲವನ್ನು ಶೇಕಡ ಎರಡರ ಯೂರಿಯಾದೊಂದಿಗೆ ಅಥವಾ ಇಂಥೋಪಾಸ್ ಮಾತ್ರ 100 ಪಿ.ಪಿ ಎಂ. ಅಥವಾ 25 ಪಿ.ಪಿ.ಎಂ ಇಂಥೋಪಾಸ್‌ನ್ನು ಶೇಕಡ 0.04 ಸೋಡಿಯಂ ಕಾರ್ಬೋನೆಟ್ ಮಿಶ್ರಣದೊಂದಿಗೆ ನೀರಿನಲ್ಲಿ ಬೆರೆಸಿ ಗಿಡದ ಸುತ್ತ ಸುಮಾರು 50 ಮಿ.ಲೀನಂತೆ ಹಾಕಬೇಕು. ಹೀಗೆ ಮಾಡಿದ ನಲವತ್ತು, ನಲವತ್ತೈದು ದಿನಗಳಲ್ಲಿ ಗಿಡವು ಹೂ ಬಿಡಲಾರಂಭಿಸುತ್ತದೆ, ಈ ಸಂದರ್ಭ 200 ಪಿ.ಪಿ.ಎಂ.ಎನ್.ಎ ಯನ್ನು ಕಾಯಿಕಟ್ಟಿದ ಮೂರು ತಿಂಗಳಲ್ಲಿ ನೀಡಬೇಕು. ಇದರಿಂದ ಹಣ್ಣಿನ ಗಾತ್ರ ಹೆಚ್ಚಾಗಲು ಸಾಧ್ಯವಾಗುತ್ತದೆ.

ಅನಾನಸ್ ಗಿಡಕ್ಕೆ ಕೆಲವು ರೋಗಗಳು ಬಾಧಿಸುತ್ತಿದ್ದು, ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಎಲೆ ಸೊರಗು ರೋಗ ಹಾಗೂ ಕಾಂಡ ಕೊಳೆರೋಗವಾಗಿದೆ. ಸಸಿ ನೆಡುವ ಮೊದಲು ಸಸಿಗಳನ್ನು ಕೀಟನಾಶಕಗಳಿಂದ ತೊಯ್ದು ನೆಡುವುದು ಒಳ್ಳೆಯದು. ಇದರಿಂದ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ಎಲೆ ಸೊರಗು ರೋಗ ಬಂದರೆ ಗಿಡದ ತಳಭಾಗದ ರೋಗಬಾಧಿತ ಎಲೆ (ಗರಿ)ಗಲನ್ನು ಕತ್ತರಿಸಿ ತೆಗೆಯಬೇಕು. 20 ಕಿ.ಗ್ರಾಂ. ಡೈಪೋಲಿಟಾನ್ ಅಥವಾ 23 ಗ್ರಾಂ ಜೈನೆಬ್‌ಗಳನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ತಿಗಣೆಗಳ ಬಾಧೆ ಕಂಡು ಬಂದಲ್ಲಿ ಒಂದು ಎಕರೆ ಪ್ರದೇಶಕ್ಕೆ 7 ಕಿ.ಗ್ರಾಂನಷ್ಟು ಪೋರೇಟ್ ಹರಳುಗಳನ್ನು ಹಾಕಬೇಕು. ಬೆಳೆಗಾರ ಹಂಸರವರ ಪ್ರಕಾರ ಅನಾನಸ್‌ಗೆ ರೋಗ ತಗಲುವುದು ಅಪರೂಪವಾಗಿದ್ದು ತಗುಲಿದರೂ ಸುಲಭವಾಗಿ ನಿಯಂತ್ರಿಸಬಹುದಾಗಿದೆ. ಅನಾನಸ್ ಕೃಷಿ ಕುರಿತಂತೆ ಸ್ಥಳೀಯ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಣ್ಣು ಪರೀಕ್ಷೆ ಮಾಡಿಸಿ ಕೃಷಿಗೆ ಭೂಮಿ ಸೂಕ್ತನಾ ಎಂಬುದನ್ನು ಅರಿತು ಕೃಷಿ ಕೈಗೊಂಡರೆ ಉತ್ತಮ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು