News Karnataka Kannada
Sunday, May 05 2024
ವಿಶೇಷ

ವರಮಹಾಲಕ್ಷ್ಮಿ ಹಬ್ಬದ ವೈಶಿಷ್ಟ್ಯ, ಹಬ್ಬದ ಆಚರಣೆ ಹೇಗೆ ಗೊತ್ತಾ?

varamahalakshmi
Photo Credit : News Kannada

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ.

ಶ್ರಾವಣ ಮಾಸದಲ್ಲಿ ಬರೋ ವರಮಹಾಲಕ್ಷ್ಮಿ ಹಬ್ಬ ಅಂದ್ರೆ ಹೆಣ್ಮಕ್ಕಳಿಗೆ ನೆಚ್ಚಿನ ಹಬ್ಬ. ಭಕ್ತಿಯಿಂದ ವ್ರತ ಮಾಡ್ತಾರೆ.ವರಮಹಾಲಕ್ಷ್ಮೀ ಹಬ್ಬದಂದು ದೇವಿಯ ಅಲಂಕಾರಕ್ಕೆ ಹೆಚ್ಚಿನ ಮಹತ್ವ ನೀಡ್ತಾರೆ. ಶ್ರಾವಣ ಮಾಸದ ಎರಡನೇ ಶುಕ್ರವಾರವೇ ವರಮಹಾಲಕ್ಷ್ಮಿ ಹಬ್ಬ. ಈ ಹಬ್ಬದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಖರೀದಿ ಭರಾಟೆ ಜೋರಾಗಿದೆ.

ಹಬ್ಬದ ಆಚರಣೆ ಹೇಗೆ:
ವ್ರತ ಮಾಡುವವರು ವರಮಹಾಲಕ್ಷ್ಮೀ ಹಬ್ಬದ ದಿನ ಬೆಳಗ್ಗೆ ಎದ್ದು ಮಂಗಳಸ್ನಾನ ಮಾಡಿ, ಪೂಜಾಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸುತ್ತಾರೆ. ಅಷ್ಟದಳ ಪದ್ಮದ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು, ಅಕ್ಕಿ ಹಾಕಿ, ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ ಇಟ್ಟು ಅದರ ಮೇಲೆ ಅರಿಶಿಣ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು ಲಕ್ಷ್ಮೀದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಬೇಕು.

ವೀಳ್ಯದೆಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲಿಡಬೇಕು. ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತಾರೆ. ದೇವಿಗೆ ಪೊಂಗಲ್‌ ನೈವೇದ್ಯ ಮಾಡಿ ಅರ್ಪಿಸುತ್ತಾರೆ. ಮುತ್ತೈದೆಯರನ್ನು ಪೂಜೆಗೆ ಆಮಂತ್ರಿಸಿ, ಪೂಜೆಯ ನಂತರ ಅವರಿಗೆ ತಾಂಬೂಲ ನೀಡುವ ಪದ್ಧತಿ ಇದೆ. ವ್ರತ ಮಾಡುವವರು ಪೂಜೆ ಮುಗಿದ ನಂತರ ಆಹಾರ ಸೇವಿಸುತ್ತಾರೆ.

ವರಮಹಾಲಕ್ಷ್ಮಿ ಹಬ್ಬದ ಮಹತ್ವ:
ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಉದ್ಭವಿಸುತ್ತಾಳೆ ಲಕ್ಷ್ಮೀ. ಹಾಗಾಗಿ ಈ ವರಮಹಾಲಕ್ಷ್ಮಿ ವ್ರತದ ದಿನ ತಾಯಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ. ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿರುವುದರಿಂದ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಅಭ್ಯಂಜನವನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ.

ಇನ್ನೊಂದು ವಿಚಾರವೆಂದರೇ ಒಮ್ಮೆ ಶಿವ ಪಾರ್ವತಿಯರು ಏಕಾಂತದಲ್ಲಿ ಮಾತನಾಡುತ್ತಿದ್ದಾಗ ಈ ಜಗತ್ತಿನ ಉದ್ಧಾರಕ್ಕಾಗಿ ಯಾವ ವ್ರತಮಾಡಿದರೆ ಶ್ರೇಷ್ಠ ಎಂದು ಜಗಜ್ಜನನಿಯಾದ ಪಾರ್ವತಿಯು ಕೇಳಿದಾಗ, ತಡಮಾಡದೇ ಸ್ವತಃ ಈಶ್ವರನು ವರಮಹಾಲಕ್ಷ್ಮೀ ವ್ರತವೇ ಅತ್ಯಂತ ಶ್ರೇಷ್ಠವಾದ ವ್ರತ ಎಂದು ಹೇಳಿದ್ದಾರಂತೆ.

ಸಾಮನ್ಯವಾಗಿ ಲಕ್ಷ್ಮೀ ಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ ಎನ್ನುವುದು ನಂಬಿಕೆ. ಆದರೆ ಈ ಆಧುನಿಕ ಜೀವನದ ಒತ್ತಡದಲ್ಲಿ ಯಾರಿಗೂ ಉಪವಾಸ ಮಾಡಲು ಸಾಧ್ಯವಾಗದೆ ಇರುವುದರಿಂದ ಮುಂಜಾನೆಯಲ್ಲಿ ಯಾವುದೇ ಘನಹಾರ ಸೇವಿಸದೆ ವ್ರತವನ್ನಾಚರಿಸುತ್ತಾರೆ.

ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ, ಸುಖಃ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾ ಲಕ್ಶ್ಮೀಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅಂತಹವರ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಇಂದಿನ ದಿನಗಳಲ್ಲಿ ಬಹುತೇಕರು ಸರಸ್ವತಿಗಿಂತ ಲಕ್ಷ್ಮಿಯನ್ನು ಒಲಿಸಿಕೊಳ್ಳಲೇ ಬಯಸುತ್ತಿರುವುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯವಾಗಿದೆ. ಹಾಗಾಗಿ ಈ ಕಲಿಯುಗದಲ್ಲಿ ಯಾವುದೇ ಜಾತಿಗಳ ತಾರತಮ್ಯವಿಲ್ಲದೆ ಪೂಜಿಸುವ ಏಕೈಕ ದೇವತೆ ಲಕ್ಷ್ಮಿ ಎಂದರೆ ಅತಿಶಯೋಕ್ತಿಯೇನಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು