News Karnataka Kannada
Saturday, May 18 2024
ವಿಶೇಷ

ಬೆಳ್ತಂಗಡಿ: ಬೆಳಕು ಯೋಜನೆಯಲ್ಲಿ ಎಳನೀರಿನ 33 ಮನೆಗಳಿಗೆ ವಿದ್ಯುತ್ ಬೆಳಕು

Belthangady: 33 houses to be electrified under light project
Photo Credit : News Kannada

ಬೆಳ್ತಂಗಡಿ: ಸರಕಾರದ ಬೆಳಕು ಯೋಜನೆಯಲ್ಲಿ ದುರ್ಗಮ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದ ಒಟ್ಟು 33 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಪೂರ್ಣಗೊಂಡಿದ್ದು ,ಮಾ.29ರಂದು ಉದ್ಘಾಟನೆಗೊಳ್ಳುವ ಮೂಲಕ ಇಲ್ಲಿನ ಮನೆಗಳಲ್ಲಿ ವಿದ್ಯುತ್ ಬೆಳಕು ಚೆಲ್ಲಲಿದೆ. ಸರಿ ಸುಮಾರು 75 ವರ್ಷಗಳ ಬಳಿಕ‌ ವಿದ್ಯುತ್ ಸಂಪರ್ಕ ಸಿಗುತ್ತಿದೆ.

ಬೆಳ್ತಂಗಡಿಯಿಂದ 120 ಕಿಮೀ ದೂರದಲ್ಲಿರುವ ಎಳನೀರು ಪ್ರದೇಶದಲ್ಲಿ 150 ರಷ್ಟು ಮನೆಗಳು ಹಾಗೂ 600ಕ್ಕಿಂತ ಅಧಿಕ ಜನಸಂಖ್ಯೆ ಇದೆ. ಜಲಪಾತಗಳ ಸಹಿತ ರಮಣೀಯ ಪ್ರಕೃತಿ ಸೌಂದರ್ಯದ ಎಳನೀರು ಪರಿಸರದಲ್ಲಿನ ಹಲವಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಚಿಮಣಿ ದೀಪದ ಬೆಳಕಿನಲ್ಲಿ ಜೀವನ ಸಾಗಿಸುವುದು ಅನಿವಾರ್ಯವಾಗಿತ್ತು. ಹಲವಾರು ವರ್ಷಗಳಿಂದ ವಿದ್ಯುತ್ ಸಂಪರ್ಕಕ್ಕೆ ಇಲ್ಲಿನ ಜನಗಳ ಬೇಡಿಕೆ ಇದ್ದರು ಇದಕ್ಕೆ ಹಲವಾರು ಎಡರು-ತೊಡರುಗಳು ಕಂಡುಬಂದಿದ್ದವು. ಈ ಎಲ್ಲಾ ಎಡರು ತೊಡರುಗಳನ್ನು ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಲ್ಲಿ ನಿವಾರಿಸಲಾಗಿದ್ದು, ಇಲ್ಲಿನ 33 ಮನೆಗಳಿಗೆ ವಿದ್ಯುತ್ ಬೆಳಕಿನ ಭಾಗ್ಯ ಒದಗಿ ಬಂದಿದೆ.

ಮೂಲಭೂತ ಸೌಕರ್ಯ ಕೊರತೆಯಿಂದ ಬಳಲುತ್ತಿದ್ದ ಎಳನೀರು ಪ್ರದೇಶಕ್ಕೆ ಶಾಸಕರು ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದು ಅದರಲ್ಲಿ ಪ್ರಮುಖ ಯೋಜನೆಗಳು ಪೂರ್ಣಗೊಂಡಿವೆ. ಕೋವಿಡ್ ಅಲೆಗಳ ಸಂದರ್ಭ ಎಳನೀರು ಪರಿಸರದಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ಕಂಡು ಬರದ ಹಿನ್ನೆಲೆಯಲ್ಲಿ ಇದು ಮಾದರಿ ಪ್ರದೇಶವಾಗಿಯು ಮೂಡಿಬಂದಿತ್ತು.

4.5ಕಿಮೀ.ಲೈನ್
ಉಜಿರೆ ಮೆಸ್ಕಾಂ ಉಪ ವಿಭಾಗದ ಸೋಮಂತಡ್ಕ ಶಾಖಾ ಕಚೇರಿ ಸುಪರ್ದಿಯಲ್ಲಿ 32,92,110 ರೂ. ಅನುದಾನದಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು 152 ಎಲ್ ಟಿ ಕಂಬ ಅಳವಡಿಸಿ, 4.5 ಕಿಮೀ. ಉದ್ದದ ವಿದ್ಯುತ್ ಲೈನ್ ಎಳೆಯಲಾಗಿದೆ. ಇಲ್ಲಿನ ಕೆಲವೊಂದು ಸ್ಥಳಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದಲ್ಲಿರುವ ಕಾರಣದಿಂದ,ವಿದ್ಯುತ್ ಲೈನ್ ನ್ನು, ಕಂಬ ಅಳವಡಿಕೆಯನ್ನು ಕಂದಾಯ ಜಾಗ ಹಾಗೂ ಖಾಸಗಿ ಜಾಗಗಳಲ್ಲಿ ಮಾತ್ರ ಮಾಡಲಾಗಿದೆ. ಈ ಯೋಜನೆಯಲ್ಲಿ ಫಲಾನುಭವಿಗಳಿಂದ ಯಾವುದೇ ಠೇವಣಿ ಸ್ವೀಕರಿಸದೆ ಒಂದು ದೀಪ,ಒಂದು ಪ್ಲಗ್ ಇರುವ ವಯರಿಂಗ್ ವ್ಯವಸ್ಥೆಯನ್ನು ಮೆಸ್ಕಾಂ ವತಿಯಿಂದಲೇ ಮಾಡಲಾಗಿದೆ ಮೀಟರ್,ಬಾಕ್ಸ್, ಫ್ಯೂಸ್,ಟ್ರಿಪ್ಪರ್,9 ವ್ಯಾಟ್ ಬಲ್ಬ್ ಇತ್ಯಾದಿಗಳನ್ನು ಕೂಡ ಮೆಸ್ಕಾಂ ಫಲಾನುಭವಿಗಳಿಗೆ ಒದಗಿಸಿದೆ. ಬೆಳ್ತಂಗಡಿಯಿಂದ ವಿದ್ಯುತ್ ಕಂಬ ಹಾಗೂ ಇತರ ಅಗತ್ಯ ಪರಿಕರಗಳನ್ನು 120 ಕಿಮೀ ಕ್ರಮಿಸಿ ಬಜಗೋಳಿ ಮೂಲಕ ಸಾಗಿಸಲಾಗಿದೆ. ಇದು ಅಧಿಕ ಸಾಗಾಟ ವೆಚ್ಚಕ್ಕೂ ಕಾರಣವಾಗಿದೆ.

ಬಡಾಮನೆ ಪ್ರದೇಶಕ್ಕೆ ಪರಿವರ್ತಕ

ಇಲ್ಲಿನ ಬಡಾಮನೆ ಪ್ರದೇಶದಲ್ಲಿ ಲೋ ವೋಲ್ಟೇಜ್ ಸಮಸ್ಯೆ ವಿಪರೀತವಾಗಿದ್ದು, ಇದರ ನಿವಾರಣೆಗಾಗಿ ನೂತನ ಪರಿವರ್ತಕ ಅಳವಡಿಸಲಾಗಿದ್ದು ಇದು ಕೂಡ ಮಾ. 29ರಂದು ಉದ್ಘಾಟನೆಗೊಳ್ಳಲಿದೆ.
ಬಂಗಾರಪಲ್ಕೆ ಪರಿಸರದ 12 ಮನೆಗಳಿಗೆ ವಿದ್ಯುತ್ ಪೂರೈಸಲು ವಿದ್ಯುತ್ ಲೈನ್ ಹಾದು ಹೋಗುವ 800 ಮೀ. ನಷ್ಟು ಜಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದಲ್ಲಿದೆ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ವನ್ಯಜೀವಿ ವಿಭಾಗವು ಹೆಚ್ಚಿನ ಮಾಹಿತಿಗಳನ್ನು ಕೇಳಿದ್ದು ಇವುಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು ಇದು ಪೂರ್ಣಗೊಂಡ ಕೂಡಲೇ ಮರುಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಕಳಸ-ಸಂಸೆ ಮಾರ್ಗ
ಎಳನೀರು ಪ್ರದೇಶಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೆಸ್ಕಾಂ ಉಪ ವಿಭಾಗದಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಆದರೆ ಈ ಪ್ರದೇಶ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿರುವ ಕಾರಣ ಉಜಿರೆ ಉಪವಿಭಾಗದ ಸೋಮಂತಡ್ಕ ಶಾಖಾ ಕಛೇರಿ ವತಿಯಿಂದ ಕಾಮಗಾರಿ ನಿರ್ವಹಿಸಲಾಗಿದೆ. ಇಲ್ಲಿನ ಬಿಲ್ಲಿಂಗ್, ಅಗತ್ಯ ದುರಸ್ತಿ,ತುರ್ತು ನಿರ್ವಹಣೆ ಇತ್ಯಾದಿ ಎಲ್ಲವನ್ನು ಸೋಮಂತಡ್ಕ ಶಾಖಾ ಕಚೇರಿ ನಿರ್ವಹಿಸಬೇಕು. ಬೇಸಿಗೆಯಲ್ಲಿ ದಿಡುಪೆ ಮೂಲಕ ಸೋಮಂತಡ್ಕದಿಂದ ಜೀಪ್ ಅಥವಾ ಬೈಕ್ ನಲ್ಲಿ 25 ಕಿಮೀ. ಕ್ರಮಿಸಿ ಎಳನೀರು ತಲುಪಬಹುದು ಆದರೆ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿರುವ ಕಾರಣ ಯಾವುದೇ ಸಮಸ್ಯೆ ಉಂಟಾದರೂ ಬಜೆಗೂಳಿ ಮೂಲಕ 240ಕಿಮೀ ಸಂಚರಿಸುವುದು ಅಗತ್ಯವಾಗಿದೆ.ಈ ಕಾರಣದಿಂದ ವಿದ್ಯುತ್ ವ್ಯವಸ್ಥೆ ಹಾಗೂ ನಿರ್ವಹಣೆಯನ್ನು ಕಳಸ ಉಪ ವಿಭಾಗದ ವ್ಯಾಪ್ತಿಗೆ ಒಳಪಡಿಸಿದರೆ ಉತ್ತಮ ಎಂಬುದು ಇಲ್ಲಿನ ಗ್ರಾಹಕರ ಅಭಿಪ್ರಾಯವಾಗಿದೆ.

“ಉಜಿರೆ ಉಪ ವಿಭಾಗದಲ್ಲಿ ಬೆಳಕು ಯೋಜನೆಯಲ್ಲಿ 562 ಸಂಪರ್ಕಗಳನ್ನು ಈಗಾಗಲೇ ಒದಗಿಸಲಾಗಿದ್ದು ಮಾ. 29ರಂದು ಎಳನೀರಿನಲ್ಲಿ ಒಟ್ಟು 33 ಸಂಪರ್ಕಗಳು ಉದ್ಘಾಟನೆಗೊಳ್ಳಲಿವೆ”

“ಎಳನೀರು ಪರಿಸರದಲ್ಲಿ ಈಗ ವಿದ್ಯುತ್ ಲೈನ್ ನಿರ್ಮಿಸುವ ಇರುವ ಜಾಗ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ವಿಭಾಗದಲ್ಲಿ ಇರುವುದಿಲ್ಲ. ಕಂದಾಯ ಹಾಗೂ ಖಾಸಗಿ ಜಾಗಗಳ ಮೂಲಕ ಮಾತ್ರ ಹಾದುಹೋಗಿದೆ.”

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು