News Karnataka Kannada
Monday, April 29 2024
ಅಂಕಣ

ಕುವೆಂಪು ವ್ಯಕ್ತಿತ್ವದ ಜೊತೆಗೇ ತೇಜಸ್ವಿಯವರ ವ್ಯಕ್ತಿತ್ವವನ್ನು ಪರಿಚಯಿಸುವ ಕೃತಿ ‘ಅಣ್ಣನ ನೆನಪು’

Sneha
Photo Credit : Wikipedia

ಪೂರ್ಣಚಂದ್ರ ತೇಜಸ್ವಿಯವರು ತಮ್ಮ ತಂದೆ ರಾಷ್ಟ್ರಕವಿ ಕುವೆಂಪು ಅವರನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವ ನೆನಪುಗಳು ‘ಅಣ್ಣನ ನೆನಪು’ (1996) ಕೃತಿಯಲ್ಲಿ ಸಂಗ್ರಹಗೊಂಡಿವೆ. ಈ ಬರೆಹಗಳು ಮೊದಲು ’ಲಂಕೇಶ್ ಪತ್ರಿಕೆ’ಯಲ್ಲಿ ಸರಣಿಯಾಗಿ ಪ್ರಕಟಗೊಂಡಿದ್ದವು. ಇದು ಕುವೆಂಪು ಅವರ ಕುರಿತು ತೇಜಸ್ವಿ ರಚಿಸಿದ ಜೀವನ ಚರಿತ್ರೆ ಆಗಿರುವ ಹಾಗೆಯೇ ತೇಜಸ್ವಿಯವರ ‘ಆತ್ಮ ಚರಿತ್ರೆ’ಯೂ ಆಗಿದೆ.

ಈ ಪುಸ್ತಕ ತೇಜಸ್ವಿಯವರ ಅನುಭವ ಕಥನಗಳ ಸಂಕಲನ. ಇದರಲ್ಲಿರುವ ಪ್ರತಿಯೊಂದು ಅಧ್ಯಾಯವು ಹಾಸ್ಯಬುಗ್ಗೆಯನ್ನು ತರಿಸುವುದರೊಂದಿಗೆ ಕುವೆಂಪುರವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.  ಅವರು ಬರೆದ “ಅಣ್ಣನ ನೆನಪು ಯೋಗಿ ಅಣ್ಣ ” ನಿಜಕ್ಕೂ ಒಂದು ಸಂಗ್ರಹಯೋಗ್ಯ ಕೃತಿ. ಇದು ಅವರ ಆತ್ಮಕಥೆಯೋ, ಅವರ ಅಣ್ಣನ ನೆನಪೋ, ಕನ್ನಡ ಸಂಸ್ಕೃತಿ ಇತಿಹಾಸದ ಅವಲೋಕನವೋ ಎಂಬ ಗೊಂದಲ ತೇಜಸ್ವಿಯವರಂತೆಯೇ ನಮಗೂ ಕಾಡಿದರೂ ಅದು ಇವೆಲ್ಲವುಗಳ ಮಿಶ್ರಣವಾಗಿದ್ದು, ಓದುಗರನ್ನು ಆ ಕಾಲದಲ್ಲಿ ವಿಹರಿಸುವಂತೆ ಮಾಡುತ್ತದೆ.

ಎಲ್ಲೂ ತಂದೆಯ ಗುಣಗಾನ ಮಾಡದೆ , ಅವರ ನೈಜ ವ್ಯಕ್ತಿತ್ವವನ್ನು ಒಬ್ಬ ಸಾಮಾನ್ಯ ಮಗನಂತೆ ಕಟ್ಟಿಕೊಡುತ್ತಾರೆ ತೇಜಸ್ವಿ. ಕುವೆಂಪು ವ್ಯಕ್ತಿತ್ವದಲ್ಲಿದ್ದ ಸಂಕೀರ್ಣತೆಯನ್ನು ವಿವರಿಸುತ್ತಾ ಅವರು ಹೇಳುತ್ತಾರೆ.

ಒಂದುಕಡೆ ಇಂಗ್ಲೀಷ್ ಜ್ಞಾನ ಮುಖ್ಯವೆಂದು ಶೂದ್ರರಿಗೆಲ್ಲ ಕರೆಕೊಡುತ್ತಾರೆ. ಕನ್ನಡದ ವಿಷಯಕ್ಕೆ ಬಂದಾಗ ಇಂಗ್ಲಿಷ್ ಅನ್ನು ಪೂತನಿಯೆಂದು ಟೀಕಿಸುತ್ತಾರೆ. ಭಾರತೀಯ ಸನಾತನ ಧರ್ಮದ ಕಟು ವಿಮರ್ಶೆ ಕುವೆಂಪು ಅವರಲ್ಲಿ ಕಾಣಬಹುದು. ಅಂತೆಯೆ ಉಪನಿಷದ್ ದರ್ಶನಗಳ ಆರಾಧನೆಯನ್ನೂ ಅವರಲ್ಲಿ ಕಾಣಬಹುದು . ಅವರ ಜೀವನಾದ್ಯಂತ ಎಂದೂ ಯಾವ ದೇವಸ್ಥಾನಕ್ಕೂ ಕಾಲಿಡಲಿಲ್ಲ. ಆದರೆ ಅಷ್ಟೆ ಗಾಢವಾಗಿ ಧ್ಯಾನ ತಪಸ್ಯೆ ಪ್ರಾರ್ಥನೆಗಳನ್ನು ಪ್ರತಿಪಾದಿಸಿದರು.

ಕುವೆಂಪು ವ್ಯಕ್ತಿತ್ವದಲ್ಲಿದ್ದ ಮಾನವೀಯತೆ , ಮುಗ್ದತೆ , ವೈಜ್ಞಾನಿಕ ಮನೋಭಾವ , ನಿಷ್ಟುರತೆಗಳನ್ನು ಅವರು ಅನೇಕ ಪ್ರಸಂಗಗಳ ಮುಖಾಂತರವೇ ತಿಳಿಸುತ್ತಾರೆ. ಸಾರ್ವಜನಿಕವಾಗಿ ತಮ್ಮ ಮಕ್ಕಳು ಮಾಡುವ ಪುಂಡಾಟಿಕೆಯನ್ನು ಸಮರ್ಥಿಸಿಕೊಳ್ಳುವ ಸೆಲೆಬ್ರಿಟಿಗಳಿಂದಲೇ ತುಂಬಿರುವ ಈ ನಮ್ಮ ದೇಶದಲ್ಲಿ ಮಗನ ಮೇಲೆ ವಾರೆಂಟ್ ಬಂದರೂ ತಮ್ಮ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಳ್ಳದೇ ಮಗನಿಗೆ ಬುದ್ಧಿ ಹೇಳುವ ಕುವೆಂಪು ವಿಶೇಷವೆನಿಸುತ್ತಾರೆ.

ಕೆಲವುಕಡೆ ಇದು ಅವಶ್ಯವಿರಲಿಲ್ಲವೆನ್ನಿಸುವಂತಹ ಪ್ರಸಂಗಗಳ ನಿರೂಪಣೆಯೂ ಇದೆ ಗೆಳೆಯ ಶಾಮಣ್ಣನ ಬೈಕ್ , ಸಂಗೀತ ಕಲಿಯುವ ಉತ್ಸಾಹದ ಬಗ್ಗೆ ಸ್ವಲ್ಪ ಹೆಚ್ಚೇ ಬರೆದಿದ್ದಾರಾದರು ಅದರ ಹಾಸ್ಯಮಯ ಧಾಟಿ ಓದಿಸಿಕೊಂಡು ಹೋಗುವುದರಿಂದ ರಸಭಂಗವಾಗುವುದಿಲ್ಲ. ಇಂಗ್ಲೀಷ್ ಭಾಷೆಯ ಪರೀಕ್ಷೆಯಲ್ಲಿ ಪದೇ ಪದೇ ಫೇಲಾಗುತ್ತಿದ್ದ ತೇಜಸ್ವಿಗೆ “ಭಾಷೆಯ ಬಗ್ಗೇ ಎಂದೂ ಅಂಧಾಬಿಮಾನಕ್ಕೊಳಗಾಗಬಾರದು. ನಮ್ಮ ಭಾಷೆಯಲ್ಲಿ ಏನೂ ಇಲ್ಲ ಎಂದುಕೊಳ್ಳುವುದಕ್ಕಿಂತ ಎಲ್ಲಾ ಇದೆ ಎಂದುಕೊಳ್ಳುವುದು ಅಪಾಯ” ಎಂದು ಹೇಳಿದ ಕುವೆಂಪು ಅವರ ವಿವೇಚನೆಯ ಅಗತ್ಯ ಇಂದು ಎಲ್ಲರಲ್ಲೂ ಮೂಡಬೇಕಿದೆ.

ತಮ್ಮ ಬಾಲ್ಯ, ಯೌವ್ವನಕಾಲದ ಘಟನೆಗಳನ್ನು ತುಂಬ ಹಾಸ್ಯಮಯ ಶೈಲಿಯಲ್ಲಿ ನಿರೂಪಿಸುವ ತೇಜಸ್ವಿ , ನಂತರ ಆ ಕಾಲದ ಸಾಹಿತ್ಯಕ ವಿಪ್ಲವಗಳನ್ನು ವಿವರಿಸುವಾಗ ತುಂಬ ಗಂಭೀರವಾದ ಭಾಷಾಪ್ರಯೋಗಕ್ಕಿಳಿಯುತ್ತಾರೆ. ಆ ಕಾಲಘಟ್ಟದಲ್ಲಿ ನಡೆದ ನವ್ಯ , ನವೋದಯಗಳ ನಡುವಿನ ತಿಕ್ಕಾಟದ ಪರಿಚಯವನ್ನೂ ಮಾಡಿಕೊಡುತ್ತಾರೆ ತೇಜಸ್ವಿ .

ಈ ಕೃತಿ ವಿಶಿಷ್ಟವೆನಿಸುವುದು , ಇದು ಕುವೆಂಪು ವ್ಯಕ್ತಿತ್ವದ ಜೊತೆಜೊತೆಗೇ ತೇಜಸ್ವಿಯವರ ವ್ಯಕ್ತಿತ್ವದ ಪರಿಚಯವನ್ನೂ ಮಾಡಿಕೊಡುವ ಕಾರಣಕ್ಕಾಗಿ . ಅವರ ವೈವಿಧ್ಯಮಯ ಆಸಕ್ತಿಗಳು, ಸರಳ ಜೀವನ, ತಾನು ನಂಬಿದ ಆದರ್ಶಗಳನ್ನು ಅನುಸರಿಸುವ ಪರಿ, ಅದ್ಭುತ ಚಿಂತಕನಾದರೂ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯಬಲ್ಲ ಸಾಮರ್ಥ್ಯ, ಈ ಕೃತಿಯ ಮುಖಾಂತರ ಹೆಚ್ಚು ಸ್ಪಷ್ಟವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು