News Karnataka Kannada
Monday, April 29 2024
ಅಂಕಣ

ಪೂರ್ವರಂಗದಲ್ಲಿ ಹಾಸ್ಯ – ಒಂದು ಅವಲೋಕನ

Photo Credit :

ಪೂರ್ವರಂಗದಲ್ಲಿ ಹಾಸ್ಯ - ಒಂದು ಅವಲೋಕನ

ಯಕ್ಷಗಾನ ಕಲಾಮಹಾತ್ಮ್ಯದ ಮೂಲ ಚೈತನ್ಯ ರಸಗಳು. ಛಂದಸ್ಸುವಿನಿಂದ ಆರಂಭಗೊಂಡು ನಾಟ್ಯದವರೆಗೂ ಯಕ್ಷಕಲಾನಂದಕ್ಕೆ ರಸವೇ ಆತ್ಮವಾಗಿದ್ದು ರಸಸಿದ್ಧಿಸದ ನೃತ್ತ, ನೃತ್ಯ, ನಾಟ್ಯ ಆತ್ಮವಿರಹಿತವಾದ ದೇಹ ಸಮಾನವಾಗಿದೆ. ನವರಸಗಳು ಲೋಕದರ್ಶನಕ್ಕೆ ಮುಕ್ತವಾಗಿದ್ದರೂ ಅದರ ವಿರಾಡ್ರೂಪವನ್ನು ಸವಿಸ್ತಾರವಾಗಿ ತೆರೆದಿಡುವ ಸಾಹಸ ರಸ ಸಿದ್ಧಿಸಿದ ಜ್ಞಾನಾಕ್ಷುಗಳಿಗಲ್ಲದೆ ಅಲ್ಪಜ್ಞರ ಮಂದಾಕ್ಷುಗಳಿಗೆ ಅಸದಳವಾದುದು. ವಿರಾಟ್ದರ್ಶನದ ಆನಂದದ ಅನುಭೂತಿಯನ್ನು ಪಡೆಯಲು ರಸಮನೋಭಾವನೆಯನ್ನು ಆಪೋಷಣೆ ಮಾಡಿ ಜ್ಞಾನದ ದಿವ್ಯಾಕ್ಷಿಗಳನ್ನು ಪಡೆದ ಸುಸಂಸ್ಕೃತ, ಸಜ್ಜನ ವೀಕ್ಷಕನಿಗೆ ಮಾತ್ರ ಸಾಧ್ಯ. ಕಲೆಯ ಜಿಜ್ಞಾಸೆಗಳನ್ನು ರಸಗಳ ಮೂಲಕ ಬಿತ್ತರಿಸುವ ಕಲಾವಿದನ ಕಲಾಮರ್ಮ ಸದಾ ಪ್ರಯೋಗಶೀಲ ಹಾಗೂ ವಿಮರ್ಶನೀಯವಾದುದು. ಅಂತಹ ಕಲಾಶಾಸ್ತ್ರಫಲಗಳನ್ನು ಕಾಂಕ್ಷಿಸಿ ಬಂದವರಿಗೆ ಕಾಮಧೇನುವಾಗಿ-ಕಲ್ಪವೃಕ್ಷವಾಗಿ ತನ್ನನ್ನು ತಾನು ಸರ್ವಕಾಲಕ್ಕೂ ತೆರೆದುಕೊಂಡ ಸರ್ವಾಂಗಸುಂದರ ಕಲೆಯೇ ಯಕ್ಷಗಾನ. ಈ ಯಕ್ಷಗಾನಕ್ಕೆ ಪ್ರಸಕ್ತಕಾಲದಲ್ಲಿ ರಕ್ಷಾಗಾನವಾಗಿರುವಂತೆ ಭಾಸವಾಗಿರುವ ರಸವೇ ಹಾಸ್ಯರಸ.
“ರಸಕ್ಕೆ ಮೂಲ ಸ್ಥಾಯಿ ಭಾವ” ಎಂದು ಭರತಾದಿ ಆಚಾರ್ಯರು ಲಕ್ಷಣಗ್ರಂಥಗಳಲ್ಲಿ ತಿಳಿಸಿರುವರು. ಅವರು ತಿಳಿಸಿರುವಂತೆ ಹಾಸ್ಯರಸಕ್ಕೆ ಸ್ಥಾಯಿಯಾದುದು ಹಾಸ್ಯ ಭಾವ. ಹಾಸ್ಯವೆನ್ನುವುದು ನಗು. ನಗೆ ಕೇವಲ ಶಾರೀರಿಕವಾಗಿರದೆ, ಮಾನಸಿಕವೂ ಆಗಿದೆ ಎಂದು ಪ್ಲೇಟೋ ಸೇರಿದಂತೆ ವಿವಿಧ ಗ್ರೀಕ್ ತತ್ವಜ್ಞಾನಿಗಳು ತಿಳಿಸಿದ್ದಾರೆ. ನಗೆ ಎನ್ನುವುದು ಹಾಸ್ಯದ ಪರಿಣಾಮವಷ್ಟೇ ಹೊರತು ನಗೆಯೇ ಹಾಸ್ಯವಲ್ಲ. ನಗೆ ಮತ್ತು ಹಾಸ್ಯಕ್ಕೆ ಆನಂದವೇ ತಳಹದಿಯಾದುದರಿಂದ ಅವೆರಡಕ್ಕೂ ಬಹಳ ಹತ್ತಿರದ ಸಂಬಂಧವಿದೆ ಎಂದು ತಿಳಿದು ಬರುತ್ತದೆ. ಪ್ರತಿಯೊಂದು ರಸಕ್ಕೂ ಉತ್ಪತ್ತಿ ಸ್ಥಾನ, ವರ್ಣ, ದೇವತೆ, ಸ್ಥಾಯಿ ಹಾಗೂ ವಿರುದ್ಧ ರಸವಿರುತ್ತದೆ. ವಿಕೃತ ವೇಷ, ಹಾಸ್ಯಾದಿಗಳು ಹಾಸ್ಯರಸದ ಉತ್ಪತ್ತಿ ಸ್ಥಾನ. ಸಂಕೇತಿಸುವ ಬಣ್ಣ ಬಿಳಿ, ದೇವತೆಯು ಮೊದಲ ಪೂಜೆಯ ಗೊಂಬೆ- ವಿನಾಯಕ, ಸ್ಥಾಯೀ ಭಾವ ಹಾಸ್ಯ(ನಗು) ನಗುವಿನಲ್ಲಿ ಹಾಸ್ಯ ರಸವು ಮುಕ್ತಾಯಗೊಳ್ಳುತ್ತದೆ. ಕರುಣ ಮತ್ತು ಭಯಾನಕ ರಸಗಳು ಹಾಸ್ಯರಸದ ವಿರುದ್ಧ ರಸಗಳು.
ಯಕ್ಷಗಾನ ಪೂರ್ವರಂಗವೆನ್ನುವುದು ಯಕ್ಷಗಾನ ಕಲಾವಿದನಾಗ ಹೊರಟವನ ಅಭ್ಯಾಸ ಸ್ಥಳ. ಇದರ ತಾಂತ್ರಿಕ ಉದ್ದೇಶವೇ ಅಭ್ಯಾಸ. ಈ ಪೂರ್ವರಂಗವೇ ಶ್ರೇಷ್ಠ ಕಲಾವಿದನ ಕನಿಷ್ಠತೆಯನ್ನು ಇಲ್ಲವಾಗಿಸಿದ್ದು. ಯಕ್ಷಕಲಾ ಲೋಕದಲ್ಲಿ ಕಲೆಯ ಪುಷ್ಠಿಯನ್ನು ಸುರಿಸುವ ಇಚ್ಛೆಯನ್ನು ಹೊಂದಿ ಒಂದಿನಿತೂ ಕುಂದದೆ ಪೂರ್ವರಂಗದಲ್ಲಿಯೇ ಬಣ್ಣ ಹಚ್ಚಿ, ವೇಷಕಟ್ಟಿ, ಕುಣಿದು ‘ಓಹೋ ಅದು ಹೀಗೆ ಕುಣಿಯಬೇಕು’ ಎನ್ನುವಂತಹ ಪ್ರಾಯೋಗಿಕ ಜ್ಞಾನ ಪಡೆಯುವಲ್ಲಿ ಸಹಕರಿಯಾಗುವ ಕಲಾ ಪ್ರಯೋಗಾಲಯವೇ ಪೂರ್ವರಂಗ. ಯಕ್ಷಗಾನ ಪೂರ್ವರಂಗವೆಂಬುದು ರಸಸಿದ್ಧಿಗಾಗಿ ತಪೋನಿರತರಾಗುವ ಅಧ್ಯಯನ ಶಾಲೆ. ಈ ಶಾಲೆಯಲ್ಲಿ ಎಲ್ಲವೂ ಪ್ರಾಯೋಗಿಕ. ಸಿದ್ದಾಂತವನ್ನು ರಂಗದಲ್ಲೇ ಆರ್ಜಿಸಿಕೊಳ್ಳಲು ಅವಕಾಶವನ್ನು ತೆರೆದಿಡುವ ರಸಪಾಕಶಾಲೆಯೆಂದರೆ ತಪ್ಪೆನಿಸದು.
ಯಕ್ಷಗಾನ ಪೂರ್ವರಂಗದ ಹಾಸ್ಯ ವಿವೇಚನೆಯು ಓರ್ವ ಹಾಸ್ಯಗಾರನ ಪಾತ್ರವನ್ನು ಸೃಷ್ಟಿಸಲು ಸಹಾಯಕವಾಗುವ ಕಲಾಧೋರಣೆ. ಪೂರ್ವರಂಗದ ಜ್ಞಾನದ ಉಳುಮೆಯಲ್ಲಿ ಹಾಸ್ಯಕ್ಷೇತ್ರದಲ್ಲಿದ್ದ ಸೃಜನಶೀಲಫಲಗಳು ಯಕ್ಷಗಾನ ಕಲೆಯ ಹಾಸ್ಯವಾಗಿ ರೂಪುಪಡೆಯುತ್ತಾ ಬಂದಿವೆ. ಹಿಂದಿನ ಕಾಲದಲ್ಲಿ ಬಯಲಾಟಕ್ಕೆಂದು ಜನ ಸೇರಿದ ಸಂದರ್ಭದಲ್ಲಿ ಅವರೆಲ್ಲರನ್ನು ಒಂದೆಡೆ ಕುಳ್ಳಿರಿಸಿ ಸಭಾ ಲಕ್ಷಣದ ಪದ್ಯಗಳನ್ನು ಪಾತ್ರಗಳಿಗೆ ತಕ್ಕಂತೆ ಹಾಡುವ ಕ್ರಮವಿತ್ತು. ಆ ಕ್ರಮವೇ ಪೂರ್ವರಂಗದ ಹಾಸ್ಯವಿವೇಚನೆಗೆ ಅಡಿಪಾಯವಾಯಿತೆನ್ನಬಹುದು.

ಪೂರ್ವರಂಗದ ಹಾಸ್ಯ ವಿವೇಚನೆಗೆ ಪುಷ್ಠಿ ನೀಡುವ ಅಂಶಗಳು:

೧.ಹಾಸ್ಯಗಾರನ ಅಂಗವಿಕಾರದ ನಾಟ್ಯ

೨.ವೇಷಭೂಷಣಗಳ ವೈಪರೀತ್ಯ

೩.ಸ್ವಭಾವದೋಷ

೪.ಕಾಯಕದ ಕೊಂಕು

೫.ಮೋಸದ ಗುಣ

ಈ ಐದು ಅಂಶಗಳನ್ನು ಮುಂದುವರಿಸಿಕೊಂಡು ಪೂರ್ವರಂಗದ ಹಾಸ್ಯವು ಮುಂದುವರಿಯುತ್ತದೆ. ಪೂರ್ವರಂಗದ ಹಾಸ್ಯವು ಯಕ್ಷಗಾನದ ಅಂದಿನ ಪ್ರಸಂಗವನ್ನು ಜನರು ವೀಕ್ಷಿಸಬೇಕೆಂಬ ಆಶಯದೊಂದಿಗೆ ಜನರನ್ನು ಆಕರ್ಷಿಸಲು ಬಳಕೆಯಾಗುತ್ತಿತ್ತು. ದಿನವಿಡೀ ದುಡಿದು ಸೋತು ಹೋದ ಹಾಗೂ ಕಥೆಯ ಬಗ್ಗೆ ಲಕ್ಷ್ಯವಿಲ್ಲದ ಜನರಿಗೆ ಒಂದಿನಿತು ಮನೋರಂಜನೆಯನ್ನು ನೀಡುವ ಉದ್ದೇಶವನ್ನು ಪೂರ್ವರಂಗದ ಹಾಸ್ಯವು ಹೊಂದಿದೆ.

ಪೂರ್ವರಂಗದ ಕೆಲವು ಪರಿಕಲ್ಪನೆಗಳು ಈ ಕೆಳಕಂಡಂತಿವೆ.

೧.ಕೋಡಂಗಿ

೨.ಬಾಲಗೋಪಾಲ

೩.ಷಣ್ಮುಖಸುಬ್ಬರಾಯ

೪.ಅರ್ಧನಾರೀಶ್ವರ

೫.ಚಪ್ಪರಮಂಚ

೬.ಅರೆಪ್ಪಾವಿನಾಟ

೭.ಚಂದಭಾಮ ಸ್ತ್ರೀವೇಷ

೮.ಮುಖ್ಯ ಸ್ತ್ರೀವೇಷ

೯.ಪೀಠಿಕೆ ಸ್ತ್ರೀವೇಷ

ಈ ಬಗೆಯ ಪೂರ್ವರಂಗ ವಿವಿಧ ಪರಿಕಲ್ಪನೆಗಳ ಮಧ್ಯೆ ಹಾಸ್ಯ ಸನ್ನಿವೇಶಗಳು ಬರುತ್ತಿದ್ದವು. ಇವುಗಳಲ್ಲಿ ಮುಖ್ಯವಾಗಿ ಕೋಡಂಗಿ. ತನ್ನ ಅಂಗಾಂಗಳ ತುದಿ ತನಕ ಬರುವ ಡವರಂಗಿಯನ್ನು ಧರಿಸಿ ಬಿಳಿ ಇಜಾರು ಹಾಗೂ ಬಿಳಿ ನಾಮ, ಹುಬ್ಬು, ಮೀಸೆಯನ್ನು ಬರೆದು ರಂಗಸ್ಥಳಕ್ಕೆ ಬರುವ ಪಾತ್ರ ಇದಾಗಿದೆ. ಯಕ್ಷಗಾನದ ಅಧಿದೇವತೆ ಗಣೇಶನಿಗೆ ಪ್ರಿಯವಾದುದು ಹಾಸ್ಯವಾದ್ದರಿಂದ ಗಣೇಶ ಸ್ತುತಿಯೊಂದಿಗೆ ಕೋಡಂಗಿ ಕುಣಿಯಲು ಪ್ರಾರಂಭಿಸುತ್ತಾನೆ. ಅಬದ್ಧ ಹಾಸ್ಯವನ್ನಾಡುತ್ತಾ, ತೀರ ಅಗ್ಗದ ಮಾತುಗಳನ್ನಾಡಿ ನೆರೆದಿರುವ ಪ್ರೇಕ್ಷಕರನ್ನು ನಲಿವಿನಿಂದಿರಿಸುತ್ತಾನೆ. ಆ ಬಳಿಕ ಬಾಲಗೋಪಾಲರ ಜೊತೆಗೂಡಿ ಕೋಡಂಗಿಯೂ ಕುಣಿಯುತ್ತಾನೆ. ಆತನ ನಾಟ್ಯವು ಅಸಂಬದ್ಧವೂ, ವೈಪರೀತ್ಯಗಳಿಂದ ಕೂಡಿರುತ್ತದೆ. ಪೂರ್ವರಂಗದ ಹಾಸ್ಯವು ವಿವಿಧ ಭಾಷೆಗಳ ಸಂಮ್ಮಿಶ್ರಣವಾಗಿತ್ತು. ಹಿಂದಿನ ಕಾಲದಲ್ಲಿ ಕೋಡಂಗಿ ಪಾತ್ರಕ್ಕೆ ಮಾತನಾಡುವ ಅವಕಾಶವಿತ್ತು. ಈಗಿನ ಕೋಡಂಗಿ ಪಾತ್ರಕ್ಕೆ ಮಾತನಾಡುವ ಅವಕಾಶವಿಲ್ಲ.
“ಅರ್ಧನಾರೀಶ್ವರ” ಪಾತ್ರದ ಸಂದರ್ಭ “ಮಾಧವ” ಎಂಬ ಹಾಸ್ಯಗಾರನ ಪಾತ್ರವಿತ್ತಂತೆ. ಅವನಿಗೆ ಮಾತನಾಡುವ ಅವಕಾಶವಿತ್ತಂತೆ.” (ಸಂದರ್ಶನ: ಬೊಟ್ಟಿಕೆರೆ ಪುರುಷೋತ್ತಮ ಪೂಂಜ) ಮಾಧವ ಪಾತ್ರಧಾರಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುವಂತಹ ಬಗೆಯನ್ನು ಅಲ್ಲಿ ಕಾಣಬಹುದಾಗಿತ್ತು. ಉದಾ: ಪಾರ್ವತಿಯನ್ನು ಈಶ್ವರ ಹುಡುಕಿಕೊಂಡು ಬರುತ್ತಾನೆ. ನನ್ನ ಹೆಂಡತಿ ನನ್ನನ್ನು ಬಿಟ್ಟು ಹೋಗಿದ್ದಾಳೆ. ನೀನು ಎಲ್ಲಿಯಾದರೂ ಆಕೆಯನ್ನು ನೋಡಿದ್ದೀಯ ಎಂದು ಮಾಧವನಲ್ಲಿ ಪ್ರಶ್ನೆ ಕೇಳಿದಾಗ ಮಾಧವ ಪಾತ್ರಧಾರಿ ಅದಕ್ಕೆ ಅಬದ್ಧ ಉತ್ತರ ನೀಡುತ್ತಾನೆ (ಅವಳು ಸಂತೆಯಲ್ಲಿ ತಿಂಡಿ ಮಾರುತ್ತಿದ್ದಳು…… ಇತ್ಯಾದಿ) ಈ ರೀತಿಯಾದ ಸಂಭಾಷಣೆಯು ಅಲ್ಲಿ ನಡೆಯುತ್ತಿದ್ದು ಘನವಾದ ಸಾಹಿತ್ಯದ ಬದಲಾಗಿ ಪೋಲಿಹಾಸ್ಯಗಳು ಬರುತ್ತಿದ್ದವು. ಈತ ವಿದೂಷಕ ತೊಡುತ್ತಿದ್ದ ರೀತಿಯ ವೇಷಭೂಷಣವನ್ನೇ ತೊಡುತ್ತಿದ್ದ.
ಮುಖ್ಯ ಸ್ತ್ರೀವೇಷದಲ್ಲಿ ವಿದೂಷಕನ ಪಾತ್ರವನ್ನು ಯಕ್ಷಗಾನ ಪೂರ್ವರಂಗದಲ್ಲಿ ಕಾಣಬಹುದು. ಆತನು ದೇವತಾ ಸ್ತುತಿಯನ್ನು ಮಾಡುವಲ್ಲಿ ನೆರವಾಗುತ್ತಾನೆ. ಬಿಳಿ ಪಾಯಿಜಾಮವನ್ನು ತೊಟ್ಟು, ಬಿಳಿ-ನೀಳ ಕಸೆಯ ಅಂಗಿ, ತಲೆಗೆ ಬಾಲಬಿಟ್ಟ ಮುಂಡಾಸು, ಬಿಳಿ ಧೋತ್ರ ಧರಿಸುವುದು ವಿದೂಷಕನ ವೇಷದ ವಾಡಿಕೆ. ಹೊಗಳಿಕೆಯ ಉದ್ದೇಶದಿಂದ ಆತನನ್ನು ಬಳಸಲಾಗುತ್ತದೆ.
ಪೂರ್ವರಂಗದಲ್ಲಿ ಕಟ್ಟುಹಾಸ್ಯದ ಪಾತ್ರವು ರಂಗಕ್ಕೆ ಬರುತ್ತಿತ್ತು ಎಂದು ಯಕ್ಷಗಾನ ಕವಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ನೆನಪಿಸಿಕೊಳ್ಳುತ್ತಾರೆ. ಮುಖ್ಯ ಹಾಸ್ಯಗಾರನೇ ಈ ಪಾತ್ರವನ್ನು ನಿಭಾಯಿಸುತ್ತಿದ್ದ. ಒಟ್ಟು ಸುಮಾರು ೧೬ ಬಗೆಯ ಕಟ್ಟು ಹಾಸ್ಯಗಳು ಇತ್ತು ಎಂಬುದನ್ನು ಅವರು ನೆನಪಿಸುತ್ತಾರೆ. ಪ್ರತಿಯೊಂದು ಪಾತ್ರವು ಸುಮಾರು ಹದಿನೈದು ನಿಮಿಷಗಳ ಕಾಲ ತನ್ನ ಪಾತ್ರದನ್ವಯ ಸಭಿಕರನ್ನು ರಂಜಿಸುವಲ್ಲಿ ಆ ಪಾತ್ರವು ನಿಪುಣತೆಯನ್ನು ಪಡೆದು ಮುಂದುವರಿಯುತ್ತಿತ್ತು. ಸುಮಾರು ೧೬ ಬಗೆಯ ಕಟ್ಟು ಹಾಸ್ಯಗಳಲ್ಲಿ ದಿನಕ್ಕೆ ಯಾವುದಾದರೂ ಒಂದನ್ನು ಬಿಂಬಿಸಲಾಗುತ್ತಿತ್ತು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಓಡರಿ(ಮೂಲ್ಯ), ಕಳ್ಳ, ಮಲೆಯಾಳಿ ಪಂಡಿತ, ಬ್ರಾಹ್ಮಣ, ಕೊಕ್ಕೆ ಚಿಕ್ಕನ ಹಾಸ್ಯ… ಇತ್ಯಾದಿ.
ಕೊಕ್ಕೆಚಿಕ್ಕ ಎಂದರೆ ಆತ ಮೀನು ಹಿಡಿಯುವವ. ಕುಂದಾಪುರ ಕನ್ನಡದಲ್ಲಿ ಆತ ಮಾತನಾಡುವುದು. ಭಾಗವತರು ‘ಎಲಾ ನೀನಾರು?’ ಎಂದು ಆತನ ಬಳಿ ಕೇಳಿದಾಗ ಆತ, ‘ನಾನು ಆರು, ನೀನು ಮೂರು ಒಟ್ಟು ಒಂಬತ್ತು’ ಎಂದು ಉತ್ತರಿಸುತ್ತಿದ್ದನಂತೆ. (ಸಂದರ್ಶನ: ಬೊಟ್ಟಿಕೆರೆ ಪುರುಷೋತ್ತಮ ಪೂಂಜ)
ಕಟ್ಟುಹಾಸ್ಯದಲ್ಲಿ ಬರುವ ಮಲೆಯಾಳಿ ಪಂಡಿತನೆಂಬ ಪಾತ್ರದಾರಿ ಈ ಕೆಳಕಂಡ ಪದ್ಯವನ್ನು ಹಾಡಿಕೊಂಡು ರಂಗಕ್ಕೆ ಪ್ರವೇಶಿಸುತ್ತಿದ್ದನಂತೆ.

“ ಈ ನಾಟಿಲೂರು ನ್ಯಾನಿ ಬೆಳಿಯೆ ಪಂಡಿತನಲ್ಲೊ
ವಾತ, ಪಿತ್ತ ಶೀತ ಇದಿನಿ ಎಲ್ಲ ಮರ್ನ್ ಕೊಡ್ಕ” (ಸಂದರ್ಶನ: ಬೊಟ್ಟಿಕೆರೆ ಪುರುಷೋತ್ತಮ ಪೂಂಜ)

(ಈ ನಾಡಿನಲ್ಲಿ ನಾನೊಬ್ಬ ದೊಡ್ಡ ಪಂಡಿತನಲ್ವ, ವಾತ ಪಿತ್ತ ಶೀತ ಇದಕ್ಕೆಲ್ಲಾ ಮದ್ದು ಕೊಡ್ತೇನೆ)
ಈತ ಓರೆಜುಟ್ಟು ಕಟ್ಟಿಕೊಂಡು ರಂಗಕ್ಕೆ ಪ್ರವೇಶ ಮಾಡುತ್ತಿದ್ದ ಬಗೆಯೇ ಹಾಸ್ಯವಾಗುತ್ತಿತ್ತಂತೆ.
ಓಡರಿ ಎಂಬ ಕಟ್ಟು ಹಾಸ್ಯ ವ್ಯಕ್ತಿ ಸಮಸ್ಯೆಯನ್ನು ಮನರಂಜನೀಯವಾಗಿ ಹೇಳುತ್ತಿದ್ದ. ಜ್ಯೋತಿಷ್ಯ ಹೇಳುವ ಬ್ರಾಹ್ಮಣ ಕಟ್ಟು ಹಾಸ್ಯದಲ್ಲಿ ಅನನ್ಯ ಪಾತ್ರವನ್ನು ನಿಭಾಯಿಸುತ್ತಿದ್ದ. ಕಟ್ಟುಹಾಸ್ಯದಲ್ಲಿ ಬರುವ ಕಳ್ಳ ಪಾತ್ರಧಾರಿ ತಾನು ಕಳ್ಳತನ ಮಾಡಲು ಹೋಗಿ ಸಿಕ್ಕಿ ಬಿದ್ದ ರೀತಿಯನ್ನು ಮನರಂಜನೀಯವಾಗಿ ಪ್ರೇಕ್ಷಕರ ಮುಂದೆ ಉಣಬಡಿಸುತ್ತಿದ್ದ. ಮುಖಕ್ಕೆ ಅರ್ಧಕಪ್ಪು ಅರ್ಧಬಿಳಿ ಬಣ್ಣವನ್ನು ಆತ ಮುಖವರ್ಣಿಕೆಗೆ ಬಳಸುತ್ತಿದ್ದೆನ್ನಲಾಗಿದೆ. ಕಟ್ಟು ಹಾಸ್ಯವು ಆಯಾಯ ಪಾತ್ರಕ್ಕೆ ಅನುಗುಣವಾದ ವೇಷ ಭೂಷಣವನ್ನೇ ಧರಿಸಿಕೊಂಡು ರಂಗಕ್ಕೇರುತ್ತಿದ್ದವು. ಮುಖ್ಯ ಹಾಸ್ಯಗಾರರೇ ಈ ಪಾತ್ರಗಳನ್ನು ನಿಭಾಯಿಸುತ್ತಿದ್ದರು. ಹಿಂದೆ ಮುಖ್ಯ ಹಾಸ್ಯಗಾರರು ಒತ್ತು ಹಾಸ್ಯಗಾರರೆಂಬ ಪರಿಕಲ್ಪನೆ ಇರಲಿಲ್ಲ. ‘ಹಾಸ್ಯಗಾರ’ ಎಂಬುದಷ್ಟೇ ಇತ್ತು. ಅದು ಇತ್ತೀಚೆಗೆ ಬೆಳೆದ ವಿದ್ಯಮಾನವೆಂದು ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ತಿಳಿಸುತ್ತಾರೆ.
ಪೂರ್ವರಂಗದ ಹಾಸ್ಯದ ಪರಿಕಲ್ಪನೆ ಪ್ರಸಂಗದ ಹಾಸ್ಯಕ್ಕೆ ಎಷ್ಟು ಪೂರಕವಾಗಿದೆ ಎಂಬುದನ್ನುಕಲಾವಿದರ ಬೆಳವಣಿಗೆಯು ನಿರ್ಧರಿಸುತ್ತದೆ. ಆದರೆ ಹಾಸ್ಯ ಕಲಾವಿದನಾದವ ಪ್ರಸಂಗ, ಪಾತ್ರ, ಸಭೆಯ ಔಚಿತ್ಯವನ್ನು ಮರೆತು ತನ್ನ ಪಾತ್ರವನ್ನು ವೈಭವೀಕರಿಸುವ ನಿಟ್ಟಿನಲ್ಲಿ ಪಾತ್ರದ ಮೂಲ ಆಶಯಕ್ಕೆ ಧಕ್ಕೆ ತರುವುದು ಸರಿಯಲ್ಲ. ಪೂರ್ವರಂಗದ ಹಾಸ್ಯದ ವಿವೇಚನೆಯು ಉಳಿದ ಹಾಸ್ಯದ ಪಾತ್ರಗಳ ಇರುವಿಕೆಯನ್ನು ನಿರ್ಧರಿಸಲು ಮಾನದಂಡವಾಗಬೇಕು. ಆದರೆ ದುರಾದೃಷ್ಟವಶಾತ್ ಪೂರ್ವರಂಗವೇ ಕಣ್ಮರೆಯಾಗುತ್ತಿದ್ದು ಇನ್ನು ಪಾತ್ರಗಳು ತನ್ನ ತನವನ್ನು ಕಲಿಯುವುದಾದರೂ ಹೇಗೆ? ಅದರ ಫಲಶ್ರುತಿಯೇನೋ ಎಂಬಂತೆ ಯಕ್ಷಗಾನದ ಹಾಸ್ಯ ತನ್ನದಲ್ಲದ ಹಾದಿಯಲ್ಲಿ ಸಾಗಿ ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ಹಾಸ್ಯದತ್ತ ಪ್ರೇಕ್ಷಕರನ್ನು ಬರಿಸಲಾಗದೆ ಹಾಸ್ಯವೇ ಪ್ರೇಕ್ಷಕರ ಕಾಲ ಬುಡಕ್ಕೆ ತಲುಪಿರುವುದು ಯಕ್ಷಗಾನದ ಅಮಾನ್ಯ ಬೆಳವಣಿಗೆಯೇ ಸರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
200
Deevith S. K. Peradi

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು