News Karnataka Kannada
Sunday, May 05 2024
ಅಂಕಣ

ಮಾ ನಿಷಾದದೊಳೊಗೆದ ಜಾನಕೀ ಜೀವನ

Photo Credit :

ಮಾ ನಿಷಾದದೊಳೊಗೆದ ಜಾನಕೀ ಜೀವನ

ಸೀತೆಯೆಂದಳು ರಮಣ ನೀತಿ ತಪ್ಪಿದುದಿಲ್ಲ | ಏತಕಿಂತವನ ಶಂಕಿಪುದು ||
ಖ್ಯಾತರಿಂಗಪವಾದ ಭೀತಿಯೆದುರಲಿ ಸತಿಯ
ದೇತರದು ಗಣನೆಯೆಂದೆನುತ ||

ಘೋರ ಕಾನನದೊಳಗಿದ್ದ ತುಂಬು ಗರ್ಭಿಣಿ ಮಾತೆ ಜಾನಕಿಯನ್ನು” ಯಾರಮ್ಮಾ ನೀನು ಯಾರಮ್ಮಾ “ಎಂದು ಕೇಳಿದ ವಾಲ್ಮೀಕಿ ಮಹರ್ಷಿಗೆ ವಾಸ್ತವದ ಕಟು ಸತ್ಯ ವೇದ್ಯವಾದ ಕ್ಷಣ ಅದು. ” ಉತ್ತಮ ಗುಣಂಗಳಿಗೆ ಮೂರ್ತ ರೂಪನು ಎಂದು ಚಿತ್ರಿಸಿದ ನನ್ನ ಕಾವ್ಯನಾಯಕನಿಂದ ಇಂತಹ ಘೋರ ಕೃತ್ಯವೇ?” ಎಂದು ಹಲುಬುತ್ತಿದ್ದ ತಾಪಸಿಗೆ ನೋವಿನ ಮಡುವಿನಲ್ಲಿ ಬಿದ್ದು ರೋಧಿಸುತ್ತಿದ್ದ ಜಾನಕಿ ತನ್ನ ಜೀವನದ ಸತ್ಯವನ್ನು ತೋರ್ಪಡಿಸಿದ ಕಾಲವದು. “ಮಾತೆ ಜಾನಕಿ ಎನ್ನ ಕಾವ್ಯನಾಯಕಿ ನಿನಗೆ ಈ ತೆರನ ಸ್ಥಿತಿ ಲಭ್ಯವಾಯ್ತೆ?” ಎಂದು ಲೋಕ ಜನನಿಯನು ಪ್ರಶ್ನಿಸಿದ ವರತಪೋನಿಧಿಗೆ ಮಾತ್ರವಲ್ಲ ಕವಿಗೂ, ಕಾವ್ಯವನ್ನು ಓದಿದವರಿಗೂ ಕಾವ್ಯನಾಯಕಿಯಿಂದಲೇ ದೊರೆತ ಸಿದ್ಧ ಉತ್ತರ.

ಹೌದು…. ಜನನಿ ಜಾನಕಿ ನುಡಿದೇ ಬಿಟ್ಟಳು
” ರಮಣ ನೀತಿ ತಪ್ಪಿದುದಿಲ್ಲ… ಏತಕಿಂತವನ ಶಂಕಿಪುದು?” ಎಂಬುದಾಗಿ. ಅಭಿನವ ವಾಲ್ಮೀಕಿ ಎಂದು ಖ್ಯಾತರಾಗಿರುವ ಯಕ್ಷಗಾನ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ “ಮಾ ನಿಷಾದ ” ಯಕ್ಷಗಾನ ಪ್ರಸಂಗವು ವಾಲ್ಮೀಕಿಯ ಜೀವನವನ್ನು ದೃಶ್ಯೀಕರಿಸುವ ದಾರಿಯಲ್ಲಿ ಜಾನಕಿಯ ಜೀವನದ ಅನೂಹ್ಯ ಚಿತ್ರಣವನ್ನು ಮೂಡಿಸಿರುವ ಯಕ್ಷಗಾನ ರಂಗದ ಪ್ರಗತಿಶೀಲ, ಸೃಜನಶೀಲ ರಂಗಪ್ರಯೋಗ. ಕವಿ ಶ್ರೀರಾಮನ ಮೂಲಕವೇ ” ಬದುಕದೆಷ್ಟು ವಿಚಿತ್ರ ಜಾನಕಿ ಒದಗಿದವು ಕೋಟಲೆಗಳೆನಿತೋ” ಎಂಬುದನ್ನು ನುಡಿಸಿ ” ಜನಕನಂದನೆಯನ್ನು ವನದಿ ನೀ ಬಿಟ್ಟು ಬಾ” ಎಂದು ಲಕ್ಷ್ಮಣನನ್ನು ನಡೆಸಿದ ಶ್ರೀರಾಮ ಸೀತಾರಾಮನಾಗಿ ಯೋಚಿಸದೆ ರಾಜಾರಾಮನಾಗಿ ಯೋಜಿಸುವಲ್ಲಿನ ಶ್ರೀರಾಮನ ಭಾವಾತಿರೇಕದ ಸುಳಿಯೊಳಗೆ ಬಲಿಯಾಗುವ ಹೆಣ್ಮನದ ಭಾವಾನುಸಂಧಾನದ ಸಾಕ್ಷೀರೂಪವೇ ಮಾನಿಷಾದ ದ ಸೀತಾಪರಿತ್ಯಾಗ. ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಲೋಕೋಕ್ತಿಗೆ ಭಿನ್ನವಾಗಿ ಪ್ರಾಣ ವಲ್ಲಭೆಯನ್ನು ಪ್ರಾಣವಿರುವವರೆಗೆ ಕಾಣಲಾರದ ಲೌಕಿಕದ ನಿರ್ಧಾರದ ಗಮ್ಯತೆಗೆ ಮಾನಿಷಾದ ರಸ ಸೌಧವಾಗಿರುವುದು ವಿಶೇಷ.

” ಬಯಕೆಯೊಂದಿದೆ ಸಲಿಸುವೆಯ ನಲ್ಲ? ಕೆಲ ಸಮಯವಾಯಿತು ಪಯಣವಿಲ್ಲದೆ ಮನಕೆ ಗೆಲವಿಲ್ಲ” ಎಂದು ಶ್ರೀರಾಮನ ಜಂಘೆಯಲ್ಲಿ ಮಲಗಿದ ಸೀತೆ ಹೇಳುವ ಸಂದರ್ಭದಲ್ಲಿ ಶ್ರೀರಾಮನಿಂದ ವ್ಯಕ್ತವಾಗುವ ಮಮತೆ, ” ನಯನ‌ಪುಣ್ಯಾಶ್ರಮದ ದರ್ಶನ, ಬಯಸಿದ ಕಿವಿಗಳಿಗೆ ಮಧುರ ವೇದಾಧ್ಯಯನ, ನಾಸಿಕಕ್ಕೆ ಹವಿಯ ಕಂಪನ್ನೀಯಲು ನಾನು ಸಜ್ಜಾಗುವೆನು” ಎಂಬ ಶ್ರೀರಾಮನ ವಿಶ್ವಾಸದ ಮಾತುಗಳು, ಜಾನಕಿ ಧರಿಸಿರುವ ಗರ್ಭಸ್ಥ ಶಿಶುಗಳಿಗೆ ವಿಶ್ವಾಮಿತ್ರನಿತ್ತಿಹ ಶರ ವಿಜೃಂಭಕಗಳನ್ನು ಉಪದೇಶಿಸಿದ ಸಂದರ್ಭ ವ್ಯಕ್ತವಾಗುವ ಪಿತೃಬಾಧ್ಯತೆ ಜಾನಕಿಯ ಜೀವನಕ್ಕೆ ಸಂಸಾರ ಸೌಖ್ಯವನ್ನು ನೀಡಿದರೂ ” ಖೂಳನೊಯ್ದಿಹ ಸತಿಯ ಮೇಳದೊಳಗೆ ಇರುವ ಆ ಭೂಲೋಲ ಶ್ರೀರಾಮ ಮರುಳನು “ಎಂದು ರಜಕನೋರ್ವನಾಡಿದ ಮಾತನ್ನು ಕೇಳಿದ ಶ್ರೀರಾಮ ಸತಿಯ ಆಸ್ಥೆಯನ್ನು ಮರೆತು ರಾಜಾರಾಮನಾಗಿ ಯೋಚಿಸಿದ ರೀತಿ ಸಹ್ಯವಾಗದಿದ್ದರೂ ಅದುವೇ ಸೀತೆಯ ಪಾಲಿಗೊದಗಿದ ಸುಕೃತಫಲವಾಗಿ ಪ್ರಸಂಗದುದ್ದಕ್ಕೂ ಮೂಡಿ ಬಂದಿರುವುದು ವಿಶೇಷ.
ಲತೆಯ ಮಂಟಪದೊಳಗೆ ತನ್ನಯ ಪತಿಯ ಮಡಿಲಲ್ಲಿ ತಲೆಯಿರಿಸಿ ಮಲಗಿದ ಸತಿಯ ಭವಿತವ್ಯದ ಬಗ್ಗೆ ಒಂದಿನಿತೂ ಯೋಚಿಸದ ಶ್ರೀರಾಮ “ಜನಕನಂದನೆಯಿಂದಲಿ ಎಮ್ಮಯ ಮನುಕುಲಕೆ ಅಪವಾದವು ಒದಗಿದೆ, ವನಿತೆಯನು ತ್ಯಜಿಸುವಡೆ ಮನಗೈದಿಹೆನು ತಾನು” ಎಂದು ಹೇಳುತ್ತಾ ” ಕಳವಳಗೊಳುವುದು ಸರಿಯಲ್ಲ, ಇಳೆಯಾತ್ಮಜೆಗೆ ಕರಿ ಕಲೆಯೆಂಬುದು ಇಲ್ಲ ” ಎಂದು ಅನುಜರನ್ನು ಸಂತೈಸಿ ಸೀತೆಯ ಹದಿಬದೆಯ ಧರ್ಮವನ್ನು ಪತಿಯನೆಲೆಯಲ್ಲಿ ಕೊಂಡಾಡಿ ತನ್ನ ಮೂಲನೆಲೆಯನ್ನು ಅರಿಯುವ ಮಾರ್ಮಿಕತೆ ಪ್ರಸಂಗದಲ್ಲಿ ಕಾವ್ಯವಿಡಂಬನೆಯಾಗಿ ಮೂಡಿದೆ.
” ಮುನಿಗಳ ಆಶ್ರಮವನ್ನು ನೋಡುವ ಬಯಕೆಯನೊಂದು ಜನಕ ನಂದನೆ ತನ್ನ ಬಳಿ ಈಗಾಗಲೇ ತಿಳಿಸಿರುತ್ತಾಳೆ ಅದನ್ನೇ ಲಕ್ಷ್ಯವಾಗಿರಿಸಿಕೊಂಡು ಲಕ್ಷ್ಮಣ ಸೀತೆಯನ್ನು ವನ ಗರ್ಭದಲ್ಲಿ ಬಿಟ್ಟು ಬಾ ” ಎಂದು ಶ್ರೀರಾಮ ಹೇಳಬೇಕಾದರೆ ” ತರಣಿ ಕುಲದ ಈ ಕೀರ್ತಿ ಸೌಧವ ಹೊರುವ ಕಂಬದ ಕಾಯಕವು ತನಗಾಯ್ತು ಅಕಟ ” ಎಂದು ಹಲುಬುವ ಲಕ್ಷ್ಮಣನ ಪಾತ್ರದ ಹಿರಿತನ ಹೆಚ್ಚಾಗಿದೆ. ” ಹರನ ಬಿಲ್ಲೆತ್ತಿದನು, ಪ್ರೇಮದೊಳಂದು ವರಿಸಿದನು ದೇವಿಯನು, ದುರುಳ ಕದ್ದು ಒಯ್ಯಲು ಹರಣವ ಗಣಿಸದೆ ಧುರದಿ ಸೆಣಸಿ ಜಯಸಿರಿಯನು ವರಿಸಿದನು, ಧರ್ಮ ಸೂಕ್ಷ್ಮವನ್ನು ಅರಿತು ವರ್ತಿಸುವ ಶ್ರೀರಾಮ ಧರ್ಮವನ್ನು ಬಿಡಲಾರನು” ಎಂದು ಯೋಚಿಸುತ್ತಲೇ ಸೀತೆಯ ಬಳಿಗೆ ತೆರಳಿದ ಲಕ್ಷ್ಮಣನ ಬಾಯಿಯಿಂದಲೇ ಸೀತೆಯ ಚಿತ್ತದಾಶೆಯನ್ನು ಈಡೇರಿಸುವ ಬಗೆ ಕೇಳಿ ತಿಳಿಕೊಂಡಾಗ ಜಾನಕಿ ಹೇಳುವ ಮಾತು ಅವಳ ಜೀವನವನ್ನೇ ಧ್ವನಿಸುತ್ತದೆ-

ದಿಟವೆ ನಿನ್ನಯ ವಚನ | ಸೌಮಿತ್ರಿ ಪೇಳು | ಹಟಕೊಪ್ಪಿದನೆ ರಮಣ ||
ಸಟೆಯಲ್ಲವಲ್ಲ ನಿ | ಚ್ಚಟ ಶ್ರದ್ಧೆಯಿಂದಲಿ |
ಕಟಿಬದ್ಧನಾದೆಯೇ | ನಟವಿಗೆನ್ನೊಯ್ವರೆ ||


ಈ ರಚನೆಯೇ ಸೀತೆಯ ಭಿನ್ನ ಮನೋ ಧೋರಣೆಯನ್ನು ಚಿತ್ರಿಸುತ್ತದೆ. ತನ್ನ ಜೀವನದಲ್ಲಾದ ಘಟನೆಗಳ ಮೂಲಾಶಯವನ್ನು ಸ್ಫುರಿಸುತ್ತದೆ.

ಅಡವಿಯೊಳಗೆ ಲಕ್ಣ್ಮಣನು ತುಂಬು ಗರ್ಭಿಣಿಯಾದ ಜಾನಕಿಯನ್ನು ಬಿಟ್ಟು ತೆರಳಲು ವಾಸ್ತವವನ್ನು ಅರಿತ ಸೀತೆ ಶ್ರೀರಾಮ… ಶ್ರೀರಾಮ ಎಂದು ನಾಲ್ದೆಸೆಯನ್ನು ನೋಡುತ್ತಾ ಕೂಗಲು ವಾಲ್ಮೀಕಿಗೆ ಘೋರಕಾನನದಲ್ಲಿ ” ತಾರಕ‌ಮಂತ್ರದ ಕೀರ್ತನದ ಜೊತೆಗೆ ಭೂಸುತೆಯ ಆಕ್ರಂದನದ ದನಿಯು” ಕೇಳಲು ಸೀತೆಗೊದಗಿದ ದುಃಖ – ವಾಲ್ಮೀಕಿಗಾದ ಶುಭಶಕುನ ಈ ಎರಡೂ ವೈರುಧ್ಯ ಪರಿಸ್ಥಿತಿ ಒಂದಕ್ಕೊಂದು ಎದುರಾಗುವ ಸನ್ನಿವೇಷ ಮಾನಿಷಾದ ಪ್ರಸಂಗದ ಇನ್ನೊಂದು ಕಾವ್ಯ ವಿಡಂಬನೆ. ತನ್ನ ಮುಂದೆ ನಿಂತಿರುವವರು ವಾಲ್ಮೀಕಿ ಮಹರ್ಷಿಗಳು ಎಂಬ ಸತ್ಯವನ್ನರಿತ ಕೂಡಲೇ ” ಜನಪನಪವಾದಕ್ಕೆ ಅಳುಕಿ ತನ್ನನು ವನದಿ ತೊರೆದ ಆರ್ತ ಸ್ಥಿತಿ” ಯನ್ನು ಸೀತೆ ವಾಲ್ಮೀಕಿಯಲ್ಲಿ ಬಣ್ಣಿಸಿದಾಗ ವಾಲ್ಮೀಕಿಯ ಮನದಲ್ಲಾದ ಭಾವವಿಸ್ಫೋಟದ ಕವಿತಾ ಹಂದರ ಅತಿಶಯವಾದುದು-

ಕನಸೋ ಭಾವದ ಭ್ರಮೆಯೋ ಕಲ್ಪನೆ | ಯನುಪಮಾಧಿಕ್ಯದ ವಿಲಾಸವೋ | ಇನ ಕುಲದ ವೃಕ್ಷದೊಳು ಮೂಡಿದ ಕಹಿ ಫಲವೋ ವಿಧಿಯ | ಮನದ ಹಂಚಿಕೆಯರಿವಡಾರಳ | ವೆನುತ ವಿಭ್ರಮೆಯಿಂದ ಪುಳಕಿತ | ತನುವಿನಿಂದೆದುರಿರ್ಪ ವಾಸ್ತವವನ್ನು ನುಡಿಸಿದನು ||

ತನ್ನೆದುರು ನಿಂತಿರುವ ವಾಸ್ತವ ಕನಸಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ವಾಲ್ಮೀಕಿ ” ಲೋಕ ಜನನಿಯ ಬಳಿ ಜನಕ ಭಾವದಲಿ” ಮಾತನಾಡಿಸಿದ ರೀತಿ ಕವಿಯ ಹೃದಯಪುಟದೊಳಗೆ ಉದ್ಭವಿಸಿದ ಪ್ರಶ್ನೆ ವಾಲ್ಮೀಕಿಯಾಡುವ ನುಡಿಯ ರೂಪದಲ್ಲಿ ಹೊರಹೊಮ್ಮಿದೆ

“ಮಾತೆ ಜಾನಕಿಯೆನ್ನ ಕಾವ್ಯ ನಾಯಕಿ. ನಿನಗೆ ಈ ತೆರನ ಸ್ಥಿತಿ ಲಭ್ಯವಾಯ್ತೆ? ಏತಕಿಂತೆಸಗಿದನೊ ಧರ್ಮಜ್ಞನಾದ ರಘುನಾಥನು ಎಂದು ಎನಗೆ ಅರಿಯದಾಯ್ತೆ” ಎಂದು ತನ್ನೊಳಗೆ ತಾನು ಪ್ರಶ್ನಿಸುತ್ತಾ ” ಉತ್ತಮ ಗುಣಂಗಳಿಗೆ ಮೂರ್ತರೂಪನಾದ ಶ್ರೀರಾಮನನ್ನು ನನ್ನ ಕಾವ್ಯನಾಯಕನನ್ನಾಗಿಸಿದೆ. ಆದರೆ ನಾನು ನೋಡುವ ಸತ್ಯವೇ ಈಗ ಬೇರೆ ತೆರನಾಗಿರಲು ನಾ ಬರೆದ ಕಾವ್ಯವು ಎಡವಿ ಹೋಯಿತೇ? ರಚನೆಯಲ್ಲಿ ಪ್ರತಿಭೆಯ ಸತ್ವ ಕುಂದಿಹೋಯಿತೇ? “ಎಂದು ಸಖೇದಾಶ್ಚರ್ಯದಿಂದ ತನ್ನೊಳಗೆ ತಾನು ನೊಂದುಕೊಳ್ಳುತ್ತಾನೆ.
ಆಗ ಸೀತೆ ಶ್ರೀರಾಮನ ಸತಿಯಾಗಿ ಪತಿಯಬಗೆಗೆ ಆಡುವ ಮಾತು ಸೀತೆಗಿರುವ ಗೌರವ, ಪತಿಭಕ್ತಿ, ಸೀತಾರಾಮ ರಾಜಾರಾಮನಾಗಿ ಯೋಚಿಸಿದ ರೀತಿಯೇ ಸರಿ ಎಂಬ ಭಾವವನ್ನು ಇಮ್ಮಡಿಗೊಳಿಸುವ ಕವಿಯ ರಚನೆ ಮಾರ್ಮಿಕವಾಗಿದೆ-

ಸೀತೆಯೆಂದಳು ರಮಣ ನೀತಿ ತಪ್ಪಿದುದಿಲ್ಲ | ಏತಕಿಂತವನ ಶಂಕಿಪುದು ||
ಖ್ಯಾತರಿಂಗಪವಾದ ಭೀತಿಯೆದುರಲಿ ಸತಿಯ
ದೇತರದು ಗಣನೆಯೆಂದೆನುತ ||

ಖ್ಯಾತರ ಮೇಲಾಗುವ ಅಪವಾದದ ಭೀತಿಯ ಎದುರು ಸತಿಯ ನೋವು ಪ್ರಮುಖವಾದುದಲ್ಲ ಎಂಬ ಆಶಯವನ್ನು ವ್ಯಕ್ತಪಡಿಸಿದ ಕವಿ ಆದಿಕವಿಗಳಿಗಿಂತ ಭಿನ್ನವಾಗಿ ಯೋಚಿಸಿದ ಕವಿತಾ ಸೃಜನಶೀಲತೆಯೇ ಈ ಪ್ರಸಂಗವನ್ನು ಹಸಿರಾಗಿಸಿದೆ.

ವಾಲ್ಮೀಕಿಯ ಆಶ್ರಮವನ್ನು ಸೇರಿದ ಸೀತೆಯನ್ನು ಖೂಳನಾದ ಲವಣಾಸುರನ ವಧೆಗಾಗಿ ಪಾಳಯ ಸಹಿತನಾಗಿ ಬಂದ ಶತ್ರುಘ್ನನು ಕಂಡಾಗ ಆತನು ” ಹರಹರಾ ರಘುವಂಶದ ಈ ವಧು ತಿರುಕರ ಅಂದದಿ ತೃಣದ ಶಯ್ಯೆಯಲ್ಲಿ ಮಲಗಿರುವ ವಿಧಿಲೀಲೆಗೆ ಏನು ಹೇಳಲಿ? ” ಎಂದು ದುಃಖವನ್ನು ವ್ಯಕ್ತಪಡಿಸಿದಾಗ
ಪುತ್ರದ್ವಯರಿಗೆ ಜನ್ಮವನ್ನಿತ್ತ ಜಾನಕಿ ಶತ್ರುಘ್ನನನ್ನು ಕಂಡು ” ಇತ್ತ ಬಾ ಶತ್ರುಘ್ನ , ಸ್ವಸ್ಥವೇ ಪುರದಲ್ಲಿ? ಪೃಥ್ವಿ ಪತಿಯಾದ ಶ್ರೀರಾಮ ಸಂತೋಷ ಚಿತ್ತದಿಂದ ಇರುವರೇ ? “ಎಂದು ಕೇಳುವ ಜೊತೆಗೆ ” ಮಾತೆಯರು ತಂಗಿಯರು ಖ್ಯಾತ ಲಕ್ಷಣ ಭರತ ಸಾತಿಶಯದಲ್ಲಿರುವರೇ? ” ಎಂದು ವಿಚಾರಿಸಿ ತನ್ನ ಕುಲವಧುವಿನ ಧರ್ಮವನ್ನು ಮೆರೆಯುತ್ತಾಳೆ.

“ಸೀತೆಯಿಲ್ಲದ ಪುರದಲ್ಲಿ ಎಷ್ಟು ಸಂಪದವಿರಲು ಏನು ಪ್ರಯೋಜನ? ಮನಕೆ ಮುದವಿಹುದೆ ? ಕಿರಣವಿಲ್ಲದ ಸೂರ್ಯ- ಹರಣವಿಲ್ಲದ ಕಾಯದಂತಿದೆ ನಮ್ಮೀ ಪುರ” ಎಂದು ಶತ್ರುಘ್ನ ಹೇಳಲು ಸೀತೆ ನುಡಿಯುವ ಮಾತು ಸದಾ ಉಲ್ಲೇಖನೀಯ –

“ಕರುಣಾಳು ರಾಘವಗೆ ಕರಿ ಕಳಂಕವ ತಂದು ಪುರದೊಳ್ ಇರ್ಪುದಕ್ಕಿಂತ ಹೊರಗೆ ಉಚಿತವಲ್ವೆ? ಇದನ್ನೆಲ್ಲ ಮರೆತು ನೀನು ಮುದದಲ್ಲಿರು. ನಾನಿಲ್ಲಿರುವ ವಿಚಾರವನ್ನು ನಿನ್ನಣ್ಣನಿಗೆ ಹೇಳದಿರು. ಒಂದು ವೇಳೆ ಹೇಳಿದೆಯಂತಾದರೆ ನನ್ನ ಉದರದಲ್ಲಿ ಜನಿಸಿರುವ ಎಳೆ ಶಿಶುಗಳ ಆಣೆ, ರಾಘವನ ಮೇಲಾಣೆ” ಎಂದು ಹೇಳಿ ಶತ್ರುಘ್ನನನ್ನು ಆಣೆಯ ಬಂಧನದಲ್ಲಿರಿಸುತ್ತಾಳೆ.

ಕಡೆಗೆ ಕುಶ-ಲವರು ಶ್ರೀರಾಮನೆದುರು ವಾಲ್ಮೀಕಿ ವಿರಚಿತ ರಾಮಾಯಣದ ಕಾವ್ಯವಾಚನವನ್ನು ಮಾಡಿದ ತರುವಾಯ ಬಾಲಕರ ಬಗೆಗೆ ಶ್ರೀರಾಮನು ತನ್ನ ಸದಾನಂದವನ್ನು ವ್ಯಕ್ತಪಡಿಸಿ ಬಾಲಕರ ಪೂರ್ವಾಪರವನ್ನು ವಿಚಾರಿಸಲು ವಾಲ್ಮೀಕಿ “ದಾಶರಥಿ ಕೇಳು, ನಿನ್ನ ಸತಿಯನ್ನು ಆಶ್ರಮದಿ ಸಲಹಿದೆನು ಮರುಕದೊಳು ಈಸು ದಿನವು, ಈ ತರಳರು ಆಕೆಯ ಗರ್ಭದೊಳಗೆ ಉದಿಸಿದ ದೇಶ ಕೋಶಗಳಿಲ್ಲದಿಹ ಕುಲಭೂಷಣರು, ಬೇಸರಿಸದೆ ಇನ್ನು ಇವರ ಸ್ವೀಕರಿಸು ” ಎಂದಾಗ ಶ್ರೀರಾಮನು ” ನಿನ್ನ ನುಡಿಗೆರಡಿಲ್ಲ, ಭೂಮಿಜೆಗೆ ಎನ್ನಲಾರೆನು ಕೊರತೆ, ಕೇಳು ಎನಗೆ ಎನ್ನ ವಂಶದ ಖ್ಯಾತಿಯೆದುರಲಿ ಸತಿ ಸಹ ಗಣ್ಯವಲ್ಲ ” ಎಂದು ಹೇಳುವ ಜೊತೆ ಜೊತೆಗೆ ಅಂದು ಗರ್ಭಸ್ಥ ಶಿಶುಗಳಿಗೆ ಉಪದೇಶಿಸಿದ ಶರ ವಿಜೃಂಭಕಗಳ ಉಲ್ಲೇಖವನ್ನು ವ್ಯಕ್ತಡಿಸಿದಾಗ ವಾಲ್ಮೀಕಿಯ ಆಣತಿಯ ಮೇರೆಗೆ ಶಿಷ್ಯರೀರ್ವರು ಧರಣಿಪನ ಮುಂದೆ ಅಮಿತ ಶೌರ್ಯದಿ ಶರ ವಿಜೃಂಭಕಗಳನ್ನು ಪ್ರಯೋಗಿಸಿ ಇನವಂಶದ ತರಳರೆಂಬುದನ್ನು ಖಚಿತಪಡಿಸುವ ದೃಶ್ಯ ಪ್ರಸಂಗದ ಅನನ್ಯ ಭಾಗ.

ತನ್ನ ಪತಿಯೆಡೆಗೆ ಆಗಮಿಸಿದ ಸೀತೆ ಮುಸುಕನ್ನು ಸಡಿಲಿಸಿ ಕುಶಲವರನ್ನು ಬರಸೆಳೆದು ಮುದ್ದಿಸುತ ” ತರಳರಿರ ನಿಮಗೆ ಇಂದು ನಿಮ್ಮಯ ಜನಕನು ದೊರೆತನು. ಎನ್ನಯ ಹೊಣೆಯು ಸರಿದು ಹೋಯಿತು. ಮುಂದೆ ನಾನು ಶ್ರೀರಾಮನಿಗೆ ಅರಸಿಯೆನಿಸಿರುವ ಸೌಭಾಗ್ಯವನ್ನು ಪಡೆದಿಲ್ಲ” ಎಂದು ಸೀತೆಯ ಮೂಲಕ ನುಡಿಯುವ ಕವಿ ಹೃದಯ ಸೀತೆಯ ನಿರ್ಯಾಣಕ್ಕೆ ಸಕಲ ಸಜ್ಜನ್ನು ಮಾಡಿರುವುದು ಒಂದು ಭಾವುಕ ಸ್ಥಿತಿ.

ಸೀತೆ ತರಳರನ್ನು ಕೂಡಿಕೊಂಡು ಶ್ರೀರಾಮನ ಪಾದಾಂಬುರುಹಕ್ಕೆ ನಮಿಸಿ, ತರಳರನ್ನು ಶ್ರೀರಾಮನ ಬಳಿಯಲ್ಲಿ ಬಿಟ್ಟು ” ಮುನಿಕುಲ ತಿಲಕನಾದ ವಾಲ್ಮೀಕಿಗೆ ಪ್ರಣಾಮವನ್ನು ಸಲ್ಲಿಸಿ ” ಹೇಳುವ ಮಾತು ಜಾನಕಿಯ ನಿರ್ಯಾಣದ ಅಂತಿಮ ನುಡಿಧಾರೆ ಕಾವ್ಯ ವಿಡಂಬನೆಯಾಗಿ ಮೂಡಿ ಬಂದಿದೆ.
ಇಳೆಯ ಅರಸನ ಸನ್ನಿಧಿಯೊಳು ಇಳೆಯ ನಂದನೆಗಿಲ್ಲ ಶಾಶ್ವತ ನೆಲೆಯು, ಕರೆಯುವಳವ್ವೆ, ಅವಳನು ಸೇರಿಕೊಳ್ಳುವೆನು ಎಂದು ಹೇಳುತ್ತಾ ನಡೆದೇ ಬಿಡುವಳು ಸೀತೆ ತನ್ನದಲ್ಲದ ಮನೆಯಿಂದ ತನ್ನ ಮನೆಗೆ…

ನೆರೆದವರು ಬಾಯ ತೆರೆದು ಯೆಂದು ನೋಡುತಿರೆ ತರಣಿ ಕುಲಜಂಗೆ ಎರಗಿ ತೆರಳಿ ಮುಂದಡಿಯಿಡಲು ಬಿರಿದ ಭೂಮಿಯೊಳು ಇಳಿದು ಕಾಣದಾದಳು ಸೀತೆ
ಹೀಗೆ ಮಾ ನಿಷಾದ ದ ಸೀತೆ ಕಾಣದಾಗುವಳು. ಕೊನೆಗೆ ವಾಲ್ಮೀಕಿಗೆ ತನ್ನ ಮೂಲರೂಪದಲ್ಲಿ ಗೋಚರಿಸುವಳು…

 

ಚಿತ್ರ: ಸಾಂದರ್ಭಿಕ

ಕೃಪೆ: ಕಿರಣ್ ವಿಟ್ಲ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
200
Deevith S. K. Peradi

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು