News Karnataka Kannada
Tuesday, April 30 2024
ಅಂಕಣ

ಜೀತ ಪದ್ಧತಿ ಮತ್ತು ಅಸ್ಪೃಶ್ಯತೆಯ ಜೀವನಾಗಾಥೆಯ ಕಥನ ಚೋಮನ ದುಡಿ

Sneha ಚೋಮನ ದುಡಿ
Photo Credit : News Kannada

ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿ ಚಿಕ್ಕದಾದರೂ ಬಹಳ ಮಹತ್ವವಾದದ್ದು. ಇದಕ್ಕೆ ನಮ್ಮ ಸಾಹಿತ್ಯದಲ್ಲಿ ಮೌಲಿಕವಾದ ಸ್ಥಾನವಿದೆ. 1930-40ರ ದಶಕದ ಸಮಾಜದ ಸ್ಥಿತಿಗತಿಗಳನ್ನು, ಒಳಗು-ಹೊರಗುಗಳನ್ನು ,ಜೀತ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ಹಾಗೂ ಬಡವನ ಬಾಳಿನ ಶ್ರದ್ಧೆಯನ್ನು ಕಣ್ಣಿಗೆ ಕಾಣುವಂತೆ ಕಟ್ಟಿಕೊಡುತ್ತದೆ.

ಚೋಮನು ಒಬ್ಬ ಹೊಲೆಯ, ಅವನ ಮತ್ತು ಅವನ ಮಕ್ಕಳ ಜೀವನದ ಸುತ್ತ ಕಥೆಯು ತಿರುಗುತ್ತದೆ. ಸುಖಕ್ಕಿಂತ ದುಃಖವೇ ಕಾಣುವ ಅವನ ಜೀವನದಲ್ಲಿ ಪ್ರಾಮುಖ್ಯತೆ ಪಡೆದಿರುವುದು ಮೂರೇ. ಅವನ ಮಕ್ಕಳು, ಅದರಲ್ಲಿ ಹೆಚ್ಚಿನದಾಗಿ ಮಗಳು ಬೆಳ್ಳಿ, ಹೆಂಡ ಮತ್ತು ಅವನ ದುಡಿ. ಖುಷಿಯಿರಲಿ, ಬೇಸರವಿರಲಿ, ದುಡಿಯನ್ನು ಬಾರಿಸುತ್ತ ಕುಳಿತರೆ ಜಗವನ್ನೇ ಮರೆಯುವನು ಚೋಮ.

ಸಣ್ಣ ಝರಿಯಂತೆ ಹರಿಯುತ್ತಿದ್ದ ಜೀವನದಲ್ಲಿ ಬಿರುಗಾಳಿಯಂತೆ ಅವನ ಹಳೆಯ ಸಾಲದ ಸಲುವಾಗಿ ಶುರುವಾದ ತೊಂದರೆ ತಾಪತ್ರಯಗಳು ದೊಡ್ಡದಾಗುತ್ತಲೇ ಹೋಗುತ್ತವೆ. ದುಃಖದಲ್ಲೇ ಅಂತ್ಯವಾಗುವ ಅವನ ಕಥೆಯು ಯಾರಿಗಾದರೂ ಕನಿಕರ ಹುಟ್ಟಿಸುವಂಥದ್ದು. ಸ್ವತಃ ಬೇಸಾಯಗಾರನಾಗುವುದು ಅವನ ಕನಸು. ಆ ಕನಸು ಕೊನೆಗೂ ಕನಸಾಗೇ ಉಳಿಯುವ ಕರುಣಾಜನಕ ಕತೆ ಇಲ್ಲಿಯ ವಸ್ತು. ಮಕ್ಕಳ ಹುಡುಗಾಟಿಕೆ, ಬೇಜವಾಬ್ದಾರಿತನ ಮತ್ತು ಚಟಗಳು ಚೋಮನನ್ನು ಘಾಸಿಗೊಳಿಸಿದರೆ, ಮಗಳು ಬೆಳ್ಳಿಯ ನಡವಳಿಕೆ ಅವನನ್ನು ಕೆರಳಿಸುತ್ತದೆ.

ಜೀವದ ಮಗಳನ್ನೇ ಮನೆಯಿಂದ ಹೊರದಬ್ಬಿ ಕಟ್ಟಿದ ಕನಸನ್ನೇ ಮುರಿಯುವ ಚೋಮ ಕೈ ಚಾಚುವುದು ದುಡಿಗೆ. ಆಗ ಆ ಪ್ರಳಯ ಸದೃಶವಾದ ನಾದ ನಿಲ್ಲುತ್ತದೆ; ಜೊತೆಗೆ ಚೋಮನ ಹೃದಯವೂ! ದುಡಿಯೇ ಚೋಮನ ಪಾಲಿನ ಗೆಳೆಯ; ಸಮಾಧಾನ; ಆಶಾವಾದ ಮತ್ತು ಆತ್ಮವಿಶ್ವಾಸವಾಗಿ ಕಾಣುತ್ತದೆ. ಸುಖಕ್ಕೂ ದುಃಖಕ್ಕೂ ಚೋಮನ ಪಾಲಿಗೆ ದುಡಿಯೇ ಮೊದಲ ಪಾಲುದಾರ. ಹಾಗೆಯೇ ಕೊನೆಯ ಪಾಲುದಾರ ಕೂಡ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾದ ಪುಟ್ಟ ಕಾದಂಬರಿಯಾದ ಇದು ನಮ್ಮನ್ನು 1930-40ರ ದಶಕ್ಕೆ ಕೊಂಡೊಯ್ದರೂ ಅಚ್ಚರಿಗೊಳ್ಳಬೇಕಿಲ್ಲ.

ಹಾಗೆಯೇ ಈ ಜನ ಬಂದ ಅಲ್ಪ ಸ್ವಲ್ಪ ಪುಡಿಗಾಸನ್ನು ಮುಂದಿನ ಖರ್ಚಿಗಾಗಿ ಇಟ್ಟುಕೊಳ್ಳುವಂಥವರಲ್ಲ. ಯಾವ ದಿನವೇ ಇರಲಿ, ಸ್ವಲ್ಪೇ ಸ್ವಲ್ಪವಾದರೂ ಹೆಂಡ ಬೇಕೇ ಬೇಕು. ಮನೆಯಲ್ಲಿ ಎಷ್ಟೋ ಸಲ ಉಪ್ಪು ಮೆಣಸಿಗೂ ಗತಿಯಿರದಂಥ ಚೋಮನ ಮನೆಯಲ್ಲಿಯೂ ಇದೇ ಹಾಡು. ಸಾಲವಾದರೂ ತೆಗೆದು ಕುಡಿಯಬೇಕು, ಕುಡಿದು ದುಡಿಯ ಬಾರಿಸಲೇಬೇಕು. ಈ ನಿರ್ಭಾಗ್ಯ ಜನರ ನೋವುಗಳನ್ನು ಸ್ವಲ್ಪ ಹೊತ್ತಿಗಾದರೂ ಮರೆಸಲು ಏನಾದರೂ ಬೇಕಲ್ಲ ದಾರಿ? ಅದೇ ಹೆಂಡದ ರೂಪದಲ್ಲಿ ಬಂದಿತ್ತು. ಚೋಮನಿಗೆ ದುಡಿಯ ಭಾಗ್ಯ ಬೇರೆ. ಸ್ವಂತ ಮಕ್ಕಳು ಮೋಸ ಮಾಡಿದರೂ ದುಡಿಯು ಅವನ ಕೊನೆಗಾಲದ ತನಕ ಕೈ ಬಿಡಲಿಲ್ಲ.

ಶಿವರಾಮ ಕಾರಂತರ ಬರಹಗಳನ್ನು ನೋಡಿದರೆ, ಅವರ ಬಹುಮುಖೀ ಆಸಕ್ತಿ ಮತ್ತು ಅವರಿಗಿದ್ದ ಆಳವಾದ ಸಾಮಾಜಿಕ ಕಳಕಳಿ ಗೊತ್ತಾಗುತ್ತದೆ. ತುಂಬಾ ಆಳವಾದ ಸಮಕಾಲೀನ ಪ್ರಜ್ಞೆ ಇರುವ ಧೀಮಂತ ಲೇಖಕರ ಪರಂಪರೆಯೇ ನಮ್ಮಲ್ಲಿದೆ. ಅವರಲ್ಲಿ ಕಾರಂತರು ಕೂಡ ಅಗ್ರಗಣ್ಯರಲ್ಲೊಬ್ಬರು. ತುಂಬಾ ಮೇಲ್ವರ್ಗದಿಂದ ಬಂದವಾರದ ಅವರು, ಚೋಮನಂಥ ಕೆಳ ವರ್ಗದ ಅದೃಷ್ಟಹೀನನ ಆಂತರ್ಯದ ತಳಮಳಗಳ ಬಗ್ಗೆ ಆಲೋಚಿಸಿರುವುದು ಆ ಕಾಲಕ್ಕಷ್ಟೇ ಅಲ್ಲ, ಈ ಕಾಲಕ್ಕೂ ತುಂಬಾ ಕ್ರಾಂತಿಕಾರಿಯಾದ ಕ್ರಮವೇ ಆಗಿದೆ. ಪ್ರಾಯಶಃ ಕನ್ನಡ ಸಾಹಿತ್ಯಕ್ಕೆ ಅತ್ಯಂತ ಮಹತ್ತ್ವದ ತಿರುವು ತಂದುಕೊಟ್ಟ ಅಗ್ರಮಾನ್ಯ ಕಾದಂಬರಿಗಳಲ್ಲಿ ಚೋಮನ ದುಡಿ ಕೂಡ ಒಂದು ಎಂದು ಧಾರಾಳವಾಗಿ ಹೇಳಬಹುದು.

ಈ ಕಾದಂಬರಿಯಲ್ಲಿ ಸಾಮಾಜಿಕ ಸ್ಥಿತಿಗತಿ. ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದ ಜನರ ಹತಾಶೆ.ಅಸಹಾಯಕತೆ. ಬಡತನ. ದುರ್ಬಲ ಬದುಕಿನ ಬವಣೆ ಕಾಣಬಹುದು. ಚೋಮನ ದುಡಿಯನ್ನು ಓದಿದ ಮೇಲೆ ಮನಸ್ಸು ಭಾರವಾಯಿತು. ಸರಳ, ಸುಂದರವಾಗಿ ಮಲೆನಾಡನ್ನು ಚಿತ್ರಿಸಿ ಅದರ ಜೊತೆಗೆ ಅಲ್ಲಿಯ ಜನರ ಜೀವನವನ್ನು ಭದ್ರವಾಗಿ ಹಿಡಿದಿಟ್ಟಿದ್ದಾರೆ. ಇನ್ನೊಮ್ಮೆ, ಮತ್ತೊಮ್ಮೆ ಓದಬೇಕೆನ್ನಿಸುವ ಪುಸ್ತಕ, ಚೋಮನ ದುಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು