Categories: ಅಂಕಣ

ಇ-ಸಂಜೀವಿನಿ ಒಪಿಡಿಯಿಂದ ಕುಳಿತಲ್ಲೇ ಆರೋಗ್ಯ ಸಲಹೆ ಪಡೆಯಿರಿ

ಕೇಂದ್ರ ಸರ್ಕಾರ ಜಾರಿಗೆ ತಂದ ‘ಇ-ಸಂಜೀವಿನಿ ಟೆಲಿ ಮೆಡಿಸಿನ್ಸ್‌’ ಕಾರ್ಯಕ್ರಮ ದೇಶದಾದ್ಯಂತ ಜನಪ್ರಿಯವಾಗುತ್ತಿದೆ. ಕೊರೊನಾ ಕಾಲದಲ್ಲಿ ಕೋಟ್ಯಂತರ ಜನರು ಇದರ ಸೌಲಭ್ಯ ಪಡೆದಿದ್ದು, ದೇಶ ವ್ಯಾಪ್ತಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿರುವುದು ಹೆಗ್ಗಳಿಕೆಯಾಗಿದೆ.

ಹಾಗಾದರೆ ಏನಿದು ‘ಇ-ಸಂಜೀವಿನಿ ಟೆಲಿ ಮೆಡಿಸಿನ್ಸ್‌’ ಎಂಬ ಪ್ರಶ್ನೆ ಕಾಡಬಹುದು. ಈಗಾಗಲೇ ಇದರ ಸೌಲಭ್ಯ ಪಡೆದವರಿಗೆ ಇದರ ಪರಿಚಯವಿರಬಹುದು. ಆದರೆ ಮುಂದಿನ ದಿನಗಳಲ್ಲಿ ಇದರ ಸೌಲಭ್ಯ ಪಡೆಯುವವರು ಈ ಬಗ್ಗೆ ಪೂರಕ ಮಾಹಿತಿಯನ್ನು ಪಡೆದುಕೊಂಡರೆ ಆರೋಗ್ಯದ ಸಮಸ್ಯೆಗೆ ವೈದ್ಯರ ಸಲಹೆ ಮೂಲಕ ಚಿಕಿತ್ಸೆ ಪಡೆಯಲು ಸಹಕಾರಿಯಾಗಲಿದೆ.

ಇವತ್ತಿನ ಪರಿಸ್ಥಿತಿಯಲ್ಲಿ ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವನೆ ಅಪಾಯಕಾರಿ. ಜತೆಗೆ ಮಧುಮೇಹದಂತಹ ಕಾಯಿಲೆವುಳ್ಳವರು ಔಷಧಿಗಳ ಸೇವನೆ ಮೂಲಕ ಮನೆಯಲ್ಲಿಯೇ ಕಾಯಿಲೆಯನ್ನು ನಿಯಂತ್ರಿಸುತ್ತಾರೆ. ಹೀಗಿರುವಾಗ ಕೆಲವೊಂದು ಸಲಹೆಗಳು ಬೇಕಾದರೆ ಅದಕ್ಕಾಗಿ ಕಿ.ಮೀ.ಗಟ್ಟಲೆ ದೂರವಿರುವ ಆಸ್ಪತ್ರೆಗಳಿಗೆ ತೆರಳಿ ವೈದ್ಯರನ್ನು ಭೇಟಿ ಮಾಡಿಬರುವುದು ಕಷ್ಟದ ಕೆಲಸವಾಗಿದೆ. ಇದೆಲ್ಲ ಸಮಸ್ಯೆಗಳಿಗೆ ‘ಇ-ಸಂಜೀವಿನಿ ಟೆಲಿ ಮೆಡಿಸಿನ್ಸ್‌’ ಸಹಕಾರಿಯಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇ ಆದರೆ ಮಕ್ಕಳಿಂದ ವೃದ್ಧರ ತನಕ ಮನೆಯಲ್ಲಿ ಕುಳಿತಲ್ಲಿಂದಲೇ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಕೊರೊನಾ ಮಹಾಮಾರಿ ಕಾಣಿಸಿಕೊಂಡ ಬಳಿಕವಂತು ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡರೆ ಬೆಚ್ಚಿ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ‘ಇ-ಸಂಜೀವಿನಿ ಟೆಲಿ ಮೆಡಿಸಿನ್ಸ್‌’ ಆ್ಯಪ್‌ ನಿಜವಾಗಲೂ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ. ಇಷ್ಟಕ್ಕೂ ಇದರ ಸೌಲಭ್ಯ ಪಡೆದುಕೊಳ್ಳುವುದು ಹೇಗೆ? ಯಾರೆಲ್ಲ ಸೌಲಭ್ಯ ಪಡೆಯಬಹುದು? ವೈದ್ಯರ ಸಲಹೆ ಪಡೆದುಕೊಳ್ಳುವುದು ಹೇಗೆ? ಹೀಗೆ ಹಲವಾರು ಪ್ರಶ್ನೆಗಳು ಮೂಡುವುದು ಸಹಜ. ಒಮ್ಮೆ ಈ ಆ್ಯಪ್‌ ಉಪಯೋಗಿಸಿದ್ದೇ ಆದರೆ ನಂತರ ಅದು ಸುಲಭವಾಗುತ್ತದೆ.

ಈ ಆ್ಯಪ್‌ ಮೂಲಕ ರೋಗಿಗಳಿಗೆ ಸಲಹೆ ನೀಡುವವರು ಸರ್ಕಾರಿ ತಜ್ಞ ವೈದ್ಯರೇ ಆಗಿರುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ ಸೌಲಭ್ಯ ಪಡೆಯಲು ಇಚ್ಚಿಸುವ ರೋಗಿಗಳ ಬಳಿ ಆಂಡ್ರಾಯ್ಡ್ ಮೊಬೈಲ್ ಮತ್ತು ಇಂಟರ್ ನೆಟ್ ಸಂಪರ್ಕ ಇರಬೇಕಷ್ಟೆ. ಸಾಮಾನ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ ಪ್ರತಿ ಮನೆಗಳಲ್ಲೂ ಆಂಡ್ರಾಯ್ಡ್ ಮೊಬೈಲ್ ಪೋನ್ ಗಳಿರುವುದು ಸರ್ವೇ ಸಾಮಾನ್ಯವಾಗಿರುವುದರಿಂದ ಅದರಲ್ಲಿರುವ ಪ್ಲೇ ಸ್ಟೋರ್‌ ಗೆ ಹೋದರೆ ಅಲ್ಲಿ ಇ-ಸಂಜೀವಿನಿ ಒಪಿಡಿ ಆ್ಯಪ್‌ ಇದ್ದು ಅದನ್ನು ಮೊದಲಿಗೆ ತಮ್ಮ ಮೊಬೈಲ್ ಗೆ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅಥವಾ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಇದ್ದರೂ ಕೂಡ ಅಲ್ಲಿ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸುವ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 9ಗಂಟೆವರೆಗೆ ವೈದ್ಯರನ್ನು ಸಂಪರ್ಕಿಸಲು ಅವಕಾಶವಿದೆ.

ಇ-ಸಂಜೀವಿನಿ ಒಪಿಡಿ ಆ್ಯಪ್‌ ತೆರೆದರೆ ಪರದೆಯ ಮೇಲೆ ಬರುವ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟದಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್‌ ನಂಬರ್‌ ಮತ್ತು ವಿಳಾಸವನ್ನು ನಮೂದಿಸಿ ಲಾಗಿನ್‌ ಆಗಬೇಕು. ಬಳಿಕ ಟೋಕನ್‌ ನಂಬರ್‌ ಲಭ್ಯವಾಗುವುದು. ಈ ನಂಬರ್‌ ನೀಡಿ ತಜ್ಞ ವೈದ್ಯರನ್ನು ವಿಡಿಯೋ ಕಾಲ್‌ ಮೂಲಕ ಭೇಟಿಯಾಗಬಹುದಾಗಿದೆ.

ಇನ್ನು ಕಂಪ್ಯೂಟರ್ ಮೂಲಕ ಸಂಪರ್ಕ ಸಾಧಿಸುವವರು ಕಂಪ್ಯೂಟರ್ ಪರದೆ ಮೇಲೆ ಕೇಳುವ ಪ್ರಕ್ರಿಯೆಗಳನ್ನು ಭರ್ತಿ ಮಾಡಬೇಕಾಗುತ್ತದೆ. ಮೊದಲಿಗೆ ರೋಗಿಯ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಅದು ಸುಲಭವಾಗಿದ್ದು, ರೋಗಿಯ ಮೊಬೈಲ್ ನಂಬರ್ ನಮೂದಿಸಿ ಯಾವ ರಾಜ್ಯ ಎಂಬುದನ್ನು ಆಯ್ಕೆ ಮಾಡಿಕೊಂಡರೆ, ಮುಂದಿನ ಪ್ರಕ್ರಿಯೆಗಳಿಗೆ ತೆರಳಲು ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಆ ನಂಬರನ್ನು ಎರಡನೇ ಪ್ರಕ್ರಿಯೆಯಲ್ಲಿ ನಮೂದು ಮಾಡಬೇಕು. ಬಳಿಕ ವೈದ್ಯರ ಸಂಪರ್ಕಕ್ಕೆ ಮೊಬೈಲ್ ಗೆ ಓಟಿಪಿ ಬರಲಿದ್ದು ಅದನ್ನು ನಮೂದಿಸಿದರೆ ವೈದ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಬಹುದಾಗಿದೆ. ಈ ವೇಳೆ ವೆಬ್‌ ವಿಡಿಯೋ ಮೂಲಕವೂ ಸಂಪರ್ಕಕ್ಕೆ ಬರುವ ವೈದ್ಯರ ಬಳಿ ಕಾಡುತ್ತಿರುವ ಆರೋಗ್ಯದ ಸಮಸ್ಯೆ ಬಗ್ಗೆ ವಿವರಿಸಿದರೆ ಸಮಸ್ಯೆಗೆ ತಕ್ಕಂತೆ ಚಿಕಿತ್ಸೆಯ ಸಲಹೆ ನೀಡಲಿದ್ದಾರೆ.

ಆದರೆ ರೋಗಿಗಳು ಇಷ್ಟೆಲ್ಲ ಪ್ರಕ್ರಿಯೆ ಮುನ್ನ ತಮ್ಮ ರೋಗದ ವಿವರ, ಹಿಂದಿನ ವೈದ್ಯಕೀಯ ಚಿಕಿತ್ಸೆಯ ವಿವರ ಹೀಗೆ ಎಲ್ಲವನ್ನು ಜತೆಯಲ್ಲಿಟ್ಟುಕೊಂಡರೆ ವೈದ್ಯರಿಗೆ ಸಲಹೆ ನೀಡಲು ಅನುಕೂಲವಾಗುತ್ತದೆ. ರೋಗಿಗಳು ಪೂರ್ವ ತಯಾರಿಯೊಂದಿಗೆ ವೈದ್ಯರನ್ನು ಸಂಪರ್ಕ ಮಾಡುವುದು ಬಹು ಮುಖ್ಯವಾಗಿದೆ. ಇನ್ನು ಇಲ್ಲಿ ಎಲ್ಲ ರೀತಿಯ ರೋಗಗಳಿಗೆ ಸಲಹೆ ದೊರೆಯಲಿದ್ದು, ರೋಗಕ್ಕೆ ಸಂಬಂಧಿಸಿದ ತಜ್ಞ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಲು ವ್ಯವಸ್ಥೆಯಿದೆ. ಹೀಗೆ ಸಂಪರ್ಕಕ್ಕೆ ತಜ್ಞ ವೈದ್ಯರು ನೀಡುವ ಔಷಧಿಗಳನ್ನು ಉಚಿತವಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಕೊರೊನಾ ಕಾರಣದಿಂದಾಗಿ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಆಸ್ಪತ್ರೆಗಳಿಗೆ ತೆರಳುವುದು ಸಾಧ್ಯವಾಗದ ಮಾತಾಗಿದೆ ಆದ್ದರಿಂದ ರೋಗಿಗಳು ಇ-ಸಂಜೀವಿನಿ ಒಪಿಡಿ ಆ್ಯಪ್‌ ಮೂಲಕ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವುದು ಜಾಣತನವಾಗಿದೆ. ಸದ್ಯ ಈ ಆ್ಯಪ್‌ ನಲ್ಲಿ  ಒಮ್ಮೆ ಸಂಪರ್ಕಿಸಿದ ವೈದ್ಯರನ್ನೇ ಮತ್ತೆ ಸಂಪರ್ಕಿಸುವ ವ್ಯವಸ್ಥೆ ಇಲ್ಲವಾಗಿದೆ. ಅಷ್ಟೇ ಅಲ್ಲದೆ, ಪ್ರತಿ ಬಾರಿಯೂ ವೈದ್ಯರನ್ನು ಭೇಟಿಯಾಗಬೇಕಾದರೆ ಲಾಗಿನ್ ಆಗುವುದು ಅನಿವಾರ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಯೊಂದಿಗೆ ಅಭಿವೃದ‍್ಧಿಗೊಳಿಸುವ ಕಾರ್ಯವೂ ನಡೆಯುತ್ತಿದೆ.

ಇನ್ನು ಆ್ಯಪ್‌ ಬಗ್ಗೆ ಹೇಳಬೇಕೆಂದರೆ, 2019ರ ಡಿಸೆಂಬರ್ ನಲ್ಲಿ ಆರಂಭವಾದ ಇ-ಸಂಜೀವಿನಿ ಒಪಿಡಿ ಆ್ಯಪ್‌ ನ ಸೌಲ್ಯಭ್ಯವನ್ನು ಇದುವರೆಗೆ ಕೋಟ್ಯಂತರ ಮಂದಿ ಪಡೆದಿದ್ದಾರೆ. ಜತೆಗೆ ದಿನದಿಂದ ದಿನಕ್ಕೆ ಬಳಕೆಯ ಪ್ರಮಾಣವೂ ಹೆಚ್ಚುತ್ತಿದೆ. ಬಳಕೆಯಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇತರೆ ರಾಜ್ಯಗಳಲ್ಲಿಯೂ ಇದರ ಬಳಕೆ ಹೆಚ್ಚಾಗುತ್ತಿದೆ. ಮೊಬೈಲ್, ಕಂಪ್ಯೂಟರ್ ಸೌಲಭ್ಯವಿಲ್ಲದವರು ಸ್ಥಳೀಯ ಆರೋಗ್ಯ ಕೇಂದ್ರಗಳ ಮೂಲಕವೂ  ಇ-ಸಂಜೀವಿನಿ ಒಪಿಡಿ ಆ್ಯಪ್‌ ಬಳಸಿ ವೈದ್ಯರನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಿಕೊಡಲಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಡಿಜಿಟಲ್ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿರುವಾಗ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮತ್ತು ವೈದ್ಯರ ಸಲಹೆಗಳಿಗೆ ಸಮಯ, ಶ್ರಮ ಮತ್ತು ಹಣ ವ್ಯರ್ಥಕ್ಕೆ ಇ-ಸಂಜೀವಿನಿ ಒಪಿಡಿ ಆ್ಯಪ್‌  ಕಡಿವಾಣ ಹಾಕಿದ್ದಂತು ನಿಜ. ಈ ಆ್ಯಪ್‌ ಬಗ್ಗೆ ಇನ್ನಷ್ಟು ಅರಿತು ಆ ಮೂಲಕ ಜನಸಾಮಾನ್ಯರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಾಗಬೇಕಾಗಿದೆ.

Swathi MG

Recent Posts

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

3 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

23 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

48 mins ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

1 hour ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

1 hour ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

2 hours ago