News Karnataka Kannada
Tuesday, April 30 2024
ಅಂಕಣ

ಇಂಗ್ಲೀಷ್ ಭಾಷಾ ಡಿಗ್ರಿ… ಸಿಕ್ತು ನೋಡ್ರಿ ನೌಕ್ರಿ…!

Photo Credit :

ಇಂಗ್ಲೀಷ್ ಭಾಷಾ ಡಿಗ್ರಿ... ಸಿಕ್ತು ನೋಡ್ರಿ ನೌಕ್ರಿ...!

ಅಶೋಕ್ ಕೆ. ಜಿ. ಮಿಜಾರು

ಇದೇನ್ರೀ..! ಇಂಗ್ಲೀಷ್ ಸಾಹಿತ್ಯದಲ್ಲಿ ಡಿಗ್ರಿ ಮಾಡ್ತೀರಾ..? ಅಂತಾ ಪ್ರಶ್ನಾರ್ಥಕವಾಗಿ ನೋಡೋ ಜನ ಒಂದೆಡೆಯಾದ್ರೆ; ಯಾಕ್ರೀ ಈ ಇಂಗ್ಲೀಷ್ ಅಧ್ಯಯನ ತಗೊಳ್ತೀರಾ, ಮುಂದಕ್ಕೇನು ಕಾಲೇಜಿಗೆ ಹೋಗಿ ಭಾಷಣ ಮಾಡ್ತೀರಾ..? ಅಂತ ಕಾಲೆಳೆಯೋ ಮಂದಿ ಇನ್ನೊಂದೆಡೆ. ಆದರೆ ನಿಜ ಸ್ವರೂಪವೇ ಬೇರೆ! ಅದೆಷ್ಟೋ ಶಾಲೆಗಳಿಗೆ  ಇಂಗ್ಲೀಷ್ ಶಿಕ್ಷಕರು ಸಿಗ್ತಿಲ್ಲ; ಕಾಲೇಜಿಗೆ  ಇಂಗ್ಲೀಷ್ ಭಾಷಾ ಉಪನ್ಯಾಸಕರೂ ಸಿಗ್ತಿಲ್ಲ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಮಾಡಿದವರಿಗೆ ಅಷ್ಟು ಬೇಡಿಕೆಯಿದೆ. ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹಲವು ರಂಗಗಳಲ್ಲಿ ಅಪಾರವಾದ ಬೇಡಿಕೆಯಿರುವ ಡಿಗ್ರಿಯಿದು.

ಇಂಗ್ಲೀಷ್ ಎಂ.ಎ. ಡಿಗ್ರಿ ಮಾಡುವುದು ಹೇಗೆ?

ಬಿ.ಎ. ಪದವಿಯಲ್ಲಿ ಇಂಗ್ಲೀಷ್ ಭಾಷೆ ಅಥವಾ ಹೋನರ್ಸ್ ತಗೊಂಡವರು ಅಥವಾ ಐಚ್ಚಿಕ ಭಾಷೆಯನ್ನಾಗಿ ತಗೊಂಡು ಅಧ್ಯಯನ ಮಾಡಿದವರು ಮುಂದಕ್ಕೆ ಎಂ.ಎ. ಇನ್ ಇಂಗ್ಲೀಷ್, ಎಂ.ಎ. ಇನ್ ಇಂಗ್ಲೀಷ್ ಲಿಟರೇಚರ್, ಎಂ.ಎ. ಇನ್ ಇಂಗ್ಲೀಷ್ ಲ್ಯಾಂಗ್ವೇಜ್ ಆಂಡ್ ಲಿಟರೇಚರ್ ಅಥವಾ ಎಂ.ಎ. ಇನ್ ಎಜುಕೇಶನ್ ಮಾಡಬಹುದು. ಕಡಿಮೆಯೆಂದರೂ ಶೇಕಡಾ 50ರಷ್ಟು ಅಂಕಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಹೊಂದಿದ್ದರೆ ಸಾಕು ಸ್ನಾತಕೋತ್ತರ ಪದವಿಗೆ ಅರ್ಹತೆ ಪಡೆಯಲು. ನಿಮಗಿದು ತಿಳಿದಿರಲಿ; ಕರ್ನಾಟಕದಲ್ಲಿ ಈ ಭಾಷೆಯ ಅಧ್ಯಯನಕ್ಕೆ ಅಷ್ಟೊಂದು ಒಲವು ತೋರದೆ ಕೆಲವು ಕಾಲೇಜುಗಳು ಮಚ್ಚಿಹೋಗುವ ಹಂತಕ್ಕೆ ಬಂದಿದ್ದರೆ; ಜವಾಹರ್ ಲಾಲ್ ನೆಹರೂ ಯುನಿವರ್ಸಿಟಿ, ಜಾಮಿಯಾ ಮಿಲಿಯ ಇಸ್ಲಾಮಿಯಾ ಯುನಿವರ್ಸಿಟಿ, ಪ್ರೆಸಿಡೆನ್ಸಿ ಯುನಿವರ್ಸಿಟಿ ಹೀಗೆ ಕೆಲವು ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪರೀಕ್ಷೆಯ ಬಳಿಕವೇ ವಿದ್ಯಾರ್ಥಿಗಳಿಗೆ ಸೀಟು ದೊರಕುವುದು ಎಂದರೆ ಆಶ್ಚರ್ಯ ಪಡಬೇಕಿಲ್ಲ. ವಾರ್ಷಿಕವಾಗಿ 3 ಲಕ್ಷದಿಂದ 8 ಲಕ್ಷದವರೆಗೆ ಪ್ರಥಮ ಸಂಬಳ ತೆಗೆದುಕೊಳ್ಳಲು ಅರ್ಹತೆಯಿರುವ ಪದವಿಯಿದು. ದೂರಶಿಕ್ಷಣ ಯೋಜನೆಯಡಿಯಲ್ಲೂ ಎಂ.ಎ. ಇನ್ ಇಂಗ್ಲೀಷ್ ಕಲಿಯಬಹುದು. ಇಗ್ನೋ, ಕೆ.ಎಸ್.ಒ.ಯು., ಅಮಿಟಿ ಯುನಿವರ್ಸಿಟಿ, ಅಣ್ಣಾ ಮಲೈ ಯುನಿವರ್ಸಿಟಿ ಹೀಗೆ ಹಲವು ವಿಶ್ವವಿದ್ಯಾಲಯಗಳಲ್ಲಿ ಈ ಪದವಿ ದೂರಶಿಕ್ಷಣದಲ್ಲಿ ಲಭ್ಯವಿದೆ.

ಬಿ.ಎ. ಮುಗಿಸಿ ಇಂಗ್ಲೀಷ್ ನಲ್ಲಿ ಎಂ.ಎ. ಮುಗಿಸಿದ ಬಳಿಕವೂ ಉನ್ನತ ಶಿಕ್ಷಣ ಮಾಡಬಹುದು. ಇಂಗ್ಲೀಷ್ ನಲ್ಲಿ ಎಂ.ಫಿಲ್ ಮಾಡಬಹುದು. ಲಿಂಗ್ವಿಸ್ಟಿಕ್ಸ್, ಕಂಪ್ಯಾರಿಟಿವ್ ಲಿಟರೇಚರ್, ಕ್ಲಾಸಿಕಲ್ ಇಂಗ್ಲೀಷ್ ಲಿಟರೇಚರ್, ಇಂಗ್ಲೀಷ್ ಲ್ಯಾಂಗ್ವೇಜ್, ಟೀಚಿಂಗ್ ಆಫ್ ಇಂಗ್ಲೀಷ್ ಆಸ್ ಎ ಫಾರೀನ್ ಲ್ಯಾಂಗ್ವೇಜ್ ಹೀಗೆ ವಿವಿಧ ವಿಭಾಗಗಳಲ್ಲಿ ಪಿ.ಹೆಚ್.ಡಿ. ಕೂಡಾ ಮಾಡಬಹುದು.

ಇಂಗ್ಲೀಷ್ ಎಂ.ಎ. ಕಲಿಯುವುದರಿಂದ ಪ್ರಯೋಜನಗಳೇನು?

ಕೇವಲ ಉದ್ಯೋಗದ ಕಡೆ ನೋಡದೆ ಹತ್ತು ಹಲವು ಪ್ರಯೋಜನಗಳನ್ನು ಈ ಪದವಿ ನೀಡುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಶಿಕ್ಷಕನಾಗುವ ಪರಿಪೂರ್ಣ ಅನುಭವ ಇವರಿಗೆ ಸಿಗುವ ಮೊತ್ತಮೊದಲ ಲಾಭ. ತಾನು ಇತರರೊಡನೆ ಹೇಗೆ ವರ್ತಿಸಬೇಕು, ಹೇಗೆ ಇತರರನ್ನು ಅರ್ಥೈಸಿಕೊಳ್ಳಬೇಕು, ಇತರರ ಮಾನಸಿಕ ಭಾವನೆಗಳನ್ನು ತುಮುಲಗಳನ್ನು ಹೇಗೆ ಸರಿದೂಗಿಸಿಕೊಂಡು ಹೋಗಬೇಕೆನ್ನುವುದನ್ನೂ ಇಲ್ಲಿ ಪರೋಕ್ಷವಾಗಿ ಕಲಿತುಬಿಡುತ್ತಾರೆ ವಿದ್ಯಾರ್ಥಿಗಳು. ಎಲ್ಲಾ ವಲಯಗಳಲ್ಲೂ ಇಂಗ್ಲೀಷ್ ಬಳಕೆ ಯಥೇಚ್ಚವಾಗಿರುವುದರಿಂದ ಕಂಪೆನಿಗಳು, ಕೈಗಾರಿಕೆಗಳು, ಶಿಕ್ಷಣ, ಹೀಗೇ ಯಾವುದೇ ಕ್ಷೇತ್ರಗಳಲ್ಲಾದರೂ ಸುಲಭದಲ್ಲಿ ಕೆಲಸಗಿಟ್ಟಿಸಿಕೊಳ್ಳಬಹುದು. ಇಂಗ್ಲೀಷ್ ಸಾಹಿತ್ಯದಲ್ಲಿ ತುಂಬಾ ಆಳವಾದ ಅಧ್ಯಯನ ಮಾಡಿದವರಿಗೆ ದೇಶ-ವಿದೇಶದಲ್ಲೂ ಅಪಾರ ಬೇಡಿಕೆಯಿದೆ. ಬರವಣಿಗೆಯಲ್ಲೂ, ಸಂವಹನ ಕಲೆಯಲ್ಲೂ, ಸಂಶೋಧನೆ ಮತ್ತು ಸಾಹಿತ್ಯ ಅಧ್ಯಯನದಲ್ಲೂ ಅಪಾರ ಬುದ್ದಿಮತ್ತೆಯನ್ನು ಹೊಂದಲು ಈ ಪದವಿಯಲ್ಲಿ ಅವಕಾಶವಿದೆ. ಯಾರದೋ ಕೈಕೆಳಗೆ ಕೆಲಸ ಮಾಡಲು ಇಚ್ಛೆಯಿಲ್ಲದಿದ್ದಲ್ಲಿ ಸ್ವಂತ ಟ್ಯೂಶನ್ ಸೆಂಟರ್, ತರಬೇತಿ ಕೇಂದ್ರವನ್ನೂ ತೆರೆಯಬಹುದು. ಇತ್ತೀಚೆಗಂತೂ ಓನ್ಲೈನ್ ಮಾದರಿ ಶಿಕ್ಷಣದಿಂದ ಅನೇಕ ಟ್ಯೂಟರ್ ಗಳ ಅಗತ್ಯವೂ ಇದ್ದು ಈ ಪದವಿ ತಗೊಂಡವರಿಗೆ ವರವಾಗಿ ಬಿಟ್ಟಿದೆ.

ಉದ್ಯೋಗಾವಕಾಶಗಳು:

ಪ್ರಖ್ಯಾತ ಕಂಪೆನಿ ಕೆಪಿಎಂಜಿ ಯ ‘ಇಂಡಿಯಾ’ಸ್ ಮೀಡಿಯಾಆಂಡ್ ಎಂಟರ್ ಟೈನ್ಮೆಂಟ್ ರಿಪೋರ್ಟ್ 2019’ ರ ವರದಿಯ ಪ್ರಕಾರ, 2024 ರ ವೇಳೆಗೆ, ಕೆಲವೊಂದು ಉದ್ಯಮಗಳಾದ ಡಿಜಿಟಲ್ ಅಡ್ವರ್ಟೈಸಿಂಗ್, ಗೇಮಿಂಗ್, ಅನಿಮೇಶನ್, ಮೀಡಿಯಾ, ಪ್ರಿಂಟ್ ಮತ್ತು ಫಿಲ್ಮ್ಸ್ ಇವುಗಳಲ್ಲಿ ಕಂಟೆಂಟ್ ರೈಟರ್ಸ್, ಕಾಪಿರೈಟರ್ಸ್, ಡಿಜಿಟಲ್ ಮಾರ್ಕೆಟರ್ಸ್ ಹೀಗೆ ಹತ್ತು ಹಲವು ಹುದ್ದೆಗಳಿಗೆ ಭಾರೀ ಬೇಡಿಕೆ ಬರುತ್ತದೆ. ಎಂ.ಎ. ಇನ್ ಇಂಗ್ಲೀಷ್ ಲಿಟರೇಚರ್ ಈ ಎಲ್ಲಾ ಕೌಶಲಗಳನ್ನು ಮೊದಲೇ ಕಲಿಸಿಕೊಡುತ್ತದೆ. ಒಂದು ಜಾಗತಿಕ ಮತ್ತು ಸ್ಪರ್ಧಾತ್ಮಕ ಉದ್ಯಮಕ್ಕೆ ಹೇಗೆ ಬೇಕು ಹಾಗೆ ವಿದ್ಯಾರ್ಥಿಗಳನ್ನು ತಯಾರಿ ಮಾಡುವುದರಿಂದ ಈ ಪದವಿ ಅನುಕೂಲಕರವಾಗಿದೆ.

ಇಂಗ್ಲೀಷ್ ಭಾಷೆಯಲ್ಲಿ ಉನ್ನತ ವ್ಯಾಸಂಗ ಮಾಡಿದ ಬಳಿಕ ಅನೇಕ ಉದ್ಯೋಗಾವಕಾಶಗಳು ತನ್ನಿಂದ ತಾನಾಗಿಯೇ ತೆರೆದುಕೊಳ್ಳುತ್ತವೆ. ತಾವು ಹುಡುಕಿಕೊಂಡು ಹೋಗುವ ಬದಲು ಉದ್ಯೋಗವೇ ತಮ್ಮನ್ನರಸಿ ಬರುತ್ತದೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ:

ವರದಿಗಾರನಾಗಿ: ನಿಯತಕಾಲಿಕಗಳಲ್ಲಿ, ಪತ್ರಿಕೆಗಳಲ್ಲಿ, ಮೀಡಿಯಾ ಏಜೆನ್ಸಿಗಳಲ್ಲಿ, ದೂರದರ್ಶನದ ಹಲವು ವಾಹಿನಿಗಳಲ್ಲಿ, ವಾರ್ತಾ ಇಲಾಖೆಗಳಲ್ಲಿ ಹೀಗೆ ಹಲವಾರು ಕಡೆ ಇಂಗ್ಲೀಷ್ ಭಾಷೆಯಲ್ಲಿ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ಈ ಪದವಿಗಿದೆ.  ಓನ್ಲೈನ್ ನ್ಯೂಸ್ ಪೋರ್ಟಲ್ ಗಳು ಆಕರ್ಷಕವಾಗಿದ್ದು ಆ ಕಡೆ ಎಲ್ಲರನ್ನೂ ಸೆಳೆಯುತ್ತಿರುವುದೂ ಇದೆ. ಇಂಗ್ಲೀಷ್ ಪತ್ರಕರ್ತರಿಗೆ ವಿಶ್ವದಾದ್ಯಂತ ಬೇಡಿಕೆಯಿದೆ, ಕಲೆ, ವಾಣಿಜ್ಯ, ಕ್ರೀಡಾ ಕ್ಷೇತ್ರದಲ್ಲಿಯೂ ಇಂಗ್ಲೀಷ್ ವರದಿ ಬರೆಯುವವರ ಅಗತ್ಯತೆಯಿದೆ.

ಕಾಪಿರೈಟರ್: ಪತ್ರಿಕಾ ಪ್ರಕಟಣೆಗಳು, ಜಾಹೀರಾತು, ಟಿವಿ ಕಮರ್ಶಿಯಲ್ಸ್, ಬ್ಯಾನರ್ ಗಳು, ಫಲಕಗಳು, ಮೈಲ್ ಗಳು ಹೀಗೆ ಎಲ್ಲಾ ಕಡೆಗಳಲ್ಲಿ ವಿಷಯವನ್ನು ಬರೆಯುವವರಿಗೆ ಬಹಳ ಬೇಡಿಕೆಯಿದೆ. ಓನ್ಲೈನ್ ಜಾಹೀರಾತಿಗೂ ವಿಷಯ ಬರೆದು್ಕೊಡುವವರಿಗೆ ಉದ್ಯೋಗಾವಕಾಶಗಳಿವೆ.

ಕಂಟೆಂಟ್ ರೈಟರ್: ಜಗತ್ತು ಎಷ್ಟು ವೇಗವಾಗಿ ಬದಲಾಗುತ್ತಿದೆಯೋ ಅಷ್ಟೆ ವೇಗವಾಗಿ ಕೆಲಸದ ರೀತಿ ಕೂಡಾ ಬದಲಾಗುತ್ತಿದೆ. ವೆಬ್ಸೈಟ್ಸ್, ಬ್ಲಾಗ್ ಗಳು, ಮತ್ತು ಡಿಜಿಟಲ್ ಮಾರ್ಕೆಟಿಂಗ್ ಈವಾಗ ಸರ್ವೇ ಸಾಮಾನ್ಯವಾಗಿದೆ. ಬೇರೆ ಬೇರೆ ಕಂಪನಿಗಳಲ್ಲಿ ಈ ಕೆಲಸಕ್ಕಾಗಿ ಕಂಟೆಂಟ್ ರೈಟರ್ ಗಳನ್ನು ನೇಮಕ ಮಾಡುತ್ತಾರೆ.

ಪ್ರಕಾಶನಾಲಯಗಳಲ್ಲಿ ಬರಹಗಾರ: ಪತ್ರಿಕಾಲಯಗಳಲ್ಲಿ, ಪ್ರಕಾಶನಾಲಯಗಳಲ್ಲಿ, ಪುಸ್ತಕ, ನಿಯತಕಾಲಿಕಗಳು, ಮತ್ತು ಮ್ಯಾಗಜೀನ್ ಗಳಿಗೆ ಬರಹಗಾರರಾಗಿ ಕೆಲಸ ಮಾಡುವವರಿಗೆ ಅನೇಕ ಹುದ್ದೆಗಳಿರುತ್ತವೆ. ಉಪಸಂಪಾದಕರಾಗಿ, ಪ್ರೂಫ್ ರೀಡರ್ ಆಗಿಯೂ ಕೆಲಸ ಮಾಡಬಹುದು.

ಸಂವಹನ ಕಾರ್ಯನಿರ್ವಾಹಕರಾಗಿ: ಬಹುತೇಕ ಎಲ್ಲಾ ಕಂಪೆನಿಗಳಲ್ಲಿ ಕಮ್ಯುನಿಕೇಶನ್ ಎಕ್ಸಿಕ್ಯೂಟಿವ್ ಗಳನ್ನು ನೇಮಿಸುತ್ತಾರೆ. ಪ್ರೆಸ್ ಕಾನ್ಫರೆನ್ಸ್ ಕರೆಯುವುದು, ಪ್ರೆಸ್ ರಿಲೀಸ್ ಬರೆಯುವುದು, ಆಂತರಿಕ ಸಂವಹನವನ್ನು ಬಲಗೊಳಿಸುವುದು, ತಮ್ಮ ಕಂಪೆನಿಯ ಕುರಿತು ಬಾಹ್ಯ ಜಗತ್ತಿಗೆ ಲೇಖನಗಳ ಮೂಲಕ ತಿಳಿಸುವುದು ಹೀಗೆ ಇವರು ಕೆಲಸ ಮಾಡಬೇಕಾಗುತ್ತದೆ.

ಅನುವಾದಕರಾಗಿ: ಗೂಗಲ್ ನಿಂದ ಅಥವಾ ಬೇರೆ ಬೇರೆ ಆಪ್ ಮಾದರಿಯಿಂದ ಅದೆಷ್ಟೇ ಸಹಾಯ ಪಡೆದುಕೊಂಡರೂ ಅನುವಾದಕರ ಬೇಡಿಕೆ ಹೆಚ್ಚುತ್ತಲೇಯಿದೆ. ಆಯಾಯ ಬಾಷೆಗಳಿಂದ ಇಂಗ್ಲೀಷ್ ಭಾಷೆಗೆ ಹಾಗೇ ಇಂಗ್ಲೀಷ್ ಭಾಷೆಯಿಂದ ಇತರ ಭಾಷೆಗೆ ಅನುವಾದ ಮಾಡುವವರಿಗೆ ಭಾರೀ ಅವಕಾಶಗಳಿವೆ. ಇತ್ತೀಚೆಗೆ ಇ-ಲರ್ನಿಂಗ್ ಕಂಪೆನಿಗಳೂ ಈ ರೀತಿಯ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿವೆ.

ಶಿಕ್ಷಕರಾಗಿ/ಉಪನ್ಯಾಸಕರಾಗಿ: ಇಂಗ್ಲೀಷ್ ಭಾಷೆಯಲ್ಲಿ ಎಂ.ಎ. ಮಾಡಿ ಬಿ.ಎಡ್. ಮಾಡಿದವರಿಗೆ ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಬಹುದು. ಹಾಗೆಯೇ ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಕೆಲಸ ಮಾಡಬಹುದು. ಸ್ಲೆಟ್, ನೆಟ್, ಪಿ.ಹೆಚ್.ಡಿ. ವಿದ್ಯಾರ್ಹತೆಗಳು ಉತ್ತಮ ಸಂಬಳದ ಹುದ್ದೆಯನ್ನು ಪಡೆಯುವಲ್ಲಿ ಸಹಕಾರಿಯಾಗಿದೆ.

ಗ್ರಾಹಕ ಸೇವಾ ನಿರ್ವಾಹಕ: ಕಂಪೆನಿಗಳ  ಗ್ರಾಹಕ ಸೇವಾ ಕೇಂದ್ರಗಳಲ್ಲಿ ಸೊಶಿಯಲ್ ಮೀಡಿಯಾ ಚಾಟ್, ಇಮೈಲ್ಸ್, ವೆಬ್ ಚಾಟ್ ಮುಂತಾದ ರೀತಿಗಳಲ್ಲಿ ಸಂಪರ್ಕದ ಅಗತ್ಯತೆಯಿರುತ್ತದೆ. ಹಾಗಾಗಿ ನುರಿತ, ಇಂಗ್ಲೀಷ್ ಭಾಷೆಯಲ್ಲಿ ಹಿಡಿತವಿರುವ ವಿದ್ಯಾರ್ಥಿಗಳಿಗೆ ಮೊದಲ ಅವಕಾಶ ನೀಡಲಾಗುತ್ತದೆ.

ಸ್ವತಂತ್ರ ಬರಹಗಾರರಾಗಿ: ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಲಿಚ್ಚಿಸದ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ. ಬ್ಲಾಗ್ ಗಳಿಗೆ, ವೆಬ್ ಸೈಟ್ ಗಳಿಗೆ, ಇ-ಲರ್ನಿಂಗ್ ಪೋರ್ಟಲ್ಸ್ ಗಳಿಗೆ, ಡಿಜಿಟಲ್ ಮಾರ್ಕೆಟಿಂಗ್ ಹೀಗೆ ಹಲವು ಕಡೆ ಸ್ವತಂತ್ರ ಬರಹಗಾರರಾಗಿ ತನ್ನದೇ ರೀತಿಯಲ್ಲಿ ಕೆಲಸ ಮಾಡುವ ಅವಕಾಶಗಳಿವೆ. ಅದೆಷ್ಟೋ ಬಾರಿ ಅದು ಆದಾಯದ ಮೂಲವೂ ಕೂಡ ಆಗಿರುತ್ತದೆ.

ಹವ್ಯಾಸಿಗಳಾಗಿ: ಓದುವುದನ್ನೇ ಹವ್ಯಾಸ ಮಾಡಿಕೊಂಡವರಿಗೆ ಇಂಗ್ಲೀಷ್ ಭಾಷೆ ತುಂಬಾ ಆಳವಾದ ಅಧ್ಯಯನ ಮಾಡಲು ಅವಕಾಶ ಮಾಡಿಕೊಡುತ್ತದೆ. ವಿಶ್ವದಾದ್ಯಂತ ತಿರುಗಿ, ಗ್ರಂಥಾಲಯಗಳಿಗೆ ಭೇಟಿ ನೀಡಿ ಓದಬಹುದು, ಕಲಿತ ವಿದ್ಯೆಯನ್ನು ಪಸರಿಸಬಹುದು. ಭಾಷಣ ಮಾಡುವ ಹವ್ಯಾಸವಿದ್ದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಿ ತನ್ನದೇ ಛಾಪು ಸಮಾಜದಲ್ಲಿ ಮೂಡುವಂತೆ ಮಾಡಬಹುದು. ಒಳ್ಳೆಯ ಬರಹಗಾರರಾಗಿ, ಕಥೆ, ಕಾದಂಬರಿ, ಲೇಖನಗಳನ್ನು ಬರೆಯಬಹುದು ಮಾತ್ರವಲ್ಲದೆ ಎಲ್ಲಾ ರೀತಿಯ ಬುದ್ದಿಮತ್ತೆಯನ್ನು ಬಳಸಿ ವಿದ್ವಾಂಸನಾಗಿಯೂ ಬೆಳೆಯಬಹುದು. ನಾಟಕ ಮತ್ತು ಸಿನೆಮಾ ನಟನಾಗಿಯೂ ತನ್ನನ್ನು ತಾನು ಬೆಳೆಸಿಕೊಳ್ಳಬಹುದು.

ಕೊನೆಗೊಂದು ಕಿವಿಮಾತು:

ನೋಡಿದಿರಲ್ಲಾ, ಒಬ್ಬ ಬರಹಗಾರನಾಗಿ, ಮಾತುಗಾರನಾಗಿ, ಚತುರನಾಗಿ ಬೆಳೆಯಲು ಇಂಗ್ಲೀಷ್ ಭಾಷೆಯಲ್ಲಿಯಲ್ಲಿನ ಉನ್ನತ ವ್ಯಾಸಂಗ ಎಷ್ಟು ಸಹಕಾರಿಯೆಂದು. ಇತ್ತೀಚಿನ ತಾಂತ್ರಿಕ ಬೆಳವಣಿಗೆಯಿಂದ ಮತ್ತು ಕ್ಷಿಪ್ರ ಪ್ರಗತಿ ಕಾಣುತ್ತಿರುವ ಭಾರತದಲ್ಲಿ ಅನೇಕ ಉದ್ಯಮಗಳು ಈ ಪದವಿಯನ್ನು ಕೈಬೀಸಿ ಕರೆಯುತ್ತಿವೆ. ನಿಮ್ಮಲ್ಲಿ ಯಾರಾದರೂ ಇಂಗ್ಲೀಷ್ ಭಾಷೆಯಲ್ಲಿ ಬಿ.ಎ. ಅಥವಾ ಎಂ.ಎ. ಮಾಡಬೇಕೆಂದಿದ್ದಲ್ಲಿ ಅವರಿಗೆ ಖಂಡಿತಾ ಪ್ರೋತ್ಸಾಯಿಸಿ. ಉನ್ನತ ವ್ಯಾಸಂಗಕ್ಕೂ ಅವಕಾಶ ಮಾಡಿಕೊಡಿ ಯಾಕೆಂದರೆ ಅವರು ಈ ಪದವಿಯಲ್ಲಿ ಬೆಳೆದು ಮುಂದಕ್ಕೆ ಈ ದೇಶಕ್ಕೆ ಮಾದರಿಯಾಗುವುದು ಖಚಿತ. ಯೋಚಿಸಿ ನೋಡಿ, ನಾನು ಹೇಳಿದ್ದು ನಿಮಗೂ ನಿಜ ಅನ್ನಿಸಬಹುದು. ಮಗದೊಮ್ಮೆ ಸಿಗೋಣ.. ಹೊಸ ಡಿಗ್ರಿ.. ಹೊಸ ನೌಕ್ರಿಯೊಂದಿಗೆ….

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
197
Ashok K. G.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು