News Karnataka Kannada
Saturday, May 04 2024
ವಿಶೇಷ

75ನೇ ಸ್ವಾತಂತ್ರ್ಯೋತ್ಸವದ ಮೇಲೆ ಕೊರೊನಾ ಕರಿನೆರಳು!

Flag India 09082021
Photo Credit :

ನಾವೀಗ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಆದರೆ ಆ ಸಂಭ್ರಮವನ್ನು ಎಲ್ಲರೂ ಒಂದೆಡೆ ಕಲೆತು ಖುಷಿಯಾಗಿ ಆಚರಿಸಲು ಕೊರೊನಾ ಅಡ್ಡಿಯಾಗಿದೆ. ಹೀಗಾಗಿ ಸರಳ ಆಚರಣೆ ನಡೆಯುತ್ತಿದೆ. ಕಳೆದೊಂದು ವರ್ಷದಿಂದ ಇಡೀ ದೇಶ ಕೊರೊನಾದಿಂದ ನಲುಗಿದೆ. ಜನ ಸಾವು, ನೋವು, ಆತಂಕ ಹೀಗೆ ಬರೀ ತೊಂದರೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಒಂದೆಡೆ ಕೊರೊನಾ ಮತ್ತೊಂದೆಡೆ ಪ್ರವಾಹ ಇದೆಲ್ಲದರ ನಡುವೆ ಶತ್ರುರಾಷ್ಟ್ರಗಳ ಕೆಂಗಣ್ಣು, ಭಯೋತ್ಪಾದಕರ ದಾಳಿ, ನಿರುದ್ಯೋಗ ಹೀಗೆ ನೂರಾರು ಸಮಸ್ಯೆಗಳು ದೇಶವನ್ನು ಇನ್ನಿಲ್ಲದಂತೆ ಕಿತ್ತು ತಿನ್ನುತ್ತಿದ್ದರೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ದೇಶವನ್ನು ಆಳಬೇಕಾದವರು ಸ್ವಹಿತಾಸಕ್ತಿಗೆ ಒತ್ತುಕೊಡುತ್ತಾ ದೇಶ ಮತ್ತು ಜನರನ್ನು ಮರೆಯುತ್ತಿದ್ದಾರೆ. ಪರಿಣಾಮ ಜನ ಸಮಸ್ಯೆಯಲ್ಲಿಯೇ ಕಾಲ ಕಳೆಯುವಂತಾಗಿದೆ.
ಇವತ್ತಿನ ರಾಜಕೀಯ ಹಗ್ಗ ಜಗ್ಗಾಟದಲ್ಲಿ ಭಾರತದ ಶ್ರೀಸಾಮಾನ್ಯ ಬಡವನಾಗುತ್ತಿದ್ದಾನೆ. ಅಧಿಕಾರಕ್ಕೆ ಬಂದ ಮತ್ತು ಅಧಿಕಾರ ಪಡೆಯಲು ಹವಣಿಸುತ್ತಿರುವ ನಾಯಕರು ದೇಶದ ಬಗ್ಗೆ ಚಿಂತಿಸುತ್ತಿದ್ದಾರಾ? ಚಳವಳಿ, ಸೆರೆವಾಸ, ಪ್ರಾಣ ತ್ಯಾಗ ಮಾಡಿ ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರಾ? ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಅನಿವಾರ್ಯತೆಗಳು ನಮ್ಮ ಮುಂದಿದೆ.

ಅವತ್ತು ಸ್ವಾತಂತ್ರ್ಯ ದೊರೆತ ದಿನ ಭಾರತದ ಜನತೆಯನ್ನುದ್ದೇಶಿಸಿ ಮಾತನಾಡಿದ ಜವಾಹರಲಾಲ್ ನೆಹರು “ಮಧ್ಯರಾತ್ರಿಯ ಗಂಟೆಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚೆತ್ತುಕೊಳ್ಳುತ್ತಿದೆ. ಇತಿಹಾಸದಲ್ಲಿ ಬರುವ ಇಂತಹ ಅಪರೂಪದ ಈ ಗಳಿಗೆಯಲ್ಲಿ ಹಳತಿನಿಂದ ಹೊಸತನಕ್ಕೆ ಕಾಲಿಡುತ್ತಿದ್ದೇವೆ. ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ. ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸಿಕೊಳ್ಳುತ್ತಿದ್ದೇವೆ. ಮತ್ತು ಭಾರತವು ಮತ್ತೆ ತನ್ನನ್ನು ತಾನು ಕಂಡುಕೊಳ್ಳುತ್ತಿದೆ.” ಎಂದಿದ್ದರು. ಅದು ಅವರ ಬರೀ ಮಾತು ಆಗಿರಲಿಲ್ಲ ಮುಂದಿನ ಕನಸಾಗಿತ್ತು. ಆದರೆ ಅದು ನನಸಾಗಿದೆಯಾ ಎಂಬ ಪ್ರಶ್ನೆಯನ್ನು ನಾವೀಗ ಕೇಳಿಕೊಳ್ಳಬೇಕಿದೆ.
ಭಾರತ ಸ್ವಾತಂತ್ರ್ಯದ ಇತಿಹಾಸವನ್ನು ಮೆಲುಕು ಹಾಕುತ್ತಾ ಹೋದರೆ ಅದು ಒಂದೆರಡು ದಿನದ ಹೋರಾಟವಲ್ಲ. ಸುಮಾರು ಎಂಟೊಂಬತ್ತು ದಶಕಗಳ ಕಾಲ ನಡೆದ ನಿರಂತರ ಹೋರಾಟ, ಈ ಹೋರಾಟದಲ್ಲಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಬ್ರಿಟೀಷರ ಬೂಟಿನೇಟಿಗೆ, ಬಂದೂಕಿನ ತುಫಾಕಿಗೆ ಬಲಿಯಾಗಿದ್ದಾರೆ. 1857ರಿಂದ 1947ರವರೆಗಿನ ಹೋರಾಟವನ್ನು ಗಮನಿಸಿದರೆ ಸ್ವಾತಂತ್ರ್ಯಕ್ಕಾಗಿ ಭಾರತದಲ್ಲಿ ನಡೆದ ದಂಗೆಗಳು, ಹೋರಾಟಗಳು ನಿಜಕ್ಕೂ ರೋಚಕ. ಅಷ್ಟೇ ಅಲ್ಲ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆದದ್ದು ಮತ್ತೊಂದು ವಿಶೇಷ ಸಾಧನೆ. ಅದು ಏನೇ ಇರಲಿ ಎಲ್ಲವೂ ಇತಿಹಾಸದ ದಾಖಲಾಗಿದೆ.

ಇವತ್ತು ಸ್ವಾತಂತ್ರ್ಯ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೂ ಎಲ್ಲವೂ ಅಭಿವೃದ್ಧಿ ದಿಕ್ಕಿನೆಡೆಗೆ ಸಾಗಿದೆಯಾ? ಸಾಗಿಲ್ಲವಾದರೆ ಅದಕ್ಕೆ ಕಾರಣಗಳೇನು ಎಂಬುದರ ಬಗ್ಗೆಯೂ ಚಿಂತೆ ಮಾಡಬೇಕಾದ ಕಾಲ ಬಂದಿದೆ. ಯುವಕರಿಗೆ ಉದ್ಯೋಗ… ಬೆಳೆಬೆಳೆದ ರೈತನಿಗೆ ಉತ್ತಮ ದರ… ಶ್ರಮಜೀವಿಗಳಿಗೆ ತಕ್ಕಂತೆ ಫಲ… ಹೆಣ್ಣು ಮಕ್ಕಳು ನಿರ್ಭಯವಾಗಿ ಬದುಕಬೇಕಾದ ವಾತಾವರಣ.. ಅಪರಾಧ ಕೃತ್ಯಗಳಿಗೆ ಕಡಿವಾಣ… ಭ್ರಷ್ಟಚಾರ ನಿಗ್ರಹ.. ಹೀಗೆ ಒಂದೇ ಎರಡೇ ಆಗಬೇಕಾಗಿದ್ದು ಬಹಳಷ್ಟಿದೆ. ಇದೆಲ್ಲವೂ ಸರಿಹೋದ ದಿನ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತದೆ.  ಇಲ್ಲದೆ ಹೋದರೆ ಆಚರಣೆಗಷ್ಟೆ ಸೀಮಿತವಾಗುತ್ತದೆ. ಹಾಗಾಗದಿರಲಿ ಎಂಬುದೇ ನಮ್ಮ ಆಶಯ..

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು