News Karnataka Kannada
Monday, April 29 2024
ವಿಶೇಷ

ಮೈಸೂರು: ನುಗು ವನ್ಯಧಾಮದಲ್ಲೀಗ ಹಸಿರು ರಂಗು

Untitled 1
Photo Credit : News Kannada

ಮೈಸೂರು: ಈ ಬಾರಿ ಮುಂಗಾರು ಮುನ್ನವೇ ಉತ್ತಮವಾಗಿ ಮಳೆ ಸುರಿದ ಪರಿಣಾಮ ಎಲ್ಲೆಡೆ ಹಸಿರು ಕಂಗೊಳಿಸುತ್ತಿದೆ. ಅದರಲ್ಲೂ ಅರಣ್ಯಗಳು ಹಸಿರು ಹಚ್ಚಡದಿಂದ ನಳನಳಿಸುತ್ತಿದ್ದು ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದೇ ಒಂಥರಾ ಮಜಾ ಎನಿಸುತ್ತಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ಸಿಕ್ಕಿ ಅರಣ್ಯಗಳು ಒಣಗಿ ಬಿಕೋ ಎನ್ನುತ್ತಿದ್ದವು. ಆದರೆ ಈ ಬಾರಿ ಹಾಗೆಯಾಗಲಿಲ್ಲ. ಬೇಸಿಗೆಯಲ್ಲಿ ಆಗೊಮ್ಮೆ ಈಗೊಮ್ಮೆ ಸುರಿದ ಮಳೆ ಅರಣ್ಯಗಳಿಗೆ ಹಸಿರಿನ ಕಳೆ ತುಂಬಿತ್ತು. ಅದರಲ್ಲೂ ಕಳೆದ ಒಂದುವಾರದಿಂದ ಸುರಿಯುತ್ತಿರುವ ಮಳೆ ಅರಣ್ಯಗಳಿಗೆ ಹೊಸ ಜೀವ ನೀಡಿದೆ.

ಈಗಾಗಲೇ ಹಲವು ಅರಣ್ಯಗಳು ತನ್ನದೇ ಸೌಂದರ್ಯ ಮತ್ತು ಖ್ಯಾತಿಯಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಾಮಾನ್ಯವಾಗಿ ಮೈಸೂರಿನತ್ತ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆಯಾದರೂ ಕೆಲವೇ ಕೆಲವು ಪ್ರವಾಸಿ ತಾಣಗಳನ್ನು ನೋಡಿಕೊಂಡು ಹಿಂತಿರುಗುತ್ತಾರೆ. ಅದರಲ್ಲೂ ಮೈಸೂರಿಗೆ ಆಗಮಿಸಿದ ಪ್ರವಾಸಿಗರು ಹೆಚ್.ಡಿ.ಕೋಟೆಯತ್ತ ತೆರಳಿದವರು ನಾಗರಹೊಳೆ ಅಭಯಾರಣ್ಯವನ್ನು ನೋಡುತ್ತಾರೆ ವಿನಃ ಸಮೀಪದ ನುಗು ವನ್ಯಧಾಮದತ್ತ ಹೆಜ್ಜೆ ಹಾಕುವುದಿಲ್ಲ.

ಆದರೆ ನುಗುವನ್ಯಧಾಮವು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹೆಡಿಯಾಲ ಉಪವಿಭಾಗಕ್ಕೆ ಸೇರಿದ್ದು, ನುಗು ಜಲಾಶಯದ ಹಿನ್ನೀರು  ಮತ್ತು ಅರಣ್ಯದ ನಡುವಿನ ವನ್ಯಪ್ರಾಣಿಗಳ ಸ್ವಚ್ಛಂದ ವಿಹಾರ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತದೆ. ಹೀಗಾಗಿ ಇದನ್ನು ನೋಡಿಕೊಂಡು ಪ್ರಯತ್ನ ಮಾಡಬಹುದಾಗಿದೆ.

ಈ ವನ್ಯಧಾಮವು 30.32 ಚದರ ಕಿಲೋ ಮೀಟರ್ ಇದ್ದು, ಇಲ್ಲಿ ಎರಡು ಕರಿ ಚಿರತೆಗಳಿದ್ದು ಅವು ಪ್ರಮುಖ ಆಕರ್ಷಣೆಗಳಾಗಿವೆ. ಈಗಾಗಲೇ ಹಲವು ಬಾರಿ ಜನರಿಗೆ ಕಾಣಿಸಿಕೊಂಡು ಮೈರೋಮಾಂಚನ ಗೊಳಿಸಿವೆ. ಇಷ್ಟೇ ಅಲ್ಲದೆ ಸದಾ ಅಲೆಯಾಡುವ ಹಿನ್ನೀರು ಇದನ್ನು ಕುಡಿಯಲು ಬರುವ ಕಾಡಾನೆ, ಹುಲಿ, ಚಿರತೆ, ಕರಡಿ. ಕಾಡೆಮ್ಮೆ, ಕಾಡುಹಂದಿ, ಜಿಂಕೆ, ಸೀಳುನಾಯಿ, ನೀರುನಾಯಿ, ವಿವಿಧ ಬಗೆಯ ಪಕ್ಷಿಗಳು  ಆಕರ್ಷಣೆಯಾಗಿವೆ.

ಹಾಗೆನೋಡಿದರೆ ನುಗು ಮತ್ತು ಗುಂಡ್ರೆಯಲ್ಲಿ ಈ ಹಿಂದೆಯೇ ಸಫಾರಿಯಿತ್ತು. ಈ ಪ್ರದೇಶಗಳು ಮೈಸೂರು ಜಿಲ್ಲೆಗೆ ಸೇರಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. 1994ರ ತನಕವೂ ಇಲ್ಲಿ ಸಫಾರಿ ನಡೆಯುತ್ತಿತ್ತಾದರೂ ಆ ನಂತರ ಕಾರಣಾಂತರಿದಿಂದ ಅರಣ್ಯ ಇಲಾಖೆ ಈ ಎರಡು ಸಫಾರಿ ವಲಯವನ್ನು ಹಿಂಪಡೆದಿದ್ದು ಇತಿಹಾಸ. ಕಳೆದ ವರ್ಷವಷ್ಟೆ ನುಗು ವನ್ಯಧಾಮದಲ್ಲಿ ಸಫಾರಿ ಆರಂಭಿಸುವ ಚಿಂತನೆ ಮಾಡಲಾಗಿತ್ತು. ಆದರೆ ವಿರೋಧಗಳು ವ್ಯಕ್ತವಾಗಿದ್ದರಿಂದ ಆರಂಭಿಸಲಿಲ್ಲ.

ನುಗು ವನ್ಯಧಾಮವು ನಾಗರಹೊಳೆ ಮತ್ತು ಬಂಡೀಪುರ ಅರಣ್ಯಕ್ಕೆ ಹೊಂದಿ ಕೊಂಡಂತಿರುವುದರಿಂದ ಸುತ್ತಮುತ್ತ ಪ್ರವಾಸಿ ತಾಣಗಳಾದ ಚಿಕ್ಕದೇವಮ್ಮನ ಬೆಟ್ಟ, ಕಬಿನಿ ಜಲಾಶಯವಿದೆ. ಹೀಗಾಗಿ ಪ್ರವಾಸಿಗರು ಇತ್ತ ತೆರಳಿದರೆ ನಿಸರ್ಗದ ಚೆಲುವನ್ನು ಮನದಣಿಯೇ ಸವಿಯಲು ಸಾಧ್ಯವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು