News Karnataka Kannada
Thursday, May 02 2024
ವಿಶೇಷ

ಕಲೆಕ್ಷನ್ ಆಫ್ 100 ಬರ್ತ್ ಡೇಟ್ ನೋಟ್ಸ್

New Project 2021 09 16t210018.100
Photo Credit :

ಚಮತ್ಕಾರದ ನೋಟುಗಳ ಸಂಗ್ರಹದಲ್ಲೇ ಹೆಸರು ಮಾಡಿರುವ ಯಾಸೀರ್ ಕಲ್ಲಡ್ಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ  ಸಂಭ್ರಮಕ್ಕೆ ವಿಶೇಷ ಸಂಗ್ರಹದ ಮೆರುಗು ತಂದಿದ್ದಾರೆ.

17/09/1950 ಪ್ರಧಾನಿ ನರೇಂದ್ರ ಮೋದಿಯವರ ಜನ್ಮ‌ದಿನವಾಗಿದ್ದು, ಈ ಸಂಖ್ಯೆಯ ನೋಟಿನ ಜೊತೆಗೆ “ಕಲೆಕ್ಷನ್ ಆಫ್ 100 ಬರ್ತ್ ಡೇಟ್ ನೋಟ್ಸ್” ಎನ್ನುವ  ಡೈರಿಯನ್ನು  ಯಾಸಿರ್ ಸಿದ್ಧಪಡಿಸಿದ್ದು,  ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದು ಇದೀಗ  ಗಮನಸೆಳೆಯುತ್ತಿದೆ.

 

ಡೈರಿಯಲ್ಲೇನಿದೆ..?

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ‌ ಚಲಾವಣೆಗೆ ಬಂದಿರುವ ಇಪ್ಪತ್ತು ರೂಪಾಯಿಯ ಹೊಸ‌ನೋಟಿನಲ್ಲೇ ಪ್ರಧಾನಿ ಮೋದಿಯವರ ಜನ್ಮದಿನಾಂಕದ ಸಂಖ್ಯೆ ಯನ್ನು ಹುಡುಕಿ ಸಂಗ್ರಹಿಸಿರುವ ಯಾಸೀರ್ , 100 ಹುಟ್ಟುಹಬ್ಬದ ಪರಿಕಲ್ಪನೆಯನ್ನು ಡೈರಿಯಲ್ಲಿ‌ ನೀಡಿದ್ದಾರೆ. ಪ್ರತಿ ಪುಟದಲ್ಲಿ‌ 5 ನೋಟಿನಂತೆ ಇಪ್ಪತ್ತು ಪುಟಗಳ ಈ ಡೈರಿಯಲ್ಲಿ ಮೋದಿ ಜೀವನದ ಪ್ರಮುಖ ಘಟ್ಟಗಳನ್ನು ಆಯಾ ವರ್ಷಕ್ಕೆ‌ ಸಂಬಂಧಿಸಿದ ಪುಟಗಳಲ್ಲಿ ದಾಖಲಿಸಲಾಗಿದೆ. ನರೇಂದ್ರ ಮೋದಿ ಚುನಾವಣೆಯಲ್ಲಿ ಗೆದ್ದಿರುವುದು, ಮೋದಿ ಹವಾ , ಪ್ರಮಾಣ ವಚನ ಸಂಬಂಧಿಸಿದ ಪತ್ರಿಕೆ ಸಹಿತ ಇತರ ಹಲವು ದಾಖಲೆಗಳನ್ನೂ ಇವರು ಸಂಗ್ರಹಿಸಿದ್ದಾರೆ.

ಪ್ರಧಾನಿ ಎಂಬ ಗೌರವ- ಅಭಿಮಾನದಿಂದ ನಾನು ಈ ವಿಶೇಷ ಸಂಗ್ರಹ ನಡೆಸಿದ್ದೇನೆ, ಇಲ್ಲಿ‌ ರಾಜಕೀಯದ ಯಾವುದೇ ಹಿತಾಸಕ್ತಿ ಇಲ್ಲ. ಸಂಗ್ರಹಗಳು ಮುಂದಿನ ತಲೆಮಾರುಗಳಿಗೂ ಜ್ಞಾನವನ್ನು ನೀಡಬೇಕೆನ್ನುವುದು ನನ್ನ‌ ಪ್ರತೀ ಸಂಗ್ರಹದ ಉದ್ದೇಶ ಎನ್ನುತ್ತಾರೆ ಯಾಸಿರ್.

ಅಪರೂಪದ ಸಂಗ್ರಾಹಕ

ಅಪರೂಪದ ಚಮತ್ಕಾರಿ ನೋಟುಗಳ ಸಂಗ್ರಹದ ಮೂಲಕ  ರಾಜ್ಯದ ನೋಟು, ನಾಣ್ಯ ಸಹಿತ ಕರೆನ್ಸಿ ಸಂಗ್ರಾಹಕರ ಪೈಕಿ ಯಾಸೀರ್ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ.

ದೀವಟಿಗೆಯಿಂದ ಹಿಡಿದು, ಗತಕಾಲದ ಪಾತ್ರೆ, ದಿನಬಳಕೆಯ ವಸ್ತುಗಳು, ಬೆಂಕಿಪೊಟ್ಟಣ, ಸಾಫ್ಟ್ ಡ್ರಿಂಕ್ಸ್ ಬಾಟಲಿ, ಪತ್ರಿಕೆಗಳು,  ಸ್ಟ್ಯಾಂಪುಗಳು ಹೀಗೆ ಅಪರೂಪದ ವಸ್ತುಗಳ ಸಂಗ್ರಹವೇ ಕಲ್ಲಡ್ಕ ಮ್ಯೂಸಿಯಂ ವಿಶೇಷ.

ಲೋಕಲ್ ಸಾಫ್ಟ್ ಡ್ರಿಂಕ್ ಬಾಟಲಿಗಳಲ್ಲಿ ಎ ನಿಂದ ಝಡ್ ವರೆಗೆ, ವಿವಿಧ ದೇಶಗಳ ಕುಡಿಯುವ ನೀರಿನ ಬಾಟಲಿಗಳು, ಮೌರ್ಯ, ಅಲುಪ, ಗಂಗ, ಕದಂಬ,  ಪಲ್ಲವ, ಚೋಳ, ಕೆಳದಿ, ಟಿಪ್ಪು, ಮೈಸೂರಿನ ಒಡೆಯರು, ಮೊಘಲ್ ಹೀಗೆ ರಾಜಮಹಾರಾಜರ ಕಾಲದಿಂದ ಇತ್ತೀಚಿಗಿನವೆಗಿನ ನಾಣ್ಯ, ನೋಟು, ಪರಿಕರಗಳು, ಸ್ಟ್ಯಾಂಪ್,  ಪ್ರಮುಖ ಘಟನೆಗಳ ವೃತ್ತಪತ್ರಿಕೆಗಳ ಸಂಗ್ರಹ. ಅರ್ಧ ಆಣೆಯಿಂದ 10 ರೂವರೆಗಿನ ನಾಣ್ಯ, 1ರಿಂದ 2 ಸಾವಿರದವರೆಗಿನ ನೋಟುಗಳು, ಕರ್ನಾಟಕದ ಮುಖ್ಯಮಂತ್ರಿ, ದೇಶದ ಎಲ್ಲಾ ಪ್ರಧಾನಿಗಳು, ಅಮೇರಿಕ, ಭಾರತದ ಅಧ್ಯಕ್ಷರ ಸಹಿತ ಗಣ್ಯರ ಜನನ ದಿನಾಂಕ, ಗಣರಾಜ್ಯ ದಿನ, ಸ್ವಾತಂತ್ರ್ಯ ದಿನ, ಗಾಂಧಿಜಯಂತಿಯ ತಿಂಗಳು, ವರ್ಷ ಇವುಗಳನ್ನು ತಿಳಿಸುವ ವಿವಿಧ ಮುಖಬೆಲೆಯ ನೋಟುಗಳು, ದೇಶ, ವಿದೇಶಗಳ ಪ್ಲಾಸ್ಟಿಕ್ ನೋಟುಗಳು,2016ರ ಓಮನ್ ದೇಶದ ತ್ರಿಡಿ ನೋಟು, 879 ನಾಣ್ಯಗಳಿಂದ ಕರ್ನಾಟಕ, 1020 ನಾಣ್ಯಗಳಿಂದ ಭಾರತದ ಚಿತ್ರ, ದೇವಸ್ಥಾನಗಳ ಪ್ರಸಾದ ಚೀಲಗಳು , ಬೇರೆ ಬೇರೆ ಹೋಟೆಲ್ ಗಳ ಟಿಶ್ಯೂ ಪೇಪರ್ ಗಳ ಜೊತೆಗೆ ಹಳೆಯ ಕಾಲದಿಂದ ಹಂತಹಂತವಾಗಿ ಬದಲಾವಣೆ ಕಂಡ ದಿನಬಳಕೆಯ ಸಾವಿರಾರು ವಸ್ತುಗಳು ಯಾಸೀರ್ ಸಂಗ್ರಹದಲ್ಲಿದೆ.

ನೋಟು, ನಾಣ್ಯಗಳನ್ನು ವ್ಯವಹಾರಕ್ಕಾಗಿ ಮಾತ್ರ ಬಳಸುವವರ ಮಧ್ಯೆ  ಕಳೆದ 17 ವರ್ಷಗಳಿಂದ ವಸ್ತು ಸಂಗ್ರಾಹಕರಾಗಿ ಸಕ್ರೀಯವಾಗಿರುವ ಯಾಸೀರ್ ಓರ್ವ ಉದ್ಯಮಿಯಾಗಿ ನೋಟು ನಾಣ್ಯಗಳಲ್ಲಿ ವೈವಿಧ್ಯತೆ-ವೈಶಿಷ್ಟ್ಯತೆಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

ಪ್ರತೀ ಸಂಗ್ರಹವೂ ಮುಂದಿನ ಪೀಳಿಗೆಗೆ ಜ್ಞಾನದ ಮೆಟ್ಟಿಲಾಗಬೇಕು ಎನ್ನುವ ಯಾಸೀರ್,  ಸ್ಥಾಪಿಸಿದ  “ಕಲ್ಲಡ್ಕ ಮ್ಯೂಸಿಯಂ” ಅಧ್ಯಯನಕಾರರಿಗೆ ಅತ್ಯುತ್ತಮ ಅಧ್ಯಯನ ಕೇಂದ್ರವಾಗಿಯೂ ರೂಪು ಪಡೆಯುತ್ತಿದೆ.

ನಮ್ಮ ದೇಶದ ಎಲ್ಲಾ  ಪ್ರಧಾನಿಗಳ, ರಾಷ್ಟ್ರಪತಿ ಗಳ ಜನ್ಮದಿನಾಂಕವಿರುವ ನೋಟುಗಳ ಸಂಗ್ರಹ ನನ್ನಲ್ಲಿದೆ. ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ 100 ವರ್ಷದ ಪರಿಕಲ್ಪನೆ ಯಲ್ಲಿ ಡೈರಿ ಸಿದ್ಧಪಡಿಸಿದ್ದೇನೆ. ಈ ವರ್ಷ 71 ವರ್ಷ ಪೂರೈಸುತ್ತಿರುವ ಪ್ರಧಾನಿ ಮೋದಿಯವರ ಬದುಕಿನ ಪ್ರಮುಖ ಘಟ್ಟಗಳನ್ನು ರಾಜಕೀಯೇತರವಾಗಿ ದಾಖಲಿಸಲು ಪ್ರಯತ್ನಿಸಿದ್ದೇನೆ ಎಂದು  ಕಲ್ಲಡ್ಕ ಮ್ಯೂಸಿಯಂ ವಸ್ತು ಸಂಗ್ರಾಹಕ ಯಾಸಿರ್ ಕಲ್ಲಡ್ಕ ತಿಳಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು