News Karnataka Kannada
Sunday, May 05 2024
ಸಮುದಾಯ

ಸುಭಿಕ್ಷ- ಸುರಕ್ಷ ಭಾರತಕ್ಕೆ ರಾಮರಕ್ಷೆ: ರಾಘವೇಶ್ವರ ಶ್ರೀ ಆಶಯ

Rama raksha for a prosperous India: Raghaveshwara Sri
Photo Credit : News Kannada

ಗೋಕರ್ಣ: ತ್ರೇತಾಯುಗದಲ್ಲಿ ಅಯೋಧ್ಯೆ ಇಡೀ ವಿಶ್ವದಲ್ಲೇ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯ ಕೇಂದ್ರವಾಗಿತ್ತು. ಅಂಥ ಸಮೃದ್ಧಿಯ ಸುಭಿಕ್ಷೆ ಮತ್ತು ಸುರಕ್ಷೆ ಭರತಭೂಮಿಗೆ ಮತ್ತೆ ಲಭ್ಯವಾಬೇಕು. ಈ ಮಹಾನ್ ರಾಷ್ಟ್ರಸಂಪತ್ತಿಗೆ ರಾಮರಕ್ಷೆ ಒದಗಿ ಬರಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶಿಸಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಸಂಘಟನಾ ಚಾತುರ್ಮಾಸ್ಯ ಕೈಗೊಂಡಿರುವ ಪರಮಪೂಜ್ಯರು ಭಾನುವಾರ ಆಶೀರ್ವಚನ ನೀಡಿ, “ಸಮೃದ್ಧಿ ಬಂದಾಗ ಸಹಜವಾಗಿಯೇ ಜವಾಬ್ದಾರಿ ಹಾಗೂ ಸುರಕ್ಷೆಯ ಹೊಣೆಯೂ ಜತೆಗೆ ಬರುತ್ತದೆ. ಸಮೃದ್ಧಿ ಬಂದಾಗ ಅದನ್ನು ಸದ್ವಿನಿಯೋಗ ಮಾಡುವುದು ಹಾಗೂ ಸುರಕ್ಷಿತವಾಗಿ ಅದು ಧರ್ಮಕಾರ್ಯಗಳಿಗೆ ವಿನಿಯೋಗವಾಗುವಂತೆ ಕಾಪಾಡುವುದು ಅಗತ್ಯ” ಎಂದು ಹೇಳಿದರು.

ಸಂಪತ್ತು ಬಂದಾಗ ಅದನ್ನು ಉಳಿಸಿಕೊಳ್ಳುವ ಬಾಧ್ಯತೆ ಮತ್ತು ಯೋಗ್ಯತೆ ಬೇಕು. ಆಗ ಅದನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಬರುತ್ತದೆ. ಉದಾಹರಣೆಗೆ ಸೀತೆಯನ್ನು ಕಾಪಾಡುವ ಸಾಮರ್ಥ್ಯ  ಹಾಗೂ ಯೋಗ್ಯತೆ ಶಿವಧನಸ್ಸನ್ನು ಪ್ರಯೋಗಿಸಬಲ್ಲ ರಾಜನಿಗೆ ಮಾತ್ರ ಇರಲು ಸಾಧ್ಯ ಎಂದು ಜನಕ ರಾಜ ತೀರ್ಮಾನಿಸಿ, ಸೀತೆಯನ್ನು ವರಿಸಬೇಕಾದರೆ ಶಿವಧನಸ್ಸು ಮುರಿಯಬೇಕು ಎಂಬ ಪಣ ಇಟ್ಟಿದ್ದ. ಸೀತೆ ಲಕ್ಷ್ಮಿಯ ಪ್ರತಿರೂಪ. ಇಂಥ ಸಂಪತ್ತನ್ನು ಜತನದಿಂದ ಕಾಪಾಡುವ ಸಲುವಾಗಿಯೇ ಶಿವಧನಸ್ಸು ಜನಕರಾಜನ ವಂಶಕ್ಕೆ ಮೊದಲೇ ಒಲಿದು ಬಂದಿತ್ತು ಎಂದು ವಿಶ್ಲೇಷಿಸಿದರು.

ಸಂಪಾದನೆ ಎಷ್ಟು ಕಷ್ಟವೋ ಸಂಪಾದಿಸಿದ ಸಂಪತ್ತು ಉಳಿಸಿಕೊಳ್ಳುವುದೂ ಅಷ್ಟೇ ಕಷ್ಟ. ಬದುಕಿನಲ್ಲಿ ಅಧಿಕ ಸಂಪತ್ತು ಇರುವವನು ಧನಿಕನಲ್ಲ. ಬಂದದ್ದು ಸಾಕು ಎಂಬ ತೃಪ್ತ ಮನಸ್ಸು ಇರುವವರು ನಿಜವಾದ ಶ್ರೀಮಂತರು, ಇನ್ನಷ್ಟು ಬೇಕು ಎಂಬ ಹಂಬಲ ಇರುವವರು ಬಡವರು ಎಂದು ಬಣ್ಣಿಸಿದರು.

ರಾಮನ ಅವತಾರದಲ್ಲಿ ಶ್ರೀಮನ್ನಾರಾಯಣ ಧರೆಗವತರಿಸುವ ಮುನ್ನವೇ ಲಕ್ಷ್ಮಿಯ ಪ್ರತೀಕವಾದ ಸಂಪತ್ತು ಅಯೋಧ್ಯೆಯಲ್ಲಿ ನೆಲೆಸಿತ್ತು. ಇಡೀ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿತ್ತು. ಸೂರ್ಯವಂಶದ ಪೂರ್ವಜರ ಪುಣ್ಯ ಈ ಅಪೂರ್ವ ಸಂಪತ್ತನ್ನು ಕಾಯುತ್ತಿತ್ತು. ಅಂತೆಯೇ ಭಾಗೀರಥಿ, ಸಾಗರ, ದುರ್ಬಲ ಸ್ಥಳಗಳೇ ಇಲ್ಲದ ಅಭೇದ್ಯ ಕೋಟೆ, ಹೊರಗೆ ಕಂದಕ, ಮೈಕೊರೆಯುವ ತಣ್ಣಗಿನ ನೀರು, ಕ್ರೂರ ಜಲಜಂತುಗಳು, ಇವೆಲ್ಲವನ್ನೂ ದಾಟಿದ ಬಳಿಕ ಅತಿರಥ- ಮಹಾರಥರನ್ನೊಳಗೊಂಡ ಮಹಾನ್ ಸೇನೆ, ಶರಶಿಲೆಗಳ ಮಳೆಗೆರೆಯುವ ಯಂತ್ರಗಳು, ಶತಾಗ್ನಿ, ಇವೆಲ್ಲವನ್ನೂ ದಾಟಿದ ಬಳಿಕ ಎರಡು ಯೋಜನ ವಿಶಾಲದ ಬಯಲು ಹೀಗೆ ಹಲವು ಸ್ತರಗಳ ರಕ್ಷಣೆ ಅಯೋಧ್ಯೆಯೆಂಬ ಸಂಪತ್ತಿನ ನಗರಿಗೆ ಇತ್ತು ಎಂದು ವಾಲ್ಮೀಕಿ ರಾಮಾಯಣದ ಬಣ್ಣನೆಯನ್ನು ಉಲ್ಲೇಖಿಸಿದರು.

ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, “ಸಮಾಜದ ಎಲ್ಲ ವರ್ಗಗಳು ಇಂದು ಶ್ರೀಮಠದ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸುತ್ತಿದ್ದು, ಹವ್ಯಕ ಬಂಧುಗಳು ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಮನವಿ ಮಾಡಿದರು.

ಜೀವನದಲ್ಲಿ ಮಿತ್ರತ್ವ ಮುಖ್ಯ. ಆದರೆ ಅದು ಸಾಮಾನ್ಯವಾಗಿ ಒಂದು ಪೀಳಿಗೆಗೆ ಸೀಮಿತ. ಆದರೆ ಕೌಟುಂಬಿಕ ಸಂಬಂಧಗಳು ಚಿರಸ್ಥಾಯಿಯಾಗಿರುವಂಥವು. ಇದು ಬೆಳೆಯಬೇಕಾದರೆ ಶ್ರೀಮಠದ ಜತೆಗಿನ ಸಂಬಂಧ ಗಟ್ಟಿಯಾಗಬೇಕು. ಇಡೀ ಸಮಾಜಕ್ಕೆ ಮತ್ತು ಸಾಮಾಜಿಕ ವ್ಯವಸ್ಥೆಗೆ ಭದ್ರ ನೆಲೆಗಟ್ಟು ಹಾಕಿಕೊಡುವ ಶ್ರೀಮಠದ ಸೇವೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅಖಿಲ ಹವ್ಯಕ ಮಹಾಸಭಾ ವತಿಯಿಂದ ಭಿಕ್ಷಾಸೇವೆ ನಡೆಯಿತು.

ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ವೇಣುವಿಘ್ನೇಶ್, ಸದಸ್ಯರಾದ ರಮೇಶ್ ಹೆಗಡೆ, ಆರ್.ಜಿ.ಭಟ್ ಹೊಸಾಕುಳಿ, ಶ್ರೀಮಠದ ಆಡಳಿತ ಖಂಡದ ಶ್ರೀಸಂಯೋಜಕ ಪ್ರಮೋದ್ ಪಂಡಿತ್, ಚಾತುರ್ಮಾಸ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್,  ಹವ್ಯಕ ಮಹಾಮಂಡಲದ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿವಿವಿ ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ, ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಕುಮಟಾ ಮಂಡಲದ 200ಕ್ಕೂ ಹೆಚ್ಚು ಮಂದಿ ವೈದಿಕರು ಮತ್ತು ರುದ್ರಪಾಠಕರಿಂದ ಮಹಾರುದ್ರ ಹವನ ಸಂಪನ್ನಗೊಂಡಿತು. ಕುಮಟಾ ಮಂಡಲ ವೈದಿಕ ಪ್ರಮುಖರು ಚಾತುರ್ಮಾಸ ಸಂದರ್ಭದಲ್ಲಿ ಮಹಾರುದ್ರ ಹವನ ಮಾಡುವ ಮೂಲಕ ಇತರ ಎಲ್ಲ ಮಂಡಲಗಳಿಗೆ ಮಾದರಿಯಾಗಿದ್ದಾರೆ ಎಂದು ಸ್ವಾಮೀಜಿ ಬಣ್ಣಿಸಿದರು. ಪಠ್ಯ ಹಾಗೂ ಪಠ್ಯೇತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ 11 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು