News Karnataka Kannada
Monday, May 06 2024
ಸಮುದಾಯ

ನವದೆಹಲಿ: ಕುಪ್ವಾರ ಜಿಲ್ಲೆಯಲ್ಲಿ ಶಾರದಾ ಮಂದಿರ ಲೋಕಾರ್ಪಣೆ

Sharda Mandir to be inaugurated in Kupwara district
Photo Credit : IANS

ನವದೆಹಲಿ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ, ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆಗೊಳಿಸಿದರು.

1948 ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಶಾರದಾ ಮಂದಿರವನ್ನು ಆರ್ಟಿಕಲ್ 370 ರದ್ದತಿ ನಂತರ ಪುನರ್ ನಿರ್ಮಾಣಗೊಳಿಸಿ ಯುಗಾದಿಯ ಶುಭ ದಿನದಂದು ಲೋಕಾರ್ಪಣೆಗೊಳಿಸಿದ್ದು ಅತ್ಯಂತ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ಬಿಡದಿಯಿಂದ ಗ್ರಾನೈಟ್ ಬಳಕೆಯಿಂದ ನಿರ್ಮಿತವಾಗಿರುವ ಮಂದಿರದಲ್ಲಿ, ಶೃಂಗೇರಿ ಶಾರದ ಮಠದಿಂದ ಪಂಚಲೋಹದ ಶಾರದಾ ಮೂರ್ತಿ ಪ್ರತಿಷ್ಠಾಪನೆಗೊಳ್ಳುತ್ತಿರುವುದು ಗಮನಾರ್ಹ ಸಂಗತಿ. ಜನವರಿ 24 ರಿಂದ ದೇಶಾದ್ಯಂತ ಸಂಚರಿಸಿ ತೀತ್ವಾಲ್ ತಲುಪಿರುವ ಮೂರ್ತಿ ಪ್ರತಿಷ್ಠಾಪನೆಯಾಗಿರುವ ದೇವಾಲಯ ಇಂದು ಅನಾವರಣಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಇಂದು ಪುನರ್ನಿರ್ಮಾಣಗೊಂಡಿರುವ ಶಾರದಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದೆ. ಒಂದು ಕಾಲದಲ್ಲಿ ಉತ್ಕೃಷ್ಟ ಜ್ಞಾನದ ಕೇಂದ್ರವೆಂದು ಪರಿಗಣಿಸಲಾಗುತ್ತಿದ್ದ ಶಾರದಾ ಪೀಠಕ್ಕೆ ಭರತ ಖಂಡದ ಸಮಸ್ತ ಭಾಗಗಳಿಂದ ಜ್ಞಾನಾರ್ಜನೆಗಾಗಿ ಪಂಡಿತರು ಆಗಮಿಸುತ್ತಿದ್ದುದರಿಂದ ಮಹಾಶಕ್ತಿ ಪೀಠವೆಂದು ಕೂಡ ಕರೆಯಲ್ಪಡುತ್ತದೆ.

ಆದಿ ಶಂಕರರು ಇಲ್ಲಿ ತಾಯಿ ಶಾರದೆ ಕುರಿತಾಗಿ ಅನೇಕ ಸ್ತುತಿಗಳನ್ನು ರಚಿಸಿದ್ದು ಕೂಡ ಉಲ್ಲೇಖನೀಯ. ಆರ್ಟಿಕಲ್ 370 ರದ್ದತಿ ನಂತರ ಇಡೀ ಕಾಶ್ಮೀರ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸನಾತನ, ಸಾಂಸ್ಕೃತಿಕ ಪುನರುತ್ಥಾನ ಕೂಡ ಇಲ್ಲಿ ನಡೆಯುತ್ತಿರುವುದು ಹೊಸ ಅಧ್ಯಾಯವೊಂದಕ್ಕೆ ಸಾಕ್ಷಿಯಾಗುತ್ತಿರುವುದು ಗಮನಾರ್ಹ. ಶಾರದಾ ಮಂದಿರಕ್ಕೆ ಆದಿ ಶಂಕರರ ಕಾಲದಲ್ಲಿದ್ದ ಭವ್ಯತೆಯನ್ನು ಮತ್ತೊಮ್ಮೆ ಪುನರ್ ಸ್ಥಾಪಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ “ ಎಂದು ವಿವರಿಸಿದರು. ನಾನ್ ಕನಾ ಸಾಹಿಬ್ ಭೇಟಿಗೆ ಕರ್ತಾರ್ಪುರ ಕಾರಿಡಾರ್ ಆರಂಭಿಸಿದಂತೆ, ಶಾರದಾ ಪೀಠಕ್ಕೆ ಕೂಡ ವಾರ್ಷಿಕ ತೀರ್ಥಯಾತ್ರೆ ಆಯೋಜನೆ ಕುರಿತು ಪರಿಶೀಲನೆ ನಡೆಸುವುದಾಗಿ ಅಮಿತ್ ಶಾ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವೀ ಸೂರ್ಯ, “ಜಮ್ಮು ಕಾಶ್ಮೀರದ ಕಿಶನ್ ಗಂಗಾ ನದಿಯ ದಡದಲ್ಲಿ ಇಂದು ಶಾರದಾ ಮಂದಿರವು ಲೋಕಾರ್ಪಣೆಗೊಂಡಿದ್ದು, ದಕ್ಷಿಣ ಭಾರತದ ಶೃಂಗೇರಿ ಶಂಕರಾಚಾರ್ಯರ ಆಶೀರ್ವಾದವಿದೆ. 1 ಸಾವಿರ ವರ್ಷದ ಹಿಂದೆ ಆದಿ ಶಂಕರಾಚಾರ್ಯರು ಸನಾತನ ಪರಂಪರೆಯ ಪುನರುತ್ಥಾನದ ಉದ್ದೇಶದಿಂದ ದೇಶದ ನಾಲ್ಕೂ ಭಾಗಗಳಲ್ಲಿ ಪೀಠ ಸ್ಥಾಪನೆ ಮಾಡಿ ಏಕ್ ಭಾರತ್, ಶ್ರೇಷ್ಠ ಭಾರತ್ ಪರಿಕಲ್ಪನೆಗೆ ಬುನಾದಿ ಹಾಕಿದ್ದರು. ಇಂದು ಕರ್ನಾಟಕದ ತುಂಗಾ ತೀರದಿಂದ ಕಾಶ್ಮೀರದ ಕಿಶನ್ ಗಂಗಾ ನದಿ ದಡದವರೆಗೆ ಮತ್ತೊಮ್ಮೆ ತಾಯಿ ಶಾರದಾಂಬೆಯ ಪುನರುಜ್ಜೀವನ, ಪುನರುತ್ಥಾನ ಕಾರ್ಯ ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರವರ ದಿಟ್ಟ ನಿರ್ಧಾರದಿಂದ ಕಾಶ್ಮೀರದಲ್ಲಿ ವಿಧಿ 370 ರದ್ದುಗೊಂಡ ನಂತರ ಅಲ್ಲಿ ಶಾಂತಿ ಸ್ಥಾಪನೆಯಾಗಿದ್ದು, ದೇಶವಾಸಿಗಳಲ್ಲಿ ಸಂಪೂರ್ಣ ಸುರಕ್ಷತೆಯ ಭಾವ ಮೂಡಿದೆ. ಇಂತಹ ಶ್ಲಾಘನೀಯ , ಪುನರುತ್ಥಾನ ಕಾರ್ಯಗಳಿಗೆ ಇಂದು ಮತ್ತೆ ಬಲ ಬಂದಿದ್ದು, ಇದರಿಂದ ಪ್ರವಾಸೋದ್ಯಮ, ತೀರ್ಥಯಾತ್ರೆಯ ಕಾರಣಗಳಿಗಾಗಿ ಹೆಚ್ಚಿನ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದು ಗಮನಾರ್ಹ. ಈ ಅಭಿನಂದನಾರ್ಹ ಕಾರ್ಯಕ್ಕೆ ನಾನು ಸಮಸ್ತ ಕನ್ನಡಿಗರ ಪರವಾಗಿ ನರೇಂದ್ರ ಮೋದಿ, ಅಮಿತ್ ಶಾ ರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ “ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ , ಜಮ್ಮು ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷರಾದ ರವೀಂದ್ರ ರೈನಾ ಮತ್ತು ಸೇವ್ ಶಾರದ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು