News Karnataka Kannada
Monday, April 29 2024
ಸಮುದಾಯ

ಮಂಡ್ಯ: ಮೇಲುಕೋಟೆಯಲ್ಲಿ ವಿಜೃಂಭಣೆಯ ವೈರಮುಡಿ ಉತ್ಸವ

Vairamudi festival at Melukote
Photo Credit : By Author

ಮಂಡ್ಯ: ಇತಿಹಾಸ ಪ್ರಸಿದ್ಧ ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿಯವರ ವೈರಮುಡಿ ಉತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ರಾತ್ರಿ ಪೂರಾ ನಡೆಯುವುದರೊಂದಿಗೆ ನೆರೆದ ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ಸಾಂಗವಾಗಿ ನೆರೆವೇರಿತು.

ಕಳೆದೊಂದು ವರ್ಷದಿಂದ ವೈರಮುಡಿ ಕಿರೀಟಧಾರಿತ ಚೆಲುವನಾರಾಯಣನ ದರ್ಶನ ಪಡೆಯಲು ಕಾತರಿಸಿದ್ದ ಭಕ್ತರು ಮೇಲುಕೋಟೆಯ ರಾಜಬೀದಿಯಲ್ಲಿ ಸಾಗಿ ಬಂದ ವೈರಮುಡಿ ಉತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.

ಖಜಾನೆಯಿಂದ ಧಾರ್ಮಿಕ ವಿಧಿವಿಧಾನದಂತೆ ತರಲಾದ ವೈರಮುಡಿ ಮತ್ತು ರಾಜಮುಡಿ ಕಿರೀಟಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು ಬಳಿಕ ರಾತ್ರಿ ಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆಯ ನಂತರ ಮಹಾಮಂಗಳಾರತಿಯ ಪ್ರಾರ್ಥನೆ ಸಲ್ಲಿಸಿದ ಬಳಿಕ ಗರುಡರೂಢನಾದ ಚೆಲುವನಾರಾಯಣನಿಗೆ ಧರಿಸಿ ರಾತ್ರಿ 8.10ಕ್ಕೆ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ಅವರು ಸ್ವಾಮಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಉತ್ಸವದ ಮೆರವಣಿಗೆ ನಡೆದು ಮುಂಜಾನೆ 3.30 ಗಂಟೆಗೆ ಸಮಾಪ್ತಿಯಾಯಿತು.

ಇದಕ್ಕೂ ಮುನ್ನ ಮಂಡ್ಯ ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ತಂದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಮೇಲುಕೋಟೆಯ ಪಾರ್ವತಿ ಮಂಟಪದ ಬಳಿಯಿಂದ ಬಂಗಾರದ ಪಲ್ಲಕ್ಕಿಯಲ್ಲಿಟ್ಟು ಭವ್ಯ ಮೆರವಣಿಗೆಯಲ್ಲಿ 5.30ರ ವೇಳೆಗೆ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ತರಲಾಯಿತು.

ಶ್ರೀ ಚಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್ ಅವರ ನೇತತ್ವದ ಅಧಿಕಾರಿಗಳ ತಂಡದ ಉಸ್ತುವಾರಿಯಲ್ಲಿ ವೈರಮುಡಿ ಹಾಗೂ ರಾಜಮುಡಿ ಕೀರೀಟ ಮತ್ತು ಆಭರಣಗಳನ್ನು ಪರಿಶೀಲನೆ ನಡೆಸಿ ನಂತರ ಪ್ರಧಾನ ಅರ್ಚಕರಿಗೆ ಹಸ್ತಾಂತರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ವೈರಮುಡಿಯನ್ನು ಪಡೆದು ಶ್ರೀ ರಾಮಾನುಜ ಚಾರ್ಯರ ಸನ್ನಿಧಿಯಲ್ಲಿ ಶ್ರೀ ಚಲುವನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ಎಲ್ಲ ಆಭರಣಗಳೊಂದಿಗೆ ವೈರಮುಡಿ ಕಿರೀಟ ಧಾರಣೆ ಮಾಡಿ ಉತ್ಸವಕ್ಕೆ ಅಣಿಗೊಳಿಸಲಾಯಿತು. ಇದಾದ ಬಳಿಕ ರಾತ್ರಿ 8ಗಂಟೆಗೆ ಡಾ. ಎಚ್.ಎನ್. ಗೋಪಾಲಕೃಷ್ಣ ಅವರು ಪುಷ್ಪಾರ್ಚನೆ ಮಾಡಿದರು. ಬಳಿಕ ಶ್ರೀ ಚಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವ ರಾಜಬೀದಿಗೆ ಬರುತ್ತಿದ್ದಂತೆ ಭಕ್ತರು ಗೋವಿಂದ ನಾಮ ಸ್ಮರಣೆ ಮಾಡಿದರು. ಈ ಸಂದರ್ಭ ಎಲ್ಲೆಡೆಯೂ ಹರ್ಷೋದ್ಘಾರ ಮೇಳೈಸಿತು.

ಈ ವೇಳೆ ನೆರೆದಿದ್ದ ಭಕ್ತರು ವೈರಮುಡಿ ಕಿರೀಟಧಾರಿ ಚೆಲುವನಾರಾಯಣನ ದರ್ಶನ ಪಡೆದು ಪ್ರಾರ್ಥಿಸಿದರು. ಇಡೀ ಮೇಲುಕೋಟೆ ವಿದ್ಯುದ್ದೀಪದ ಅಲಂಕಾರದಲ್ಲಿ ಮಿನುಗುತ್ತಿದ್ದರೆ ಭಕ್ತರು ಕಲ್ಯಾಣಿಯಲ್ಲಿ ಸ್ನಾನ ಮಾಡಿ ಮಡಿಯನ್ನುಟ್ಟು ಚೆಲುವನಾರಾಯಣನ ದರ್ಶನಕ್ಕಾಗಿ ಹಾತೊರೆಯುವ ದೃಶ್ಯ ಕಂಡು ಬಂದಿತು.

ವೈರಮುಡಿ ಉತ್ಸವದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಮೇಲುಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಒಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ, 4 ಮಂದಿ ಡಿವೈಎಸ್ಪಿಗಳು, 16 ಇನ್ಸ್‌ ಪೆಕ್ಟರ್‌ಗಳು, 31 ಪಿಎಸ್‌ಐಗಳು, 100 ಎಎಸ್‌ಐ, ಮುಖ್ಯಪೇದೆ, ಪೇದೆಗಳು, ಮಹಿಳಾ ಸಿಬ್ಬಂದಿಗಳು, ಸೇರಿ 600 ಕ್ಕೂ ಹೆಚ್ಚು ಮಂದಿ, 2 ರಾಜ್ಯ ಸಶಸ್ತ್ರ ಮೀಸಲು ಪಡೆ ಹಾಗೂ 7 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ 2 ಕ್ಷಿಪ್ರ ಕಾರ್ಯಾಚರಣೆ ಪಡೆಗಳ ನಿಯೋಜನೆಯೊಂದಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು