News Karnataka Kannada
Saturday, May 18 2024
ಆರೋಗ್ಯ

ಯಾವಾಗ ಬೇಕಾದ್ರೂ ಕಾಯಿಲೆ ಬರಬಹುದು ಎಚ್ಚರವಾಗಿರಿ..

Photo Credit :

ಯಾವಾಗ ಬೇಕಾದ್ರೂ ಕಾಯಿಲೆ ಬರಬಹುದು ಎಚ್ಚರವಾಗಿರಿ..

ಈಗೀಗ ಕಾಯಿಲೆ ಹೇಗೆ? ಯಾವಾಗ? ಯಾರಿಗೆ ಬಂದು ಅಟಕಾಯಿಸಿ ಬಿಡುತ್ತದೆಯೋ ಎಂಬುದು ಗೊತ್ತೇ ಆಗುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆ ಕಾಣಿಸಿಕೊಂಡಾಗ ಅದರತ್ತ ಹೆಚ್ಚಿನ ತಲೆಕೆಡಿಸಿಕೊಳ್ಳದೆ, ಮಾತ್ರೆ ಸೇವಿಸಿ, ಮುಲಾಮು ಹಚ್ಚಿಕೊಂಡು ಸುಮ್ಮನಾಗುವ ನಮಗೆ ನಿಜವಾದ ಕಾಯಿಲೆ ಏನು ಎಂಬುದು ಗೊತ್ತಾಗ ಬೇಕಾದರೆ ಅದು ಉಲ್ಭಣಗೊಂಡು ಆಸ್ಪತ್ರೆಗೆ ಹೋಗಿ ಅಲ್ಲಿ ವೈದ್ಯರು ತಪಾಸಣೆ ಮಾಡಿ ಹೇಳಬೇಕಾಗುತ್ತದೆ.

ಆದರೆ ಅಷ್ಟರಲ್ಲೇ ಕಾಯಿಲೆ ಉಲ್ಭಣಗೊಂಡು ವಾಸಿ ಮಾಡಲಾರದ ಪರಿಸ್ಥಿತಿಗೆ ತಲುಪಿ ಬಿಟ್ಟಿರುತ್ತದೆ. ಇದು ಹೆಚ್ಚಿನವರ ಅನುಭವಕ್ಕೆ ಬಂದಿರುತ್ತದೆ. ನಾವು ದುಡಿಮೆಯಲ್ಲೇ ತೊಡಗಿರುವಾಗ ಆರೋಗ್ಯವೂ ಮುಖ್ಯ ಎಂಬ ಚಿಕ್ಕ ಆಲೋಚನೆಯನ್ನು ಮಾಡುವುದಿಲ್ಲ. ಅದರ ಪರಿಣಾಮವಾಗಿ ಕಾಯಿಲೆಗಳು ನಮ್ಮನ್ನು ಅಡರಿಕೊಳ್ಳುತ್ತಿವೆ.

ಹಾಗೆ ನೋಡಿದರೆ ಆರೋಗ್ಯವಾಗಿರುವಾಗ ನಾವ್ಯಾರು ಆಸ್ಪತ್ರೆಯತ್ತ ಮುಖ ಮಾಡುವುದಿಲ್ಲ. ವೈದ್ಯರನ್ನು ಕಾಣುವುದಿಲ್ಲ. ಏನಾದರೂ ಚಿಕ್ಕಪುಟ್ಟ ನೋವು, ಜ್ವರ, ಶೀತ ಕಾಣಿಸಿಕೊಂಡಾಗಲೂ ಯಾವುದಾದರೂ ಮಾತ್ರೆ ಸೇವಿಸಿ ಸುಮ್ಮನಾಗಿ ಬಿಡುತ್ತೇವೆ. ಇದು ಎಲ್ಲರಿಗೂ ಅನ್ವಯಿಸುತ್ತದೆ.

ಮೊದಲೆಲ್ಲ ಜ್ವರ ಬಂದಾಗ ಯಾವುದೋ ಒಂದು ಕಸಾಯ ಕುಡಿದರೆ, ಮಾತ್ರೆ ನುಂಗಿದರೆ ಹೋಗಿ ಬಿಡುತ್ತಿತ್ತು. ಈಗಲೂ ಹಾಗೆಯೇ ಮಾಡಲು ಹೋದರೆ ಸಾವು ಖಚಿತ. ಕಾರಣ ಇವತ್ತು ಡೆಂಗ್ಯೂ, ಚಿಕೂನ್ ಗುನ್ಯಾದಂತಹ ರೋಗಗಳ ವೈರಸ್ ಗಳು ಸೊಳ್ಳೆಗಳ ಮೂಲಕ ಮನುಷ್ಯನ ದೇಹವನ್ನು ಹೊಕ್ಕಿ ಸಾವನ್ನು ತರುತ್ತಿವೆ.

ನಮಗೆ ದೇಹದಲ್ಲಿರುವ ಕಾಯಿಲೆಗಳು ಕೆಲವೊಮ್ಮೆ ಗೊತ್ತೇ ಆಗುವುದಿಲ್ಲ. ಕಾಯಿಲೆಯ ಲಕ್ಷಣಗಳು ಚಿಕ್ಕಪುಟ್ಟದಾಗಿ ಕಾಣಿಸಿಕೊಂಡರೂ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆಸ್ಪತ್ರೆಗೂ ಹೋಗುವುದಿಲ್ಲ. ಹೀಗಾಗಿ ಹೆಚ್ಚಿನವರಿಗೆ ತಮಗೆ ಅಂಟಿರುವ ಕಾಯಿಲೆ ಏನು ಎಂಬುದೇ ಗೊತ್ತಾಗುವುದಿಲ್ಲ. ಪರಿಣಾಮ ವಾಸಿ ಮಾಡದಷ್ಟರ ಮಟ್ಟಿಗೆ ಅದು ಉಲ್ಭಣವಾಗಿ ಇದ್ದಷ್ಟು ದಿನ ನರಳಾಡ ಬೇಕಾಗುತ್ತದೆ. ಕೆಲವೊಮ್ಮೆ ಜೀವಕ್ಕೂ ಕುತ್ತು ತಂದು ಬಿಡುತ್ತದೆ.

ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಕಂಡು ಬಂದಾಗಲೆಲ್ಲ ಮಾತ್ರೆ ಸೇವಿಸುವವರು ಇದ್ದಾರೆ. ಇದೊಂದು ರೀತಿಯ ಕೆಟ್ಟ ಅಭ್ಯಾಸ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಕಡಿಮೆಯಾಗುವುದಲ್ಲದೆ, ಕಿಡ್ನಿ ಮೇಲೆಯೂ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಮಾತ್ರೆಗಳನ್ನು ವೈದ್ಯರ ಸಲಹೆಯಿಲ್ಲದೆ ಸೇವಿಸುವುದು ಒಳ್ಳೆಯದಲ್ಲ. ಇದು ತಾತ್ಕಾಲಿಕ ಶಮನಕಾರಿಯಾದರೂ ಅದರಿಂದ ತೊಂದರೆ ತಪ್ಪಿದಲ್ಲ.

ಇನ್ನು ಕೆಲವರಿಗೆ ಆರೋಗ್ಯದಲ್ಲಿ ಏರುಪೇರಾದಾಗ ವೈದ್ಯರ ಬಳಿ ಹೋಗುವುದಕ್ಕಿಂತ ಹೆಚ್ಚಾಗಿ ಪಕ್ಕದವರ ಸಲಹೆ ಕೇಳುವ ಚಟ. ಅವರು ಹೇಳುವ ಮಾತುಗಳಿಗೆ ಕಟ್ಟು ಬಿದ್ದು ಯಾವುದೋ ಮಾತ್ರೆ ಸೇವಿಸುತ್ತಾರೆ. ಇದು ಬಹಳಷ್ಟು ಅಪಾಯಕಾರಿ. ಕಾಯಿಲೆಗಳು ಕಾಣಿಸಿಕೊಂಡಾಗ ಅವರಿವರಿಗೆ ಹೇಳಿ ಅವರಿಂದ ಬರುವ ನೂರಾರು ಸಲಹೆಗಳು, ಅದಕ್ಕಿಂತ ಹೆಚ್ಚಾಗಿ ಭಯಹುಟ್ಟಿಸುವ ಮಾತುಗಳಿಂದ ಆತಂಕ ಪಡುವ ಬದಲು ತಮ್ಮ ತೊಂದರೆಯನ್ನು ವೈದ್ಯರ ಬಳಿ ತಿಳಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.

ನಮ್ಮಲ್ಲಿ ಇವತ್ತು ಹೆಚ್ಚಿನ ಜನ ಒಂದಲ್ಲ ಒಂದು ಕಾರಣದಿಂದ ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಾರೆ. ಹಣ ಸಂಪಾದನೆ ಮಾಡಬೇಕೆಂಬ ಹಠಕ್ಕೆ ಬಿದ್ದು ಇಲ್ಲಸಲ್ಲದ ಒತ್ತಡಗಳನ್ನು ಮೈಮೇಲೆ ಎಳೆದುಕೊಂಡು ಜೀವನ ಸಾಗಿಸುತ್ತಿದ್ದಾರೆ. ದೈಹಿಕ ಶ್ರಮವನ್ನು ನಾವು ಒಂದಷ್ಟು ವಿಶ್ರಾಂತಿ ಪಡೆದುಕೊಂಡು ಶಮನಗೊಳಿಸಬಹುದು. ಆದರೆ ಮಾನಸಿಕ ಶ್ರಮ ಹಾಗಲ್ಲ ಅದು ಸದಾ ನೆಮ್ಮದಿಯನ್ನು ಬಯಸುತ್ತದೆ. ಜತೆಗೆ ದೈಹಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.

ನಾವು ಏನೇ ಮಾಡಬೇಕೆಂದು ಹೊರಟರೂ ಅದು ಮಾಡಲು ಸಾಧ್ಯವಾಗುವುದು ಆರೋಗ್ಯ ಇದ್ದರೆ ಮಾತ್ರ. ಆದ್ದರಿಂದ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಒತ್ತಡದ ಕೆಲಸದ ನಡುವೆ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿನ್ನೆಯಂತೆ ಇವತ್ತು ಇರುತ್ತದೆ ಎನ್ನಲಾಗದು. ಹಾಗೆಯೇ ಇವತ್ತಿನಂತೆ ನಾಳೆಯೂ ಇರದು. ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾ ಒಂದಷ್ಟು ಎಚ್ಚರಿಕೆ ವಹಿಸುವುದು ಮುಖ್ಯ.

ಇದೆಲ್ಲದರ ನಡುವೆ ಆರೋಗ್ಯ ವಿಮೆ ಇನ್ನಿತರ ಸೌಲಭ್ಯಗಳನ್ನು ಮಾಡಿಕೊಳ್ಳಬೇಕು. ನಮ್ಮ ದುಡಿಮೆಯಲ್ಲಿ ಒಂದಿಷ್ಟು ಉಳಿತಾಯವನ್ನು ಆರೋಗ್ಯಕ್ಕಾಗಿ ಎತ್ತಿಡುವುದು ಒಳ್ಳೆಯದು. ಅದಕ್ಕಿಂತ ಮುಖ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆಯಬಾರದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು