News Karnataka Kannada
Sunday, May 12 2024
ಆರೋಗ್ಯ

ಕ್ರಿಯಾಶೀಲರಾಗಿರಲು ಮಾನಸಿಕ ಆರೋಗ್ಯ ಬಹುಮುಖ್ಯ

Photo Credit :

ಕ್ರಿಯಾಶೀಲರಾಗಿರಲು ಮಾನಸಿಕ ಆರೋಗ್ಯ ಬಹುಮುಖ್ಯ

ಮೊದಲಿಗೆ ಹೋಲಿಸಿದರೆ ಈಗ ನಮ್ಮ ಬದುಕಿನ ಶೈಲಿ ಬದಲಾಗುತ್ತಿರುವುದು ಕಂಡು ಬರುತ್ತಿದೆ. ದೈಹಿಕ ಶ್ರಮದ ದುಡಿಮೆ ಒಂದು ಕಡೆಯಾದರೆ ಮತ್ತೊಂದು ಕಡೆ ಮಾನಸಿಕ ಶ್ರಮದ ದುಡಿಮೆ ಹೆಚ್ಚಾಗುತ್ತಿದೆ. ಇದು ಅಧಿಕಾರ, ಶ್ರೀಮಂತಿಕೆ ಇನ್ನಿತರ ಸೌಲಭ್ಯಗಳನ್ನು ನಮಗೆ ನೀಡುತ್ತಿದೆಯಾದರೂ ಆರೋಗ್ಯಕರ ಬದುಕನ್ನು ನೀಡುವಲ್ಲಿ ಸೋಲುತ್ತಿದೆ.

ದೈಹಿಕ ಶ್ರಮದ ದುಡಿಮೆಯಿಂದ ಬದುಕುವಾತ ಆರೋಗ್ಯಕರವಾಗಿದ್ದರೆ, ಮಾನಸಿಕ ಶ್ರಮದ ದುಡಿಮೆಯಾತನಿಗೆ ನೆಮ್ಮದಿಯಾಗಿ ಬದುಕುವುದು ಕಷ್ಟವಾಗಿ ಗೋಚರಿಸುತ್ತಿದೆ. ಈತನ ಬಳಿ ಕೈ ತುಂಬಾ ಹಣವಿದ್ದರೂ ಒಂದು ಒಳ್ಳೆಯ ಆರೋಗ್ಯಕರ ಬದುಕು ಕಟ್ಟಿಕೊಳ್ಳುವಲ್ಲಿ ಪರದಾಡುತ್ತಿರುವುದು ಎದ್ದು ಕಾಣುತ್ತಿದೆ.

ಇವತ್ತು ಹೊಲಗದ್ದೆ ಸೇರಿದಂತೆ ಇನ್ನಿತರ ದೈಹಿಕ ಶ್ರಮದ ಕೆಲಸ ಕಾರ್ಯಗಳನ್ನು ಮಾಡುವ ವ್ಯಕ್ತಿಗೂ ಮಾನಸಿಕ ಶ್ರಮದಿಂದ ದುಡಿಯುವ ಹೋಲಿಕೆ ಮಾಡಿದರೆ ದೈಹಿಕ ಶ್ರಮವಹಿಸಿ ಕೆಲಸ ಮಾಡುವ ವ್ಯಕ್ತಿ ಹೆಚ್ಚಿನ ಚಟುವಟಿಯಲ್ಲಿರುತ್ತಾನೆ. ಅಷ್ಟೇ ಅಲ್ಲ ಆರೋಗ್ಯವಾಗಿರುವುದನ್ನು ನಾವು ಕಾಣಬಹದು.

ಬಹಳಷ್ಟು ಜನ ಶ್ರಮವಹಿಸಿ ಕೆಲಸವನ್ನು ಮಾಡುವುದೇ ಇಲ್ಲ. ಓಡಾಡಲು ವಾಹನಗಳ ಬಳಕೆ, ಕಚೇರಿಗಳಲ್ಲಿ ಕುಳಿತಲ್ಲೇ ಕೆಲಸ, ಜತೆಗೆ ಸಣ್ಣಪುಟ್ಟ ಕೆಲಸಕ್ಕೂ ಸಹಾಯಕರು ಇರುವುದರಿಂದಾಗಿ ದೇಹಕ್ಕೆ ಶ್ರಮವೇ ಇಲ್ಲದಂತಾಗಿದೆ. ದೇಹದ ಅಂಗಾಂಗಗಳಿಗೆ ಕಾರ್ಯವೇ ಇಲ್ಲವಾದ್ದರಿಂದ ಎಷ್ಟೇ ಆರೋಗ್ಯವಂತನಾಗಿ ಕಂಡು ಬಂದರೂ ಸದ್ದಿಲ್ಲದೆ ಒಂದಲ್ಲ ಒಂದು ರೀತಿಯ ಕಾಯಿಲೆಗಳು ಅಡರಿಕೊಂಡಿರುತ್ತವೆ. ಕೊಬ್ಬು ಜಾಸ್ತಿಯಾಗಿ ಸ್ತೂಲಕಾಯ ಕಂಡು ಬರುತ್ತದೆ.

ಹೆಚ್ಚುತ್ತಿರುವ ದೇಹದ ತೂಕವನ್ನು ಇಳಿಸಿಕೊಳ್ಳುವುದೇ ಕೆಲವರಿಗೆ ಸಮಸ್ಯೆಯಾಗಿ ಕಾಡುತ್ತದೆ. ಮಡಕೆ ಕಟ್ಟಿದ ಡೊಳ್ಳು ಹೊಟ್ಟೆ, ಡ್ರಮ್ ಗಳಂತೆ ಗೋಚರಿಸುವ ದೇಹ ಎಲ್ಲವೂ ಅಸಹ್ಯ ಮೂಡಿಸಬಹುದು. ಹೀಗಿರುವಾಗ ತಮ್ಮ ದೇಹದ ಸೌಂದರ್ಯದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ವ್ಯಾಯಾಮ ಅಗತ್ಯವಾಗಿದೆ.

ದುಡಿಮೆಯ ಹೊರತಾಗಿಯೂ ವ್ಯಾಯಾಮಕ್ಕೆ ಒಂದಷ್ಟು ಸಮಯವನ್ನು ಮೀಸಲಿಡುವುದು ಬಹುಮುಖ್ಯವಾಗಿದೆ. ನಾವು ಖುಷಿಯಾಗಿ ನೆಮ್ಮದಿಯಾಗಿ ಇರಬೇಕಾದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹುಮುಖ್ಯವಾಗಿರುತ್ತದೆ. ಈಗಿನ ಪರಿಸ್ಥಿತಿಯಲ್ಲಿ ತಾವು ಆಯ್ದುಕೊಂಡಿರುವ ದುಡಿಮೆಯ ಕ್ಷೇತ್ರಗಳಲ್ಲಿ ಕೆಲವು ಬಹಳ ಮಾನಸಿಕವಾಗಿ ಕಿರಿಕಿರಿ ತರುವ ಮತ್ತು ಒತ್ತಡದ ಕೆಲಸಗಳಾಗಿವೆ. ಇಂತಹ ಕ್ಷೇತ್ರಗಳಲ್ಲಿ ದುಡಿಯುವವರು ತಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕು. ಕೋಪ, ಆಕ್ರೋಶ, ಸೇರಿದಂತೆ ಉದ್ವೇಗಕ್ಕೊಳಗಾಗದೆ ಎಲ್ಲವನ್ನು ಸಮಾಧಾನವಾಗಿ, ಸಮಚಿತ್ತದಿಂದ ಎದುರಿಸುವ ಮಾನಸಿಕ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಇದು ಸುಲಭದ ಕೆಲಸವಲ್ಲ. ಇಲ್ಲಿ ಎಷ್ಟು ತಾಳ್ಮೆ ವಹಿಸುತ್ತೇವೆಯೋ ಅಷ್ಟೇ ಒಳ್ಳೆಯದು.

ಇನ್ನು ಸಾರ್ವಜನಿಕರ ಒಡನಾಟದಲ್ಲಿ ಕೆಲಸ ಮಾಡುವವರ ಪರಿಸ್ಥಿತಿಯಂತು ವಿಭಿನ್ನವಾಗಿರುತ್ತದೆ. ನೂರಾರು ಜನರರೊಂದಿಗೆ ವ್ಯವಹರಿಸುವಾಗ ಒಬ್ಬೊಬ್ಬರು ಒಂದೊಂದು ಮನಸ್ಥಿತಿಯಲ್ಲಿರುತ್ತಾರೆ. ಅವರೆಲ್ಲರನ್ನು ನಿಭಾಯಿಸಿಕೊಂಡು ಮುಂದುವರೆಯಬೇಕಾದರೆ ದೈಹಿಕ ಆರೋಗ್ಯಕ್ಕಿಂತ ಮಾನಸಿಕವಾಗಿ ಆರೋಗ್ಯವಂತನಾಗಿರುವುದು ತುಂಬಾ ಒಳ್ಳೆಯದಾಗಿರುತ್ತದೆ.

ದೇಹದ ಸಮಸ್ಯೆಗಳಿಗೆ ನಾವು ತಕ್ಷಣ ಚಿಕಿತ್ಸೆ ಪಡೆದುಕೊಂಡು ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆದರೆ ಮಾನಸಿಕ ಒತ್ತಡ ಅಷ್ಟು ಸುಲಭವಲ್ಲ. ಅದು ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾದವರು ಬಹಳಷ್ಟು ಮಂದಿ ಕಚೇರಿ ಮಾತ್ರವಲ್ಲದೆ ತಮ್ಮ ಮನೆಯಲ್ಲಿಯೂ ಚಿಕ್ಕಪುಟ್ಟ ವಿಚಾರಗಳಿಗೆ ರಂಪಾಟ ಮಾಡುತ್ತಾ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತಾರೆ. ಇನ್ನು ಕೆಲವರು ಖಿನ್ನತೆಗೊಳಗಾಗಿ ಆತ್ಮಹತ್ಯೆಗೂ ಶರಣಾಗಿ ಬಿಡಬಹುದು.

ನಾವು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮೊದಲಿಗೆ ದೇಹವನ್ನು ದಂಡಿಸಬೇಕು. ಅಂದರೆ ವ್ಯಾಯಾಮ ಮಾಡುವುದು, ವಾಕಿಂಗ್ ಮಾಡುವುದು, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದು, ಹೆಂಡತಿ ಮಕ್ಕಳೊಂದಿಗೆ ದೇವಸ್ಥಾನ ಅಥವಾ ಯಾವುದಾದರೂ ಪ್ರವಾಸಿ ತಾಣಗಳಿಗೆ ತೆರಳುವುದು, ಸಾರ್ವಜನಿಕ ಕಾರ್ಯಕ್ರಮಗಳು, ಬಂಧುಬಳಗದವರೊಂದಿಗೆ ಸೇರಿ ಒಂದಷ್ಟು ಸಮಯ ಕಳೆಯುವುದು, ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಚೆನ್ನಾಗಿ ನಿದ್ದೆ ಮಾಡುವುದು ಹೀಗೆ ತಮ್ಮ ಬಿಡುವಿನ ಸಮಯವನ್ನು ಕಳೆಯಬೇಕು.

ಒಂದಷ್ಟು ಸಮಯವನ್ನು ಧ್ಯಾನ, ದೇವರ ದರ್ಶನ ಹೀಗೆ ಪ್ರಶಾಂತ ವಾತಾವರಣದಲ್ಲಿ ಕಳೆಯಬೇಕು. ವೈದ್ಯರ ಬಳಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯದ ಸಮಸ್ಯೆಗಳು ಕಂಡು ಬಂದರೆ ಚಿಕಿತ್ಸೆ ಪಡೆದುಕೊಳ್ಳಬೇಕು.

ಬೇರೆಯವರ ವೈಯಕ್ತಿಕ ವಿಚಾರಗಳ ಬಗ್ಗೆ ಆಸ್ಥೆ ವಹಿಸದೆ ತಮ್ಮ ಪಾಡಿಗೆ ತಾವು ಇರುವುದನ್ನು ಕಲಿಯಬೇಕು. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು. ಹೀಗೆ ಒಂದಷ್ಟು ವಿಚಾರಗಳಲ್ಲಿ ನಾವು ಎಚ್ಚರಿಕೆಯಿಂದ ಇದ್ದರೆ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು