ಬೇಸಿಗೆಯ ದಿನಗಳಲ್ಲಿ ಹೆಚ್ಚು ಮಸಾಲೆಯುಕ್ತ ತಿಂಡಿಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ. ಹಾಗೆಂದು ಹೊಸ ಬಗೆಯ ತಿಂಡಿಗಳನ್ನು ಸೇವಿಸದೆ ಇರಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುವ ತಿಂಡಿಗಳನ್ನು ತಯಾರಿಸಿ ಸೇವಿಸಿದರೆ ಒಳಿತು. ಅಂತಹ ತಿಂಡಿಗಳ ಸಾಲಿಗೆ ಸಬಸ್ಸಿಗೆ ವಡೆಯೂ ಸೇರುತ್ತದೆ.
ಸಬಸ್ಸಿಗೆ ಸೊಪ್ಪಿನ ವಡೆ ಮಾಡಲು ಬೇಕಾಗುವ ಪದಾರ್ಥಗಳು: ಸಬಸ್ಸಿಗೆ ಸೊಪ್ಪು- ಒಂದು ಕಟ್ಟು, ಕಡಲೆಬೇಳೆ- ಒಂದು ಕಪ್, ತೊಗರಿಬೇಳೆ- ಕಾಲು ಕಪ್, ಈರುಳ್ಳಿ- ಒಂದು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಕರಿಬೇವು- ಸ್ವಲ್ಪ, ಹಸಿಮೆಣಸಿನ ಕಾಯಿ- ಮೂರು(ಖಾರಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು), ಉಪ್ಪು-ರುಚಿಗೆ ತಕ್ಕಂತೆ, ಎಣ್ಣೆ- ಕರಿಯಲು ಬೇಕಾಗುವಷ್ಟು
ಸಬಸ್ಸಿಗೆ ಸೊಪ್ಪಿನ ವಡೆ ತಯಾರಿಸುವ ವಿಧಾನ: ಮೊದಲಿಗೆ ಕಡಲೆ ಮತ್ತು ತೊಗರಿ ಬೇಳೆಯನ್ನು ನೀರಿನಲ್ಲಿ ನೆನೆಯಲು ಹಾಕಬೇಕು( ಬೆಳಿಗ್ಗೆ ಮಾಡುವುದಾದರೆ ರಾತ್ರಿ, ಸಂಜೆ ಮಾಡುವುದಾದರೆ ಬೆಳಿಗ್ಗೆ ನೆನೆಯಲು ಹಾಕಿದರೆ ಉತ್ತಮ) ಇನ್ನೊಂದು ಕಡೆ ಸಬಸ್ಸಿಗೆ ಸೊಪ್ಪು ಸೇರಿದಂತೆ ಕೊತ್ತಂಬರಿ, ಕರಿಬೇವು, ಈರುಳ್ಳಿ, ಮೆಣಸಿನಕಾಯಿಯನ್ನು ಹಚ್ಚಿಟ್ಟುಕೊಳ್ಳಬೇಕು.
ನೆನೆಯಲು ಹಾಕಿದ ಬೇಳೆಗಳನ್ನು ನೀರಿನಿಂದ ಬಸಿದು ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಗಟ್ಟಿಯಾಗಿ ರುಬ್ಬಬೇಕು. ಬಳಿಕ ಅದಕ್ಕೆ ಹಚ್ಚಿಟ್ಟ ಸೊಪ್ಪು ಮತ್ತು ಈರುಳ್ಳಿ, ಹಸಿಮೆಣಸನ್ನು ಸೇರಿಸಿ ಕಲೆಸಬೇಕು. ಆ ನಂತರ ಚಪ್ಪಟೆಯಾಕಾರದಲ್ಲಿ ಹೇಗೆ ಬೇಕೋ ಹಾಗೆ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಬೇಯಿಸಿ ತೆಗೆದರೆ ಸಬಸ್ಸಿಗೆ ಸೊಪ್ಪು ವಡೆ ತಯಾರಾದಂತೆಯೇ…