ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಮತ್ತು ಆರೋಗ್ಯಕಾರಿಯಾದ ತಿನಿಸುಗಳನ್ನು ಮಾಡಿ ಸೇವಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಹೀಗಾಗಿ ನಾವು ಮಾಡುವ ಹಲವು ಬಾತ್ ಗಳ ಪೈಕಿ ಮೆಂತೆ ಬಾತ್ ಗೆ ಆದ್ಯತೆ ನೀಡಿದರೆ ಒಳ್ಳೆಯದು.
ಮೆಂತೆ ಬಾತ್ ಗೆ ಏನೇನು ಬೇಕು?: ಅಕ್ಕಿ- ಒಂದು ಕಪ್, ಮೆಂತ್ಯ ಸೊಪ್ಪು- ಎರಡು ಕಟ್ಟು, ಬೆಳ್ಳುಳ್ಳಿ-2, ಮೆಣಸಿನಕಾಯಿ- 5, ಕರಿಮೆಣಸು- 4, ಕಾಯಿತುರಿ- ಸ್ವಲ್ಪ, ಕೊತ್ತಂಬರಿಸೊಪ್ಪು- ಸ್ವಲ್ಪ, ಹಸಿಶುಂಠಿ- ಒಂದು ತುಂಡು, ಈರುಳ್ಳಿ- 1 ಲವಂಗ- ಸ್ವಲ್ಪ, ಏಲಕ್ಕಿ ಪುಡಿ- ಚಿಟಿಕೆಯಷ್ಟು.
ತಯಾರಿ ಮಾಡುವುದು ಹೀಗೆ: ಮೊದಲಿಗೆ ಎಲ್ಲ ಪದಾರ್ಥಗಳನ್ನು ಜೋಡಿಸಿಟ್ಟುಕೊಂಡು, ಮೊದಲಿಗೆ ಮೆಂತ್ಯ ಸೊಪ್ಪನ್ನು ಹೊರತು ಪಡಿಸಿ ಉಳಿದ ಎಲ್ಲ ಮಸಾಲೆ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ. ಇನ್ನೊಂದೆಡೆ ಎರಡು ಕಪ್ ನೀರನ್ನು ಕುದಿಸಿಟ್ಟುಕೊಳ್ಳಿ.
ಮೊದಲಿಗೆ ಕುಕ್ಕರ್ನಲ್ಲಿ ಸ್ವಲ್ಪ ಎಣ್ಣೆ ಹಾಕಿ ನಂತರ ಸ್ವಲ್ಪ ಈರುಳ್ಳಿ ಚೂರು ಹಾಕಿ ಬಾಡಿಸಿ ಅದಕ್ಕೆ ಮೆಂತೆ ಸೊಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಬೇಕು. ಇದಕ್ಕೆ ಚೂರು ಲವಂಗ, ಏಲಕ್ಕಿ ಪುಡಿಯನ್ನು ಸೇರಿಸಿ ಜತೆಗೆ ರುಬ್ಬಿಟ್ಟ ಮಸಾಲೆ ಪದಾರ್ಥಗಳನ್ನು ಹಾಕಿ ಬಳಿಕ ಅಕ್ಕಿಯನ್ನು ತೊಳೆದು ಹಾಕಬೇಕು.
ಆ ನಂತರ ಕುದಿಸಿದ ಬಿಸಿ ನೀರನ್ನು ಹಾಕಿ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಕೂಗಿಸಿ ಇಳಿಸಿದ ಬಳಿಕ ಕೊತ್ತಂಬರಿ ಸೊಪ್ಪು ಉದುರಿಸಿದರೆ ಮೆಂತ್ಯ ಸೊಪ್ಪಿನ ಬಾತ್ ರೆಡಿಯಾದಂತೆಯೇ…