ಹೊರಗೆ ತಣ್ಣಗೆ ಮಳೆ ಸುರಿಯುತ್ತಿದ್ದರೆ ಒಳಗೆ ಬಿಸಿಬಿಸಿಯಾಗಿ ಏನಾದರೊಂದು ಸೇವಿಸಬೇಕೆಂಬ ಬಯಕೆಯಾಗುವುದು ಸಹಜ. ಅದರಲ್ಲೂ ನಾವೇ ಮಾಡಿದ ತಿಂಡಿಯನ್ನು ಬಿಸಿಬಿಸಿಯಾಗಿ ಕಾಫಿಯೊಂದಿಗೆ ಸೇವಿಸುವ ಮಜಾವೇ ಬೇರೆ… ಹಾಗಾದರೆ ಯಾವ ತಿಂಡಿ ಮಾಡೋದಪ್ಪಾ ಎಂಬ ಆಲೋಚನೆಯಲ್ಲಿದ್ದರೆ ಆಲೂ ಕಟ್ಲೆಟ್ ತಯಾರಿಸಲು ಮುಂದಾಗಬಹುದು.
ಆಲೂ ಕಟ್ಲೆಟ್ ಗೆ ಬೇಕಾಗುವ ಪದಾರ್ಥಗಳು
ಆಲೂಗೆಡ್ಡೆ: ಎರಡು
ಈರುಳ್ಳಿ- ಒಂದು
ಶುಂಠಿಬೆಳ್ಳುಳ್ಳಿ ಪೇಸ್ಟ್: ಒಂದು ಟೇಬಲ್ ಚಮಚೆ
ಹಸಿಮೆಣಸಿನಕಾಯಿ ಪೇಸ್ಟ್: ಒಂದು ಟೇಬಲ್ ಚಮಚೆ
ಉದ್ದಿನ ಬೇಳೆ, ಕಡ್ಲೆಬೇಳೆ, ಸಾಸಿವೆ: ಸ್ವಲ್ಪ
ಗರಂಮಸಾಲೆ: ಅರ್ಧ ಟೀ ಚಮಚೆ
ಸಣ್ಣ ರವೆ: ಮೂರು ಟೀ ಚಮಚೆ
ಜೋಳದಹಿಟ್ಟು: ನಾಲ್ಕು ಟೀ ಚಮಚೆ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಎಣ್ಣೆ: ಕರಿಯಲು ಅಗತ್ಯವಿರುವಷ್ಟು
ಕಟ್ಲೆಟ್ ತಯಾರಿ ಮಾಡುವ ವಿಧಾನ
ಮೊದಲಿಗೆ ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿ ಸಿಪ್ಪೆತೆಗೆದು ಪುಡಿಮಾಡಿಟ್ಟುಕೊಳ್ಳಬೇಕು. ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಜೋಳದ ಹಿಟ್ಟು, ರವೆಯನ್ನು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದನಂತರ ಸಾಸಿವೆ ಹಾಕಬೇಕು. ಅದು ಸಿಡಿದ ಬಳಿಕ ಅದಕ್ಕೆ ಉದ್ದಿನ ಬೇಳೆ, ಕಡ್ಲೆಬೇಳೆ ಹಾಕಿ ಚೆನ್ನಾಗಿ ಹುರಿಯಬೇಕು ಅದು ಕೆಂಪಾಗುತ್ತಿದ್ದಂತೆಯೇ ನಿಧಾನ ಉರಿಯಲ್ಲಿ ಹಸಿಮೆಣಸಿಕಾಯಿ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಈರುಳ್ಳಿ ಚೂರುಗಳನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಆ ನಂತರ ಮೊದಲೇ ತಯಾರಿ ಮಾಡಿಟ್ಟ ಬೇಯಿಸಿದ ಆಲೂಗೆಡ್ಡೆಯನ್ನು ಅದರೊಂದಿಗೆ ಹಾಕಿ ಕಲೆಸಬೇಕು. ಬಳಿಕ ತಮಗೆ ಯಾವ ಆಕಾರ ಬೇಕೋ ಅದೇ ರೀತಿಯಲ್ಲಿ ಮಾಡಿಕೊಂಡು ಅದನ್ನು ಜೋಳ ರವೆ ಮಿಶ್ರಣದ ಪೇಸ್ಟ್ ನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹಾಕಿ ಕರಿದು ತೆಗೆದರೆ ಕಟ್ಲೆಟ್ ಸೇವಿಸಲು ಸಿದ್ಧವಾದಂತೆಯೇ..