ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೆ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ತೆಲುಗಿನ 44 ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಘೋಷಿಸಿದ್ದಾರೆ.

ಮದುವೆ ಬಳಿಕ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಹುಟ್ಟೂರಾದ ತುಮ್ಮನ್‌ಪೇಟೆಗೆ ಭೇಟಿ ನೀಡಿದರು. ಇದೇ ವೇಳೆ ಗ್ರಾಮಸ್ಥರಿಂದ ಆರ್ಶೀವಾದ ಪಡೆದ ಬಳಿಕ ನಟ ವಿಜಯ್ ತಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ನೀಡುವುದಾಗಿ ಘೋಷಿಸಿದರು.

ನಾಗರಕರ್ನೂಲ್ ಜಿಲ್ಲೆಯ ಬಲ್ಮೂರು ಮಂಡಲದಲ್ಲಿರುವ ತುಮ್ಮನ್‌ಪೇಟೆಗೆ ನಟ ವಿಜಯ್ ದೇವರಕೊಂಡ ಕುಟುಂಬಸ್ಥರು ಹಾಗೂ ರಶ್ಮಿಕಾ ಮಂದಣ್ಣ ಆಗಮಿಸಿದರು. ಇದೇ ವೇಳೆ ವಾದ್ಯಘೋಷಗಳೊಂದಿಗೆ ನವಜೋಡಿಯನ್ನು ಗ್ರಾಮಸ್ಥರು ಬರಮಾಡಿಕೊಂಡರು. ವೇದಿಕೆಗೆ ಆಗಮಿಸಿದ ವಿಜಯ್ ದೇವರಕೊಂಡ, ‘ನಮ್ಮ ಊರಿಗೆ ಬಂದಿರುವುದು ಮತ್ತು ನಿಮ್ಮೆಲ್ಲರ ಪ್ರೀತಿ ಕಂಡು ತುಂಬಾ ಖುಷಿಯಾಗಿದೆ. ಈ ಮಣ್ಣಿನ ಋಣ ನನ್ನ ಮೇಲಿದೆ.

ಇಲ್ಲಿನ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಹಂಬಲ ನನಗಿದೆ. ಹಾಗಾಗಿ, ಮುಂದಿನ ಶೈಕ್ಷಣಿಕ ಸಾಲಿನಿಂದಲೇ 44 ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಊರಿಗಾಗಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ’ ಎಂದರು.