ರಣ್‌ಬೀರ್ ಕಪೂರ್ ಹಾಗೂ ಯಶ್ ನಟನೆಯ ‘ರಾಮಾಯಣ’ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.
ನಿತೀಶ್ ತಿವಾರಿ ನಿರ್ದೇಶನದಲ್ಲಿ ರಾಮಾಯಣ ಸಿನಿಮಾ ಮೂಡಿಬಂದಿದೆ. ಸಿನಿಮಾದಲ್ಲಿ ರಾಮನ ಪಾತ್ರವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. 2.38 ನಿಮಿಷದ ವಿಡಿಯೊದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ರಾಮನು ವನವಾಸಕ್ಕೆ ಹೋಗುವುದರಿಂದ ಹಿಡಿದು ಮರಳಿ ರಾಜ್ಯಭಾರದ ವರೆಗೆ ಕಥೆಯನ್ನು ಕಟ್ಟಿಕೊಡಲಾಗಿದೆ.
ಸಿನಿಮಾದ ಪ್ರಮುಖ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಜತೆಗೆ ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ಮಂಡೋದರಿ ಮತ್ತು ಶೂರ್ಪಣಖಾ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರುಣ್ ಗೋವಿಲ್, ಕುನಾಲ್ ಕಪೂರ್, ಆದಿನಾಥ್ ಕೋಠಾರೆ, ಶೀಬಾ ಚಡ್ಡಾ ಮತ್ತು ಇಂದಿರಾ ಕೃಷ್ಣನ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ರಾಮಾಯಣ ಭಾಗ 1 ಈ ದೀಪಾವಳಿಗೆ ಬಿಡುಗಡೆ ಆಗಲಿದೆ, ಭಾಗ 2 ದೀಪಾವಳಿ 2027ರಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ‘ರಾಮ’ನ ಪಾತ್ರದಲ್ಲಿ, ಸಾಯಿ ಪಲ್ಲವಿ ‘ಸೀತೆ’ಯಾಗಿ ಹಾಗೂ ಯಶ್ ‘ರಾವಣ’ನ ಪಾತ್ರಧಾರಿಯಾಗಿ ನಟಿಸಿದ್ದಾರೆ. ಸನ್ನಿ ಡಿಯೋಲ್ ‘ಹನುಮಂತ’ನಾಗಿ ಮತ್ತು ರವಿ ದುಬೆ ‘ಲಕ್ಷ್ಮಣ’ನಾಗಿ ಬಣ್ಣಹಚ್ಚಿದ್ದಾರೆ. ಚಿತ್ರತಂಡವು ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ಪೌರಾಣಿಕ ಕಥೆಯನ್ನು ಆಕರ್ಷಕವಾಗಿ ತೆರೆಗೆ ತರುತ್ತಿದೆ.
‘ರಾಮಾಯಣದ ಹಿರಿಮೆ ಇರುವುದು ಅದರ ಸಂದೇಶದಲ್ಲಿ. ಇದು ಕೇವಲ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಹೋರಾಟವಲ್ಲ, ಬದಲಾಗಿ ಇದು ನಾವು ಮಾಡುವ ಆಯ್ಕೆಗಳು, ಅದರ ಪರಿಣಾಮಗಳು ಮತ್ತು ಸರಿ ದಾರಿಯಲ್ಲಿ ನಡೆಯುವ ನಮ್ಮ ಜವಾಬ್ದಾರಿಯ ಬಗ್ಗೆ ತಿಳಿಸುತ್ತದೆ. ಅದನ್ನೇ ಚಿತ್ರ ಕೂಡ ಹೇಳುತ್ತದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

