ಹೈದರ್‌ಬಾದ್‌: ದಳಪತಿ ವಿಜಯ್ ಅವರ ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ʻಜನನಾಯಗನ್ʼ ಸಿನಿಮಾ ಬಿಡುಗಡೆಗೆ ಕೊನೆಗೂ ಗ್ರೀನ್‌ ಸಿಗ್ನಲ್‌ ದೊರೆತಿದೆ. ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ʻಜನ ನಾಯಗನ್‌ʼ ಸಿನಿಮಾಕ್ಕೆ ಯುಎ ಪ್ರಮಾಣ ಪತ್ರ ನೀಡುವಂತೆ ಸೆನ್ಸಾರ್‌ ಮಂಡಳಿಗೆ ಆದೇಶಿಸಿದೆ.

ಬದಲಾವಣೆಗಳನ್ನು ಮಾಡಿದ ಬಳಿಕ ಪ್ರಮಾಣ ಪತ್ರ ನೀಡಬೇಕೆಂದು ಸೆನ್ಸಾರ್‌ ಮಂಡಳಿಗೆ ಆದೇಶಿಸಿದೆ. ಮದ್ರಾಸ್‌ ಹೈಕೋರ್ಟ್‌ ಆದೇಶವು ಸೆನ್ಸಾರ್‌ ಸಂಕಷ್ಟಕ್ಕೆ ಸಿಲುಕಿದ್ದ ಸಿನಿ ತಂಡಕ್ಕೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

ಅಲ್ಲದೇ ಇಂತಹ ದೂರುಗಳಿಗೆ ಉತ್ತೇಜನ ನೀಡುವುದು ಅಪಾಯಕಾರಿ ಪ್ರವೃತ್ತಿ. ಜನನಾಯಗನ್‌ ವಿರುದ್ಧ ಸಿನಿಮಾ ವಿರುದ್ಧ ಮೊದಲು ದೂರು ನೀಡಿ, ನಂತರ ಚಿಂತನೆ ಮಾಡ್ತಿರುವಂತೆ ತೋರುತ್ತದೆ ಎಂದು ಸೆನ್ಸಾರ್‌ ಮಂಡಳಿಯನ್ನ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು.

ಪೊಂಗಲ್ ಹಬ್ಬಕ್ಕೆ ಒಂದು ವಾರದ ಮುನ್ನಾ ದಿನವಾದ ಜನವರಿ 9ರಂದು ವಿಶ್ವದಾದ್ಯಂತ ಜನನಾಯಗನ್ ಸಿನಿಮಾ ಬಿಡುಗಡೆಯಾಗಬೇಕಿತ್ತು. ತಮಿಳು ಚಿತ್ರಗಳನ್ನು ಹೆಚ್ಚುಹೆಚ್ಚು ಪ್ರದರ್ಶಿಸುವ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ವಿಜಯ್ ಕಟೌಟ್ ರಾರಾಜಿಸುತ್ತಿದ್ದವು. ಆದ್ರೆ ಸೆನ್ಸಾರ್‌ ಮಂಡಳಿಯ ನಿರ್ಧಾರವು ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿತ್ತು.

ಇನ್ನೂ ʻಜನನಾಯಗನ್ʼ ತಮ್ಮ ಕೊನೆಯ ಸಿನಿಮಾ ಎಂದು ಈಗಾಗಲೇ ವಿಜಯ್‌ ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಹಾಗಾಗಿ, ಫ್ಯಾನ್ಸ್‌ ಈ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.