ನವದೆಹಲಿ: ಪ್ಯಾಕ್‌ ಮಾಡಿದ ಆಹಾರ ಸೇವನೆಯು ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸಬಹುದೆಂಬ ಕಳವಳಕಾರಿ ಅಂಶವನ್ನು ನ್ಯೂಟ್ರಿನೆಟ್‌–ಸ್ಯಾಂಟೆ ಅಧ್ಯಯನವೊಂದು ಬಹಿರಂಗಪಡಿಸಿದೆ.

ಅಧ್ಯಯನದ ಪ್ರಕಾರ, ಕೆಲವು ಆಹಾರ ಸಂರಕ್ಷಕಗಳನ್ನು ಅತಿಯಾಗಿ ಸೇವಿಸುವುದರಿಂದ ಕ್ಯಾನ್ಸರ್‌ ಸೇರಿದಂತೆ ಹಲವು ಗಂಭೀರ ಕಾಯಿಲೆಗಳ ಅಪಾಯ ಹೆಚ್ಚುವ ಸಾಧ್ಯತೆ ಇದೆ.

ಮೊಹರು ಮಾಡಿದ ಪ್ಯಾಕೆಟ್‌ಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗಳನ್ನು ಈ ಸಂಶೋಧನೆ ಹುಟ್ಟುಹಾಕಿದೆ. ಜನಸಾಮಾನ್ಯರು ಪ್ಯಾಕ್‌ ಮಾಡಿದ ಆಹಾರಗಳ ಸೇವನೆಯ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಈ ಕುರಿತು ಕ್ಯಾನ್ಸರ್‌ ತಜ್ಞ ಡಾ. ಬಿ.ಬಿ. ಸಿಂಗ್‌ ಪ್ರತಿಕ್ರಿಯೆ ನೀಡಿ, ಪ್ಯಾಕ್‌ ಮಾಡಿದ ಆಹಾರ ಮತ್ತು ಕ್ಯಾನ್ಸರ್‌ ನಡುವಿನ ಸಂಬಂಧದ ಬಗ್ಗೆ ಈ ಹಿಂದೆ ಕೂಡ ಹಲವು ಅಧ್ಯಯನಗಳು ನಡೆದಿವೆ. ಆದರೆ ಪ್ಯಾಕ್‌ ಮಾಡಿದ ಆಹಾರ ಸೇವನೆಯೇ ನೇರವಾಗಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದನ್ನು ನಿರ್ಣಾಯಕವಾಗಿ ಸಾಬೀತುಪಡಿಸುವ ಪುರಾವೆಗಳು ಇದುವರೆಗೆ ಲಭ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜ್ಯೂಸ್‌, ಹಾಲು ಹಾಗೂ ಬ್ರೆಡ್‌ಗಳಂತಹ ಆಹಾರಗಳು ತಾಜಾವಾಗಿ ಸೇವಿಸಿದರೆ ಆರೋಗ್ಯಕ್ಕೆ ಲಾಭಕರವಾಗುತ್ತವೆ. ಆದರೆ ಅವು ಪ್ಯಾಕ್‌ ಮಾಡಿದಾಗ ಹಾನಿಕಾರಕವಾಗುವ ಸಾಧ್ಯತೆ ಇದೆ. ಪ್ಲಾಸ್ಟಿಕ್‌ ಪ್ಯಾಕೆಟ್‌ಗಳಲ್ಲಿ ಮಾರಾಟವಾಗುವ ಹಾಲು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಆದರೆ ಹಾಲನ್ನು ಬಾಟಲಿಗಳಲ್ಲಿ ಮಾರಾಟ ಮಾಡುವುದು ಉತ್ತಮ ಎಂದು ಹೇಳಿದರು.

ಕ್ಯಾನ್ಸರ್‌ ರೋಗಿಗಳಲ್ಲಿ ಪ್ಯಾಕ್‌ ಮಾಡಿದ ಆಹಾರವನ್ನು ಹೆಚ್ಚಾಗಿ ಸೇವಿಸುವವರ ಪ್ರಮಾಣ ಜಾಸ್ತಿಯಾಗಿದೆ ಎಂಬುದನ್ನು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಪ್ಯಾಕ್‌ ಮಾಡಿದ ಆಹಾರಗಳು ಜಠರ-ಕರುಳಿನ ಸಮಸ್ಯೆಗಳು ಸೇರಿದಂತೆ ಹಲವು ಆರೋಗ್ಯ ತೊಂದರೆಗಳಿಗೆ ಕಾರಣವಾಗಬಹುದು ಎಂಬುದರಲ್ಲಿ ಸಂಶಯವಿಲ್ಲ ಎಂದು ಡಾ. ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.