ದೆಹಲಿ: ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಮೃತಪಟ್ಟ ಬೆನ್ನಲ್ಲೇ ಚಿತ್ರರಂಗಕ್ಕೆ ಮತ್ತೊಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಸಿದ್ಧಿಕಿ ಅವರಿಗೂ ಕಳೆದ ದಿನ (ಆ.07) ಹೃದಯಾಘಾತ ಆಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅನೇಕ ಗಮನಾರ್ಹ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಖ್ಯಾತಿ ಸಿದ್ಧಿಕಿ ಅವರಿಗೆ ಇದೆ. ಈಗ ಅವರಿಗೆ 69 ವರ್ಷ ವಯಸ್ಸಾಗಿದ್ದು, ಹೃದಯಾಘಾತದ ಬಳಿಕ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿ ಆಗಿದೆ.
ಕೊಚ್ಚಿಯ ಆಸ್ಪತ್ರೆಯಲ್ಲಿ ಸಿದ್ಧಿಕಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಲಯಾಳಂನ ‘ರಾಮ್ಜಿ ರಾವ್ ಸ್ಪೀಕಿಂಗ್’, ‘ಇನ್ ಹರಿಹರ್ ನಗರ್’, ‘ಗಾಡ್ಫಾದರ್’, ‘ವಿಯಾಟ್ನಾಂ ಕಾಲೋನಿ’, ‘ಕಾಬೂಲಿವಾಲಾ’ ಮುಂತಾದ ಸಿನಿಮಾಗಳಿಗೆ ಸಿದ್ಧಿಕಿ ನಿರ್ದೇಶನ ಮಾಡಿದ್ದಾರೆ.
ಸಿದ್ಧಿಕಿ ಇಸ್ಮಾಯಿಲ್ ಎಂಬುದು ಅವರ ಪೂರ್ಣ ಹೆಸರು. ನಿರ್ದೇಶನದ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರ ಮಾಡುವ ಮೂಲಕವೂ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಅವರ ಆರೋಗ್ಯಕ್ಕಾಗಿ ಸೆಲೆಬ್ರಿಟಿಗಳು, ಆಪ್ತರು, ಅಭಿಮಾನಿಗಳು ಮತ್ತು ಕುಟುಂಬದವರು ಪ್ರಾರ್ಥಿಸುತ್ತಿದ್ದಾರೆ.