ಧನ್ವೀರ್‌ ಗೌಡ ಅಭಿನಯದ ಹಯಗ್ರೀವ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಟೀಸರ್‌ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ, ಇದೀಗ ಟ್ರೇಲರ್‌ ರಿಲೀಸ್‌ ಮಾಡಿದೆ. ಮಂಡ್ಯದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಟ್ರೇಲರ್‌ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಾಯಕ ಧನ್ವೀರ್‌ ಮಾತನಾಡಿ, ‘ನನ್ನ ಮೊದಲ ಸಿನಿಮಾದಿಂದಲೂ ಸಾಕಷ್ಟು ಸಪೋರ್ಟ್‌ ಮಾಡಿಕೊಂಡು ಬಂದಿದ್ದೀರ. ಈ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿ ಹರಸಿ. ಉಸಿರು ಇರುವವರೆಗೆ ದರ್ಶನ್‌ ಅಣ್ಣನ ಅಭಿಮಾನಿ ಆಗಿಯೇ ಇರೋಣ’ ಎಂದರು.

ಚಿತ್ರವನ್ನು ಸಮೃದ್ಧಿ ಮಂಜುನಾಥ್‌ ನಿರ್ಮಾಣ ಮಾಡಿದ್ದಾರೆ. ‘ಕಳೆದ ಒಂದು ವರ್ಷದಿಂದ ಈ ಸಿನಿಮಾ ಬಿಡುಗಡೆಗೆ ಪ್ಲಾನ್‌ ಮಾಡುತ್ತಿದ್ದೇವೆ. ಆದರೆ ಡಿ ಬಾಸ್‌ ಇಲ್ಲದ ಕಾರಣ ರಿಲೀಸ್‌ ಮುಂದೂಡಲಾಗಿತ್ತು. ಅವರಿಂದ ಗ್ರೀನ್‌ ಸಿಗ್ನಲ್‌ ಸಿಕ್ಕ ನಂತರ ಈಗ ಹಯಗ್ರೀವ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ನಿರ್ಮಾಪಕ ಸಮೃದ್ಧಿ ಮಂಜುನಾಥ್‌ ಹೇಳಿದರು. ಕಾರ್ಯಕ್ರಮದಲ್ಲಿ ವಿನೀಶ್‌, ಚಿಕ್ಕಣ್ಣ ಹಾಗೂ ಗಿಲ್ಲಿ ನಟ ಮುಂತಾದವರು ಉಪಸ್ಥಿತರಿದ್ದರು.