ಲಂಡನ್‌: ಬಹು ನಿರೀಕ್ಷಿತ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಜೂ.12ರಿಂದ ಜು.5ರವರೆಗೆ ಇಂಗ್ಲೆಂಡ್‌ನಲ್ಲಿ ಟೂರ್ನಿ ನಡೆಯಲಿದೆ. ಒಟ್ಟು 12 ತಂಡಗಳು ಟ್ರೋಫಿಗಾಗಿ ಸೆಣಸಾಡಲಿದ್ದು, ಲಂಡನ್‌ನಲ್ಲಿ ಫೈನಲ್‌ ಸಮರ ಸಾಗಲಿದೆ.

ಪಂದ್ಯಾವಳಿಯಲ್ಲಿರುವ 12 ತಂಡಗಳನ್ನು ಗುಂಪು ಎ ಮತ್ತು ಗುಂಪು ಬಿ ಹೀಗೆ 2 ಗುಂಪುಗಳಲ್ಲಿ ತಲಾ 6ರಂತೆ ವಿಂಗಡಿಸಲಾಗಿದ್ದು, ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್‌ ತಂಡಗಳಿವೆ. ಬಿ ಗುಂಪಿನಲ್ಲಿ ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಶ್ರೀಲಂಕಾ, ಐರ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ ತಂಡಗಳಿವೆ.

ಕಳೆದ ತಿಂಗಳು ನೇಪಾಳದಲ್ಲಿ ನಡೆದ ಅರ್ಹತಾ ಕೂಟದ ಮೂಲಕ ಬಾಂಗ್ಲಾ, ಐರ್ಲೆಂಡ್‌, ಸ್ಕಾಟ್ಲೆಂಡ್‌ ಮತ್ತು ನೆದರ್ಲೆಂಡ್ಸ್‌ ಟೂರ್ನಿಗೆ ಆಗಮಿಸಿವೆ. ಪಂದ್ಯಗಳು ಬರ್ಮಿಂಗ್‌ಹ್ಯಾಮ್‌, ಮ್ಯಾನ್ಚೆಸ್ಟರ್‌, ಸೌತಾಂಪ್ಟನ್‌, ಲೀಡ್ಸ್‌, ಬ್ರಿಸ್ಟಲ್‌, ಲಂಡನ್‌ ತಾಣಗಳಲ್ಲಿ ನಡೆಯಲಿವೆ. ಒಟ್ಟು 33 ಪಂದ್ಯಗಳು ಸಾಗಲಿದ್ದು, ಉದ್ಘಾಟನಾ ಪಂದ್ಯ ಎಜ್‌ಬಾಸ್ಟನ್‌ನಲ್ಲಿ (ಬರ್ಮಿಂಗ್‌ಹ್ಯಾಮ್‌) ಇಂಗ್ಲೆಂಡ್‌-ಶ್ರೀಲಂಕಾ ಮಧ್ಯೆ ನಡೆದರೆ, ಸೆಮಿಫೈನಲ್‌ ಜೂ.30, ಜು.2ಕ್ಕೆ ಲಂಡನ್‌ನಲ್ಲಿ ನಡೆಯಲಿವೆ.

ವನಿತಾ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಜೂ.14ಕ್ಕೆ ಎ ಗುಂಪಿನಿಂದ ಭಾರತ ಮತ್ತು ಪಾಕ್‌ ತಂಡಗಳು ಮುಖಾಮುಖಿಯಾಗಲಿವೆ.