ಭಾರತೀಯ ಚಿತ್ರರಂಗದ ದಿಗ್ಗಜರಾದ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರುಗಳು ಒಟ್ಟಿಗೆ ನಟಿಸುತ್ತಿದ್ದಾರೆ. ಅದೂ 32 ವರ್ಷಗಳ ನಂತರ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಾಹಸಕ್ಕೆ ಕೈ ಹಾಕಿದೆ.
ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ರಜನಿಯ 170ನೇ ಚಿತ್ರಕ್ಕೆ ಹಣ ಹೂಡುತ್ತಿದೆ. ವಿಶೇಷ ಅಂದರೆ ಈ ಸಿನಿಮಾದಲ್ಲಿ ರಜನಿ ಜೊತೆ ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ.
ರಜನಿಕಾಂತ್- ಅಮಿತಾಭ್ ಬಚ್ಚನ್ ಭಾರತೀಯ ಚಿತ್ರರಂಗದ ಘಟಾನುಘಟಿ ನಾಯಕರು. ಈ ಇಬ್ಬರು ತಾರೆಯರು ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳ ಯಶಸ್ಸಿನ ನಂತರ ಇದೀಗ 32 ವರ್ಷದ ಬಳಿಕ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ‘ಜೈ ಭೀಮ್’ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಈ ಪ್ರಾಜೆಕ್ಟ್ ಮುಂದಿನ ತಿಂಗಳ ಅಂತ್ಯಕ್ಕೆ ಟೇಕಾಫ್ ಆಗಲಿದೆ.