ಕ್ಯಾನ್ಸರ್ ಗೆದ್ದ ಪತ್ನಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಾಲಿವುಡ್ ನ, ರಾಷ್ಟ್ರಪ್ರಶಸ್ತಿ ವಿಜೇತ ನಟ ಆಯುಶ್ಮಾನ್ ಖುರಾನಾ ವಿಶೇಷ ಸಂದೇಶ ಬರೆದಿದ್ದಾರೆ.
ವಿಶ್ವ ಕ್ಯಾನ್ಸರ್ ದಿನವಾದ ಇಂದು, ನಟ ಆಯುಶ್ಮಾನ್ ಖುರಾನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಬೋಳು ತಲೆಯ ಪತ್ನಿಯ ನಗ್ನ ಬೆನ್ನು ಮತ್ತು ಅಲ್ಲಿ ಕಾಣುವ ಹೊಲಿಗೆಯನ್ನು ತೋರಿಸುವ ಚಿತ್ರವನ್ನು, ಪತ್ನಿ ಫೈಟರ್ನಂತೆ ಪ್ರದರ್ಶನ ನೀಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ‘ಪಂಜಾಬ್ ಯೂನಿವರ್ಸಿಟಿಯಲ್ಲಿ ಸಮೋಸಾ ಮತ್ತು ಚಾಯ್ ಕುಡಿಯುತ್ತಾ ನಾನು ಸೆಳೆದುಕೊಂಡ ಹುಡುಗಿ. ನಿನ್ನ ಹೃದಯ ಮತ್ತು ಚೇತನದ ಜೊತೆ ಪ್ರೀತಿಯಲ್ಲಿದ್ದೇನೆ,’ ಎಂದು ಬರೆದಿದ್ದಾರೆ. ಈ ಸಂದೇಶಕ್ಕೆ ವಿಶ್ವ ಕ್ಯಾನ್ಸರ್ ದಿನ ಎಂಬ ಹ್ಯಾಷ್ಟ್ಯಾಗ್ ಹಾಕಿದ್ದಾರೆ.
ಈ ಜೋಡಿ 2008ರಲ್ಲಿ ವಿವಾಹವಾದರು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಮಗ ವಿರಾಜ್ವೀರ್ 2012ರಲ್ಲಿ ಮತ್ತು ಮಗಳು ವರುಷ್ಕಾ 2014ರಲ್ಲಿ ಜನಿಸಿದರು. ಚಲನಚಿತ್ರ ನಿರ್ಮಾಪಕಿ-ಲೇಖಕಿ ತಾಹಿರಾ ಅವರು 2019ರಲ್ಲಿ ಸ್ಟೇಜ್ 0 ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ನಂತರ ಅವರು ಒಂದು ಸ್ತನಛೇದನ ಪ್ರಕ್ರಿಯೆಗೆ ಒಳಗಾಗಿದ್ದರು ಮತ್ತು ಈಗ ಗುಣಮುಖರಾಗಿದ್ದಾರೆ.