ಶೀತಲ್ ಶೆಟ್ಟಿ ಚೊಚ್ಚಲ ನಿರ್ದೇಶನದ ʼವಿಂಡೋಸೀಟ್ʼ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಶೀತಲ್ ಶೆಟ್ಟಿಗೆ ಇದು ಮೊದಲ ಸಿನಿಮಾವಾದ್ರು ಸಿನಿಪ್ರೇಕ್ಷಕರು ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಯಾಕಂದ್ರೆ ಟೈಟಲ್ ನಿಂದ ಕುತೂಹಲ ಹುಟ್ಟಿಸಿದ ಈ ಸಿನಿಮಾ ಆ ನಂತರ ಸಿನಿಮಾ ಅಪ್ ಡೇಟ್ ಗಾಗಿ ಪ್ರೇಕ್ಷಕರು ಕಾಯುವಂತೆ ಮಾಡಿತ್ತು. ಇದೀಗ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಿನಿಮಾ ಈ ರೇಂಜ್ ಗೆ ಇದ್ಯಾ ಅನ್ನೋ ಆಶ್ಚರ್ಯವನ್ನು ಉಂಟು ಮಾಡಿದೆ.
ಕಿಚ್ಚ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಸಿನಿಮಾದ ಫಸ್ಟ್ ಲುಕ್ ವಿಡಿಯೋ ರಿಲೀಸ್ ಆಗಿದೆ. ಕೇವಲ 54 ಸೆಕೆಂಡ್ ಇರುವ ವಿಡಿಯೋ ಇದಾಗಿದ್ದು, ಅಷ್ಟರೊಳಗೆ ಕಾಣುವ ಪ್ರಕೃತಿ ಸೌಂದರ್ಯ, ನಾಯಕನಿಗೆ ಕಾಣುವ ನಾಯಕಿಯ ಸುಂದರ ಮುಖ ಪ್ರೇಕ್ಷಕರ ಮನಸ್ಸನ್ನ ಕದ್ದಿದೆ. 54 ಸೆಕೆಂಡ್ ಇದ್ದರು ಸಹ ಮತ್ತೆ ಮತ್ತೆ ಆ ವಿಡಿಯೋವನ್ನ ನೋಡಬೇಕು ಎನ್ನುವಷ್ಟು ಡಿಸ್ಟರ್ಬ್ ಮಾಡಿದೆ. ಯಾಕಂದ್ರೆ ಪ್ರಕೃತಿಯ ನಡುವೆ ಮರೆಯಾಗುವ ಆ ನಾಯಕಿಯ ಮುಖ, ಕಣ್ಣಿಗೆ ತಂಪೆನಿಸುವ ಪ್ರಕೃತಿ ಸೌಂದರ್ಯ ಒಂದು ಸಲಕ್ಕೆ ಎರಡರಲ್ಲಿ ಯಾವ ಚಿತ್ರ ನೋಡಬೇಕು ಎಂಬ ಗೊಂದಲ ಉಂಟು ಮಾಡುತ್ತೆ. ಹೀಗಾಗಿ ʼವಿಂಡೋಸೀಟ್ʼ ಫಸ್ಟ್ ಲುಕ್ ವಿಡಿಯೋವನ್ನು ಪ್ರೇಕ್ಷಕರು ಒಂದೇ ಬಾರಿಗೆ ಮೂರು_ನಾಲ್ಕು ಬಾರಿ ನೋಡುವಂತೆ ಮಾಡಿದೆ. ಫೈನಲಿ ಸಿನಿಮಾದ ಮೇಲಿನ ನಿರೀಕ್ಷೆ ಮಾತ್ರ ದುಪ್ಪಟ್ಟಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಶೀತಲ್ ಶೆಟ್ಟಿ ಕಥೆ_ಚಿತ್ರಕಥೆ ಬರೆದು ತಾವೇ ನಿರ್ದೇಶನ ಕೂಡ ಮಾಡಿದ್ದಾರೆ. ನಾಯಕನ ಪಾತ್ರದಲ್ಲಿ ನಿರೂಪ್ ಬಂಡಾರಿ ನಟಿಸಿದ್ದು, ಸಂಜನಾ ಆನಂದ್ ಹಾಗೂ ಅಮೃತಾ ಐಯ್ಯರ್ ನಾಯಕಿಯರಾಗಿದ್ದಾರೆ. ಇನ್ನುಳಿದಂತೆ ರವಿಶಂಕರ್, ಮಧುಸೂದನ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೆ. ಮಂಜು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಯೋಗರಾಜ್ ಭಟ್, ಕವಿರಾಜ್, ಸುಮುಖ ಅವರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.