ದೇರಳಕಟ್ಟೆ: ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ) 16ನೇ ಘಟಿಕೋತ್ಸವವು ಅಕ್ಟೋಬರ್ 24ರಂದು ಮಂಗಳೂರಿನ ದೇರಳಕಟ್ಟೆಯಲ್ಲಿರುವ ವಿಶ್ವವಿದ್ಯಾಲಯದ ಯೆಂಡ್ಯೂರೆನ್ಸ್ ಝೋನ್ನಲ್ಲಿ ನಡೆಯಲಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಜಗದೀಶ್ ಕುಮಾರ್ ಮಾಮಿಡಾಲ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಇವರು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಪರಿಶೀಲನಾ ಸಮಿತಿಯ ಅಧ್ಯಕ್ಷರು, ಐಐಎಂ ಕಲ್ಕತ್ತಾದ ಆಡಳಿತ ಮಂಡಳಿಯ ಅಧ್ಯಕ್ಷರು, ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC) ಮಾಜಿ ಅಧ್ಯಕ್ಷರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಹಾಗೂ ಐಐಟಿ ದೆಹಲಿಯ ಪ್ರಾಧ್ಯಾಪಕರಾಗಿದ್ದಾರೆ.
ಕೇರಳದ ಕೋಝಿಕ್ಕೋಡ್ನ ಜಾಮಿಯಾ ಮರ್ಕಝು ಸಖಾಫತಿ ಸುನ್ನಿಯ್ಯಾ (ಜಾಮಿಯಾ ಮರ್ಕಝ್) ಸಂಸ್ಥೆಯ ಸ್ಥಾಪಕರು ಹಾಗೂ ಕುಲಾಧಿಪತಿಗಳಾದ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್
ಮತ್ತು ಎಸ್.ಎಸ್. ಇನ್ನೋವೇಷನ್ಸ್ ಇಂಟರ್ನ್ಯಾಷನಲ್ Inc.ನ ಸ್ಥಾಪಕ, ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಧೀರ್ ಶ್ರೀವಾಸ್ತವ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಇವರಿಬ್ಬರಿಗೂ ಗೌರವ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಗುವುದು.
ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ)ದ ಕುಲಾಧಿಪತಿಗಳಾದ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಅವರು ವಿಶ್ವವಿದ್ಯಾಲಯದ ವರದಿಯನ್ನು ಮಂಡಿಸಲಿದ್ದಾರೆ. ಈ ಘಟಿಕೋತ್ಸವದಲ್ಲಿ ಒಟ್ಟು 6127 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುವುದು. ಇವರಲ್ಲಿ 11 ಚಿನ್ನದ ಪದಕ ವಿಜೇತರು, ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳು ಹಾಗೂ ದಂತವೈದ್ಯಕೀಯ, ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ, ಅಲೈಡ್ ಹೆಲ್ತ್ ಸೈನ್ಸಸ್, ಆಯುರ್ವೇದ, ಹೋಮಿಯೋಪತಿ, ವಿಜ್ಞಾನ, ಕಲೆ ಮತ್ತು ಸಮಾಜ ವಿಜ್ಞಾನ, ವಾಣಿಜ್ಯ ಹಾಗೂ ಮ್ಯಾನೇಜ್ ಮೆಂಟ್, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗಗಳ ಪದವಿ ಪಡೆಯುವ ವಿದ್ಯಾರ್ಥಿಗಳು ಸೇರಿದ್ದಾರೆ.

