ನವದೆಹಲಿ: ದೇಶದಲ್ಲಿ ಡ್ರಗ್ಸ್ ಹಾವಳಿಯನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, 2029ರ ಡಿಸೆಂಬರ್ 31ರೊಳಗೆ ಭಾರತವನ್ನು ಮಾದಕ ದ್ರವ್ಯ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗೆ ಕೇಂದ್ರ ಗೃಹ ಸಚಿವಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಹುತಾತ್ಮರ ದಿನದ ಅಂಗವಾಗಿ ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದಿಂದ ಮಾದಕವಸ್ತು ಜಾಲವನ್ನು ಬುಡಸಹಿತ ಕಿತ್ತಿಹಾಕಲು 2029ರ ಅಂತ್ಯದವರೆಗೆ ಗಡುವು ನಿಗದಿಪಡಿಸಿದ್ದಾರೆ. ಮಾದಕ ದ್ರವ್ಯಗಳ ಮಾರಕ ವ್ಯಸನವು ದೇಶದ ಯುವ ಸಮುದಾಯ ಹಾಗೂ ಭವಿಷ್ಯದ ಪೀಳಿಗೆಯನ್ನು ನಾಶ ಮಾಡುತ್ತಿದೆ’ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಬರುವ 2026ರಿಂದ 2029ರವರೆಗಿನ ನಿರ್ಣಾಯಕ ನಾಲ್ಕು ವರ್ಷಗಳನ್ನು ಡ್ರಗ್ಸ್ ವಿರುದ್ಧದ ನಿರ್ಣಾಯಕ ಸಮರಕ್ಕೆ ಮೀಸಲಿಡಲಾಗಿದ್ದು, ಮಾದಕ ದ್ರವ್ಯ ನಿರ್ಮೂಲನೆಯು ನಮ್ಮ ಸರ್ಕಾರದ ಅತ್ಯುನ್ನತ ರಾಷ್ಟ್ರೀಯ ಆದ್ಯತೆಯಾಗಿದೆ’ ಎಂದು ಸ್ಪಷ್ಟಪಡಿಸಿದರು.

