ಮಂಗಳೂರು: ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ಕೇವಲ ಕಾಲೇಜು ಆಗಿರದೆ ಭವಿಷ್ಯದ ಭಾರತದ ಶಿಲ್ಪಿಗಳನ್ನು ರೂಪಿಸುವ ಸಂಸ್ಥೆಯಾಗಿದೆ. ಶಿಕ್ಷಣ ಸಂಸ್ಥೆಯ ಸೇವೆಯೇ ನಿಜವಾದ ದೇಶ ಪ್ರೇಮ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳ್ಳಿ ಹಬ್ಬದ ಹಿನ್ನೆಯಲ್ಲಿ ಗುರುವಾರ ನಡೆದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ವಿಶ್ವದಲ್ಲಿ ಒಂದನೇ ಸ್ಥಾನಕ್ಕೇರಬೇಕೆನ್ನುವುದು ಪ್ರತೀಯೊಬ್ಬರ ಕನಸಾಗಿದೆ. ಮಂತ್ರಿಗಳು, ಸಂಸದರು, ಶಾಸಕರು, ಅಧಿಕಾರಿಗಳು ಹಾಗೂ ಉದ್ಯಮಿಗಳು ಬಲಿಷ್ಟವಾದ್ರೆ ದೇಶ ಬಲಿಷ್ಟವಾಗದು. ಬದಲಾಗಿ ವಿದ್ಯಾರ್ಥಿಗಳು ಬಲಿಷ್ಟರಾದಲ್ಲಿ ಮಾತ್ರವೇ ದೇಶ ಬಲಿಷ್ಟವಾಗಲಿದೆ.
ಶಿಕ್ಷಣ ಪೂರ್ಣಗೊಂಡ ಬಳಿಕ ವಿದೇಶಕ್ಕೆ ಹಾರುವ ಬದಲು ದೇಶದಲ್ಲೇ ಶ್ರಮ ವಹಿಸಿದ್ದಲ್ಲಿ ಯಶಸ್ಸು ಸಾಧ್ಯ. ಭಾರತ ಯಾವುದೇ ವಿದೇಶಕ್ಕೂ ಕಮ್ಮಿ ಇಲ್ಲ. ಅಂಕದಿಂದ ಮಾತ್ರ ಯಶಸ್ಸು ಸಾಧ್ಯ ಎನ್ನಲಾಗದು. ಏಕಾಗ್ರತೆ, ಬದ್ಧತೆ, ಪರಿಶ್ರಮ, ಛಲ, ತಾಳ್ಮೆ, ಮಾನವೀಯತೆ, ಉತ್ತಮ ಮನಸ್ಸು ಇತ್ಯಾದಿಗಳೊಂದಿಗೆ ಮುನ್ನಡೆದಲ್ಲಿ ಯಶಸ್ಸು ಸಾಧ್ಯ ಎಂದರು.
ಶಾಸಕ ಡಾ| ವೈ. ಭರತ್ ಶೆಟ್ಟಿ ಮಾತನಾಡಿ, 25 ವರ್ಷ ಎಂಬುವುದು ಸುಲಭದ ಮಾತಲ್ಲ. ಅನೇಕ ಸವಾಲುಗಳನ್ನು ಹಿಮ್ಮೆಟ್ಟಿ ಮುನ್ನಡೆಯಲು ಸಂಸ್ಥೆಯ ನಿರ್ದೇಶಕರು, ಸಿಬಂದಿ ಹಾಗೂ ವಿದ್ಯಾರ್ಥಿಗಳ ಪರಿಶ್ರಮ ಮುಖ್ಯವಾಗಿದೆ. ಸಮಾಜಕ್ಕೆ ಉತ್ತಮ ಎಂಜಿನಿಯರ್ ಗಳನ್ನು ಸಂಸ್ಥೆ ನೀಡಿದೆ. ಮುಂದೆಯೂ ಕೂಡ ಸಂಸ್ಥೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿ ಎಂದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೊ ಶುಭ ಹಾರೈಸಿದರು. ಪ್ರಾಂಶುಪಾಲ ಡಾ| ರಿಯೋ ಡಿಸೋಜಾ, ಕಾರ್ಯಕ್ರಮ ಸಂಚಾಲಕರಾದ ವಿನೂತನ್ ಕೆ., ಸಂಯೋಜಕ ಡಾ| ಬಿನು ಕೆ.ಜಿ., ಸಹಾಯಕ ನಿರ್ದೇಶಕ ವಂ| ಕೆನ್ನೆತ್ ಆರ್. ಕ್ರಾಸ್ತಾ ಮತ್ತಿತತರು ಇದ್ದರು. ನಿರ್ದೇಶಕ ವಂ| ವಿಲ್ಫ್ರೆಡ್ ಡಿಸೋಜಾ ಸ್ವಾಗತಿಸಿದರು. ಸಬಿನಾ ರಚನಾ ಕ್ರಾಸ್ತಾ ವಂದಿಸಿದರು. ಸ್ಮಿತಾ ಮರಿಯಾ ಡಿಸೋಜ ಹಾಗೂ ಡಾ| ಅಶ್ವಿನ್ ಶೆಟ್ಟಿ ನಿರೂಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಮಾತನಾಡಿ, ಎಂಜಿನಿಯರಿಂಗ್ ಕಾಲೇಜು ನಿರ್ಮಾಣ ಒಬ್ಬರ ಕನಸಾಗಿರದೆ ಅನೇಕರ ಪರಿಶ್ರಮ ಒಳಗೊಂಡಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ರೀತಿಯಲ್ಲಿ ನೆರವಾಗುವುದು ಸುಲಭದ ಕೆಲಸವಲ್ಲ. ಕಠಿಣ ಹಾದಿಯಲ್ಲಿ ಮುನ್ನಡೆಯಲು ದೇವರ ಆಶೀರ್ವಾದವೂ ಕೂಡ ಪ್ರಮುಖವಾಗಿದೆ. ಇಲ್ಲಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ವರ್ಗದವರಿಗೂ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವಾಗುತ್ತಿದೆ. ಸಂಸ್ಥೆಯ ಮುಂದಿನ ಹಾದಿ ಮತ್ತಷ್ಟು ಯಶಸ್ಸಿನಿಂದ ಕೂಡಿರಲಿ ಎಂದರು.

