ಮಂಗಳೂರು : ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಬಿಇ, ಬಿಸಿಎ ಹಾಗೂ ಬಿಬಿಎ ತರಗತಿಗಳ ಉದ್ಘಾಟನೆ ನೆರವೇರಿತು. ಇದೇ ವೇಳೆ ಎಂಜಿನಿಯರ್ಸ್ ಡೇಯನ್ನೂ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾಲೇಜಿನ ಕಲಾಂ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಬಿಇ, ಬಿಸಿಎ ಹಾಗೂ ಬಿಬಿಎ ತರಗತಿಗಳಿಗೆ ಅಧಿಕೃತ ಚಾಲನೆ ನೀಡಲಾಯಿತು. ಕಾಲೇಜಿನ ಗಾಯನ ತಂಡದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪ್ರಾಂಶುಪಾಲ ಡಾ. ರಿಯೋ ಡಿಸೋಜಾ ಸ್ವಾಗತಿಸಿದರು. ಗಣ್ಯರು ದೀಪ ಬೆಳಗಿಸುವ ಮೂಲಕ ನೂತನ ವಿದ್ಯಾರ್ಥಿಗಳ ಶೈಕ್ಷಣಿಕ ಪಯಣಕ್ಕೆ ಚಾಲನೆ ನೀಡಿದರು.
ಎಂಜಿನಿಯರ್ಸ್ ಡೇ ಅಂಗವಾಗಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ವಿಭಾಗಗಳ ಧ್ವಜಗಳನ್ನು ಅನಾವರಣಗೊಳಿಸಿದರು. ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಎಸ್.ಜೆ.ಇ.ಸಿ.ಯ ಹಸಿರು ಹಾಗೂ ಪರಿಸರ ಸ್ನೇಹಿ ಕ್ಯಾಂಪಸ್‌ನ್ನು ಶ್ಲಾಘಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಮಗ್ರ ಶಿಕ್ಷಣಕ್ಕೆ ಸಂಸ್ಥೆ ನೀಡುತ್ತಿರುವ ಮಹತ್ವವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ ಎಂ. ವಿಶ್ವೇಶ್ವರಯ್ಯ ಅವರ ಎಂಜಿನಿಯರಿಂಗ್ ಕ್ಷೇತ್ರ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ವಿದ್ಯಾರ್ಥಿಗಳು ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡು ನಿರಂತರವಾಗಿ ಕಲಿಯಬೇಕು ಎಂದು ಕರೆ ನೀಡಿದರು.
ವಿಕಸಿತ ಭಾರತ 2047ರ ಗುರಿ ಸಾಧನೆಯಲ್ಲಿ ಯುವ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ, ನಾವೀನ್ಯತೆ ಹಾಗೂ ಜವಾಬ್ದಾರಿಯುತ ನಾಯಕತ್ವದ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಇದೇ ಸಂದರ್ಭದಲ್ಲಿ ಡಾ. ಬಿನು ಕೆ.ಜಿ. ಅವರು ಎಸ್.ಜೆ.ಇ.ಸಿ.ಯ 2026ರಿಂದ 2030ರವರೆಗಿನ ಐದು ವರ್ಷಗಳ ಕಾರ್ಯತಂತ್ರ ಯೋಜನೆಯನ್ನು ಪ್ರಸ್ತುತಪಡಿಸಿದರು. ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ, ನಾವೀನ್ಯತೆ, ಕೈಗಾರಿಕಾ ಸಹಯೋಗ ಹಾಗೂ ಸುಸ್ಥಿರ ಸಂಸ್ಥಾ ಅಭಿವೃದ್ಧಿಗೆ ಯೋಜನೆಯಲ್ಲಿ ಒತ್ತು ನೀಡಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಜೆ.ಇ.ಸಿ. ನಿರ್ದೇಶಕ ವಂ.ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ, ತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳ ನಡುವಿನ ಸಂಬಂಧವನ್ನು ವಿವರಿಸಿದರು. ಕಾಲೇಜಿನ “ಸರ್ವಿಸ್ & ಎಕ್ಸೆಲೆನ್ಸ್” ಧ್ಯೇಯವಾಕ್ಯವನ್ನು ಉಲ್ಲೇಖಿಸಿದ ಅವರು, ತಂತ್ರಜ್ಞಾನ ಶಕ್ತಿಶಾಲಿ ಸಾಧನವಾಗಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಬಳಸಲು ಮಾನವೀಯ ಮೌಲ್ಯಗಳು, ಶಿಸ್ತು, ಉತ್ತಮ ಮನೋಭಾವ ಮತ್ತು ಪರಸ್ಪರ ಗೌರವ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ಸ್, ವಿಭಾಗ ಮುಖ್ಯಸ್ಥರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಚಾಲಕಿ ಶೀತಲ್ ಫೆರ್ನಾಂಡಿಸ್ ವಂದಿಸಿದರು. ಡಾ. ಪ್ರತಿಮಾ ಎಸ್. ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

