ಮಂಗಳೂರಿನ ಕೊಂಕಣಿ ನಾಟಕ ಸಭಾ (ರಿ) ಆಯೋಜಿಸಿದ್ದ ಕೊಂಕಣಿ ಗಾಯನ ಸ್ಪರ್ಧೆಯಲ್ಲಿ ಕುಲ್ಶೇಕರದ ರಿಶಾಲ್ ಮೆಲ್ಬಾ ಕ್ರಾಸ್ತಾ ಅವರು ಮತ್ತೊಮ್ಮೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಅವರು, ಸತತ ಮೂರನೇ ಬಾರಿಗೆ ಅಂದರೆ 2024, 2025 ಮತ್ತು 2026ನೇ ಸಾಲಿನಲ್ಲಿ 15-45 ವಯೋಮಾನದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿರುವುದು ಅತ್ಯಂತ ಹೆಮ್ಮೆ ಮತ್ತು ಸಂತೋಷದ ಕ್ಷಣ ಎಂದು ಹೇಳಿದ್ದಾರೆ. ಇದರೊಂದಿಗೆ 15-45 ವಯೋಮಾನದ ದ್ವಂದ್ವ ಗಾಯನ (Duet Singing) ವಿಭಾಗದಲ್ಲೂ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

“ದೇವರ ಕೃಪೆ ಮತ್ತು ಆಶೀರ್ವಾದ ಹಾಗೂ ಸುತ್ತಲಿನ ಎಲ್ಲರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹದಿಂದ ಈ ಹಂತವನ್ನು ತಲುಪಲು ಸಾಧ್ಯವಾಗಿದೆ” ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಧನೆಗೆ ತಾಯಿಯೇ ದೊಡ್ಡ ಆಧಾರಸ್ತಂಭ ಎಂದು ಹೇಳಿರುವ ರಿಶಾಲ್, “ಪ್ರತಿ ಪ್ರದರ್ಶನದಲ್ಲೂ ನನ್ನ ಜೊತೆ ನಿಂತು, ಪ್ರೋತ್ಸಾಹಿಸಿ, ಮುಂದುವರಿಯಲು ಶಕ್ತಿ ಮತ್ತು ಆತ್ಮವಿಶ್ವಾಸ ನೀಡಿದ ನನ್ನ ಅಮ್ಮನಿಗೆ ವಿಶೇಷ ಧನ್ಯವಾದಗಳು” ಎಂದಿದ್ದಾರೆ.

ಅದೇ ರೀತಿ ತಮ್ಮ ತಂದೆಯ ಬಗ್ಗೆ ಮಾತನಾಡಿ, “ನನ್ನ ತಂದೆ ನನ್ನ ಕೋಚ್, ಮಾರ್ಗದರ್ಶಕರು ಮತ್ತು ನನ್ನನ್ನು ಸಂಗೀತಕ್ಕೆ ಪರಿಚಯಿಸಿದವರು. ನನಗೆ ಕಲಿಸಿ, ಮಾರ್ಗದರ್ಶನ ಮಾಡಿ, ಬೆಂಬಲಿಸಿ ಗಾಯಕಿಯಾಗಿ ಬೆಳೆಯಲು ಸಹಾಯ ಮಾಡಿದ್ದಕ್ಕೆ ಅವರಿಗೆ ಎಂದಿಗೂ ಧನ್ಯವಾದ ಹೇಳಲು ಸಾಧ್ಯವಿಲ್ಲ. ಇಂದು ನಾನು ಸಾಧಿಸಿರುವುದರಲ್ಲಿ ಅವರ ಶ್ರಮ ಮತ್ತು ಮಾರ್ಗದರ್ಶನವಿದೆ. ಅವರಿಗೆ ನಾನು ಸದಾ ಕೃತಜ್ಞಳಾಗಿರುತ್ತೇನೆ” ಎಂದು ಭಾವುಕವಾಗಿ ನುಡಿದಿದ್ದಾರೆ.

ಈ ಸಾಧನೆ ದೇವರ ಆಶೀರ್ವಾದ, ತಂದೆ-ತಾಯಿ, ಕುಟುಂಬ ಮತ್ತು ತನ್ನನ್ನು ನಂಬಿದ ಎಲ್ಲರ ಪ್ರೀತಿ, ಪ್ರಾರ್ಥನೆ, ಮಾರ್ಗದರ್ಶನ ಮತ್ತು ಬೆಂಬಲದ ಫಲ ಎಂದು ಅವರು ತಿಳಿಸಿದ್ದಾರೆ.

“ನನ್ನ ಮುಂದಿನ ಮಹತ್ವಾಕಾಂಕ್ಷೆ ಇಂಡಿಯನ್ ಐಡಲ್ ಮತ್ತು ಸಾ ರೇ ಗಾ ಮಾ ಪಾ ಮುಂತಾದ ಜನಪ್ರಿಯ ಸಂಗೀತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವುದು. ಅನೇಕ ಜನರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಅಲ್ಲದೆ, ವಿದೇಶಗಳಲ್ಲಿಯೂ ಸಂಗೀತ ಕಾರ್ಯಕ್ರಮಗಳನ್ನು ನೀಡಬೇಕೆಂಬುದು ನನ್ನ ಕನಸು. ಈ ಕನಸುಗಳನ್ನು ನನಸಾಗಿಸಲು ನಿಮ್ಮ ಬೆಂಬಲ, ಆಶೀರ್ವಾದ, ಪ್ರೋತ್ಸಾಹ ಮತ್ತು ಶುಭ ಹಾರೈಕೆಗಳು ನನಗೆ ಅಗತ್ಯವಿದೆ” ಎಂದು ಗಾಯಕಿ ರೆಶಲ್ ಮೆಲ್ಬಾ ಹೇಳುತ್ತಾರೆ.