ಮಂಗಳೂರು: ನಗರದ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ)ಯಲ್ಲಿ “ಮಿಲನ್ 2026” ಎಂಬ ಸಾಂಸ್ಕೃತಿಕ ವೈವಿಧ್ಯತೆಯ ಹಬ್ಬವನ್ನು 2026 ಏಪ್ರಿಲ್ 10 ರಂದು ಭವ್ಯವಾಗಿ ಆಯೋಜಿಸಲಾಯಿತು. ಕಾಲೇಜು ಆವರಣಕ್ಕೆ ಆಗಮಿಸಿದ ಎಲ್ಲರನ್ನು ವಿದ್ಯಾರ್ಥಿಗಳಿಂದ ರೂಪಿಸಲಾದ ಬಣ್ಣಬಣ್ಣದ ಕಲಾಕೃತಿಗಳು ಸ್ವಾಗತಿಸಿತು.

ಬೆಳಿಗ್ಗೆ 9:30ಕ್ಕೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಆಡಳಿತ ಮಂಡಳಿ, ಪ್ರಾಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ “ಮಿಲನ್ 2026” ಲೋಗೋ ಅನಾವರಣಗೊಂಡಿತು. ಬಳಿಕ ವಿದ್ಯಾರ್ಥಿಗಳ ಫ್ಲ್ಯಾಶ್ ಮೊಬ್ ಕಾರ್ಯಕ್ರಮದಿಂದ ಉತ್ಸಾಹ ಹೆಚ್ಚಾಯಿತು. ವಿವಿಧ ನೃತ್ಯ ಪ್ರದರ್ಶನಗಳು ಮತ್ತು ಮನರಂಜನಾ ಆಟಗಳ ಮೂಲಕ ಸಾಂಸ್ಕೃತಿಕ ವೈವಿಧ್ಯತೆಯನ್ನು ಮೆರೆದರು.

ಕಾರ್ಯಕ್ರಮದ ಗೌರವ ಅತಿಥಿಯಾಗಿದ್ದ ಮಂಗಳೂರು ನಗರದ “ಗೋಲ್ಡನ್ ಗರ್ಲ್” ಎಂದೇ ಖ್ಯಾತರಾದ ರೆಮೋನಾ ಎವೆಟ್ ಪೆರೆರಾ ಅವರು ತಮ್ಮ ಮನಮೋಹಕ ಶಾಸ್ತ್ರೀಯ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಅವರ ಪ್ರದರ್ಶನಕ್ಕೆ ತಾಳಹಾಕಿದ ಪ್ರೇಕ್ಷಕರು ಸಂಭ್ರಮದಲ್ಲಿ ಪಾಲ್ಗೊಂಡರು.

ವಿದ್ಯಾರ್ಥಿಗಳು ಧರಿಸಿದ್ದ ವಿವಿಧ ಸಾಂಪ್ರದಾಯಿಕ ವೇಷಭೂಷಣಗಳು, ಸಂಗೀತ ಮತ್ತು ನೃತ್ಯಗಳು ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಿತು. ವಿದ್ಯಾರ್ಥಿಗಳ ಪ್ರತಿಭೆ ಹೊಳೆಯುತ್ತಿದ್ದ ಈ ಕಾರ್ಯಕ್ರಮವು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸಿತು.

ಇದಾದ ಬಳಿಕ ದಿನಪೂರ್ತಿ ವಿವಿಧ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳು ನಡೆದವು. ರಂಗವಿಸ್ಟಾ, ಖಜಾನಾ ರಶ್, ನಮ್ಮ ರೀಲ್, ವರ್ಣಂ, ಆಲೇಖ್ಯ, ರೂಹ್-ಎ-ರಿವಾಝ್, ಪೀಲಿ, ರಿವಾಯತ್-ಎ-ರಸೋಯಿ, ಮಯೂರ ವಂದನಾ, ಸ್ವರಾಗಿಣಿ, ಮೆಹ್ರಾಂಗ್ ಮತ್ತು ರೂಪರೇಖಾ ಕಾರ್ಯಕ್ರಮಗಳು ನಡೆಯಿತು. ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಚೆಂಡೆ ಫ್ಯೂಷನ್ ಹಾಗೂ ಟೀಮ್ ಬಾಸ್‌ಫೇಸ್‌ನಿಂದ ಡಿಜೆ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ನಿರ್ದೇಶಕರಾದ ವಂ.ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ, ಸಹ ನಿರ್ದೇಶಕರಾದ ವಂ.ಫಾ. ಕೆನೆತ್ ರೈನರ್ ಕ್ರಾಸ್ಟಾ, ಪ್ರಾಂಶುಪಾಲರಾದ ಡಾ. ರಿಯೋ ಡಿಸೋಜಾ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿಯಾದ ಡಾ. ಜ್ಯೋತಿ ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರತಿಮಾ ಎಸ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಚಿತ್ತರಂಜನ್ ಎಂ ಸಂಯೋಜಿಸಿದರು. ಉದ್ಘಾಟನಾ ಸಮಾರಂಭವನ್ನು ಕಾವ್ಯ ಹಾಗೂ ಜೇಡನ್ ನಿರೂಪಿಸಿದರು. ನಂತರ ನಡೆದ ಮನರಂಜನಾ ಆಟಗಳನ್ನು ತ್ರಪ್ತಿ ಮತ್ತು ಆರಷಾ ವರ್ಗೀಸ್ ಯಶಸ್ವಿಯಾಗಿ ನಡೆಸಿಕೊಟ್ಟರು.

