ನಂಜನಗೂಡು: ಶ್ರೀ ನಂಜುಂಡೇಶ್ವರ ಸ್ವಾಮಿ ದರ್ಶನ ಪಡೆದ ನಂತರ ತಾಲೂಕಿನ ಹುಲ್ಲಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಶ್ರೀಮತಿ ಪೂಜಾ (24) ಎಂಬುವವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಸರಿಸುಮಾರು ಮುಕ್ಕಾಲು ಗಂಟೆ ಕಾಲ ಶ್ರೀಮತಿ ಪೂಜಾ, ಅವರ ಪತಿ ರವಿ, ಅವರ ತಂದೆ ಕುಮಾರ, ತಾಯಿ ಶೀಲಾ ಅವರೊಂದಿಗೆ ಸಚಿವರು ಚರ್ಚಿಸಿದರು. ಇಡೀ ಕುಟುಂಬಕ್ಕೆ, ಬೇರೆ ಹೇಳಿ ಬೇವಿನ ಹಸ್ತ ಕುಮಾರಣ್ಣ ಚಾಚಿದರು. ಸ್ಥಳೀಯರು ಹಾಗೂ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡರು, ಪಂಚಾಯತ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಂದ ಪೂಜಾ ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಸಚಿವರು ಪಡೆದರು.

ಪೂಜಾರ ಕಷ್ಟದ ಸ್ಥಿತಿಯನ್ನು ವಿಡಿಯೋ ಮಾಡಿ ಶೇರ್ ಮಾಡಿದ ಯುವಕ ಚೇತನ್ ಅವರನ್ನು ಕೇಂದ್ರ ಸಚಿವರು ಶ್ಲಾಘಿಸಿದರು. ತನ್ನ ವಿಡಿಯೋ ನೋಡಿ ಪೂಜಾ ಅವರ ಮನೆಗೆ ಬಂದ ಕುಮಾರಣ್ಣನ ಕೈ ಹಿಡಿದು ಯುವಕ ಕಣ್ಣೀರಿಟ್ಟರು. ಪೂಜಾ ಅವರು ಬೆನ್ನಿನ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ತದ ನಂತರ ಆ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಅವರ ಎರಡು ಕಾಲುಗಳು ಸಮಸ್ಯೆಗೆ ತುತ್ತಾಗಿವೆ.

ಮೊದಲು ಒಂದು ಕಾಲಿಗೆ ಆಪರೇಷನ್ ಆಗಿತ್ತು. ಅದು ಸರಿ ಹೋಗಲಿಲ್ಲ, ಈಗ ಮತ್ತೊಂದು ಕಾಲಿಗೆ ಆಪರೇಷನ್ ಆಗಿದೆ. ಹಲವಾರು ತಿಂಗಳಿನಿಂದ ಪೂಜಾ ಅವರು ಹಾಸಿಗೆ ಹಿಡಿದಿದ್ದಾರೆ. ಅವರಿಗೆ ನಡೆಯಲು, ಎದ್ದು ಓಡಾಡಲು ಸಾಧ್ಯವಿಲ್ಲ. ಕುಟುಂಬ ತೀವ್ರ ಆರ್ಥಿಕ ಕಷ್ಟದಿಂದ ಬಳಲುತ್ತಿದೆ. ಈಗಾಗಲೇ ಹಲವು ಶಸ್ತ್ರಚಿಕಿತ್ಸೆಗಳು ನಡೆದಿದ್ದರೂ ಪೂಜಾ ಅವರಿಗೆ ಗುಣಮುಖ ಆಗಿಲ್ಲ. ಹುಲ್ಲಳ್ಳಿ ಗ್ರಾಮದಲ್ಲಿ ಸ್ವಂತ ಸೂರು ಇಲ್ಲದೆ ಕುಟುಂಬ ಕಷ್ಟಪಡುತ್ತಿದೆ.

ಪೂಜಾಗೆ ಚಿಕಿತ್ಸೆ ಕೊಡಿಸಲು ಮನೆಯನ್ನು ಮತ್ತು ಇದ್ದ ಅಲ್ಪಸ್ವಲ್ಪ ಭೂಮಿಯನ್ನು ತಂದೆ ಮಾರಿಕೊಂಡರು.ಈಗ ಇರುವ ಬಾಡಿಗೆ ಮನೆಗೆ ಬಾಡಿಗೆಯನ್ನು ಕಟ್ಟಲಾಗದ ಕಷ್ಟದಲ್ಲಿದೆ. ಪತಿ ರವಿ ಕೂಡ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಅವರಿಗೂ ದುಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಥಳದಲ್ಲಿಯೇ ಚಿಕಿತ್ಸೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಧನಸಹಾಯ ಮಾಡಿದರು.

ಲೀಸಿಗೆ ಮನೆ ಕುಡಿಸುವುದಾಗಿ ಕುಟುಂಬಕ್ಕೆ ಕುಮಾರಣ್ಣ ಭರವಸೆ ನೀಡಿದರು. ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಮನೆಯ ವ್ಯವಸ್ಥೆ ಮಾಡಲು ಪ್ರಯತ್ನಿಸುವುದಾಗಿ ಕೇಂದ್ರ ಸಚಿವರು ಭರವಸೆ ಕೊಟ್ಟರು. ಸ್ಥಳದಲ್ಲಿ ಇದ್ದ ಶಾಸಕ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಮಹದೇವ್ ಮತ್ತು ಅಶ್ವಿನ್ ಅವರಿಗೆ ಸಚಿವರು ಜವಾಬ್ದಾರಿ ಕೊಟ್ಟರು.

ನಂಜನಗೂಡಿನ ಸ್ಥಳೀಯ ಮುಖಂಡರಿಗೆ ಕಾಲಕಾಲಕ್ಕೆ ಕುಟುಂಬದ ಬಗ್ಗೆ ಅವರ ಆಗುಹೋಗುಗಳ ಬಗ್ಗೆ ಮಾಹಿತಿ ಕೊಡಬೇಕೆಂದು ಸಚಿವರು ಸೂಚನೆ ನೀಡಿದರು. ಸಣ್ಣ ಎಂಚಿನ ಮನೆಯಲ್ಲಿ ವಾಸವಿರುವ ಕುಟುಂಬ, ಮಾಸಿಕ ₹3000 ಬಾಡಿಗೆ ಕೊಡುತ್ತಿದೆ. ಮನೆಯ ಮಾಲೀಕ ಮನೆ ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಕುಟುಂಬ ಅಲವತ್ತುಕೊಂಡಿದೆ.

ಪಾಂಡವಪುರದಲ್ಲಿ ನೆಲೆಸಿರುವ ಮನೆಯ ಮಾಲೀಕನಿಗೆ ಮೊಬೈಲ್ ಕರೆ ಮಾಡಿ ಸಚಿವರು ಮಾತನಾಡಿದರು. ಮಾನವೀಯ ದೃಷ್ಟಿಯಿಂದ ಈ ಕುಟುಂಬಕ್ಕೆ ಸ್ವಲ್ಪ ದಿನ ಕಾಲಾವಕಾಶ ಕೊಡಿ. ಕೊನೆಪಕ್ಷ ಎರಡು ಮೂರು ವರ್ಷ ಲೀಸಿಗೆ ಮನೆ ಕೊಡಿ ಎಂದು ಸಚಿವರು ಕೋರಿದರು. ಲೀಸಿನ ಮೊತ್ತವನ್ನು ಸ್ವತಹ ನಾನೇ ತುಂಬಿ ಕೊಡುವೆ ಎಂದು ಮನೆ ಮಾಲೀಕನಿಗೆ ಸಚಿವರು ತಿಳಿಸಿದರು.

ತದ ನಂತರ ನಾನು ಅವರಿಗೆ ವಸತಿ ವ್ಯವಸ್ಥೆ ಮಾಡಿಕೊಡುವೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ ಮನೆ ಮಾರುತ್ತಿರುವುದಾಗಿ ಮನೆ ಮಾಲೀಕ ಸಚಿವರಿಗೆ ತಿಳಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಲು ಮುಖಂಡರಿಗೆ ಸೂಚಿಸಿ ತಮಗೆ ಅಪ್ಡೇಟ್ ಮಾಡುವಂತೆ ಸಚಿವರು ಹೇಳಿದ್ದಾರೆ. ಪರಿಸ್ಥಿತಿಯ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಓ ಅವರೊಂದಿಗೆ ಕೂಡ ಮಾತುಕತೆ ನಡೆಸುವ ಸಚಿವರು ಭರವಸೆ ಕೊಟ್ಟರು.

ಮಗಳ ಅನಾರೋಗ್ಯದ ಬಗ್ಗೆ ಸಚಿವರ ಬಳಿ ಹೇಳಿಕೊಂಡು ತಂದೆ ತಾಯಿ ಕಣ್ಣೀರಿಟ್ಟರು. ಅಳಿಯನ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಕೂಡ ಕುಟುಂಬ ದುಃಖ ತೋಡಿಕೊಂಡಿತು. ಅಳಿಯನಿಗೆ ಆಕ್ಸಿಡೆಂಟಾಗಿ ಬಹಳ ದಿನವಾಗಿದೆ, ವರ್ಷಗಳೇ ಕಳೆದರು ಈವರೆಗೂ ನ್ಯಾಯಾಲಯದಲ್ಲಿ ವಿಚಾರಣೆಗೆ ಕರೆದಿಲ್ಲ. ಕೂಡಲೆ ಸಂಬಂಧಪಟ್ಟ ವಕೀಲರ ಜೊತೆ ಸಚಿವರು ಮಾತನಾಡಿದರು. ಬಳಿಕ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ಸಚಿವರು ಮಾತನಾಡಿದರು.

ಕುಟುಂಬ ಕೇಸ್ ವಾಪಸ್ ತೆಗೆದುಕೊಳ್ಳುತ್ತದೆ. ಕೂಡಲೇ ತಮ್ಮಲ್ಲಿಗೆ ಕರೆಸಿ ಕುಟುಂಬಕ್ಕೆ ಪರಿಹಾರದ ವ್ಯವಸ್ಥೆ ಮಾಡಿಕೊಡಿ ಎಂದು ಕೇಂದ್ರ ಸಚಿವರು ಸೂಚಿಸಿದರು. ಸಚಿವರ ಮಾತಿಗೆ ಸಮ್ಮತಿಸಿ ಆದಷ್ಟು ಬೇಗ ಕುಟುಂಬಕ್ಕೆ ನೆರವಾಗುವುದಾಗಿ ಕೆಎಸ್ ಆರ್ ಟಿಸಿ ಎಂಡಿ ಭರವಸೆ ಕೊಟ್ಟರು. ಸ್ಥಳದಲ್ಲಿ ಹಾಜರಿದ್ದ ತಹಸಿಲ್ದಾರ್ ಗೆ ಸಚಿವರು ಸೂಚನೆ ಕೊಟ್ಟರು.ಕುಟುಂಬಕ್ಕೆ ಜೀವನಕ್ಕಾಗಿ ಒಂದು ಅಂಗಡಿಯನ್ನು ಹಾಕಿಕೊಡುವ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್ ಅವರಿಗೆ ಕುಮಾರಣ್ಣ ಸೂಚಿಸಿದರು.

ಮೈಸೂರಿನಲ್ಲಿ ಶ್ರೀಮತಿ ಪೂಜಾ ಮತ್ತು ಅವರು ಪತಿ ರವಿ ಅವರಿಗೆ ಚಿಕಿತ್ಸೆ ಕೊಡಿಸಲು ಮುಖಂಡರಿಗೆ ಸೂಚಿಸಿ ಸಚಿವರು ವ್ಯವಸ್ಥೆ ಮಾಡಿದರು. ಸಚಿವರ ಸೂಚನೆ ಮೇರೆಗೆ ಪೂಜಾ ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ಹೊಸ ಸದಸ್ಯ ಮಂಜೇಗೌಡ ಭರವಸೆ ಕೊಟ್ಟರು. ಹುಣಸೂರು ಶಾಸಕ ಹರೀಶ್ ಗೌಡ ವಿಧಾನಸಭಾ ಸದಸ್ಯ ಸಿಎನ್ ಮಂಜೇಗೌಡ ಮಾಜಿ ಶಾಸಕರಾದ ಮಹದೇವು ಅಶ್ವಿನ್ ಕುಮಾರ್ ಸೇರಿದಂತೆ ಜೆಡಿಎಸ್ ಪಕ್ಷದ ಅನೇಕ ನಾಯಕರು ಹಾಜರಿದ್ದರು.